ನಿಜ ಜೀವನದಲ್ಲಿ ಲಾ ಓದಿದ್ದರೂ ಲಾಯರ್ ಆಗಲಿಲ್ಲ ನಟ ಕೋಮಲ್; ಆದರೂ ಕರಿಕೋಟು ಧರಿಸುವ ಚಾನ್ಸ್ ಕೊಟ್ಟ ʻತೆನಾಲಿʼ!
ನಟ ಕೋಮಲ್ ಕುಮಾರ್ ಅವರು ಇದೇ ಮೊದಲ ಬಾರಿಗೆ ತೆರೆಮೇಲೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಕೋಮಲ್ ಅವರು ನಿಜ ಜೀವನದಲ್ಲೂ ಕಾನೂನು ಪದವಿ ಪಡೆದಿದ್ದಾರೆ. ಈ ಹಿಂದಿನ 'ಮರೀಚಿ' ಚಿತ್ರದ ನಿರ್ದೇಶಕ ಸಿದ್ದ್ರುವ್ ಸಿದ್ದು ಅವರು ಕೋಮಲ್ ಅವರಿಗಾಗಿ 'ತೆನಾಲಿ ಡಿಎ ಎಲ್‌ಎಲ್‌ಬಿ' ಎಂಬ ವಿಭಿನ್ನ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ.
-
ನಟ ಕೋಮಲ್ ಅವರು ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ, ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಬಹುತೇಕರಿಗೆ ಗೊತ್ತಿಲ್ಲ. ಅವರು ಓದಿರುವುದು ಲಾ. ಹೌದು, ಕಾನೂನು ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದರೂ, ಕೋಮಲ್ ಅವರು ಮಾತ್ರ ಬದುಕು ಕಂಡುಕೊಂಡಿದ್ದು ಬಣ್ಣದ ಲೋಕದಲ್ಲಿ. ಆದರೆ ಇದೀಗ ಅವರು ತೆರೆಮೇಲೆ ಲಾಯರ್ ಆಗಿ ಮಿಂಚಲಿದ್ದಾರೆ.
ಸಿನಿಮಾ ಆಯ್ಕೆ ವಿಚಾರದಲ್ಲಿ ಕೋಮಲ್ ಚ್ಯೂಸಿ
ಹೌದು, ನಿಜ ಜೀವನದಲ್ಲಿ ಲಾಯರ್ ಆಗದೇ ಇದ್ದರೂ, ತೆರೆಮೇಲೆ ಲಾಯರ್ ಆಗಲು ರೆಡಿಯಾಗಿದ್ದಾರೆ. ʻತೆನಾಲಿ ಡಿಎ ಎಲ್‌ಎಲ್‌ಬಿʼ ಎಂಬ ಸಿನಿಮಾದಲ್ಲಿ ಕೋಮಲ್ ಲಾಯರ್ ಪಾತ್ರ ಮಾಡುತ್ತಿದ್ದಾರೆ. ಸಿನಿಮಾ ಆಯ್ಕೆ ವಿಚಾರದಲ್ಲಿ ಚ್ಯೂಸಿ ಆಗಿರೋ ಕೋಮಲ್ ಬಂದ ಸಿನಿಮಾವನ್ನೆಲ್ಲಾ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಸಾಕಷ್ಟು ಕಥೆಗಳನ್ನು ಕೇಳಿ ವಿಭಿನ್ನ ಅನ್ನಿಸುವ ಕಥೆಗೆ ಮಾತ್ರ ಸಹಿ ಮಾಡುತ್ತಿದ್ದಾರೆ. ಅದೇ ಸಾಲಿನಲ್ಲಿ ಸದ್ಯ ಲಾಂಚ್ ಆಗಿರುವ ಸಿನಿಮಾವೇ ʻತೆನಾಲಿ ಡಿಎ ಎಲ್‌ಎಲ್‌ಬಿʼ.
ಮರೀಚಿ ನಿರ್ದೇಶಕರ ಸಿನಿಮಾ
ಟೈಟಲ್ಲೇ ಹೇಳುವಂತೆ ನಟ ಕೋಮಲ್ ಕುಮಾರ್ ಇದರಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿಯೂ ಕೋಮಲ್ ಲಾಯರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ʻತೆನಾಲಿ..ʼಸಿನಿಮಾವನ್ನ ಸಿದ್ದ್ರುವ್ ಸಿದ್ದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ವಿಜಯ್ ರಾಘವೇಂದ್ರ ನಟನೆಯ ಮರೀಚಿ ಸಿನಿಮಾವನ್ನ ಸಿದ್ದು ನಿರ್ದೇಶನ ಮಾಡಿದ್ದರು. ವಿಮರ್ಶಾತ್ಮಕವಾಗಿ ಆ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ಲಾಯರ್ ಪಾತ್ರ ಮಾಡುತ್ತಿರುವುದಕ್ಕೆ ಕೋಮಲ್‌ಗೆ ಖುಷಿ
ಮರೀಚಿ ನಂತರ ಕೋಮಲ್ ಅವರಿಗಾಗಿ ವಿಭಿನ್ನವಾದ ಹಾಗೂ ಈಗಿನ ಕಾಲಘಟ್ಟಕ್ಕೆ ಸರಿಹೊಂದುವ ಕಥೆಯನ್ನು ಸಿದ್ದ್ರುವ್ ಸಿದ್ದು ಬರೆದುಕೊಂಡಿದ್ದಾರಂತೆ. ಸದ್ಯ ಪೋಸ್ಟರ್ ಹಾಗೂ ಪ್ರಮೋಷನಲ್ ಕಂಟೆಂಟ್ ಬಿಡುಗಡೆ ಮಾಡಿರುವ ಸಿನಿಮಾತಂಡ ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲಿದೆ. ಇನ್ನು, ಈ ಸಿನಿಮಾದಲ್ಲಿ ಲಾಯ್ ಪಾತ್ರ ಮಾಡುತ್ತಿರುವುದಕ್ಕೆ ಕೋಮಲ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ʻತೆನಾಲಿ ಡಿಎ ಎಲ್‌ಎಲ್‌ಬಿʼ ಸಿನಿಮಾಕ್ಕೆ ಸಿದ್ದ್ರುವ್ ಸಿದ್ದು ಅವರೇ ಕಥೆ ಚಿತ್ರಕಥೆಯನ್ನು ಬರೆದಿದ್ದಾರೆ. ಸಿದ್ದ್ರುವ್ ಸಿದ್ದು, ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ, ರೇಣುಕಾ ಪ್ರಸಾದ್ ಬಂಡವಾಳ ಹಾಕಿದ್ದಾರೆ. ರಿತ್ವಿಕ್ ಮುರಳಿಧರನ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಉದಯ್ ಲೀಲಾ ಛಾಯಾಗ್ರಹಣ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ.