ಶಿವರಾಜ್‌ಕುಮಾರ್‌ಗೆ ಮತ್ತೊಮ್ಮೆ ಸಿನಿಮಾ ಮಾಡಲು ರೆಡಿಯಾದ ನಿರ್ದೇಶಕ ಆರ್. ಚಂದ್ರು; ಇದು ʻಕಬ್ಜ 2ʼ ಅಲ್ಲ!
ʻಹ್ಯಾಟ್ರಿಕ್ ಹೀರೋʼ ಡಾ. ಶಿವರಾಜ್‌ಕುಮಾರ್ ಹಾಗೂ 'ಕಬ್ಜ' ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಹೊಸ ಬಿಗ್ ಬಜೆಟ್ ಸಿನಿಮಾಗೆ ಕೈಜೋಡಿಸಿದ್ದು, ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇದು 'ಕಬ್ಜ 2' ಚಿತ್ರವಲ್ಲ, ಬದಲಿಗೆ ಸಸ್ಪೆನ್ಸ್ ಆಕ್ಷನ್ ಕಥೆಯುಳ್ಳ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ.
-
ವಯಸ್ಸು 60 ದಾಟಿದರೂ ‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್‌ಕುಮಾರ್ ಮಾತ್ರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದ್ಯ ವಿವಿಧ ಭಾಷೆಗಳ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಅವರ ಮುಂಬರುವ ಸಿನಿಮಾಗಳ ಪಟ್ಟಿಗೆ ಈಗ ಮತ್ತೊಂದು ಬೃಹತ್ ಸೇರ್ಪಡೆಯಾಗಿದೆ. 'ಕಬ್ಜ' ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಅವರೊಂದಿಗೆ ಶಿವಣ್ಣ ಹೊಸದೊಂದು ಬಿಗ್ ಬಜೆಟ್ ಚಿತ್ರಕ್ಕಾಗಿ ಕೈಜೋಡಿಸಿದ್ದು, ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಶೀಘ್ರದಲ್ಲೇ ಈ ಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಘೋಷಿಸಲು ಪ್ಲ್ಯಾನ್ ಮಾಡಲಾಗಿದೆ.
ಶಿವಣ್ಣಗೆ ವಿಭಿನ್ನ ಪಾತ್ರ
2023ರಲ್ಲಿ ಬಂದ 'ಕಬ್ಜ' ಚಿತ್ರದ ನಂತರ ಚಂದ್ರು ಅವರು ಯಾವುದೇ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳದೆ ಸಸ್ಪೆನ್ಸ್ ಹಾಗೂ ಆಕ್ಷನ್ ಕಥೆಗಳ ಮೇಲೆ ಕೆಲಸ ಮಾಡುತ್ತಿದ್ದರು. ಇದೀಗ ಶಿವಣ್ಣನ ಜೊತೆ ಚಂದ್ರು ಜಾಗತಿಕ ಮಟ್ಟದಲ್ಲಿ ರೀಚ್ ಆಗುವಂತಹ ಸಿನಿಮಾವೊಂದನ್ನು ಮಾಡುವ ಉದ್ದೇಶದಿಂದ ಭಾರಿ ಕ್ಯಾನ್ವಾಸ್‌ನಲ್ಲಿ ಬಹುಭಾಷೆಗಳಲ್ಲಿ ನಿರ್ಮಿಸಲು ಯೋಜಿಸಿದ್ದಾರೆ. ಚಂದ್ರು ಅವರ ಈ ಸಿನಿಮಾದಲ್ಲಿ ಶಿವಣ್ಣ ಅವರ ಪಾತ್ರ ಅತ್ಯಂತ ವಿಭಿನ್ನ ಹಾಗೂ ಖಡಕ್ ಆಗಿರಲಿದೆ ಎನ್ನಲಾಗಿದೆ.ಈ ಚಿತ್ರಕ್ಕಾಗಿ ಭಾರತದ ವಿವಿಧ ಚಿತ್ರರಂಗದ ಸ್ಟಾರ್ ಕಲಾವಿದರನ್ನು ಮತ್ತು ತಾಂತ್ರಿಕ ತಂಡವನ್ನು ಒಟ್ಟುಗೂಡಿಸಲು ಚಂದ್ರು ಪ್ಲಾನ್ ಮಾಡುತ್ತಿದ್ದಾರೆ.
ಕಬ್ಜ 2 ಯಾವಾಗ?
ಅಂದಹಾಗೆ, ಚಂದ್ರು ಅವರ ಕಬ್ಜ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ಅವರು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಕಬ್ಜ 2 ಸಿನಿಮಾದಲ್ಲಿ ಶಿವಣ್ಣ ಅವರ ಪಾತ್ರವು ಜಾಸ್ತಿ ಇರಲಿದೆ ಎನ್ನಲಾಗಿತ್ತು. ಆದರೆ ಸದ್ಯಕ್ಕಂತೂ ಕಬ್ಜ 2 ಕುರಿತು ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಆದರೆ, ಹೊಸ ಸಿನಿಮಾಕ್ಕಾಗಿ ಈಗ ಶಿವಣ್ಣ ಜೊತೆ ಕೈಜೋಡಿಸಿದ್ದಾರೆ. ಅಂದಹಾಗೆ, ಮೈಲಾರಿ ಸಿನಿಮಾದ ಮೂಲಕ ಶಿವಣ್ಣ ಮತ್ತು ಚಂದ್ರು ಮೊದಲ ಬಾರಿಗೆ ಒಂದಾಗಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ʻಪೆದ್ದಿ ಚಿತ್ರದ ನಟನೆಗಾಗಿ ರಾಮ್ ಚರಣ್‌ಗೆ ನ್ಯಾಷನಲ್ ಅವಾರ್ಡ್ ಸಿಗಬೇಕುʼ ಎಂದ ನಟ ಶಿವರಾಜ್‌ಕುಮಾರ್
ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ
ಇನ್ನು ಶಿವಣ್ಣ ಅವರು ದಿನದಿಂದ ದಿನಕ್ಕೆ ಪ್ಯಾನ್-ಇಂಡಿಯಾ ಸ್ಟಾರ್ ಆಗುವತ್ತ ಮುನ್ನಡೆಯುತ್ತಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಜೊತೆಗಿನ 'ಪೆದ್ದಿ', ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಮತ್ತು ಬಹುನಿರೀಕ್ಷಿತ 'ಗುಮ್ಮಡಿ ನರಸಯ್ಯ' ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇವೆಲ್ಲವೂ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡುವಂತಹ ಸಿನಿಮಾಗಳು.
ಇತ್ತ ಕನ್ನಡದಲ್ಲಿ ಪವನ್ ಒಡೆಯರ್ ನಿರ್ದೇಶನದ 'ಬೇಲ್' (Bail) ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದರೊಂದಿಗೆ ಶ್ರೀನಿ ನಿರ್ದೇಶನದ ‘ಎ ಫಾರ್ ಆನಂದ್’ (A for Anand), ಮ್ಯೂಸಿಕಲ್ ಥ್ರಿಲ್ಲರ್ ʻಡ್ಯಾಡ್ʼ ಮತ್ತು ಹೇಮಂತ್ ಎಂ ರಾವ್ ನಿರ್ದೇಶನದ ವಿನೂತನ ಶೈಲಿಯ '666 ಆಪರೇಷನ್ ಡ್ರೀಮ್ ಥಿಯೇಟರ್' ಸೇರಿದಂತೆ ಹಲವು ಪ್ರಮುಖ ಸಿನಿಮಾಗಳು ಶಿವಣ್ಣ ಅವರ ಕೈಯಲ್ಲಿದ್ದು, ಸದ್ಯ ಅವರ ಲೈನಪ್ ನೋಡಿದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.