ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Children’s Day 2026 : ಮಕ್ಕಳೊಂದಿಗೆ ಕುಟುಂಬ ಸಮೇತ ನೋಡಬಹುದಾದ 4 ಅದ್ಭುತ ಸಿನಿಮಾಗಳಿವು!

Children’s Day 2026 : ಭಾರತದಲ್ಲಿ ಪ್ರತಿವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು (Childrens Day) ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳಿಗೆ ಮನರಂಜನೆಯ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಜೀವನದ ಪಾಠಗಳನ್ನು ಕಲಿಸುವಂತಹ ಸಿನಿಮಾಗಳನ್ನು ಪರಿಚಯಿಸಲು ಇದು ಸೂಕ್ತ ಸಮಯ.

ಮಕ್ಕಳೊಂದಿಗೆ ಕುಟುಂಬ ಸಮೇತ ನೋಡಬಹುದಾದ 4 ಅದ್ಭುತ ಸಿನಿಮಾಗಳಿವು!

ಒಟಿಟಿ ಸಿನಿಮಾಗಳು -

Yashaswi Devadiga
Yashaswi Devadiga Nov 14, 2026 10:19 AM

ಭಾರತದಲ್ಲಿ ಪ್ರತಿವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು (Childrens Day) ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳಿಗೆ ಮನರಂಜನೆಯ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಜೀವನದ ಪಾಠಗಳನ್ನು ಕಲಿಸುವಂತಹ ಸಿನಿಮಾಗಳನ್ನು ಪರಿಚಯಿಸಲು ಇದು ಸೂಕ್ತ ಸಮಯ.

ಈ ಮಕ್ಕಳ ದಿನಾಚರಣೆಯಂದು ನಿಮ್ಮ ಮಕ್ಕಳೊಂದಿಗೆ ಕುಟುಂಬ ಸಮೇತ ಕುಳಿತು ನೋಡಬಹುದಾದ ನಾಲ್ಕು ವಿಭಿನ್ನ ಸಿನಿಮಾಗಳ ಪಟ್ಟಿ ಇಲ್ಲಿದೆ. ಫ್ಯಾಂಟಸಿ ಸಾಹಸದಿಂದ ಹಿಡಿದು ಶಾಲಾ ಜೀವನ, ಸ್ನೇಹ ಮತ್ತು ಸಮಾನತೆಯ ಕಥೆಗಳವರೆಗೆ ಈ ಸಿನಿಮಾಗಳು ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿವೆ.

‘ಡೋಂಟ್ ಟ್ರಬಲ್ ದಿ ಟ್ರಬಲ್’ (Don't Trouble the Trouble)

ಎಸ್.ಎಸ್. ರಾಜಮೌಳಿ ಪ್ರಸ್ತುತಪಡಿಸಿರುವ, ಶಶಾಂಕ್ ಯೆಲೇಟಿ ನಿರ್ದೇಶನದ 2026ರ ತೆಲುಗು ಫ್ಯಾಂಟಸಿ ಸಾಹಸಮಯ ಸಿನಿಮಾ ‘ಡೋಂಟ್ ಟ್ರಬಲ್ ದಿ ಟ್ರಬಲ್’. ಹಾಸ್ಯ, ನಿಗೂಢತೆ ಮತ್ತು ಅಲೌಕಿಕ ಶಕ್ತಿಗಳ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಆತ್ಮೀಯ ಗೆಳೆಯ ತಾಂಡವ್‌ಗೆ `ಕುನ್ನಿ' ಎಂದ ಗಗನ್‌! ದೋಸ್ತಿಗಳಲ್ಲಿ ಬಿರುಕು

ಚಿತ್ರದಲ್ಲಿ ಫಹಾದ್ ಫಾಸಿಲ್ ಅವರು ಸೂರಿ ಎಂಬ ಸಣ್ಣಪುಟ್ಟ ಅಪರಾಧಗಳಲ್ಲಿ ತೊಡಗಿರುವ ವ್ಯಕ್ತಿಯ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಆಂಬ್ಯುಲೆನ್ಸ್ ಚಾಲಕನಾಗಿಯೂ ಕೆಲಸ ಮಾಡುತ್ತಿರುತ್ತಾರೆ. ಸ್ಥಳೀಯ ಗ್ಯಾಂಗ್ ಜೊತೆಗಿನ ಸಂಘರ್ಷದಿಂದಾಗಿ ಹಣದ ತೀವ್ರ ಅವಶ್ಯಕತೆ ಎದುರಾಗುತ್ತದೆ.

ಈ ಸಂದರ್ಭದಲ್ಲಿ ದಿವ್ಯಾ ಎಂಬ ಬಾಲಕಿಯನ್ನು ಅಪಹರಿಸಿ ಹಣ ಪಡೆಯಲು ಸೂರಿ ನಿರ್ಧರಿಸುತ್ತಾನೆ. ಆದರೆ, ಆ ಬಾಲಕಿಗೆ ಅಲೌಕಿಕ ಶಕ್ತಿಗಳಿವೆ ಎಂಬ ವಿಚಾರ ತಿಳಿದಾಗ ಕಥೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ದಿವ್ಯಾ ಪಾತ್ರದಲ್ಲಿ ಸ್ಸಾರಾ ಪಾಲೇಕರ್ ಕಾಣಿಸಿಕೊಂಡಿದ್ದಾರೆ. ಸೂರಿಯೇ ಮಾಂತ್ರಿಕನೆಂದು ನಂಬುವ ದಿವ್ಯಾ, ಕಾಣೆಯಾಗಿರುವ ತನ್ನ ಪೋಷಕರನ್ನು ಹುಡುಕಲು ಆತನ ಸಹಾಯ ಬಯಸುತ್ತಾಳೆ.

ಚಿತ್ರದಲ್ಲಿ ಸೌರಭ್ ಸಚ್‌ದೇವ, ಮಹೇಶ್ ಮಂಜ್ರೇಕರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಫಹಾದ್ ಫಾಸಿಲ್ ನಾಯಕನಾಗಿ ನಟಿಸಿರುವ ಮೊದಲ ಏಕವ್ಯಕ್ತಿ ಪ್ರಮುಖ ಚಿತ್ರ ಇದಾಗಿದೆ.

ಚಿತ್ರತಂಡ ಈ ಸಿನಿಮಾವನ್ನು 'ದೊಡ್ಡವರಿಗಾಗಿ ಮಾಡಿರುವ ಮಕ್ಕಳ ಸಿನಿಮಾ' ಎಂದು ಬಣ್ಣಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸೆನ್ಸಾರ್ ಮಂಡಳಿಯಿಂದ UA 13+ ಪ್ರಮಾಣಪತ್ರ ಪಡೆದಿರುವ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

‘ಬತ್ತಾ’ (Baththa): ಶಾಲಾ ಬಾಲಕನೊಂದಿಗೆ ವಿಜಯ್ ಸೇತುಪತಿಯ ವಿಭಿನ್ನ ಸ್ನೇಹದ ಕಥೆ

ಬಾಲಾಜಿ ತರಣೆೀತರನ್ ನಿರ್ದೇಶನದ 2026ರ ತಮಿಳು ಕಾಮಿಡಿ ಡ್ರಾಮಾ ಸಿನಿಮಾ ‘ಬತ್ತಾ’ದಲ್ಲಿ ವಿಜಯ್ ಸೇತುಪತಿ ಮತ್ತು ಬಾಲನಟ ಸಾಯಿ ಪೃಥ್ವಿರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

1986ರ ಮದ್ರಾಸ್ ಹಿನ್ನೆಲೆಯ ಈ ಕಥೆಯಲ್ಲಿ ಸಬರಿ ಎಂಬ ಎಂಟು ವರ್ಷದ ಬಾಲಕನ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಆಕಸ್ಮಿಕವಾಗಿ ಆತ ಭಯಾನಕ ಗ್ಯಾಂಗ್‌ಸ್ಟರ್ ಬತ್ತಾನನ್ನು ಹಳೆಯ ಶಾಲೆಯ ಶೌಚಾಲಯವೊಂದರಲ್ಲಿ ಬಂಧಿಯಾಗುವಂತೆ ಮಾಡುತ್ತಾನೆ.

ಹಲವು ದಿನಗಳ ಕಾಲ ಅಲ್ಲಿಯೇ ಸಿಲುಕಿಕೊಳ್ಳುವ ಬತ್ತಾ, ಹಸಿವು ಮತ್ತು ಒಂಟಿತನದಿಂದ ಸಂಕಷ್ಟ ಅನುಭವಿಸುತ್ತಾನೆ. ಆದರೆ, ಆತನನ್ನು ಅಲ್ಲಿಯೇ ಬಿಟ್ಟುಹೋಗುವ ಬದಲು ಪುಟ್ಟ ಬಾಲಕ ಸಬರಿ ರಹಸ್ಯವಾಗಿ ಆತನಿಗೆ ಆಹಾರ ತಂದುಕೊಡುತ್ತಾನೆ. ಹೀಗೆ ಆರಂಭವಾಗುವ ಇವರಿಬ್ಬರ ನಡುವಿನ ಒಡನಾಟ ಕ್ರಮೇಣ ಅನಿರೀಕ್ಷಿತ ಸ್ನೇಹವಾಗಿ ಬದಲಾಗುತ್ತದೆ.

ಮಕ್ಕಳಿಗಾಗಿ ವಿಶೇಷವಾಗಿ ನಿರ್ಮಿಸಿರುವ ಸಿನಿಮಾವಲ್ಲದಿದ್ದರೂ, ಈ ಚಿತ್ರವು ಮುಗ್ಧತೆ, ಮಾನವೀಯತೆ, ಕರುಣೆ ಮತ್ತು ವ್ಯಕ್ತಿತ್ವದ ಬದಲಾವಣೆಯಂತಹ ಉತ್ತಮ ವಿಚಾರಗಳನ್ನು ಪರಿಚಯಿಸುತ್ತದೆ.

ಈ ಚಿತ್ರಕ್ಕೂ UA 13+ ಪ್ರಮಾಣಪತ್ರ ನೀಡಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಿಸಬಹುದು. ಆದರೆ, ಚಿತ್ರದಲ್ಲಿರುವ ಪ್ರೌಢ ವಿಷಯಗಳು ಮತ್ತು ಹಿಂಸೆಯ ಕೆಲವು ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಚಿಕ್ಕ ಮಕ್ಕಳಿಗೆ ತೋರಿಸುವ ಮೊದಲು ಪೋಷಕರು ನಿರ್ಧರಿಸುವುದು ಉತ್ತಮ.

‘ವಲಟ್ಟಿ: ಟೇಲ್ ಆಫ್ ಟೈಲ್ಸ್’ (Valatty: Tale of Tails)

ನಾಯಿಗಳನ್ನೇ ಪ್ರಮುಖ ಪಾತ್ರಗಳನ್ನಾಗಿ ಮಾಡಿಕೊಂಡು ನಿರ್ಮಿಸಿರುವ ವಿಶಿಷ್ಟ ಮಲಯಾಳಂ ಸಿನಿಮಾ ‘ವಲಟ್ಟಿ: ಟೇಲ್ ಆಫ್ ಟೈಲ್ಸ್’. ದೇವನ್ ಜಯಕುಮಾರ್ ನಿರ್ದೇಶನದ ಈ 2023ರ ಸಾಹಸಮಯ ಹಾಸ್ಯ ಚಿತ್ರವು ಅವರ ನಿರ್ದೇಶನದ ಮೊದಲ ಸಿನಿಮಾ ಕೂಡ ಹೌದು.

ಈ ಸಿನಿಮಾದಲ್ಲಿ ಟಾಮಿ ಎಂಬ ಗೋಲ್ಡನ್ ರಿಟ್ರೈವರ್ ಮತ್ತು ಅಮಲು ಎಂಬ ಕಾಕರ್ ಸ್ಪಾನಿಯಲ್ ನಾಯಿಗಳ ಪ್ರೇಮಕಥೆಯನ್ನು ತೋರಿಸಲಾಗಿದೆ. ಈ ಎರಡೂ ನಾಯಿಗಳ ಮಾಲೀಕರು ಅವುಗಳ ಸಂಬಂಧವನ್ನು ಒಪ್ಪುವುದಿಲ್ಲ. ಅಮಲು ಗರ್ಭಿಣಿಯಾದ ಬಳಿಕ ಟಾಮಿ ಮತ್ತು ಅಮಲು ಮನೆಯಿಂದ ಹೊರಹೋಗಲು ನಿರ್ಧರಿಸುತ್ತವೆ.

ತಮ್ಮ ಪ್ರಯಾಣದ ನಡುವೆ ಈ ನಾಯಿಗಳಿಗೆ ಒಬ್ಬ ದಯಾಳು ವ್ಯಕ್ತಿಯ ಸಹಾಯ ಸಿಗುತ್ತದೆ. ಅಲ್ಲದೆ, ಕರಿದಾಸ್ ಎಂಬ ಬೀದಿನಾಯಿಯೊಂದರ ಸ್ನೇಹವೂ ದೊರೆಯುತ್ತದೆ. ಆದರೆ, ಅಮಲುವನ್ನು ಅಕ್ರಮ ಪ್ರಾಣಿ ಪರೀಕ್ಷಾ ಕೇಂದ್ರವೊಂದರಲ್ಲಿ ಬಂಧಿಸಿದಾಗ ಕಥೆ ಮತ್ತಷ್ಟು ರೋಚಕವಾಗುತ್ತದೆ. ಟಾಮಿ ಮತ್ತು ಅದರ ಸ್ನೇಹಿತರು ಅಮಲುವನ್ನು ರಕ್ಷಿಸಲು ಸಾಹಸಕ್ಕೆ ಮುಂದಾಗುತ್ತಾರೆ.

ಪ್ರಾಣಿಗಳ ಮೇಲಿನ ಪ್ರೀತಿ, ಸ್ನೇಹ, ನಿಷ್ಠೆ ಮತ್ತು ಧೈರ್ಯದಂತಹ ಮೌಲ್ಯಗಳನ್ನು ಸಾರುವ ಈ ಸಿನಿಮಾ ಮಕ್ಕಳಿಗೆ ವಿಭಿನ್ನ ಮನರಂಜನೆ ನೀಡಬಲ್ಲದು. ಚಿತ್ರಕ್ಕೆ U/A 13+ ಪ್ರಮಾಣಪತ್ರ ದೊರೆತಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

‘ಸ್ಥಾನಾರ್ಥಿ ಶ್ರೀಕುಟ್ಟನ್’ (Sthanarthi Sreekuttan)

ಮಕ್ಕಳ ಶಾಲಾ ಜೀವನ, ಸ್ನೇಹ, ಚುನಾವಣೆ ಮತ್ತು ಸಮಾನತೆಯ ವಿಚಾರಗಳನ್ನು ಮನರಂಜನಾತ್ಮಕವಾಗಿ ಹೇಳುವ ಸಿನಿಮಾ ‘ಸ್ಥಾನಾರ್ಥಿ ಶ್ರೀಕುಟ್ಟನ್’. ವಿನೇಶ್ ವಿಶ್ವನಾಥ್ ನಿರ್ದೇಶನದ ಈ 2024ರ ಮಲಯಾಳಂ ಕಾಮಿಡಿ ಡ್ರಾಮಾ ಚಿತ್ರವನ್ನು ‘ಕ್ಯಾಂಡಿಡೇಟ್ ಶ್ರೀಕುಟ್ಟನ್’ ಎಂದೂ ಕರೆಯಲಾಗುತ್ತದೆ.

ಕೆ.ಆರ್. ನಾರಾಯಣನ್ ಸ್ಮಾರಕ ಮೇಲ್ದರ್ಜೆಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಶ್ರೀಕುಟ್ಟನ್ ಎಂಬ ತುಂಟ ವಿದ್ಯಾರ್ಥಿ ಈ ಕಥೆಯ ನಾಯಕ. ಶಿಕ್ಷಕ ಸಿ.ಪಿ. ಅವರೊಂದಿಗೆ ಆಗಾಗ್ಗೆ ಜಗಳವಾಡುವ ಶ್ರೀಕುಟ್ಟನ್, ಒಂದು ಘಟನೆಯಿಂದ ಅವಮಾನಕ್ಕೊಳಗಾಗುತ್ತಾನೆ. ಇದರಿಂದ ಬೇಸರಗೊಂಡ ಆತ ತರಗತಿಯ ನಾಯಕನ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸುತ್ತಾನೆ.

ಶ್ರೀಕುಟ್ಟನ್ ಪಾತ್ರದಲ್ಲಿ ಶ್ರೀರಂಗ್ ಶೈನ್ ನಟಿಸಿದ್ದಾರೆ. ಆತನ ಎದುರಾಳಿ ಅಂಬಾಡಿ. ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿರುವ ಅಂಬಾಡಿ, ತರಗತಿಯ ಮುಂಭಾಗದಲ್ಲಿ ಕುಳಿತು ಪಾಠ ಕೇಳುವ ಶಿಸ್ತಿನ ಹುಡುಗ.

ಇವರಿಬ್ಬರ ನಡುವಿನ ಚುನಾವಣಾ ಸ್ಪರ್ಧೆಯು ಹಲವು ಹಾಸ್ಯಮಯ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಇದರ ಜೊತೆಗೆ ಪ್ರಜಾಪ್ರಭುತ್ವ, ಸಮಾನತೆ ಮತ್ತು ಸ್ನೇಹದ ಮಹತ್ವವನ್ನು ಸಿನಿಮಾ ಮನಮುಟ್ಟುವಂತೆ ತಿಳಿಸುತ್ತದೆ.

ಚಿತ್ರದಲ್ಲಿ ಕಟ್ಟುನಿಟ್ಟಿನ ಶಿಕ್ಷಕ ಚಕ್ರಪಾಣಿ ಪಾತ್ರದಲ್ಲಿ ಅಜು ವರ್ಗೀಸ್ ನಟಿಸಿದ್ದಾರೆ. ಸೈಜು ಕುರುಪ್, ಜಾನಿ ಆಂಟನಿ ಮತ್ತು ಆನಂದ್ ಮನ್ಮದನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೈನಾ ಪ್ಲೇನಲ್ಲಿ ಲಭ್ಯವಿದೆ.

ಇದನ್ನೂ ಓದಿ: ‌Bigg Boss kannada 13: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಜಗ್ಗ ಮಮ್ಮಿ! ಬಿಕ್ಕಿ ಬಿಕ್ಕಿ ಅತ್ತ ಧನುಷ್

ಮಕ್ಕಳಿಗೆ ಸಿನಿಮಾ ಎಂದರೆ ಕೇವಲ ಮನರಂಜನೆಯಲ್ಲ. ಉತ್ತಮ ಸಿನಿಮಾಗಳು ಅವರಲ್ಲಿ ಸ್ನೇಹ, ಕರುಣೆ, ಪ್ರಾಣಿಗಳ ಮೇಲಿನ ಪ್ರೀತಿ, ಧೈರ್ಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತವೆ.ಈ ನಾಲ್ಕು ಸಿನಿಮಾಗಳು ವಿಭಿನ್ನ ಕಥಾಹಂದರ ಮತ್ತು ಸಂದೇಶಗಳನ್ನು ಹೊಂದಿವೆ.