ʻಮೆಗಾಸ್ಟಾರ್ʼ ಚಿರಂಜೀವಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್; ಹೊಸ ಸಿನಿಮಾದ ಟೈಟಲ್ ರಿವೀಲ್, ರಿಲೀಸ್ ಡೇಟ್ ಅನೌನ್ಸ್!
ʻಮೆಗಾಸ್ಟಾರ್ʼ ಚಿರಂಜೀವಿ ಅವರ 158 ಚಿತ್ರಕ್ಕೆ ‘ಕಾಕಾ’ ಎಂದು ನಾಮಕರಣ ಮಾಡಲಾಗಿದ್ದು, ಜನ್ಮದಿನದ ಪ್ರಯುಕ್ತ ಪವರ್‌ಫುಲ್ ಗ್ಲಿಂಪ್ಸ್ ಬಿಡುಗಡೆಗೊಂಡಿದೆ. ನಿರ್ದೇಶಕ ಬಾಬಿ ಕೊಲ್ಲಿ ಅವರ ಈ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈ ಹೈ-ವೋಲ್ಟೇಜ್ ಸಿನಿಮಾ 2027ರ ಸಂಕ್ರಾಂತಿಗೆ ತೆರೆಕಾಣಲಿದೆ.
-
ʻಮೆಗಾಸ್ಟಾರ್ʼ ಚಿರಂಜೀವಿ ಜನ್ಮದಿನದ (ಆಗಸ್ಟ್ 22) ವಿಶೇಷ ಸಂದರ್ಭದಲ್ಲಿ, ಅವರ ಮುಂದಿನ ಬಹುನಿರೀಕ್ಷಿತ ‘ಮೆಗಾ 158’ ಚಿತ್ರತಂಡ ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ನೀಡಿದೆ. ಈ ಹಿಂದೆ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ ‘ವಾಲ್ತೇರು ವೀರಯ್ಯ’ ಚಿತ್ರದ ಭರ್ಜರಿ ಯಶಸ್ಸಿನ ನಂತರ, ಚಿರಂಜೀವಿ ಮತ್ತು ಮಾಸ್ ಕಮರ್ಷಿಯಲ್ ನಿರ್ದೇಶಕ ಬಾಬಿ ಕೊಲ್ಲಿ ಜೋಡಿ ಮತ್ತೆ ಒಂದಾಗಿದ್ದು, ಈ ಚಿತ್ರಕ್ಕೆ ‘ಕಾಕಾ’ ಎಂದು ಶೀರ್ಷಿಕೆ ನಿಗದಿಪಡಿಸಲಾಗಿದೆ. ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಪವರ್‌ಫುಲ್ ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ರಿಲೀಸ್ ದಿನಾಂಕವನ್ನೂ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.
ಹೊಸ ಸಿನಿಮಾಗೆ ʻಕಾಕಾʼ ಟೈಟಲ್
ಈ ಚಿತ್ರಕ್ಕೆ ‘ಕಾಕಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಗ್ಲಿಂಪ್ಸ್‌ನಲ್ಲಿ ಚಿರಂಜೀವಿ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಮ್ಮಾಜಿ ಆಕ್ವಾ ಇಂಡಸ್ಟ್ರೀಸ್’ನಲ್ಲಿ ಸತ್ಯಂ ಎಂಬ ಹೆಸರಿನ ಸೌಮ್ಯ ಸ್ವಭಾವದ ಸೂಪರ್‌ವೈಸರ್ ಆಗಿ ಕೆಲಸ ಮಾಡುವ ಅವರು, ಎಲ್ಲರೂ ತೆರಳಿದ ನಂತರ ನೀರಿನಲ್ಲಿ ಬಚ್ಚಿಟ್ಟಿದ್ದ ಬಂದೂಕುಗಳನ್ನು ಹೊರತೆಗೆಯುತ್ತಾರೆ. ಗ್ಲಿಂಪ್ಸ್‌ನಲ್ಲಿ ಗೆಟಪ್ ಶ್ರೀನು ಎಸೆದ ಕೀಚೈನ್ ನೀರಿನಲ್ಲಿ ಬೀಳಲಿದ್ದು, ಅದರ ಮೇಲೆ ‘ಐ ಲವ್ ಯೂ ಡ್ಯಾಡಿ’ ಎಂಬ ಅಕ್ಷರಗಳಿವೆ. ಇದನ್ನು ನೋಡಿದರೆ ಚಿತ್ರದಲ್ಲಿ ತಂದೆ-ಮಗಳ ಸೆಂಟಿಮೆಂಟ್ ಪ್ರಮುಖ ಹೈಲೈಟ್ ಆಗಿರಲಿದೆ ಎಂಬುದು ಸ್ಪಷ್ಟವಾಗುತ್ತದೆ.
ಜನವರಿ 13ರಂದು ತೆರೆಗೆ
ಆರಂಭದಲ್ಲಿ ಸೌಮ್ಯವಾಗಿ ಕಾಣುವ ಚಿರಂಜೀವಿ, ಗ್ಲಿಂಪ್ಸ್‌ನ ಕೊನೆಯಲ್ಲಿ ಗುಂಡಿನ ಮಳೆಯೊಂದಿಗೆ ಶತ್ರುಗಳನ್ನು ಧ್ವಂಸ ಮಾಡುವ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಈ ಚಿತ್ರವನ್ನು 2027ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ, ಜನವರಿ 13ರಂದು ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ.
Actor Chiranjeevi: ಕೆವಿಎನ್‌ನ ಹೊಸ ಹೆಜ್ಜೆ; ಅದ್ಧೂರಿಯಾಗಿ ನೆರವೇರಿತು ಚಿರಂಜೀವಿ ಬಿಗ್ ಬಜೆಟ್ ಸಿನಿಮಾ ಮುಹೂರ್ತ
ಶೇ.50ಕ್ಕೂ ಹೆಚ್ಚು ಭಾಗದ ಚಿತ್ರೀಕರಣ ಮುಕ್ತಾಯ
ಈ ಹಿಂದೆ ಸಂಕ್ರಾಂತಿ ಉಡುಗೊರೆಯಾಗಿ ಬಂದಿದ್ದ ‘ವಾಲ್ತೇರು ವೀರಯ್ಯ’ ₹200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಚಿರಂಜೀವಿ ಅವರ ವಿಂಟೇಜ್ ಮಾಸ್ ಎನರ್ಜಿಯನ್ನು ತೆರೆಯ ಮೇಲೆ ತರುವಲ್ಲಿ ನಿರ್ದೇಶಕ ಬಾಬಿ ಸಂಪೂರ್ಣ ಯಶಸ್ವಿಯಾಗಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿರುವುದರಿಂದ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿದೆ. 40 ದಿನಗಳ ಶೆಡ್ಯೂಲ್‌ನಲ್ಲಿ ಚಿತ್ರದ ಶೇ.50ಕ್ಕೂ ಹೆಚ್ಚು ಭಾಗದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಮುಕ್ತಾಯವಾಗಿದೆ.
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಪ್ರಾಜೆಕ್ಟ್ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ, ಯಾವುದೇ ರಾಜಿ ಇಲ್ಲದೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹೈ-ವೋಲ್ಟೇಜ್ ಆ್ಯಕ್ಷನ್ ಸಿನಿಮಾದಲ್ಲಿ ಮಲಯಾಳಂ ನಟಿ ಅನಸ್ವರ ರಾಜನ್ ಹಾಗೂ ನಿವೇದಾ ಪೇತುರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್. ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.