Zombie Reddy 2 NXT LVL: ʻಹನು-ಮಾನ್ʼ ಖ್ಯಾತಿಯ ನಟ ತೇಜ ಸಜ್ಜಾ ಸಿನಿಮಾಗೆ ಉಪೇಂದ್ರ ಎಂಟ್ರಿ; ಮತ್ತೆ ಟಾಲಿವುಡ್‌ನಲ್ಲಿ ʻರಿಯಲ್ ಸ್ಟಾರ್ʼ ಮಿಂಚಿಂಗ್!
‘ಜಾಂಬಿ ರೆಡ್ಡಿ 2ʼ ಚಿತ್ರದಲ್ಲಿ ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಂಗ್ ಹೀರೋ ತೇಜ ಸಜ್ಜಾ ನಟನೆಯ ಈ ಸೀಕ್ವೆಲ್‌ಗೆ ಸುಪರ್ಣ್ ಎಸ್. ವರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪ್ರಶಾಂತ್ ವರ್ಮಾ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
-
‘ಹನು-ಮಾನ್’ ಮತ್ತು ‘ಮಿರಾಯ್’ ಚಿತ್ರಗಳ ಮೂಲಕ ಭಾರಿ ಸಂಚಲನ ಮೂಡಿಸಿರುವ ಯಂಗ್ ಸೂಪರ್ ಹೀರೋ ತೇಜ ಸಜ್ಜಾ ಅಭಿನಯದ ಹೊಸ ಸಿನಿಮಾ ಘೋಷಣೆಯಾಗಿದೆ. ಇವರದ್ದೇ ನಟನೆಯ ‘ಜಾಂಬಿ ರೆಡ್ಡಿ’ ಚಿತ್ರದ ಸೀಕ್ವೆಲ್‌ನ ಅಧಿಕೃತ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ‘ಜಾಂಬಿ ರೆಡ್ಡಿ 2 NXT LVL - ಡೆಡ್ ಆರ್ ಅಲೈವ್’ ಎಂದು ಹೆಸರಿಡಲಾಗಿದೆ. ತೇಜ ಸಜ್ಜಾ ಅವರ ಜನ್ಮದಿನದ ಅಂಗವಾಗಿ ಈ ಟೈಟಲ್ ಲಾಂಚ್ ಮಾಡಲಾಗಿದೆ.
ಟಾಲಿವುಡ್‌ಗೆ ಮತ್ತೆ ಎಂಟ್ರಿ ಕೊಟ್ಟ ಉಪ್ಪಿ
ಈಚೆಗಷ್ಟೇ 'ಆಂಧ್ರ ಕಿಂಗ್ ತಾಲೂಕಾ' ಸಿನಿಮಾದಲ್ಲಿ ನಟಿಸಿದ್ದ ಉಪೇಂದ್ರ, ಇದೀಗ ಪುನಃ ಟಾಲಿವುಡ್‌ಗೆ ಮರಳಿದ್ದಾರೆ. ‘ಜಾಂಬಿ ರೆಡ್ಡಿ 2 NXT LVL - ಡೆಡ್ ಆರ್ ಅಲೈವ್’ ಸಿನಿಮಾದಲ್ಲಿ ಉಪೇಂದ್ರ ಅವರು ಒಂದು ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರ ಪಾತ್ರದ ಹಿನ್ನೆಲೆಯನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಇನ್ನು, ಈ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ನಟ ಸಂಜಯ್ ಕಪೂರ್ ಅವರ ಪುತ್ರಿ ಶನಾಯಾ ಕಪೂರ್ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಅವರು ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಪ್ರಶಾಂತ್ ವರ್ಮಾ ಮುಂದಾಳತ್ವದಲ್ಲಿ ಬರ್ತಿದೆ ಈ ಸಿನಿಮಾ
ತೆಲುಗು ಚಿತ್ರರಂಗಕ್ಕೆ ಜಾಂಬಿ ಶೈಲಿಯನ್ನು ಪರಿಚಯಿಸಿದ ನಿರ್ದೇಶಕ ಪ್ರಶಾಂತ್ ವರ್ಮಾ ಈ ಬಾರಿ 'ಕ್ರಿಯೇಟರ್' ಆಗಿ ಕಾರ್ಯನಿರ್ವಹಿಸುತ್ತಿದ್ದು, 'ದಿ ಫ್ಯಾಮಿಲಿ ಮ್ಯಾನ್ 2' ಹಾಗೂ 'ರಾಣಾ ನಾಯ್ಡು' ನಂತಹ ಒಟಿಟಿ ಹಿಟ್‌ಗಳನ್ನು ನೀಡಿದ ಖ್ಯಾತ ನಿರ್ದೇಶಕ ಸುಪರ್ಣ್ ಎಸ್. ವರ್ಮಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಈ ಚಿತ್ರವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ.
Raktha Kashmira Movie: ಉಪೇಂದ್ರ-ರಮ್ಯಾ ಕಾಂಬಿನೇಷನ್‌ನಲ್ಲಿ ಶೀಘ್ರವೇ ತೆರೆಗೆ ಬರಲಿದೆ ‘ರಕ್ತ ಕಾಶ್ಮೀರ’
ಸದ್ಯ ಬಿಡುಗಡೆಯಾಗಿರುವ ಗ್ಲಿಂಪ್ಸ್ ವಿಡಿಯೋವನ್ನು ಯಾವುದೇ 'ಎಐ' (AI) ತಂತ್ರಜ್ಞಾನ ಬಳಸದೆ ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಚಾರ್ಮಿನಾರ್ ಹಿನ್ನೆಲೆಯಲ್ಲಿ ತೇಜ ಸಜ್ಜಾ ಕಾರಿನ ಮೇಲೆ ನಿಂತು ಬ್ಯಾಟ್ ಹಿಡಿದು ಜಾಂಬಿಗಳ ವಿರುದ್ಧ ಹೋರಾಡುವ ಸಾಹಸ ಸನ್ನಿವೇಶಗಳು ಗಮನಸೆಳೆಯುತ್ತವೆ. ವಿಡಿಯೋ ಗೇಮ್ ಶೈಲಿಯ ಜಾಯ್‌ಸ್ಟಿಕ್ ರೂಪದ ಶೀರ್ಷಿಕೆ ಲೋಗೋ ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.
ಪತ್ರಕರ್ತನಾಗಿ ಉಪೇಂದ್ರ ಅಣ್ಣನ ಮಗ ನಿರಂಜನ್; ʻಸ್ಪಾರ್ಕ್ʼ ಚಿತ್ರದಲ್ಲಿ ನಟ ʻನೆನಪಿರಲಿʼ ಪ್ರೇಮ್‌ಗೆ ಏನು ಪಾತ್ರ?
ಗೌರ ಹರಿ ಅವರ ಸಂಗೀತ, ಅಭಿನಂದನ್ ರಾಮಾನುಜಮ್ ಅವರ ಛಾಯಾಗ್ರಹಣ ಹಾಗೂ ವಿಜಯ್ ವೇಲುಕುಟ್ಟಿ ಅವರ ಸಂಕಲನ ಈ ಚಿತ್ರಕ್ಕಿದೆ. ಹುಸೇನ್ ದಲಾಲ್, ಅಬ್ಬಾಸ್ ದಲಾಲ್, ಪ್ರಶಾಂತ್ ವರ್ಮಾ ಮತ್ತು ಸುಪರ್ಣ್ ಎಸ್. ವರ್ಮಾ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರವು 2027ರಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ನೇಪಾಳಿ ಹಾಗೂ ಜಪಾನೀಸ್ ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ.