ಡಾ. ರಾಜ್‌ಕುಮಾರ್ ಜನ್ಮದಿನ: ಕನ್ನಡ ನಾಡಿನ ವರನಟನನ್ನು ನೆನೆದ ರಾಜಕೀಯ ಗಣ್ಯರು, ಸಿನಿಮಾ ತಾರೆಯರು
Dr Rajkumar Birthday: ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ನಾಡಿನಾದ್ಯಂತ ಸಂಭ್ರಮ ಮನೆಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ಸಿನಿಮಾ ತಾರೆಯರು ಅಣ್ಣಾವ್ರನ್ನು ಸ್ಮರಿಸಿದ್ದಾರೆ.
-
ಕರ್ನಾಟಕ ರತ್ನ, ವರನಟ ಡಾ. ರಾಜ್‌ಕುಮಾರ್ ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರು ನಮ್ಮೊಂದಿಗೆ ಇದ್ದಿದ್ದರೆ, ಇಂದು ಅವರ 97ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಬಹುದಾಗಿತ್ತು. ದೈಹಿಕವಾಗಿ ಅಣ್ಣಾವ್ರು ನಮ್ಮೊಂದಿಗೆ ಇಲ್ಲವಾದರೂ, ಮಾನಸಿಕವಾಗಿ ಕನ್ನಡಿಗರ ಮನಸ್ಸೊಳಗೆ ಅವರು ಬೆರೆತು ಹೋಗಿದ್ದಾರೆ. ಇಂದು ಅವರ ಜನ್ಮದಿನದ ನೆನಪಿಗಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸ್ಮರಿಸಿದ್ದಾರೆ.
ರಾಜಕುಮಾರನಾಗಿ ಬಾಳಿದ ಮಹಾನ್ ಚೇತನ- ಸಿಎಂ
"ನಟನಾಗಿ, ಗಾಯಕನಾಗಿ ಮಾತ್ರವಲ್ಲ ಕನ್ನಡ ನಾಡು, ನುಡಿಯ ಬಗೆಗೆ ರಾಜ್‌ಕುಮಾರ್ ಅವರಿಗಿದ್ದ ಪ್ರೀತಿ - ಬದ್ಧತೆಗೆ ಅವರೇ ಸಾಟಿ. ರಾಜ್‌ಕುಮಾರ್ ಎಂದಾಕ್ಷಣ ಥಟ್ಟನೆ ನೆನಪಾಗುವುದು ಅವರ ಸರಳತೆ, ಸಜ್ಜನಿಕೆ, ಅಕ್ಕರೆಯ ಮಾತುಗಳು. ಯಶಸ್ಸು, ಖ್ಯಾತಿ, ಸಂಪತ್ತು ಈ ಎಲ್ಲವೂ ಯಥೇಚ್ಛವಾಗಿ ಬಂದರೂ ರಾಜಣ್ಣನ ವ್ಯಕ್ತಿತ್ವ ಮಾತ್ರ ಬದಲಾಗಲಿಲ್ಲ, ಅವರು ಸಮಾಜಕ್ಕೆ ಮತ್ತಷ್ಟು ಹತ್ತಿರವಾಗುತ್ತಾ ಹೋದರು, ಸುತ್ತಲಿನ ಜನರನ್ನು ಹೆಚ್ಚು ಪ್ರೀತಿಸಲಾರಂಭಿಸಿದರು. ನಾಯಕ, ಖಳನಾಯಕ, ಪೋಷಕ ಹೀಗೆ ಪ್ರತಿಯೊಂದು ಪಾತ್ರಕ್ಕೂ ಜೀವತುಂಬುತ್ತಿದ್ದ ಅವರು ತಮ್ಮ ಅತ್ಯದ್ಭುತ ನಟನೆ, ಸುಮಧುರ ಕಂಠಸಿರಿಯ ಮೂಲಕ ಹಲವು ದಶಕಗಳ ಕಾಲ ಕನ್ನಡದ ಸಿನಿಪ್ರಿಯರನ್ನು ರಂಜಿಸಿದವರು. ನಡೆ - ನುಡಿಯಲ್ಲೂ ರಾಜಕುಮಾರನಾಗಿ ಬಾಳಿದ ಮಹಾನ್ ಚೇತನಕ್ಕೆ ನನ್ನ ಅಭಿಮಾನಪೂರ್ವಕ ನಮನಗಳು" ಎಂದು ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
ನಟನಾಗಿ, ಗಾಯಕನಾಗಿ ಮಾತ್ರವಲ್ಲ ಕನ್ನಡ ನಾಡು, ನುಡಿಯ ಬಗೆಗೆ ರಾಜ್‌ಕುಮಾರ್ ಅವರಿಗಿದ್ದ ಪ್ರೀತಿ - ಬದ್ಧತೆಗೆ ಅವರೇ ಸಾಟಿ.
— Siddaramaiah (@siddaramaiah) April 24, 2026
ರಾಜ್‌ಕುಮಾರ್ ಎಂದಾಕ್ಷಣ ತಟ್ಟನೆ ನೆನಪಾಗುವುದು ಅವರ ಸರಳತೆ, ಸಜ್ಜನಿಕೆ, ಅಕ್ಕರೆಯ ಮಾತುಗಳು. ಯಶಸ್ಸು, ಖ್ಯಾತಿ, ಸಂಪತ್ತು ಈ ಎಲ್ಲವೂ ಯಥೇಚ್ಛವಾಗಿ ಬಂದರೂ ರಾಜಣ್ಣನ ವ್ಯಕ್ತಿತ್ವ ಮಾತ್ರ ಬದಲಾಗಲಿಲ್ಲ, ಅವರು… pic.twitter.com/QvJFKpxVPC
ಅಣ್ಣಾವ್ರ ಸರಳತೆ ಎಲ್ಲರಿಗೂ ಆದರ್ಶ
"ಭಾರತೀಯ ಚಿತ್ರರಂಗದ ಧ್ರುವತಾರೆ, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿರುವ ಅವರು ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆಗಳು ಸದಾ ಸ್ಮರಣೀಯ. ಕನ್ನಡದ ಅಸ್ಮಿತೆಯನ್ನೇ ಉಸಿರಾಗಿಸಿಕೊಂಡಿದ್ದ "ಕರ್ನಾಟಕದ ರತ್ನ" ರಾಜ್ ಅವರು, ಗೋಕಾಕ್ ಚಳವಳಿ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು ಕನ್ನಡ ಭಾಷೆ ಮತ್ತು ನಾಡಿನ ಹಿತಾಸಕ್ತಿಗಾಗಿ ಹೋರಾಡಿದ್ದನ್ನು ಯಾರು ಮರೆಯುವಂತಿಲ್ಲ. ಅಭಿಮಾನಿಗಳನ್ನು ದೇವರಂತೆ ಕಂಡ ಅವರ ನಡೆ, ನುಡಿ, ಸರಳತೆ ಮತ್ತು ವಿನಯ ಎಲ್ಲರಿಗೂ ಆದರ್ಶವಾಗಿದೆ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳನ್ನೇ ದೇವರು ಎಂದರು
"ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ರತ್ನ, ಸರಳತೆಯ ಸಾಕಾರಮೂರ್ತಿ ಹಾಗೂ ಅಭಿಮಾನಿಗಳನ್ನೇ ದೇವರು ಎಂದು ನಂಬಿದ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ತಮ್ಮ ಅದ್ಭುತ ಅಭಿನಯ ಮತ್ತು ಕನ್ನಡ ಪರ ಹೋರಾಟಗಳ ಮೂಲಕ ಅಣ್ಣಾವ್ರು ನಾಡಿಗೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ" ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಟ್ವೀಟ್
ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ರತ್ನ, ಸರಳತೆಯ ಸಾಕಾರಮೂರ್ತಿ ಹಾಗೂ ಅಭಿಮಾನಿಗಳನ್ನೇ ದೇವರು ಎಂದು ನಂಬಿದ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ತಮ್ಮ ಅದ್ಭುತ ಅಭಿನಯ ಮತ್ತು ಕನ್ನಡ ಪರ ಹೋರಾಟಗಳ ಮೂಲಕ ಅಣ್ಣಾವ್ರು ನಾಡಿಗೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ.#DrRajkumar pic.twitter.com/v0rzS7tEnB
— DK Shivakumar (@DKShivakumar) April 24, 2026
ನನ್ನ ಮೇಲೆ ಅವರ ಪ್ರಭಾವ ಅಗಾಧ
"ಕರುನಾಡ ಸಾಂಸ್ಕೃತಿಕ ರಾಯಭಾರಿ, ಗಾನಗಂಧರ್ವ, ವರನಟ ಡಾ. ರಾಜ್‌ಕುಮಾರ್ ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿ ನಮಿಸುತ್ತೇನೆ. ಜನ್ಮದಿನದ ಅಂಗವಾಗಿ ಅಣ್ಣಾವ್ರಿಗೆ ನನ್ನ ನಮನಗಳು. 'ಅಭಿಮಾನಿಗಳೇ ದೇವರು' ಎಂದು ಬದುಕಿದ ಅವರ ವ್ಯಕ್ತಿತ್ವ ನಮಗೆ ಸದಾ ಪ್ರೇರಣೆ ಹಾಗೂ ಕಲೆಯನ್ನು ದೇವರು ಎಂದು ನಂಬಿ ಅದನ್ನು ಸಮಾಜ ಸುಧಾರಣೆಯ ಮಾರ್ಗ ಎಂದು ಭಾವಿಸಿ, ಅದರಂತೆ ನಡೆದು ಬದುಕಿ ಬಾಳಿದ ಕಲಾತಪಸ್ವಿ ಅವರಾಗಿದ್ದರು. ವೈಯಕ್ತಿಕವಾಗಿ ನನ್ನ ಮೇಲೆ ಅವರ ಪ್ರಭಾವ ಅಗಾಧ" ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜಕೀಯ ಗಣ್ಯರ ಜೊತೆಗೆ ಶಿವರಾಜ್‌ಕುಮಾರ್, ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್, ಗಣೇಶ್, ದುನಿಯಾ ವಿಜಯ್, ಸಿಂಪಲ್ ಸುನಿ, ಸುಧಾರಾಣಿ, ರಾಜೇಶ್ ನಟರಂಗ ಸೇರಿದಂತೆ ಅನೇಕರು ಕಲಾವಿದರು ಕೂಡ ಅಣ್ಣಾವ್ರನ್ನು ಇಂದು ಸ್ಮರಿಸಿದ್ದಾರೆ.