ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನೀವು ರಾಜಕಾರಣಕ್ಕೆ ಬರಬಹುದಲ್ಲವೇ..ʼ ಎಂದು ಕೇಳಿದ್ದಕ್ಕೆ ಡಾ. ರಾಜ್‌ಕುಮಾರ್‌ ಕೊಟ್ಟ ಉತ್ತರ ಹೀಗಿತ್ತು!

ವರನಟ ಡಾ. ರಾಜ್‌ಕುಮಾರ್ ಅವರಿಗೆ ರಾಜಕೀಯಕ್ಕೆ ಬರುವಂತೆ ಸಾಕಷ್ಟು ಒತ್ತಡಗಳಿದ್ದವು. ಆದರೂ ಅವರು ರಾಜಕೀಯದತ್ತ ಎಂದಿಗೂ ಮುಖ ಮಾಡಲಿಲ್ಲ. ಅಣ್ಣಾವ್ರ ಜನ್ಮದಿನದ ಅಂಗವಾಗಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಒಂದು ಪೋಸ್ಟ್‌ ಹಂಚಿಕೊಂಡಿದ್ದು, ಅದರಲ್ಲಿ ಅಪರೂಪದ ಪ್ರಸಂಗವೊಂದನ್ನು ಬಿಚ್ಚಿಟ್ಟಿದ್ದಾರೆ.

ರಾಜಕೀಯಕ್ಕೆ ಬರದಿರಲು ಡಾ. ರಾಜ್‌ಕುಮಾರ್ ನೀಡಿದ್ದ ಕಾರಣವೇನು? ಇಲ್ಲಿದೆ ಸತ್ಯ

-

Avinash GR
Avinash GR Apr 24, 2026 4:33 PM

ವರನಟ ಡಾ. ರಾಜ್‌ಕುಮಾರ್‌ ಅವರಿಗೆ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರನ್ನು ಕರುನಾಡಿನ ಜನ ದೇವರಂತೆ ಆರಾಧಿಸಿದ್ದಾರೆ. ನಾಡು-ನುಡಿ ಪರವಾಗಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಅಣ್ಣಾವ್ರು, ರಾಜಕೀಯಕ್ಕೆ ಕಾಲಿಟ್ಟಿದ್ದರೆ, ಅವರಿಗೆ ಗೆಲುವು ಸಲೀಸಾಗಿ ದಕ್ಕುತ್ತಿತ್ತು. ಒಮ್ಮೆ ಇಂದಿರಾ ಗಾಂಧಿ ವಿರುದ್ಧ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಅಣ್ಣಾವ್ರನ್ನು ಕಣಕ್ಕಿಳಿಸುವ ವ್ಯರ್ಥ ಪ್ರಯತ್ನವೂ ನಡೆದಿತ್ತು. ಆದರೆ, ರಾಜ್‌ಕುಮಾರ್‌ ರಾಜಕೀಯದತ್ತ ಮುಖ ಮಾಡಲಿಲ್ಲ. ಅಷ್ಟಕ್ಕೂ ಅವರೇಕೆ ರಾಜಕಾಣರಕ್ಕೆ ಬರಲಿಲ್ಲ.

ಡಾ. ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಚಿವ ಎಚ್‌ ಸಿ ಮಹದೇವಪ್ಪ ಅವರು ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಜಕೀಯದ ಬಗ್ಗೆ ರಾಜ್‌ಕುಮಾರ್‌ ಅವರಿಗೆ ಇದ್ದ ಅಭಿಪ್ರಾಯವನ್ನು ದಾಖಲಿಸಿದ್ದಾರೆ. "ಒಮ್ಮೆ ಸಭೆಯೊಂದರಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಮಾತನಾಡುತ್ತಾ ಇದ್ದಾಗ, ʻಈ ನಾಡಿನ ಜನಪ್ರಿಯ ಕಲಾವಿದರಾಗಿ ಸದಾ ಕನ್ನಡ ನೆಲ ಜಲ ಮತ್ತು ಭಾಷೆಯ ಪರವಾಗಿ ಹೋರಾಟ ನಡೆಸುವ ನೀವು, ರಾಜಕಾರಣಕ್ಕೆ ಬರಬಹುದಲ್ಲವೇ, ನಿಮ್ಮಂತವರು ಬಂದಷ್ಟೂ ಸಾರ್ವಜನಿಕ ಜೀವನದ ಮೌಲ್ಯ ಹೆಚ್ಚುತ್ತದೆ ಅಲ್ಲವೇʼ ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ"

ಡಾ. ರಾಜ್‌ಕುಮಾರ್‌ ಜನ್ಮದಿನ: ಕನ್ನಡ ನಾಡಿನ ವರನಟನನ್ನು ನೆನೆದ ರಾಜಕೀಯ ಗಣ್ಯರು, ಸಿನಿಮಾ ತಾರೆಯರು

ವಿನಾಕಾರಣ ದ್ವೇಷಿಸಬೇಕಾಗುತ್ತದೆ

"ಸದಾ ಆತ್ಮೀಯವಾಗೇ ಇರುತ್ತಿದ್ದ ರಾಜ್ ಅವರು ತುಸು ಧೃಡವಾದ ಮತ್ತು ಪ್ರೀತಿಯ ದನಿಯಲ್ಲಿ, "ನೀವು ಹೇಳಿದಂತೆ ಈಗಾಗಲೇ ಆಂಧ್ರದಲ್ಲಿ ಎನ್‌ಟಿಆರ್‌ ಮತ್ತು ತಮಿಳುನಾಡಲ್ಲಿ ಎಂಜಿಆರ್‌ ಮಾದರಿ ನನ್ನೆದುರಿಗೆ ಇದೆ. ಅದನ್ನು ನೋಡುವಾಗ ಅಷ್ಟು ದಿನ ಜನರ ನಿಷ್ಕಲ್ಮಶ ಪ್ರೀತಿಗೆ ಪಾತ್ರನಾಗಿದ್ದ ಕಲಾವಿದ ರಾಜಕಾರಣದ ಕಾರಣಕ್ಕೆ ಇನ್ನೊಂದು ರಾಜಕೀಯ ಪಕ್ಷದ ಎದುರಾಳಿ ಆಗುತ್ತಾನೆ, ಕೆಲವೊಮ್ಮೆ ಅವರು ನಮ್ಮನ್ನು ವಿನಾಕಾರಣ ದ್ವೇಷಿಸಬೇಕಾಗದ ಸಂದರ್ಭ ಉಂಟಾಗುತ್ತದೆ"

ದ್ವೇಷ ತರುವುದು ಕಲೆಯ ಉದ್ದೇಶ ಅಲ್ಲ

"ನಮ್ಮನ್ನು ಪ್ರೀತಿಸುವ ಅಭಿಮಾನಿಗಳು ಕಾರಣವಿಲ್ಲದೇ ದ್ವೇಷ ಮಾಡುವುದಕ್ಕೆ, ಇಲ್ಲವೇ ಅಸಹನೆ ತೋರುವುದಕ್ಕೆ ಕಾರಣವಾಗುತ್ತದೆ ಎಂದಾದರೆ ಆ ಸ್ಥಳ ನನಗೆ ಬೇಡ. ಪ್ರೀತಿಸುವ ಜನರಲ್ಲಿ ದ್ವೇಷ ತರುವುದು ಕಲೆಯ ಉದ್ದೇಶ ಅಲ್ಲ. ಮುಖ್ಯವಾಗಿ, ಕಲಾವಿದನಿಗೆ ರಾಜಕೀಯ ಪ್ರಜ್ಞೆ ಇರಬೇಕು ನಿಜ. ಆದರೆ ಕಲಾವಿದನು ಯಾವುದೋ ಒಂದು ರಾಜಕೀಯ ಪಕ್ಷಗಳ ಪರವಾಗಿ ನಿಂತ ಕ್ಷಣ ಅವನ ಮೌಲ್ಯ ಕುಸಿಯುತ್ತದೆ. ಕಲಾವಿದನು ಸಮಾಜಕ್ಕೆ ನೀಡುವ ಒಳ್ಳೆಯ ಸಂದೇಶ ಅದಲ್ಲ ಎಂಬುದು ನನ್ನ ಭಾವನೆ ಆಗಿದ್ದು, ನಾನು ಸದಾ ಕಲಾವಿದನಾಗಿಯೇ ಉಳಿಯುತ್ತೇನೆ. ನಮ್ಮ ಕಾಡ್ನೋರಾಗಿ ಇದೆಲ್ಲಾ ನಿಮಗೆ ಚೆನ್ನಾಗಿ ಗೊತ್ತಿರತ್ತೆ ಅಲ್ವಾ ಎಂದು ಸುಮ್ಮನೆ ನಕ್ಕರು"

ಸಚಿವ ಎಚ್‌ ಸಿ ಮಹದೇವಪ್ಪ ಅವರ ಪೋಸ್ಟ್‌



ಕಲಾವಿದನ ಜವಾಬ್ದಾರಿಯನ್ನು ಎಂದೂ ಮರೆಯದ ರಾಜ್

"ಇಂತಹ ರಾಜ್‌ಕುಮಾರ್ ಮುಂದೆ, ನೆಲ, ಜಲ ಭಾಷೆಯ ಅಸ್ಮಿತೆಯ ಗುರುತಾಗಿದ್ದ ಗೋಕಾಕ್ ಚಳುವಳಿಯ ನೇತೃತ್ವವನ್ನೂ ವಹಿಸಿದ್ದರು. ಬಹುಶಃ ಈ ಕಾಲದಲ್ಲಿ ಈ ರೀತಿಯ ರಾಜಕೀಯೇತರವಾದ ಪ್ರಜ್ಞೆ ಕಡಿಮೆ ಎನಿಸುತ್ತಿದೆ. ಇನ್ನು ತನ್ಮ ಮಹಾನ್ ಪ್ರತಿಭೆ, ವಿನಯತೆ ಮತ್ತು ಸರಳತೆಯಿಂದ ಕಲಾವಿದನ ಜವಾಬ್ದಾರಿಯನ್ನು ಎಂದೂ ಮರೆಯದ ಡಾ ರಾಜ್ ಕುಮಾರ್ ಅವರು, ಇಂದಿನ ಎಷ್ಟೋ ಮಂದಿ ನಟರಿಗೆ ದಾರಿದೀಪ ಆಗಬಲ್ಲರು. ಅವರ ಜನ್ಮದಿನದಂದು ಈ ಘಟನೆ ಯಾಕೋ ನೆನಪಾಯ್ತು" ಎಂದು ಸಚಿವ ಎಚ್‌ ಸಿ ಮಹದೇವಪ್ಪ ಅವರು ಬರೆದುಕೊಂಡಿದ್ದಾರೆ.