ಶಿವಣ್ಣ-ಧನಂಜಯ್-ಹೇಮಂತ್ ರಾವ್ ಕಾಂಬಿನೇಷನ್‌ನ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರಕ್ಕಾಗಿ ಬೃಹತ್ ಸೆಟ್ ರೆಡಿ
666 Operation Dream Theatre: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಕುತೂಹಲ ಕೆರಳಿಸಿದ ಚಿತ್ರಗಳಲ್ಲಿ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಕೂಡ ಒಂದು. ಹೇಮಂತ್ ರಾವ್ ನಿರ್ದೇಶನ, ಶಿವ ರಾಜ್‌ಕುಮಾರ್-ಧನಂಜಯ್ ಕಾಂಬಿನೇಷನ್‌ನ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

-

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ (666 Operation Dream Theatre) ಕೂಡ ಒಂದು. ಹೇಮಂತ್ ರಾವ್ (Hemanth M Rao) ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಮೊದಲ ಬಾರಿಗೆ ಹೇಮಂತ್ ರಾವ್ ಹಾಗೂ ಶಿವ ರಾಜ್‌ಕುಮಾರ್ (Shivarajkumar)-ಧನಂಜಯ್ (Dhananjaya) ಒಂದಾಗಿರುವುದು ಇದಕ್ಕೆ ಮುಖ್ಯ ಕಾರಣ. ʼಟಗರುʼ ಚಿತ್ರದಲ್ಲಿ ಮೋಡಿ ಮಾಡಿದ್ದ ಶಿವಣ್ಣ-ಧನಂಜಯ್ ಇನ್ನೊಮ್ಮೆ ಈ ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯ ಹೊಸ ಪ್ರಾಜೆಕ್ಟ್ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಪೋಸ್ಟರ್ ಮೂಲಕವೇ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ರೆಟ್ರೋ ಲುಕ್‌ನಲ್ಲಿ ಶಿವ ರಾಜ್‌ಕುಮಾರ್ ಹಾಗೂ ಧನಂಜಯ್ ಕಾಣಿಸಿಕೊಂಡಿದ್ದು ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಈ ಲುಕ್ ಡಾ. ರಾಜ್‌ಕುಮಾರ್ ಅವರ ಸ್ಪೈ ಸಿನಿಮಾಗಳನ್ನು ನೆನಪಿಸುತ್ತವೆ. ಸದ್ಯ ಚಿತ್ರತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತಕ್ಕೆ ಸಜ್ಜಾಗುತ್ತಿದೆ.
ಫಸ್ಟ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಶಿವಣ್ಣ ಹಾಗೂ ಧನಂಜಯ್ ಭಾಗಿಯಾಗಿದ್ದರು. ಇದೀಗ ಇದೇ ತಿಂಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಬೃಹತ್ ಆಕಾರದ ಸೆಟ್‌ನಲ್ಲಿ ಬರೋಬ್ಬರಿ 100 ದಿನಗಳ ಕಾಲ ಶೂಟಿಂಗ್ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: 666 Operation Dream Theatre: ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದ ಶಿವಣ್ಣ ಫಸ್ಟ್ ಲುಕ್ ರಿಲೀಸ್
ಸೆಟ್ ಬಗ್ಗೆ ಮಾತನಾಡಿದ ನಿರ್ಮಾಪಕ ಡಾ. ವೈಶಾಕ್ ಜೆ. ಗೌಡ, 'ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದ ಪ್ರತಿಯೊಂದು ವಿಚಾರವನ್ನು ಹೇಮಂತ್ ಎಂ. ರಾವ್ ಮತ್ತು ಅವರ ತಂಡ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದೆ. ನಾವು ಇಂದಿನ ಪೀಳಿಗೆಯನ್ನು ಬೆರಗುಗೊಳಿಸುವ ಮತ್ತು ಹಿಂದಿನ ಪೀಳಿಗೆಯನ್ನು ನೆನಪಿನ ಹಾದಿಯಲ್ಲಿ ಕರೆದೊಯ್ಯುವ ಪ್ರಯತ್ನದಲ್ಲಿದ್ದೇವೆ. ಯಾವ ಸೆಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂಬುದನ್ನು ನಾನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಈ ಕುರಿತ ಮತ್ತಷ್ಟು ಅಪ್ ಡೇಟ್ ಶೀಘ್ರದಲ್ಲೇ ನೀಡುತ್ತೇವೆʼ' ಎಂದು ಹೇಳಿದ್ದಾರೆ.
ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.