ʻಶಿವಣ್ಣ-ಅಪ್ಪು ಬೆಳೆದಿದ್ದು ಕಲೆಯಿಂದಲೇ ಹೊರತು ನೆಪೋಟಿಸಮ್‌ನಿಂದಲ್ಲʼ; ತಮ್ಮ ಹೇಳಿಕೆ ಬಗ್ಗೆ ಕ್ಲಾರಿಟಿ ಕೊಟ್ಟ ʻಕಿಚ್ಚʼ ಸುದೀಪ್
ಕಿಚ್ಚ ಸುದೀಪ್ ಅವರು ತಮ್ಮ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಯಶಸ್ಸಿನ ಸುದ್ದಿಗೋಷ್ಠಿಯಲ್ಲಿ ಎದುರಾಗಿದ್ದ 'ನೆಪೋಟಿಸಂ' ವಿವಾದಕ್ಕೆ ಮತ್ತೊಂದು ಸಂದರ್ಶನದ ಮೂಲಕ ಸಂಪೂರ್ಣ ಪೂರ್ಣವಿರಾಮ ಇಟ್ಟಿದ್ದಾರೆ. "ವರನಟ ಡಾ.ರಾಜ್‌ಕುಮಾರ್ ಕಾಲದಿಂದಲೂ ಕನ್ನಡಿಗರು ಕಲೆಯನ್ನು ಮಾತ್ರ ನೋಡಿ ಬೆಳೆಸಿದ್ದಾರೆ" ಎಂದು ಹೇಳಿದ್ದಾರೆ.
-
‘ಕಿಚ್ಚ’ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ‘ಮ್ಯಾಂಗೋ ಪಚ್ಚ’ ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಠಿಯಲ್ಲಿ ಎದುರಾಗಿದ್ದ 'ನೆಪೋಟಿಸಂ' ವಿವಾದಕ್ಕೆ ನಟ ಸುದೀಪ್ ಇದೀಗ ಮತ್ತೊಂದು ಸಂದರ್ಶನದಲ್ಲಿ ಸಂಪೂರ್ಣ ಸ್ಪಷ್ಟನೆ ನೀಡುವ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ, "ದೊಡ್ಮನೆಯಿಂದಲೇ ಇದು ಆರಂಭವಾಯಿತಲ್ಲ, ಶಿವಣ್ಣ ಅವರಿಗೆ ಎಂದಾದರೂ ಈ ಪ್ರಶ್ನೆ ಕೇಳಿದ್ದೀರಾ?" ಎಂದು ಸುದೀಪ್ ಆಡಿದ್ದ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಪ್ಪಾಗಿ ಅರ್ಥೈಸಿ ಟೀಕಿಸಿದ್ದರು. ಈ ಕುರಿತು ವಿಸ್ತೃತವಾಗಿ ಮಾತನಾಡಿರುವ ಸುದೀಪ್, ದೊಡ್ಮನೆಯವರು ತಮ್ಮ ಸ್ವಂತ ಕಲೆಯಿಂದಲೇ ಮೇಲೆ ಬಂದವರು ಎಂಬುದನ್ನು ಸಾಬೀತುಪಡಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಆ ಮನೆಗೆ ಜನ ಸುಮ್ಮನೆ ಅಭಿಮಾನಿಗಳಾಗಿಲ್ಲ!
"ಶಿವಣ್ಣ ಮತ್ತು ಅಪ್ಪು ನಾಡಿನ ಅತ್ಯುತ್ತಮ ಪ್ರತಿಭೆಗಳು. ಎಷ್ಟೋ ಜನ ಅವರನ್ನು ನೋಡಿ ಸ್ಪೂರ್ತಿ ಪಡೆದಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಜನ ಸುಮ್-ಸುಮ್ಮನೆ ಅಭಿಮಾನಿಗಳಾಗಿಬಿಡುತ್ತಾರಾ? ನೆಪೊಟಿಸಮ್ ಮಾತ್ರವೇ ಸತ್ಯ ಆಗಿದ್ದಲ್ಲಿ, ಎಲ್ಲ ಸ್ಟಾರ್ ನಟರ ಮಕ್ಕಳೂ ಸ್ಟಾರ್ಗಳಾಗಿಬಿಡಬೇಕಿತ್ತು ಅಲ್ಲವೇ? ರಾಜ್‌ಕುಮಾರ್ ಅವರ ಕಾಲದಿಂದಲೂ ನಮ್ಮ ಕರ್ನಾಟಕದ ಜನ ನೋಡುವುದು ಕಲೆಯನ್ನು ಮಾತ್ರ. ನಿಮ್ಮಲ್ಲಿ ಕಲೆ ಇದ್ದರೆ ನೀವು ಬೆಳೆಯುವುದು ಗ್ಯಾರೆಂಟಿ, ಯಾವ ಕುಟುಂಬದವರು ಎಂದೆಲ್ಲ ಜನ ನೋಡುವುದಿಲ್ಲ" ಎಂದು ಸುದೀಪ್ ವಿವರಿಸಿದ್ದಾರೆ.
ಶಿವಣ್ಣ-ಅಪ್ಪು ನೆಪೋಟಿಸಮ್ನಿಂದ ಬೆಳಿದಿಲ್ಲ
"ನೆಪೋಟಿಸಮ್ ಅಲ್ಲ, ಪ್ರತಿಭೆಯೇ ಮುಖ್ಯ ಎಂದು ಹೇಳಲು ಶಿವಣ್ಣ ಮತ್ತು ಅಪ್ಪು ಅವರಿಗಿಂತಲೂ ಸೂಕ್ತವಾದ ವ್ಯಕ್ತಿಗಳು ಯಾರೂ ಇಲ್ಲ. ಆ ಇಬ್ಬರೂ ಸಹ ಕಲೆಯಿಂದಾಗಿ ಇಷ್ಟು ಎತ್ತರಕ್ಕೆ ಬಂದು ನಿಂತಿದ್ದಾರೆಯೇ ಹೊರತು ನೆಪೋಟಿಸಮ್ನಿಂದ ಅಲ್ಲ" ಎಂದು ಹೇಳುವ ಮೂಲಕ ವಿವಾದಕ್ಕೆ ಸುದೀಪ್ ಪೂರ್ಣವಿರಾಮ ಇಟ್ಟಿದ್ದಾರೆ.
ಬಾಲಿವುಡ್ ಪ್ರಶ್ನೆ ಇಲ್ಲಿಗೆ ತರಬೇಡಿ
"ನನ್ನ ಮಗಳಿಗೆ ಸಿಂಗಿಂಗ್ ಇಂಟ್ರೆಸ್ಟ್ ಇತ್ತು, ಗಾಯಕಿಯಾದಳು. ಸಂಚಿತ್‌ಗೆ ಆಕ್ಟಿಂಗ್ ಇಷ್ಟ ಇತ್ತು, ಬಂದಿದ್ದಾನೆ. ನಮ್ಮ ಮನೆಯಲ್ಲಿ ಇನ್ನು ತುಂಬಾ ಜನ ಅಕ್ಕನ ಮಕ್ಕಳಿದ್ದಾರೆ, ಅವರು ಯಾರೂ ಸಿನಿಮಾ ರಂಗಕ್ಕೆ ಬಂದಿಲ್ಲ. ಕನ್ನಡ ಚಿತ್ರರಂಗದಲ್ಲಿ ನೆಪೋಟಿಸಂ ಅನ್ನೋ ಪ್ರಶ್ನೆಯೇ ಬರೋದಿಲ್ಲ. ಆ ಬಾಲಿವುಡ್ ಪ್ರಶ್ನೆಯನ್ನು ತಂದು ಇಲ್ಲಿ ಕೇಳಬೇಡಿ" ಎಂದು ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.