ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahavatar Narsimha Promo: ಅಧರ್ಮ ತಲೆ ಎತ್ತಿದಾಗ...; ಹೊಂಬಾಳೆ ಫಿಲ್ಮ್ಸ್‌ನ ʼಮಹಾವತಾರ್‌ ನರಸಿಂಹʼದ ಪ್ರೊಮೋ ಔಟ್‌: ಅಬ್ಬರಿಸಿದ ಹಿರಣ್ಯಕಶಿಪು

Hombale Films: ಹೊಂಬಾಳೆ ಫಿಲ್ಮ್ಸ್‌ನ ಬಹು ನಿರೀಕ್ಷಿತ ಅನಿಮೇಷನ್‌ ಚಿತ್ರ ʼಮಹಾವತಾರ್‌ ನರಸಿಂಹʼದ ಟೀಸರ್‌ ರಿಲೀಸ್‌ ಆಗಿದೆ. ಚಿತ್ರ ಕನ್ನಡ ಜತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಜು. 25ರಂದು ಬಿಡುಗಡೆಯಾಗಲಿದೆ. ಸದ್ಯ ರಿಲೀಸ್‌ ಆಗಿರುವ ಪ್ರೋಮೊ ಗಮನ ಸೆಳೆಯುತ್ತಿದೆ.

ಅಧರ್ಮ ತಲೆ ಎತ್ತಿದಾಗ...; ಮಹಾವತಾರ್‌ ನರಸಿಂಹದ ಪ್ರೊಮೋ ಔಟ್‌

Profile Ramesh B Jul 1, 2025 4:21 PM

ಬೆಂಗಳೂರು: ಇತ್ತೀಚೆಗೆ ಮಹವಾತಾರ್‌ ಸರಣಿ ಚಿತ್ರಗಳನ್ನು ಘೋಷಿಸುವ ಮೂಲಕ ಹೊಂಬಾಳೆ ಫಿಲ್ಮ್ಸ್‌ (Hombale Films) ವೀಕ್ಷಕರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿತ್ತು. ಒಂದೇ ಬಾರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 7 ಪೌರಾಣಿಕ ಆನಿಮೇಷನ್‌ ಚಿತ್ರಗಳನ್ನು ಘೋಷಿಸಿತ್ತು. ಈ ಪೈಕಿ ಮೊದಲ ಚಿತ್ರ ʼಮಹಾವತಾರ್‌ ನರಸಿಂಹʼ (Mahavatar Narsimha) ಜು. 25ರಂದು ವಿವಿಧ ಭಾಷೆಗಳಲ್ಲಿ 3ಡಿ ಮಾದರಿಯಲ್ಲಿ ತೆರೆ ಕಾಣಲಿದೆ. ಇದೀಗ ಚಿತ್ರತಂಡ ʼಮಹಾವತಾರ್‌ ನರಸಿಂಹʼ ಸಿನಿಮಾದ ಮೊದಲ ಪ್ರೋಮೊ ರಿಲೀಸ್‌ ಮಾಡಿ ಕುತೂಹಲ ಹೆಚ್ಚಿಸಿದೆ.

ʼʼಅಧರ್ಮ ತಲೆ ಎತ್ತಿದಾಗ...ʼʼಎನ್ನುವ ಶೀರ್ಷಿಕೆ ನೀಡಿ ಹಿರಣ್ಯಕಶಿಪುವಿನ ಪಾತ್ರದ ಸಂಕ್ಷಿಪ್ತ ಪರಿಚಯ ಮಾಡಿಕೊಡಲಾಗಿದೆ. ʼʼಅವನು ದೇವರಿಗೇ ಸವಾಲು ಹಾಕಿದ. ಉಗ್ರನಾಗಿ ಆಳ್ವಿಕೆ ನಡೆಸಿದ. ಹಿರಣ್ಯಕಶಿಪು-ಅಧರ್ಮದ ಸಾಕಾರ ರೂಪ'' ಎಂದು ಕ್ಯಾಪ್ಶನ್‌ ನೀಡಲಾಗಿದೆ.

ಟೀಸರ್‌ ಇಲ್ಲಿದೆ:



ಪೌರಾಣಿಕ ಪಾತ್ರ ಹಿರಣ್ಯಕಶಿಪುವಿನ ಭಯಾನಕ ರೂಪದ ಚಿತ್ರಣ ಈ ವಿಡಿಯೊದಲ್ಲಿ ಕಾಣಸಿಕ್ಕಿದೆ. ʼʼಅತಿಯಾಯ್ತು ವಿಷ್ಣುವಿನ ಗುಣಗಾನ. ಇಂದಿನಿಂದ ನಾನೇ ನಿಮ್ಮೆಲ್ಲರ ಏಕೈಕ ಭಗವಂತ. ಗುಡಿಗಳಲ್ಲಿ ನನ್ನದೇ ಮೂರ್ತಿ ಇರಬೇಕು. ವಿಷ್ಣು ನೋಡು ಹೇಗೆ ನಿನ್ನ ಭಕ್ತರನ್ನು ಹೇಗೆ ಹುಡುಕಿ ಹಿಂಸಿಸುತ್ತೇನೆ ಎಂದು. ಆಗಲಾದರೂ ನೀನು ಹೊರಗೆ ಬರಲೇಬೇಕುʼʼ ಎಂದು ಹಿರಣ್ಯಕಶಿಪು ಅಬ್ಬರಿಸುತ್ತಿರುವುದು ಪ್ರೊಮೋದಲ್ಲಿ ಕಂಡುಬಂದಿದೆ. ಜತೆಗೆ ಬಾಲಕ ಪ್ರಹ್ಲಾದನನ್ನೂ ತೋರಿಸಲಾಗಿದೆ. ನರಸಿಂಹನ ಗರ್ಜನೆ ಪ್ರೊಮೋ ಮುಕ್ತಾಯವಾಗುತ್ತದೆ. ಇದು ತ್ರಿಡಿಯಲ್ಲಿ ತೆರೆ ಕಾಣಲಿರುವುದರಿಂದ ಥಿಯೇಟರ್‌ಗಳಲ್ಲಿ ದೃಶ್ಯ ವೈಭವ ಅನಾವರಣಗೊಳ್ಳಲಿದೆ. ಈ ಬಗ್ಗೆ ಈಗಾಗಲೇ ನಿರೀಕ್ಷೆ ಗರಿಗೆದರಿದೆ.

ʼಮಹಾವತಾರ್‌ ನರಸಿಂಹʼ ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ತೆರೆಗೆ ಬರಲಿದೆ. ಅಶ್ವಿನ್‌ ಕುಮಾರ್‌ ನಿರ್ದೇಶನದ ಈ ಸಿನಿಮಾವನ್ನು ಕ್ಲೀಮ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದ್ದು, ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸುತ್ತಿದೆ.

2 ವರ್ಷಗಳ ಅಂತರದಲ್ಲಿ ರಿಲೀಸ್‌ ಆಗಲಿವೆ ಸಿನಿಮಾಗಳು

ʼಕೆಜಿಎಫ್‌ʼ ಸರಣಿ ಚಿತ್ರಗಳು, ʼಕಾಂತಾರʼ ಮುಂತಾದ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್‌ ಇದೀಗ ದೇಶದ ಪ್ರಮುಖ ಚಿತ್ರ ತಯಾರಕ ಸಂಸ್ಥೆ ಎನಿಸಿಕೊಂಡಿದೆ. ಕನ್ನಡದ ಜತೆಗೆ ವಿವಿಧ ಭಾಷೆಗಳ ಚಿತ್ರಗಳನ್ನು ನಿರ್ಮಿಸುತ್ತಿದೆ. ಇದೇ ಮೊದಲ ಬಾರಿ ಆನಿಮೇಷನ್‌ ಸಿನಿಮಾಕ್ಕೆ ಕಾಲಿಟ್ಟಿದ್ದು, ಮಹವಾತಾರ ಸೀರಿಸ್‌ನ ಒಟ್ಟು 7 ಚಿತ್ರಗಳನ್ನು ಘೋಷಿಸಿದೆ. ʼಮಹಾವತಾರ್ ನರಸಿಂಹʼ (2025ರ ಜು. 25), ʼಮಹಾವತಾರ್ ಪರಶುರಾಮ್ʼ (2027), ʼಮಹಾವತಾರ್ ರಘುನಂದನ್ʼ (2029), ʼಮಹಾವತಾರ್ ದ್ವಾರಕಾದೀಶ್‌ʼ (2031), ʼಮಹಾವತಾರ್ ಗೋಕುಲಾನಂದʼ (2033), ʼಮಹಾವತಾರ್ ಕಲ್ಕಿ ಪಾರ್ಟ್ 1ʼ (2035), ʼಮಹಾವತಾರ್ ಕಲ್ಕಿ ಪಾರ್ಟ್ 2ʼ (2037) ಹೀಗೆ ಇವು 2 ವರ್ಷಗಳ ಅಂತರದಲ್ಲಿ ಬಿಡುಗಡೆಯಾಗಲಿವೆ.

ʼʼಭಗವಾನ್ ವಿಷ್ಣುವಿನ 10 ದೈವಿಕ ಅವತಾರಗಳನ್ನು ಒಳಗೊಂಡ, 1 ದಶಕಕ್ಕೂ ಹೆಚ್ಚು ಕಾಲ ರಿಲೀಸ್ ಆಗಲಿರುವ ನಮ್ಮ ಚಿತ್ರಗಳನ್ನು ಪ್ರಕಟಿಸಲು ರೋಮಾಂಚನಗೊಂಡಿದ್ದೇವೆʼʼ ಎಂದು ಹೊಂಬಾಳೆ ಫಿಲ್ಮ್ಸ್‌ ಹೇಳಿಕೊಂಡಿದೆ.