ʻಜವಾನ್ 2ʼ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರೆ ಶಾರುಖ್ ಖಾನ್ - ಡೈರೆಕ್ಟರ್ ಅಟ್ಲಿ; ಖಳನಾಗಿ ಮಿಂಚಲಿರುವ ಆ ಸೌತ್ ಇಂಡಿಯನ್ ಸ್ಟಾರ್ ಯಾರು?
ಶಾರುಖ್ ಖಾನ್ ವೃತ್ತಿಜೀವನದ ಅತೀ ದೊಡ್ಡ ಹಿಟ್ ಸಿನಿಮಾ 'ಜವಾನ್'ಗೆ ಈಗ ಸೀಕ್ವೆಲ್ ಸಿದ್ಧವಾಗುತ್ತಿದೆ. ನಿರ್ದೇಶಕ ಅಟ್ಲೀ ಕುಮಾರ್ ಅವರು ಈ ಚಿತ್ರದ ಕಥೆಯನ್ನು ಅಂತಿಮಗೊಳಿಸಿದ್ದು, 'ಕಿಂಗ್' ಚಿತ್ರದ ನಂತರ ಶಾರುಖ್ ಖಾನ್ 'ಜವಾನ್ 2' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
-
ಸೋತು ಸುಣ್ಣವಾಗಿದ್ದ ನಟ ಶಾರುಖ್ ಖಾನ್‌ಗೆ ʻಪಠಾಣ್ʼ ನಂತರ ಭರ್ಜರಿ ಗೆಲುವು ಎಂದರೆ ಅದು ʻಜವಾನ್ʼ ಚಿತ್ರದಿಂದ. 2023ರಲ್ಲಿ ತೆರೆಕಂಡಿದ್ದ ʻಜವಾನ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿತ್ತು. ತಮಿಳು ನಿರ್ದೇಶಕ ಅಟ್ಲೀ ಅವರ ಮೊದಲ ಹಿಂದಿ ಸಿನಿಮಾ ಅದಾಗಿತ್ತು. ಜೊತೆಗೆ ಈ ಸಿನಿಮಾದಿಂದ ಶಾರುಕ್ ಖಾನ್‌ಗೆ ಮೊದಲ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದ್ದು ವಿಶೇಷ. ಅಂದಹಾಗೆ, ಈ ಚಿತ್ರದ ಬಗ್ಗೆ ಮಾತನಾಡುತ್ತಿರುವುದಕ್ಕೆ ಇಲ್ಲಿದೆ ವಿಶೇಷ ಕಾರಣ.
ಬರಲಿದೆ ʻಜವಾನ್ 2ʼ ಸಿನಿಮಾ
ಹೌದು, ಶಾರುಖ್ ಖಾನ್ ಪಾಲಿಗೆ ಅತಿ ವಿಶೇಷ ಸಿನಿಮಾವಾಗಿರುವ ʻಜವಾನ್ʼನ ಸೀಕ್ವೇಲ್ ಬರಲಿದೆ. ಅದಕ್ಕಾಗಿ ತಯಾರಿಗಳು ಕೂಡ ಆರಂಭವಾಗಿವೆ. ಸದ್ಯ ಅಲ್ಲು ಅರ್ಜುನ್ ಅವರ ಜೊತೆಗೆ ʻರಾಕಾʼ ಸಿನಿಮಾ ಮಾಡುತ್ತಿರುವ ಅಟ್ಲೀ, ಅದು ಮುಗಿಯುತ್ತಿದ್ದಂತೆಯೇ, ಪುನಃ ಶಾರುಖ್ ಖಾನ್ ಅವರ ಅಡ್ಡಕ್ಕೆ ಮರಳಲಿದ್ದಾರೆ. ಮಗಳು ಸುಹಾನಾ ಖಾನ್ ಜೊತೆ ಕಿಂಗ್ ಸಿನಿಮಾ ಮಾಡುತ್ತಿರುವ ಶಾರುಖ್, ಅದು ಮುಗಿಯುತ್ತಿದ್ದಂತೆಯೇ, ಅಟ್ಲೀ ಜೊತೆ ಕೈಜೋಡಿಸಲಿದ್ದಾರೆ ಎನ್ನುತ್ತವೆ ಮೂಲಗಳು.
"ಜವಾನ್ 2 ಚಿತ್ರದ ಕಥೆ ಮತ್ತು ಐಡಿಯಾ ಬಗ್ಗೆ ಕೆಲವು ಸಮಯದಿಂದ ಚರ್ಚೆ ನಡೆಯುತ್ತಿತ್ತು. ಈಚೆಗೆ ಅಂತಿಮ ಸ್ಕ್ರಿಪ್ಟ್ ಕೂಡ ಲಾಕ್ ಆಗಿದೆ. ಶಾರುಖ್ ಖಾನ್ ಅವರು 'ಕಿಂಗ್' ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ತಕ್ಷಣ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ" ಎಂದು ಮೂಲಗಳು ಹೇಳುತ್ತವೆ.
ವಿಲನ್ ಯಾರು?
ಅಸಲಿಗೆ, ʻಜವಾನ್ʼ ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ದವರು ತಮಿಳಿನ ವಿಜಯ್ ಸೇತುಪತಿ. ಆ ಚಿತ್ರದಲ್ಲಿನ ಡ್ಯುಯೆಲ್ ಶೇಡ್‌ನ ಪಾತ್ರವು ಎಲ್ಲರಿಗೂ ಇಷ್ಟವಾಗಿತ್ತು. ಇದೀಗ ʻಜವಾನ್ 2ʼ ಸಿನಿಮಾಕ್ಕೂ ಕೂಡ ದಕ್ಷಿಣ ಭಾರತದ ಸ್ಟಾರ್ ನಟನನ್ನೇ ವಿಲನ್ ಪಾತ್ರಕ್ಕಾಗಿ ಆಯ್ಕೆ ಮಾಡಬೇಕು ಎಂದು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆಯಂತೆ. ಅದಕ್ಕಾಗಿ ಹುಡುಕಾಟ ಶುರುವಾಗಿದ್ದು, ಈವರೆಗೂ ಯಾರೂ ಸೆಲೆಕ್ಟ್ ಆಗಿಲ್ಲವಂತೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಗಳಿವೆ.
ಜವಾನ್ 2 ಬಗ್ಗೆ ಟ್ವೀಟ್
#Exclusive 🚨
— Always Bollywood (@AlwaysBollywood) April 22, 2026
Big Breaking 🔥🔥🔥#Jawan2 is set to open with #AlluArjun 's #Raaka’s cameo appearance.🔥
Yes #ShahRukhKhan to work on #Jawan2 after #King ✅#SRK is set to return with Jawan 2, with the script reportedly locked and plans underway to begin work after completing… pic.twitter.com/kCJmsbzxBh
ʻಜವಾನ್ʼ ಸಿನಿಮಾವನ್ನು ಶಾರುಖ್ ಖಾನ್ ಪತ್ನಿ ಗೌರಿ ನಿರ್ಮಾಣ ಮಾಡಿದ್ದರು. 300 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 1200 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತ್ತು. ನಯನತಾರಾ, ದೀಪಿಕಾ ಪಡುಕೋಣೆ ಮುಂತಾದವರು ನಟಿಸಿದ್ದ ಜವಾನ್ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದರು.