ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಅಜ್ಜಿಯ ಮೇಲಿನ ನನ್ನ ಪ್ರೀತಿಯನ್ನು ಕಣ್ಣೀರಿನಿಂದ ಅಳೆಯಬೇಡಿʼ: ಸೋಷಿಯಲ್ ಮೀಡಿಯಾ ಟ್ರೋಲ್‌ಗೆ ಬೇಸರ ಹೊರಹಾಕಿದ ಎಸ್.‌ ಜಾನಕಿ ಮೊಮ್ಮಗಳು ಅಪ್ಸರಾ

ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ನಂತರ ಅಂತಿಮ ವಿಧಿವಿಧಾನ ನೆರವೇರಿಸಿದ ಅವರ ಮೊಮ್ಮಗಳು ಅಪ್ಸರಾ, ತಾವು ಅಳಲಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದವರ ವಿರುದ್ಧ ಬೇಸರ ಹೊರಹಾಕಿದ್ದಾರೆ. ಅಜ್ಜಿಯ ಮೇಲಿನ ಪ್ರೀತಿಯನ್ನು ಕಣ್ಣೀರಿನಿಂದ ಅಳೆಯಬೇಡಿ ಎಂದಿರುವ ಅವರು, ಅಜ್ಜಿಯ ಅಗಲಿಕೆಯಿಂದ ಇಡೀ ಕುಟುಂಬ ನೋವಿನಲ್ಲಿದೆ ಎಂದು ಭಾವುಕರಾಗಿ ಸ್ಪಷ್ಟನೆ ನೀಡಿದ್ದಾರೆ.

ʻಅಜ್ಜಿಯ ಮೇಲಿನ‌ ಪ್ರೀತಿಯನ್ನ ಕಣ್ಣೀರಿನಿಂದ ಅಳೆಯಬೇಡಿʼ- ಜಾನಕಿ ಮೊಮ್ಮಗಳು

-

Avinash GR
Avinash GR Jul 15, 2026 12:42 PM

ಭಾರತದ ಹೆಮ್ಮೆಯ ಗಾನಕೋಗಿಲೆ ಎಸ್.‌ ಜಾನಕಿ ಅವರು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದು, ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಮೊಮ್ಮಗಳು ಅಪ್ಸರಾ ನೆರವೇರಿಸಿದ್ದರು. ಆದರೆ, "ಅಜ್ಜಿ ನಿಧನರಾದರೂ ಮೊಮ್ಮಗಳು ಕಣ್ಣೀರು ಹಾಕಲಿಲ್ಲ" ಎಂಬ ನೆಗೆಟಿವ್ ಮಾತುಗಳು ಮತ್ತು ಟ್ರೋಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಈ ವದಂತಿ ಹಾಗೂ ಟ್ರೋಲ್‌ಗಳಿಗೆ ಅಪ್ಸರಾ ಅವರು ಸುದೀರ್ಘ ಪೋಸ್ಟ್ ಬರೆಯುವ ಮೂಲಕ ತಕ್ಕ ಉತ್ತರ ನೀಡಿದ್ದು, "ಅಜ್ಜಿಯ ಮೇಲಿನ ನನ್ನ ಪ್ರೀತಿಯನ್ನು ಕಣ್ಣೀರಿನಿಂದ ಅಳೆಯಬೇಡಿ" ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಅಜ್ಜಿಗೆ ಪ್ರಿಯವಾಗಿದ್ದ ಅಕ್ಕ ವರ್ಷಾ ನೆನಪು

ತಮ್ಮ ನೋವನ್ನು ಹಂಚಿಕೊಂಡಿರುವ ಅಪ್ಸರಾ, "ಈ ಜಗತ್ತಿನಲ್ಲಿ ನನ್ನ ಅಜ್ಜಿಗೆ ಅತ್ಯಂತ ಪ್ರಿಯವಾದ ವ್ಯಕ್ತಿಯೆಂದರೆ ನನ್ನ ಅಕ್ಕ ವರ್ಷಾ. ಅವರಿಬ್ಬರ ನಡುವಿನ ಬಾಂಧವ್ಯವನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇಂದು ನಾನು ಅಜ್ಜಿಯ ಜವಾಬ್ದಾರಿಯನ್ನು ಹೊತ್ತು ಪ್ರತಿಯೊಂದು ಕೆಲಸವನ್ನೂ ಮಾಡುತ್ತಿದ್ದೇನಾದರೂ, ನಿಜವಾಗಿ ಈ ಜಾಗದಲ್ಲಿ ನಿಂತು ಇದನ್ನು ಮಾಡಬೇಕಾಗಿದ್ದವಳು ವರ್ಷಾ ಎಂಬುದನ್ನು ಜಗತ್ತು ಮರೆಯಬಾರದು. ಆದರೆ ವರ್ಷಾ ಆಗಸ್ಟ್ 2023ರಲ್ಲಿಯೇ ನಮ್ಮನ್ನು ಅಗಲಿದ್ದಾಳೆ. ಆ ದುಃಖದಿಂದ ನಮ್ಮ ಕುಟುಂಬ ಇಂದಿಗೂ ಚೇತರಿಸಿಕೊಂಡಿಲ್ಲ. ದುಃಖ ಎಂಬುದು ಎಂದಿಗೂ ಮಾಯವಾಗುವುದಿಲ್ಲ, ಅದು ಜೀವನದುದ್ದಕ್ಕೂ ಹೊತ್ತು ಸಾಗುವ ಭಾರವಷ್ಟೇ. ಈಗ ಅವರಿಬ್ಬರೂ (ಅಜ್ಜಿ ಮತ್ತು ವರ್ಷಾ) ಪರಲೋಕದಲ್ಲಿ ಮತ್ತೆ ಒಂದಾಗಿದ್ದಾರೆ ಎಂಬ ಆಲೋಚನೆಯೊಂದೇ ನನಗೆ ನೆಮ್ಮದಿ ನೀಡುತ್ತಿದೆ" ಎಂದು ಭಾವುಕರಾಗಿದ್ದಾರೆ.

S Janaki: ʼʼನಮ್ಮ ನಡುವೆ ಜಗಳ ಸೃಷ್ಟಿಸಿದರು!ʼʼ ಎಸ್‌. ಜಾನಕಿ ನೆನೆದು ಗಾಯಕಿ ಪಿ. ಸುಶೀಲಾ ಭಾವುಕ

ಕಣ್ಣೀರಿನ ಬಗ್ಗೆ ಅಪ್ಸರಾ ಸ್ಪಷ್ಟನೆ

ಕಳೆದ ಕೆಲವು ದಿನಗಳಿಂದ ತಮ್ಮ ದುಃಖವನ್ನು ಪ್ರಶ್ನಿಸುತ್ತಿರುವವರ ವಿರುದ್ಧ ಕಿಡಿಕಾರಿದ ಅವರು, "ನನ್ನ ಕಣ್ಣುಗಳಲ್ಲಿ ಕಣ್ಣೀರು ಕಾಣುತ್ತಿಲ್ಲ ಎಂಬ ಕಾರಣಕ್ಕೆ ನನ್ನ ಪ್ರೀತಿಯನ್ನು ಅಳೆಯಬೇಡಿ. ಸಾವನ್ನು ಅತ್ಯಂತ ಆಧ್ಯಾತ್ಮಿಕ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದನ್ನು ನಮಗೆ ನಮ್ಮ ಅಜ್ಜಿಯೇ ಕಲಿಸಿಕೊಟ್ಟಿದ್ದರು. ಜೀವ ಕೊನೆಗೊಂಡರೂ ಪ್ರೀತಿ ಕೊನೆಯಾಗುವುದಿಲ್ಲ ಎಂಬುದನ್ನು ಅವರು ಹೇಳಿಕೊಟ್ಟಿದ್ದರು. ನನ್ನ ಜೀವನದ ಅನುಭವಗಳು ನನ್ನನ್ನು ಬಲಿಷ್ಠಗೊಳಿಸಿವೆ. ದುಃಖ ಎಂಬುದು ಯಾವಾಗಲೂ ಜೋರಾಗಿ ಇರಬೇಕಾಗಿಲ್ಲ, ಕೆಲವೊಮ್ಮೆ ಅದು ನಿಶ್ಯಬ್ದ ಮತ್ತು ತೀರಾ ವೈಯಕ್ತಿಕವಾಗಿರುತ್ತದೆ" ಎಂದು ಹೇಳಿದ್ದಾರೆ.

ಮಗ ಮುರಳಿ ಕೃಷ್ಣ ಜೊತೆ ತಮಿಳಿನ ಸೂಪರ್‌ ಹಿಟ್‌ ʻ96ʼ ಸಿನಿಮಾದಲ್ಲಿ ನಟಿಸಿದ್ದ ಎಸ್‌. ಜಾನಕಿ; ಅಂದು ಅಭಿಮಾನಿಗಳಿಗೆ ಆಗಿದ್ದ ನಿರಾಸೆ ಏನ್‌ ಗೊತ್ತಾ?

ಜಾನಕಿ ಮೊಮ್ಮಗಳು ಹಂಚಿಕೊಂಡ ಪೋಸ್ಟ್‌

ವದಂತಿಗಳಿಗೆ ಅಪ್ಸರಾ ಬೇಸರ

ಸಾರ್ವಜನಿಕ ಜೀವನದಲ್ಲಿ ಇರುವುದರ ಕಷ್ಟಗಳ ಬಗ್ಗೆ ಮಾತನಾಡಿದ ಅವರು, "ನಮ್ಮ ಕುಟುಂಬದ ಬಗ್ಗೆ ಹತ್ತಿರದಿಂದ ತಿಳಿಯದ ಜನರು ತಮ್ಮದೇ ಆದ ಊಹಾಪೋಹ, ಕಟ್ಟುಕಥೆಗಳನ್ನು ಸೃಷ್ಟಿಸುವುದು ನೋವು ತರುತ್ತದೆ. ನನ್ನ ಅಜ್ಜಿ ಅತ್ಯಂತ ಮೃದು ಸ್ವಭಾವದವರು, ದಯಾಮಯಿ ಮತ್ತು ವಿನಮ್ರರಾಗಿದ್ದರು. ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನೇ ನೋಡುವ ನಿರ್ಮಲ ಮನಸ್ಸು ಅವರದ್ದಾಗಿತ್ತು, ವರ್ಷಾ ಕೂಡ ಹಾಗೆಯೇ ಇದ್ದಳು. ಅವರಿಬ್ಬರ ಮುಗ್ಧ ಮಗುವಿನಂತಹ ಸ್ವಭಾವ ಎಲ್ಲರನ್ನೂ ತಕ್ಷಣವೇ ಆಕರ್ಷಿಸುತ್ತಿತ್ತು. ಅವರಿಬ್ಬರೂ ಈಗ ಒಂದಾಗಿದ್ದಾರೆ ಎಂಬ ಆಲೋಚನೆ ನನಗೆ ಧೈರ್ಯ ನೀಡುತ್ತಿದೆ" ಎಂದು ಅಪ್ಸರಾ ಬರೆದುಕೊಂಡಿದ್ದಾರೆ.