ʻಗಾನ ಕೋಗಿಲೆʼ ಎಸ್. ಜಾನಕಿ ನಿವ್ವಳ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಸ್ವರ ಸಾಮ್ರಾಜ್ಞಿಯ ಸಂಪತ್ತಿನ ವಿವರ
ಭಾರತೀಯ ಚಿತ್ರರಂಗದ ಮೇರು ಗಾಯಕಿ ಎಸ್. ಜಾನಕಿ ಅವರ ಅಕಾಲಿಕ ನಿಧನ ಇಡೀ ಸಾಂಸ್ಕೃತಿಕ ಜಗತ್ತನ್ನು ಕಣ್ಣೀರಲ್ಲಿ ಮುಳುಗಿಸಿದೆ. ಆರು ದಶಕಗಳ ಕಾಲ 50 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಇವರ ಒಟ್ಟು ಆಸ್ತಿ ಸುಮಾರು 537 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಚೆನ್ನೈನಲ್ಲಿ ಬೃಹತ್ ರಿಯಲ್ ಎಸ್ಟೇಟ್ ಹೂಡಿಕೆ ಹೊಂದಿದ್ದ ಜಾನಕಮ್ಮ ಅವರಿಗೆ ಲೈವ್ ಕಾನ್ಸರ್ಟ್‌ಗಳು ಮತ್ತು ಸಂಭಾವನೆಗಳೇ ಪ್ರಮುಖ ಆದಾಯದ ಮೂಲಗಳಾಗಿದ್ದವು.
-
ಭಾರತೀಯ ಸಿನಿಮಾ ಸಂಗೀತ ಲೋಕದಲ್ಲಿ ತಮ್ಮ ಅದ್ಭುತ ಕಂಠದ ಮೂಲಕ ಕೋಟ್ಯಂತರ ಸಂಗೀತಪ್ರಿಯರ ಮನಸ್ಸನ್ನು ಗೆದ್ದ ಮೇರು ಗಾಯಕಿ ಎಸ್. ಜಾನಕಿ ಅವರು ಜುಲೈ 11ರಂದು ಇಹಲೋಕ ತ್ಯಜಿಸಿದರು. ಅವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಸಾಗಿದ ಭವ್ಯ ಸಂಗೀತ ಪಯಣದಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 20 ಭಾಷೆಗಳಲ್ಲಿ ತಮ್ಮದೇ ಆದ ಅಪೂರ್ವ ಛಾಪು ಮೂಡಿಸಿದವರು ಜಾನಕಮ್ಮ.
‘ನೈಟಿಂಗೇಲ್ ಆಫ್ ಸೌತ್ ಇಂಡಿಯಾ’ ಎಂದು ಹಾಗೂ ವಾಯ್ಸ್ ಮಾಡ್ಯುಲೇಷನ್‌ನ ರಾಣಿಯಾಗಿ ಇತಿಹಾಸ ಸೃಷ್ಟಿಸಿದ್ದ ಅವರು, ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅವರ ಧ್ವನಿ ಎಷ್ಟೋ ಸೂಪರ್ ಹಿಟ್ ಸಿನಿಮಾಗಳಿಗೆ ಜೀವ ತುಂಬಿದೆ. ಇಷ್ಟೊಂದು ಭವ್ಯವಾದ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದ ಈ ಗಾನಕೋಗಿಲೆಯ ಆಸ್ತಿಯ ಮೌಲ್ಯ ಮತ್ತು ನಿವ್ವಳ ಆದಾಯ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಸುಮಾರು 537 ಕೋಟಿ ರೂ. ಆಸ್ತಿಯ ಒಡತಿ
ಎಸ್. ಜಾನಕಿ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಅಗ್ರಗಣ್ಯ ಗಾಯಕಿಯಾಗಿ ಮಿಂಚಿದ್ದರು. ಅಂದೇ ಅವರು ಪ್ರತಿ ಹಾಡಿಗೆ ಲಕ್ಷಗಟ್ಟಲೆ ಸಂಭಾವನೆ ಪಡೆಯುತ್ತಿದ್ದರು ಎಂಬ ಮಾಹಿತಿ ಇದೆ. ಸುಮಾರು 10 ವರ್ಷಗಳ ಹಿಂದಿನವರೆಗೂ ಸಕ್ರಿಯವಾಗಿ ಹಾಡುತ್ತಿದ್ದ ಅವರು, ಆನಂತರ ವಯೋಸಹಜ ಆರೋಗ್ಯದ ಕಾರಣದಿಂದಾಗಿ ಮೈಕ್ ಹಿಡಿಯುವುದರಿಂದ ದೂರ ಉಳಿದಿದ್ದರು.
S Janaki: ಗಾನಕೋಗಿಲೆ ಎಸ್.ಜಾನಕಿ ಅಸ್ತಂಗತ; ಪ್ರಧಾನಿ ಮೋದಿ ಸಂತಾಪ
ಸಿನಿಮಾ ವಲಯದ ವಿಶ್ಲೇಷಣೆಗಳ ಪ್ರಕಾರ, ಎಸ್ ಜಾನಕಿ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 537 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ದಶಕಗಳ ಕಾಲ ಸಾಗಿದ ಅವರ ಅತ್ಯಂತ ಯಶಸ್ವಿ ಸಂಗೀತ ಪಯಣವು ಅವರಿಗೆ ಬಲಿಷ್ಠ ಆರ್ಥಿಕ ಭದ್ರತೆಯನ್ನು ತಂದುಕೊಟ್ಟಿತ್ತು. ಬಂದ ಆದಾಯವನ್ನು ಅವರು ಹೆಚ್ಚಾಗಿ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆ ಮಾಡಿದ್ದು, ಐಷಾರಾಮಿ ಕಾರುಗಳು ಹಾಗೂ ಸ್ವಂತ ನಿವಾಸಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಇವರ ಆಸ್ತಿಗಳು ಪ್ರಮುಖವಾಗಿ ಚೆನ್ನೈನಲ್ಲಿವೆ ಎಂಬ ಮಾಹಿತಿಯಿದೆ.
ಆದಾಯದ ಪ್ರಮುಖ ಮೂಲಗಳೇನು?
ಎಸ್ ಜಾನಕಿ ಅವರ ಆದಾಯದ ಪ್ರಮುಖ ಮೂಲ ಸಿನಿಮಾ ಗಾಯನವೇ ಆಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡುವುದರ ಜೊತೆಗೆ, ಅವರು ದೇಶ-ವಿದೇಶಗಳಲ್ಲಿ ನಡೆಸಿಕೊಟ್ಟ ನೂರಾರು ಲೈವ್ ಮ್ಯೂಸಿಕ್ ಕಾನ್ಸರ್ಟ್‌ಗಳು ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಅವರಿಗೆ ಭಾರಿ ಪ್ರಮಾಣದ ಆದಾಯವನ್ನು ತಂದುಕೊಟ್ಟಿದ್ದವು. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅತ್ಯಂತ ಬೇಡಿಕೆಯ ಗಾಯಕಿಯಾಗಿ ಮುನ್ನಡೆದಿದ್ದ ಅವರಿಗೆ, ರೆಕಾರ್ಡಿಂಗ್‌ಗಳ ಮೂಲಕ ಬರುತ್ತಿದ್ದ ಲಕ್ಷಗಟ್ಟಲೆ ಸಂಭಾವನೆ ಹಾಗೂ ಸ್ಟೇಜ್ ಶೋಗಳೇ ಅವರ ಒಟ್ಟು ಆಸ್ತಿ ಇಷ್ಟು ಬೃಹತ್ ಮಟ್ಟಕ್ಕೆ ಹೆಚ್ಚಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ.
ಆಸ್ತಿಗಿಂತಲೂ ಗಳಿಸಿದ ಗೌರವವೇ ದೊಡ್ಡದು
ಆದರೆ, ಆರ್ಥಿಕ ಯಶಸ್ಸಿಗಿಂತಲೂ ಎಸ್. ಜಾನಕಿ ಅವರು ಇಡೀ ಗಳಿಸಿರುವ ಅಪಾರ ಗೌರವ ಮತ್ತು ಪ್ರೀತಿಯೇ ಅವರಿಗೆ ನಿಜವಾದ ಸಂಪತ್ತು ಎಂದು ಸಂಗೀತ ಪ್ರೇಮಿಗಳು ಭಾವಿಸುತ್ತಾರೆ. ಅವರ ಕಂಠಸಿರಿಯಲ್ಲಿ ಮೂಡಿಬಂದ ಅದ್ಭುತ ಭಾವನೆಗಳು, ಶಬ್ದಗಳ ಸ್ಪಷ್ಟತೆ ಹಾಗೂ ಸಂಗೀತದ ಮೇಲಿದ್ದ ಶ್ರದ್ಧೆಯ ಕಾರಣದಿಂದಾಗಿ ಪ್ರತಿಯೊಂದು ತಲೆಮಾರಿನ ಕೇಳುಗರು ಇಂದಿಗೂ ಅವರ ಹಾಡುಗಳನ್ನು ಆಸ್ವಾದಿಸುತ್ತಿದ್ದಾರೆ.
ಅವರು ಎಷ್ಟು ಆಸ್ತಿ ಗಳಿಸಿದ್ದಾರೆ ಎನ್ನುವುದಕ್ಕಿಂತ ಭಾರತೀಯ ಸಂಗೀತ ಲೋಕಕ್ಕೆ ಅವರು ನೀಡಿರುವ ಅಮೂಲ್ಯ ಸೇವೆ ಅತ್ಯಂತ ದೊಡ್ಡದು. ಪ್ರಸ್ತುತ ಎಸ್. ಜಾನಕಿ ಅವರು ದೈಹಿಕವಾಗಿ ನಮ್ಮ ಮಧ್ಯೆ ಇಲ್ಲದಿದ್ದರೂ, ಅವರ ಅಮರ ಧ್ವನಿ ಮತ್ತು ಹಾಡುಗಳು ಇತಿಹಾಸದಲ್ಲಿ ಎಂದಿಗೂ ಸುವರ್ಣಾಕ್ಷರಗಳಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತವೆ.