ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇವಸ್ಥಾನದಲ್ಲಿ ಕ್ರೈಸ್ತ ಭಕ್ತಿಗೀತೆ ಹಾಡಿದ ಭಜನಾ ತಂಡ: ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ

ಕೇರಳದ ಕೊಟ್ಟಾಯಂನ ದೇವಸ್ಥಾನೋತ್ಸವದಲ್ಲಿ ಭಜನಾ ತಂಡವೊಂದು ಕ್ರೈಸ್ತ ಭಕ್ತಿಗೀತೆ ಹಾಡಿದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರೆ, ತಂಡ ಮತ್ತು ದೇವಸ್ಥಾನ ಸಮಿತಿ ಇದು ಧಾರ್ಮಿಕ ಸೌಹಾರ್ದತೆಯ ಸಂಕೇತ ಎಂದು ಸಮರ್ಥಿಸಿವೆ.

ಕೇರಳದ ದೇವಸ್ಥಾನದಲ್ಲಿ ಕ್ರೈಸ್ತ ಭಕ್ತಿಗೀತೆ!

ಭಜನಾ ತಂಡ -

Profile
Sushmitha Jain Apr 24, 2026 5:07 PM

ತಿರುವನಂತಪುರಂ: ಕೇರಳದ (Kerala) ಕೊಟ್ಟಾಯಂನಲ್ಲಿ ನಡೆದ ದೇವಸ್ಥಾನದ ಉತ್ಸವವೊಂದರಲ್ಲಿ ಪ್ರಸಿದ್ಧ ಭಜನಾ ತಂಡವೊಂದು ಕ್ರೈಸ್ತ ಭಕ್ತಿಗೀತೆ (Christian devotional song)ಯನ್ನು ಹಾಡಿದ್ದು, ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯು ಹಿಂದೂ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಏನಿದು ಪ್ರಕರಣ?

ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 'ನಂದಗೋವಿಂದಂ' ಎಂಬ ಭಜನಾ ತಂಡವು ಪ್ರದರ್ಶನ ನೀಡುತ್ತಿತ್ತು. ಈ ಸಂದರ್ಭದಲ್ಲಿ ತಂಡದ ಮುಖ್ಯ ಗಾಯಕ ನವೀನ್ ಮೋಹನ್ ಅವರು ಸೌಹಾರ್ದತೆಯ ಬಗ್ಗೆ ಮಾತನಾಡುತ್ತಾ, ದೇವಸ್ಥಾನದ ಕಾರ್ಯಕ್ರಮಕ್ಕೆ ಸ್ಥಳೀಯ ಚರ್ಚ್ ನೀಡಿದ ಸಹಕಾರವನ್ನು ಸ್ಮರಿಸಿದರು. ಚರ್ಚ್ ತನ್ನ ಆವರಣದಲ್ಲಿ ಪಾರ್ಕಿಂಗ್ ಮತ್ತು ಇತರ ಸೌಲಭ್ಯಗಳನ್ನು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು, ತಂಡವು "ಈ ಪರದೇವನಹೋ..." ಎಂಬ ಕ್ರೈಸ್ತ ಭಕ್ತಿಗೀತೆಯನ್ನು ಹಾಡಿತು. ತಾವು ಚರ್ಚ್ ನಡೆಸುವ ಶಾಲೆಯಲ್ಲಿ ಓದಿದ್ದು, ಸಮುದಾಯಗಳ ನಡುವಿನ ಸಹಕಾರವನ್ನು ಗೌರವಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾಗಿ ನವೀನ್ ಸ್ಪಷ್ಟಪಡಿಸಿದ್ದಾರೆ.

ಮೇ 1 ರಿಂದ ಆನ್‌ಲೈನ್ ಗೇಮಿಂಗ್ ಹೊಸ ನಿಯಮಗಳು ಜಾರಿ; ಕೇಂದ್ರ ಸರ್ಕಾರದಿಂದ ಮಾಹಿತಿ

ಹಿಂದು ಸಂಘಟನೆಗಳ ಆಕ್ರೋಶ

ಆದರೆ, ದೇವಸ್ಥಾನದ ಆವರಣದೊಳಗೆ ಅನ್ಯ ಧರ್ಮದ ಗೀತೆಗಳನ್ನು ಹಾಡಿರುವುದಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಬೇಕು ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಈ ರೀತಿ ಬೆರೆಸಬಾರದು ಎಂದು ಅವರು ವಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ನಾಯಕಿ ಕೆ.ಪಿ. ಶಶಿಕಲಾ ಅವರು, "ನೀವು ಕುಳಿತಿರುವ ಕೊಂಬೆಯನ್ನೇ ಕತ್ತರಿಸಿಕೊಂಡರೆ ಅದು ಮುರಿದು ಬೀಳುತ್ತದೆ. ಚಿಕನ್ ಮಸಾಲಾ ರುಚಿಯಾಗಿರಬಹುದು, ಆದರೆ ಅದನ್ನು ಪಾಯಸಕ್ಕೆ ಹಾಕಬೇಡಿ" ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.

ತಂಡದ ಸ್ಪಷ್ಟನೆ ಮತ್ತು ದೇವಸ್ಥಾನದ ಸಮರ್ಥನೆ

ವಿವಾದ ತಾರಕಕ್ಕೇರುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನಂದಗೋವಿಂದಂ ತಂಡವು, ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನಮಗಿರಲಿಲ್ಲ ಎಂದು ಹೇಳಿದೆ. "ನಮಗೆ ಭಕ್ತಿ ಎನ್ನುವುದು ಹೆಸರುಗಳನ್ನು ಮೀರಿದ ಪ್ರವಾಹವಾಗಿ ಕಂಡಿತು. ದೇವಸ್ಥಾನದ ಪುನರ್ನಿರ್ಮಾಣ ಕಾರ್ಯಕ್ಕೆ ಹಲವು ಸಮುದಾಯದವರು ಬೆಂಬಲ ನೀಡುತ್ತಿದ್ದಾರೆ. ನಾವು ಸಂಘಟಕರ ಅನುಮತಿ ಪಡೆದೇ ಆ ಗೀತೆಯನ್ನು ಹಾಡಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇತ್ತ ದೇವಸ್ಥಾನದ ಸಮಿತಿಯು ಕೂಡ ಭಜನಾ ತಂಡದ ಬೆಂಬಲಕ್ಕೆ ನಿಂತಿದ್ದು, ವಿವಿಧ ಧರ್ಮದ ಜನರು ದೇವಸ್ಥಾನದ ಚಟುವಟಿಕೆಗಳಲ್ಲಿ ಸಹಕರಿಸುವುದು ಇಲ್ಲಿನ ವಾಡಿಕೆಯಾಗಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದೆ. ಒಟ್ಟಾರೆಯಾಗಿ ಈ ಘಟನೆಯು ಕೇರಳದಲ್ಲಿ ಧಾರ್ಮಿಕ ಸೌಹಾರ್ದತೆ ಮತ್ತು ಸಂಪ್ರದಾಯದ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿದೆ.