RSS Centenary Celebrations: ಆರ್‌ಎಸ್‌ಎಸ್ ಶತಮಾನೋತ್ಸವ; 100 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ: ಕರೆನ್ಸಿಯಲ್ಲಿ ಭಾರತ ಮಾತೆ ಚಿತ್ರ
ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ 100 ರೂ. ಮುಖಬೆಲೆಯ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ದೆಹಲಿಯಲ್ಲಿ ಬುಧವಾರ (ಅಕ್ಟೋಬರ್ 1) ಬಿಡುಗಡೆ ಮಾಡಿದ್ದಾರೆ. 100 ರೂ. ನಾಣ್ಯದಲ್ಲಿ ಭಾರತ ಮಾತೆ ಹಾಗೂ ಸ್ವಯಂಸೇವಕರ ಚಿತ್ರ ಇದೆ.

-

ದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು (RSS Centenary Celebrations), ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) 100 ರೂ. ಮುಖಬೆಲೆಯ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ದೆಹಲಿಯಲ್ಲಿ ಬುಧವಾರ (ಅಕ್ಟೋಬರ್ 1) ಬಿಡುಗಡೆಗೊಳಿಸಿದರು. 100 ರೂ. ನಾಣ್ಯದಲ್ಲಿ ಭಾರತ ಮಾತೆ ಹಾಗೂ ಸ್ವಯಂಸೇವಕರ ಚಿತ್ರ ಇರುವುದು ವಿಶೇಷ.
100 ರೂ. ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವಿದ್ದರೆ, ಇನ್ನೊಂದು ಬದಿಯಲ್ಲಿ ವರದ ಮುದ್ರೆಯಲ್ಲಿ ಭಾರತ ಮಾತೆಯ ಚಿತ್ರವಿದೆ. ಜತೆಗೆ ಸ್ವಯಂ ಸೇವಕರು ಭಕ್ತಿ ಮತ್ತು ಸಮರ್ಪಣೆಯಿಂದ ಅವಳ ಮುಂದೆ ನಮಸ್ಕರಿಸುವಂತೆ ಚಿತ್ರಿಸಲಾಗಿದೆ. ನಾಣ್ಯದ ಮೇಲೆ "ರಾಷ್ಟ್ರೀಯ ಸ್ವಾಹಾ, ಇದಂ ರಾಷ್ಟ್ರಾಯ, ಇದಂ ನ ಮಮ" ಎಂಬ ಆರ್‌ಎಸ್‌ಎಸ್ ಧ್ಯೇಯವಾಕ್ಯವೂ ಇದೆ. ಇದರ ಅರ್ಥ "ಎಲ್ಲವೂ ರಾಷ್ಟ್ರಕ್ಕೆ ಸಮರ್ಪಿತ, ಎಲ್ಲವೂ ರಾಷ್ಟ್ರದ್ದು, ಯಾವುದೂ ನನ್ನದಲ್ಲ".
संघ के शताब्दी समारोह में विशेष डाक टिकट और स्मृति सिक्के जारी कर बहुत गौरवान्वित हूं। @RSSorg pic.twitter.com/Bsewae2iec
— Narendra Modi (@narendramodi) October 1, 2025
ಈ ಸುದ್ದಿಯನ್ನೂ ಓದಿ: Mohan Bhagwat: ʼʼಯಾವುದೇ ಸಂಘರ್ಷವಿಲ್ಲದಂತೆ ಭಾರತ 3,000 ವರ್ಷ ಜಗತ್ತನ್ನು ಮುನ್ನಡೆಸಿದೆʼʼ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
"ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಕರೆನ್ಸಿಯಲ್ಲಿ ಭಾರತ ಮಾತೆಯ ಚಿತ್ರವನ್ನು ಮುದ್ರಿಸಲಾಗಿದೆ. ಇದು ಅತ್ಯಂತ ಹೆಮ್ಮೆ ಮತ್ತು ಐತಿಹಾಸಿಕ ಕ್ಷಣʼʼ ಎಂದು ಮೋದಿ ಬಣ್ಣಿಸಿದ್ದಾರೆ.
ನಾಣ್ಯದ ಜತೆಗೆ ಬಿಡುಗಡೆಯಾದ ಅಂಚೆ ಚೀಟಿಯಲ್ಲಿ 1963ರ ಗಣರಾಜ್ಯೋತ್ಸವದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನದ ಚಿತ್ರವಿದೆ. ಭಾರತ ಮಾತೆಗೆ ಆರ್‌ಎಸ್‌ಎಸ್ ಶತಮಾನಗಳಷ್ಟು ಕಾಲ ಸಲ್ಲಿಸುತ್ತಿರುವ ಸೇವೆಗೆ ದೊರೆತ ಹೆಮ್ಮೆಯ ಗೌರವ ಇದು ಎಂದು ಮೋದಿ ಹೇಳಿದ್ದಾರೆ. ದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವ ಆಚರಣೆಯನ್ನು ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದು, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭಾಗವಹಿಸಿದ್ದರು.
ಆರ್‌ಎಸ್‌ಎಸ್ ಅನ್ನು 1925ರಲ್ಲಿ ಕೇಶವ್ ಬಲಿರಾಮ ಹೆಗ್ಡೆವಾರ್ ನಾಗಪುರದಲ್ಲಿ ಸ್ಥಾಪಿಸಿದರು. ಭಾರತೀಯ ಸಂಸ್ಕೃತಿ, ಶಿಸ್ತು, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಆರ್‌ಎಸ್‌ಎಸ್ ಅವರು ಹುಟ್ಟು ಹಾಕಿದರು. 1925ರ ವಿಜಯದಶಮಿಯಂದು ಆರಂಭವಾದ ಆರ್‌ಎಸ್‌ಎಸ್‌ಗೆ ಈ ವರ್ಷದ ವಿಜಯದಶಮಿಗೆ 100 ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ.