ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶತಮಾನದ ಹಿಂದಿನ ನೋವಿನ ನಿಟ್ಟುಸಿರು ಇಂದಿಗೂ ನಿಂತಿಲ್ಲ; ಜಗತ್ತೆಲ್ಲ ದೀಪಾವಳಿ ಆಚರಿಸಿದರೆ ಈ ಊರಿನಲ್ಲಿ ಸೂತಕದ ಛಾಯೆ

Deepavali 2025: ದೀಪಾವಳಿ ಬಂತೆಂದರೆ ಎಲ್ಲರೂ ಸಂಭ್ರಮಿಸುತ್ತಾರೆ. ಆದರೆ ಹಿಮಾಚಲ ಪ್ರದೇಶದ ಹಮಿರ್‌ಪುರ್‌ ಜಲ್ಲೆಯ ಸಮ್ಮೂ ಎಂಬ ಹಳ್ಳಿಯ ಜನ ಮಾತ್ರ ನೋವಿನಿಂದ ಬಳಲುತ್ತಾರೆ. ಶತಮಾನಗಳ ಹಿಂದ ಎಪ್ರಚಲಿತದಲ್ಲಿದ್ದ ಸತು ಸಹಗಮನ ಪದ್ಧತಿಯ ನೋವಿನ ನಿಟ್ಟುಸಿರು, ಶಾಪ ಇಂದಿಗೂ ಈ ಹಳ್ಳಿಯನ್ನು ಕಾಡುತ್ತಲೇ ಇದೆ.

ಈ ಹಳ್ಳಿಯಲ್ಲಿ ದೀಪಾವಳಿ ಆಚರಣೆ ಇಲ್ಲ; ಇದರ ಹಿಂದಿದೆ ನೋವಿನ ಕಥೆ

ಸಾಂದರ್ಭಿಕ ಚಿತ್ರ -

Ramesh B Ramesh B Oct 18, 2025 10:26 PM

ಶಿಮ್ಲಾ, ಅ. 18: ದೀಪಾವಳಿ (Deepavali 2025) ಬಂತೆಂದರೆ ಸಾಕು ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ದೇಶ ಅಷ್ಟೇ ಏಕೆ ವಿಶ್ವಾದ್ಯಂತ ಹಿಂದೂಗಳು, ಹಿಂದೂ ಸಂಸ್ಕೃತಿ ಇಷ್ಟ ಪಡುವವರು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಕತ್ತಲೆಯನ್ನು ಓಡಿಸಲು ದೀಪ ಹಚ್ಚಿ, ಪಟಾಕಿ ಸಿಡಿಸಿ, ರಂಗೋಲಿ ಬಿಡಿಸಿ, ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಕೊಂಡಾಡುತ್ತಾರೆ. ಉತ್ತರ ಭಾರತದಲ್ಲಿಯಂತೂ ಇದರ ಆಚರಣೆ ಇನ್ನೂ ಜೋರು. ಆದರೆ ಹಿಮಾಚಲ ಪ್ರದೇಶದ ಈ ಹಳ್ಳಿಯಲ್ಲಿ ಮಾತ್ರ ದೀಪಾವಳಿ ಎಂದರೆ ಸಾಕು ಸೂತಕದ ಛಾಯೆ ಆವರಿಸುತ್ತದೆ. ಸಂಭ್ರಮದ ಬದಲು ನೋವು ಕಾಣಿಸಿಕೊಳ್ಳುತ್ತದೆ. ಶತಮಾನಗಳ ಹಿಂದೆ ಜೀವಂತವಾಗಿ ಸುಟ್ಟು ಹೋದ ತುಂಬು ಗರ್ಭಿಣಿಯೊಬ್ಬಳ ನೋವಿನ ನಿಟ್ಟಿಸಿರು ಇಂದಿಗೂ ಕೇಳಿ ಬಂದಂತಾಗಿ ಗ್ರಾಮಸ್ಥರು ನಲುಗಿ ಹೋಗುತ್ತಾರೆ. ಸುತ್ತಮುತ್ತ ಪಟಾಕಿ ಶಬ್ದ ಕೇಳಿದರೆ ಸಾಕು ನೋವಿನ ಕೂಗೊಂದು ಕಿವಿಗೆ ಬಿದ್ದಂತಾಗಿ ಸ್ಥಳೀಯರ ಮನದಲ್ಲಿ ವಿಷಾದದ ಛಾಯೆ ಹಾದು ಹೋಗುತ್ತದೆ. ನಾವೀಗ ಹೇಳ ಹೊರಟಿರುವುದು ಹಿಮಾಚಲ ಪ್ರದೇಶದ ಹಮಿರ್‌ಪುರ್‌ ಜಲ್ಲೆಯ ಸಮ್ಮೂ (Sammoo) ಎಂಬ ಶಾಪಗ್ರಸ್ತ ಹಳ್ಳಿಯ ಬಗ್ಗೆ.

ಶತಮಾನದ ಹಿಂದೆ ಹಿಂಡಿ ಹಿಪ್ಪೆ ಮಾಡಿದ್ದ ಸತಿ ಸಹಗಮನ ಪದ್ಧತಿಯ ನೋವನ್ನು ಇಂದಿಗೂ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ. ಇಲ್ಲಿದ್ದ ಈ ಕೆಟ್ಟ ಸಾಮಾಜಿಕ ಪಿಡುಗಿನ ಕಾರಣಕ್ಕೆ ದೀಪಾವಳಿಯನ್ನು ಈಗಲೂ ಆಚರಿಸುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ದೀಪಗಳ ಹಬ್ಬ ಇವರ ಪಾಲಿಗೆ ಕಗ್ಗತ್ತಲಿನ ಕೂಪ.

ಈ ಸುದ್ದಿಯನ್ನೂ ಓದಿ: Actor Vijay: ದೀಪಾವಳಿ ಆಚರಿಸದಂತೆ ನಟ ದಳಪತಿ ವಿಜಯ್‌ ಕರೆ

ಕರಾಳ ಇತಿಹಾಸ

ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಸಮ್ಮೂ ಗ್ರಾಮದಲ್ಲಿ ದೀಪಾವಳಿ ಆಚರಿಸದಿರುವ ಹಿಂದೆ ನೋವಿನ ಕಥೆ ಇದೆ. ಶತಮಾನಗಳ ಹಿಂದೆ ಸೈನಿಕನೊಬ್ಬನ ದೀಪಾವಳಿ ಆಚರಣೆಯ ಸಿದ್ಧತೆಯಲ್ಲಿ ತೊಡಗಿದ್ದಳು. ತುಂಬು ಗರ್ಭಿಣಿಯಾಗಿದ್ದ ಆಕೆ ಕಣ್ಣ ತುಂಬ ನೂರಾರು ಕನಸು ತುಂಬಿಕೊಂಡು ಪತಿಯ ಆಗಮನವನ್ನೇ ಎದುರು ನೋಡುತ್ತಿದ್ದಳು. ಆದರೆ ಯುದ್ಧವೊಂದರಲ್ಲಿ ಭಾಗವಹಿಸಿದ್ದ ಆಕೆಯ ಪತಿ ಮೃತಪಟ್ಟಿದ್ದ. ಆತನ ಮೃತದೇಹವನ್ನು ಮನೆಗೆ ತರಲಾಯಿತು. ಆತನ ಅಂತ್ಯಕ್ರಿಯೆ ನಡೆಸುವಾಗ ಅಂದು ಪ್ರಚಲಿತದಲ್ಲಿದ್ದ ಪದ್ಧತಿಯಂತೆ ಪತ್ನಿಯನ್ನು, ಆಕೆ ಗರ್ಭಿಣಿ ಎಂಬುದನ್ನೂ ನೋಡದೆ ಉರಿಯುವ ಚಿತೆಗೆ ದೂಡಲಾಯಿತು.

ಆಕೆ ಸಾಯುವ ಮುನ್ನ ಗ್ರಾಮದಲ್ಲಿ ಇನ್ನುಮುಂದೆ ದೀಪಾವಳಿ ಅಚರಣೆ ನಡೆಯಕೂಡದು ಎಂದು ನೋವಿನಿಂದ ಹೇಳಿದಳು. ಹೀಗೆ ಹೇಳಿದ ಆಕೆ ಗ್ರಾಮಸ್ಥರ ಸಮ್ಮುಖದಲ್ಲಿ ಆಕೆ ಜೀವಂತ ಸುಟ್ಟು ಹೋದಳು. ಅಂದಿನಿಂದ ಇಂದಿನವರೆಗೂ ಈ ಗ್ರಾಮದಲ್ಲಿ ದೀಪಾವಲಿ ಆಚರಿಸುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ʼʼಒಂದು ವೇಳೆ ಸಂಭ್ರಮದಿಂದ ದೀಪಾವಳಿ ಆಚರಿಸಲು ಮುಂದಾದರೆ ದೊಡ್ಡ ಅನಾಹುತವೇ ಸಂಭವಿಸುತ್ತದೆʼʼ ಎನ್ನುತ್ತಾರೆ ಇಲ್ಲಿನ ಹಿರಿಯರು. 3 ವರ್ಷಗಳ ಹಿಂದೆ ಯಜ್ಞ-ಯಾಗ ಆಯೋಜಿಸಿ ಜನರ ಭಯ ದೂರ ಮಾಡಲು ಪ್ರತ್ನಿಸಲಾಯಿತಾದರೂ ಅದು ಫಲ ನೀಡಿಲ್ಲ. ಇಂದಿಗೂ ಗ್ರಾಮಸ್ಥರು ಹಬ್ಬದಂದು ಮನೆಯೊಳಗೇ ಇರುತ್ತಾರೆ.

ದೀಪಾವಳಿಯಂದು ಮನೆಗಳಲ್ಲಿ ಕೆಲವೊಂದಿಷ್ಟು ದೀಪ ಹಚ್ಚಿಡುತ್ತಾರಷ್ಟೆ. ಪಟಾಕಿ ಬಳಕೆ, ಅದ್ಧೂರಿ ಆಚರಣೆ ನಿಷಿದ್ಧ. ಒಟ್ಟಿನಲ್ಲಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಹಬ್ಬ ಶತಮಾನಗಳ ಹಿಂದಿನ ನೋವಿನಲ್ಲಿ, ಶಾಪದಲ್ಲಿ ಕರಗಿ ಹೋಗುತ್ತದೆ.