Readers Colony: ರೈಲು ಸೇವೆಯ ಅಭಿವೃದ್ಧಿಗೆ ಕಲ್ಲು
ಏಪ್ರಿಲ್ ತಿಂಗಳಲ್ಲೇ 37000 ಟಿಕೆಟ್ ರಹಿತ ಪ್ರಯಾಣಿಕರು ರು.2.90ಕೋಟಿ ದಂಡವನ್ನು ನೀಡಿದ್ದಾರಂತೆ. ಇದು ಟಿಕೆಟ್ ಪಡೆಯದೇ ಸಿಕ್ಕಿಹಾಕಿಕೊಂಡವರ ಸಂಖ್ಯೆಯಾಗಿದ್ದು, ಸಿಕ್ಕಿಹಾಕಿಕೊಳ್ಳದೇ ಪ್ರಯಾಣಿಸಿ ದವರು ಮತ್ತು ಹೊಂದಾಣಿಕೆಯಿಂದ ದಂಡಕೊಡದವರ ಸಂಖ್ಯೆಎಷ್ಟೋ? ಕೇವಲ ಒಂದು ರೈಲು ಮಾರ್ಗದ ಕಥೆ ಹೀಗಾದರೆ, ಇಡೀ ದೇಶದಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ಎಷ್ಟಿರಬಹುದು? ಕೊಂಕಣ ರೈಲು ಮಾರ್ಗದಲ್ಲಿ ಸುಮಾರು 50 ಜತೆ ರೈಲುಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿ ಓಡುತ್ತಿದ್ದರೂ, ಈ ಮಾರ್ಗ ನಿರೀಕ್ಷೆಯ ಲಾಭ ತರದಿರುವ ಹಿಂದಿನ ಕಾರಣ ಇದು ಎನ್ನಬಹುದೇ?
-
ಓದುಗರ ಓಣಿ
ಮಾಧ್ಯಮ ವರದಿಗಳ ಪ್ರಕಾರ 2025-26ರಲ್ಲಿ ಕೊಂಕಣ ರೈಲು ನಿಗಮವು ಟಿಕೆಟ್ ರಹಿತ ಪ್ರಯಾ ಣಿಕರಿಂದ ರು. 27.68 ಕೋಟಿ ದಂಡ ವಸೂಲಿ ಮಾಡಿದೆಯಂತೆ. ಏಪ್ರಿಲ್ ತಿಂಗಳಲ್ಲೇ 37000 ಟಿಕೆಟ್ ರಹಿತ ಪ್ರಯಾಣಿಕರು ರು.2.90ಕೋಟಿ ದಂಡವನ್ನು ನೀಡಿದ್ದಾರಂತೆ. ಇದು ಟಿಕೆಟ್ ಪಡೆಯದೇ ಸಿಕ್ಕಿಹಾಕಿಕೊಂಡವರ ಸಂಖ್ಯೆಯಾಗಿದ್ದು, ಸಿಕ್ಕಿಹಾಕಿಕೊಳ್ಳದೇ ಪ್ರಯಾಣಿಸಿ ದವರು ಮತ್ತು ಹೊಂದಾ ಣಿಕೆಯಿಂದ ದಂಡಕೊಡದವರ ಸಂಖ್ಯೆಎಷ್ಟೋ? ಕೇವಲ ಒಂದು ರೈಲು ಮಾರ್ಗದ ಕಥೆ ಹೀಗಾದರೆ, ಇಡೀ ದೇಶದಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ಎಷ್ಟಿರಬಹುದು? ಕೊಂಕಣ ರೈಲು ಮಾರ್ಗ ದಲ್ಲಿ ಸುಮಾರು 50 ಜತೆ ರೈಲುಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿ ಓಡುತ್ತಿದ್ದರೂ, ಈ ಮಾರ್ಗ ನಿರೀಕ್ಷೆಯ ಲಾಭ ತರದಿರುವ ಹಿಂದಿನ ಕಾರಣ ಇದು ಎನ್ನಬಹುದೇ? ಈ ಮಾರ್ಗ ದ್ವಿಪಥವಾಗ ದಿರುವುದಕ್ಕೆ ಮತ್ತು ಇನ್ನಿತರ ಅಭಿವೃದ್ಧಿಯ ಬೇಡಿಕೆಗಳು ಸಾಕಾರ ಗೊಳ್ಳದಿರುವುದಕ್ಕೆ ಇದು ಕಾರಣ ಇರಬಹುದೇ?
- ರಮಾನಂದ ಎಸ್., ಬೆಂಗಳೂರು
ಜನ-ಸ್ನೇಹಿ ಮುಖ್ಯಮಂತ್ರಿಯಾಗಲಿ!
ಡಿಕೆ ಶಿವಕುಮಾರ್ ಅವರ ಪ್ರವಾಣ ವಚನ ಕಾರ್ಯಕ್ರಮ ಹಲವು ರೀತಿಯಲ್ಲಿ ಭಿನ್ನವಿದ್ದಂತೆ ಕಂಡಿತು. ಅದಕ್ಕೆ ಕಾರಣ, ಡಿಕೆಶಿ, ಆಮಂತ್ರಿತರನ್ನು ಬರಮಾಡಿಕೊಂಡ ಪರಿ. ಆಗಮಿಸಿದ ಎಲ್ಲರೂ ಅತಿಥಿಗಳೇ ಆಗಿದ್ದರೂ, ವಿಶೇಷವಾಗಿ ಮಠಾಧೀಶರನ್ನು ಒಬ್ಬೊಬ್ಬರಾಗಿ ಮಾತನಾಡಿಸಿ, ಅವರಿಂದ ಆಶೀರ್ವಾದ ಪಡೆಯುವುದರೊಂದಿಗೆ, ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡಿದ್ದು.
ಅಷ್ಟೇ ಅಲ್ಲ, ಹೆಚ್ಚಿನವರನ್ನು ಕೈ ಬೀಸಿ ಆಮಂತ್ರಿಸಿದ್ದು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ಕೊಟ್ಟು ಆತ್ಮೀಯತೆಯನ್ನು ಪ್ರದರ್ಶಿಸಿದ್ದು. ಡಿಕೆಶಿ ಅವರು ತಮ್ಮ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು.
ಇದನ್ನೂ ಓದಿ: Railway Minister V.Somanna: ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ರೈಲ್ವೆ ಸಚಿವ ವಿ.ಸೋಮಣ್ಣ
ಸಾಮಾನ್ಯವಾಗಿ, ಇಂತಹ ಸಮಾರಂಭದಲ್ಲಿ, ಆಮಂತ್ರಿತರೆಲ್ಲ ಬಂದು ತಮ್ಮ ಆಸನ ಅಲಂಕರಿಸಿ ಸಾಕ್ಷಿಯಾ ಗುವುದನ್ನು ಕಂಡಾಗಿದೆ. ಆದರೆ, ಈ ಬಾರಿ ವೈಯಕ್ತಿಕವಾಗಿ ಆದಷ್ಟು ಹೆಚ್ಚು ಜನರನ್ನು ಭೇಟಿಯಾಗಿ, ನಿಮ್ಮಂತೆ ನಾನೂ ಒಬ್ಬ ಸಹಜ ವ್ಯಕ್ತಿ ಎಂಬುದನ್ನೂ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.
ಏನೂ ಗಡಿಬಿಡಿ, ಆತಂಕ, ದುಗುಡ, ಅತಿಯಾದ ಪ್ರತಿಕ್ರಿಯೆ ಕಂಡು ಬಂದಿಲ್ಲ. ಹೊರಗಿನಿಂದ ಎಷ್ಟೇ ಗಡುಸಾಗಿ ಕಂಡರೂ, ಮನಸ್ಸು ಮಧುರ ಎಂಬ ಅಭಿಪ್ರಾಯ ಮೂಡು ವಂತಾಗಿದೆ. ಹೀಗಾಗಿ, ‘ಜನ-ಸ್ನೇಹಿ’ ಮುಖ್ಯಮಂತ್ರಿ ಯಾಗಿ ಕೆಲಸ ಮಾಡಬಹುದು ಎಂಬ ಅಭಿಪ್ರಾಯವೂ ಮೂಡುವಂತಾಗಿದೆ. ಇನ್ನು, ಕೆಲ ಹಿರಿಯರು ಪ್ರಮಾಣ ವಚನ ವಚನ ಸ್ವೀಕರಿಸುತ್ತಿದ್ದಾಗಲೂ ಡಿಕೆಶಿ ಬಾಡಿ ಲಾಂಗ್ವೇಜ್ ಸಾಮಾನ್ಯ ವಾಗಿಯೇ ಇತ್ತು.
- ಶಂಕರನಾರಾಯಣ ಭಟ್, ಮಾಡಗೇರಿ, ಹೊನ್ನಾವರ
ಭಾರತ್ ಜೋಡೋ ನಿರಂತರವಾಗಿರಲಿ
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ಘೋಷಣೆಯಲ್ಲಿ ಯುವಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಯುವಕರ ಸಂಘ ರಚನೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ಯೋಜನೆಯು ಗ್ರಾಮೀಣ ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ.
ಯುವಕರ ಸಂಘ ಘೋಷಣೆಗೆ ಸೀಮಿತವಾಗದೇ, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಮರ್ಪಕವಾಗಿ ಜಾರಿಯಾಗಿ ನಿರಂತರವಾಗಿ ಮುಂದುವರಿ ಯಬೇಕು. ಯುವಜನರ ಅಭಿವೃದ್ಧಿ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಈ ಯೋಜನೆ ಪರಿಣಾಮಕಾರಿಯಾಗಿ ನೆರವಾಗಲಿ.
- ಅಭಿಲಾಷ್ ಎಂ. ದಾವಣಗೆರೆ
ಪುಸ್ತಕ ಉದ್ಯಮಕ್ಕೆ ನಿರ್ಲಕ್ಷ್ಯ ಸಲ್ಲದು
ಪ್ರಸ್ತುತ ದಿನಗಳಲ್ಲಿ ಸರಕಾರವು ಸಾಹಿತ್ಯ ಮತ್ತು ಪುಸ್ತಕ ಉದ್ಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಪ್ರತಿಯೊಬ್ಬ ಲೇಖಕರಿಂದ ನೂರು ಪುಸ್ತಕಗಳನ್ನು ಕಡ್ಡಾಯವಾಗಿ ಖರೀದಿಸಬೇಕು ಎಂಬ ನಿಯಮವಿದ್ದರೂ ಪ್ರಸ್ತುತ ಅದನ್ನು ಕೇವಲ ಐವತ್ತು ಪುಸ್ತಕಗಳಿಗೆ ಕಡಿತಗೊಳಿಸಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ.
ಜ್ಞಾನಾಭಿವೃದ್ಧಿಗೆ ಪೂರಕವಾದ ಪ್ರಕಾಶಕರು ಹಾಗೂ ಲೇಖಕರನ್ನು ಪ್ರೋತ್ಸಾಹಿಸುವ ಬದಲು ಇರುವ ಸವಲತ್ತುಗಳನ್ನೇ ಕಡಿತಗೊಳಿತ್ತಿರುವುದು ಸಾಂಸ್ಕೃತಿಕ ಬೆಳವಣಿಗೆಗೆ ಮಾರಕ. ಭಾಷಣಗಳಿಗೆ ಸೀಮಿತವಾಗದೆ ಸರಕಾರ ಎಚ್ಚೆತ್ತುಕೊಂಡು ಹಳೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪುಸ್ತಕಗಳ ಖರೀದಿಗೆ ಸೂಕ್ತ ಅನುದಾನ ನೀಡಬೇಕು. ಮಾರುಕಟ್ಟೆ ವಿಸ್ತರಣೆ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸಬೇಕು.
- ಡಾ.ವಿಜಯಕುಮಾರ್ ಎಚ್.ಕೆ. ರಾಯಚೂರು
ಉಳ್ಳವರು ಮೀಸಲು ಬಿಡಲಿ
ರಾಜಕೀಯ ಪಕ್ಷಗಳು ಜಾತಿಯ ಹೆಸರಿನಲ್ಲಿ ಅಖಂಡ ಭಾರತೀಯತೆಯನ್ನೇ ಒಡೆದು, ಪರಸ್ಪರ ಅಪನಂಬಿಕೆ ಅವಿಶ್ವಾಸ ಮೂಡಿಸುತ್ತಾ, ಕೆಲವು ಪಕ್ಷಗಳು ಶಾಸಕ ಸಂಸದ ಸಚಿವ ಸ್ಥಾನಗಳಿಗೆ ಜಾತಿಯನ್ನು ಬಹಿರಂಗ ಮಾನದಂಡವಾಗಿ ಬಳಸುತ್ತಾ, ಕೆಲವು ಜಾತಿಯ ಮತದಾರರನ್ನು ತಮ್ಮ ತಮ್ಮ ಮತಬ್ಯಾಂಕ್ ಆಗಿ ಪರಿವರ್ತಿಸಿಕೊಂಡಿವೆ. ಸುಪ್ರೀಂ ಕೋರ್ಟು ಈಗಾಗಲೇ ಮೀಸಲಾತಿ ಪ್ರಮಾಣ ಶೇಕಡ 50% ಅನ್ನು ಮೀರುವಂತಿಲ್ಲ ಎಂದು ಹಲವು ಬಾರಿ ಎಚ್ಚರಿಕೆ ನೀಡಿದೆ. ಆದರೆ ಈ ರಾಜಕಾರಣಿಗಳು, ಅಂಬೇಡ್ಕರ್ ಅವರು ಮೀಸಲಾತಿಯನ್ನು 15 ವರ್ಷಕ್ಕೂ ಮೀರಿ ಮುಂದು ವರಿಸಬಾರದೆಂದು ಹೇಳಿದ್ದರೂ ಸಹ, ಹೊಸದಾಗಿ ಜಾತಿಗಣತಿ, ಮೀಸಲಾತಿ ಹೆಚ್ಚಳ, ಒಳಮೀಸ ಲಾತಿ ವಿಂಗಡಣೆ ಮಾಡುವ ಮೂಲಕ ಭಾರತೀಯ ಮನಸ್ಥಿತಿಯನ್ನೇ ದುರ್ಬಲ ಗೊಳಿಸಲಾಗುತ್ತಿದೆ. ಉಳ್ಳವರು ಈಗಲಾದರೂ ಮೀಸಲಾತಿ ತೊರೆದು, ಅಸಕ್ತರಿಗೆ ಅವಕಾಶ ಮಾಡಿಕೊಡಲಿ.
- ಎಸ್ ಎನ್ ರಮೇಶ್, ಸಾತನೂರು
ವಿದ್ಯಾರ್ಥಿಗಳನ್ನು ಅವರ ಪಾಡಿಗೆ ಬಿಡಿ
ದಿನಪತ್ರಿಕೆಗಳಲ್ಲಿ ಎರಡು ವಿಶಿಷ್ಟ ಫೋಟೋಗಳನ್ನು ನೋಡಿದೆ. ಶಾಲೆಯ ಪ್ರಾರಂಭದ ದಿನ ಶಿಕ್ಷಕಿಯರು ಪುಟ್ಟ ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸುತ್ತಿರುವ ಫೋಟೋ ಒಂದು, ಶ್ರೀರಾಮ ಸೇನೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸದಸ್ಯರು ಹದಿಹರಯದ ವಿದ್ಯಾರ್ಥಿಗಳಿಗೆ ಶಾಲೆಯ ಆವರಣದಲ್ಲಿ ಕೇಸರಿ ಶಾಲು ತೊಡಿಸುತ್ತಿರುವ ಫೋಟೋ ಇನ್ನೊಂದು. ಶಿಕ್ಷಕರಲ್ಲಿ ನನ್ನ ಮನವಿ, ಮೊದಲ ದಿನ ಮಕ್ಕಳ ಮೇಲೆ ಹೂಮಳೆ ಸುರಿಸದಿದ್ದರೂ ಪರವಾ ಇಲ್ಲ, ಶಾಲಾ ದಿನಗಳಲ್ಲಿ ಎಳೆ ಕಂದಮ್ಮಗಳ ಮೇಲೆ ಶಿಸ್ತಿನ ಹೆಸರಿನಲ್ಲಿ ಸಲ್ಲದ ಕಟ್ಟುಪಾಡುಗಳನ್ನು ಹೇರದೆ ಸ್ವಚ್ಛಂದವಾಗಿ ಕಲಿಯಲು ಬಿಡಿ. ಹರೆಯದ ಹುಡುಗರ ಮನದಲ್ಲಿ ಸ್ನೇಹ- ಸೌಹಾರ್ದಗಳನ್ನು ಮೂಡಿಸುವ ಬದಲು, ಮತೀಯ ದ್ವೇಷಭಾವ ಬಿತ್ತುವ ಕೆಲಸ ಮಾಡಬೇಡಿ.
- ಎಚ್. ಆನಂದರಾಮ ಶಾಸ್ತ್ರೀ