ಚಿನ್ನಸ್ವಾಮಿ ಕ್ರೀಡಾಂಗಣ ಪರಿಶೀಲನೆ ನಡೆಸಿದ ಬೆಂಗಳೂರು ಪೊಲೀಸರು
IPL 2026: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳನ್ನು ಆಡಲಿದೆ. ಇನ್ನೆರಡು ಪಂದ್ಯಗಳನ್ನು ಛತ್ತೀಸಗಡದ ರಾಯಪುರದಲ್ಲಿ ಆಡಲಿದೆ. ಮಾ.28ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
Chinnaswamy Stadium -
ಬೆಂಗಳೂರು, ಮಾ.24: ಬೆಂಗಳೂರು ನಗರ ಪೊಲೀಸ್ ವಿಭಾಗದ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸರು ಕೆಎಸ್‌ಸಿಎ ಮತ್ತು ಆರ್‌ಸಿಬಿ ತಂಡದ ಅಧಿಕಾರಿಗಳ ಜೊತೆಯಾಗಿ ಚಿನ್ನಸ್ವಾಮಿ ಕ್ರೀಡಾಂಗಣದ(Chinnaswamy Stadium) ಪರಿಶೀಲನೆ ನಡೆಸಿ ಐಪಿಎಲ್ ಪಂದ್ಯಾವಳಿ ನಡೆಸಲು ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿ ಬೆಂಗಳೂರು ಪೊಲೀಸ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.
ಮುಂಬರುವ ಐಪಿಎಲ್ ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭದ್ರತೆ, ಸಂಚಾರ ವ್ಯವಸ್ಥೆ, ಪಾರ್ಕಿಂಗ್, ಆಗಮನ–ನಿರ್ಗಮನ, ಸ್ಟಾಂಡ್‌ಗಳ ಸ್ಥಿತಿಗತಿ ಸೇರಿದಂತೆ ವಿವಿಧ ಸೌಕರ್ಯಗಳ ಖುದ್ದು ಪರಿಶೀಲನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
'ಉತ್ಸಾಹದ ಕ್ಷಣಗಳು ಆರಂಭವಾಗುವ ಮುನ್ನ, ಸುರಕ್ಷತೆಯು ಮುನ್ನಡೆ ಸಾಧಿಸಿದೆ! ಮುಂಬರುವ ಐಪಿಎಲ್ ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಂಟಿ ಪರಿಶೀಲನೆ ನಡೆಸಲಾಯಿತು. ಇದರಲ್ಲಿ ಸಾರ್ವಜನಿಕ ಸುರಕ್ಷತೆ, ಗುಂಪು ಚಲನೆ, ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಹಾಗೂ ಸಂಚಾರ ನಿರ್ವಹಣೆಯನ್ನು ಪರಿಶೀಲಿಸಲಾಯಿತು. ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯ ಹಿರಿಯ ಅಧಿಕಾರಿಗಳು, ಕೆಎಸ್‌ಸಿಎ (KSCA) ಮತ್ತು ಆರ್‌ಸಿಬಿ (RCB) ಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನೇರ ಸ್ಥಳ ಪರಿಶೀಲನೆ ಮಾಡಲಾಯಿತು. ಇದರಿಂದ ಎಲ್ಲಾ ಪ್ರೇಕ್ಷಕರಿಗೆ ಸುಗಮ ಪ್ರವೇಶ ಮತ್ತು ಸುರಕ್ಷಿತ ಅನುಭವವನ್ನು ಖಚಿತಪಡಿಸಿಕೊಳ್ಳಲಾಗಿದೆ. ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಸುರಕ್ಷತೆಯೊಂದಿಗೆ ಆನಂದಿಸಿ! ಎಂದು ಬೆಂಗಳೂರು ಪೊಲೀಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಉತ್ಸಾಹದ ಕ್ಷಣಗಳು ಆರಂಭವಾಗುವ ಮುನ್ನ, ಸುರಕ್ಷತೆಯು ಮುನ್ನಡೆ ಸಾಧಿಸಿದೆ!
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) March 23, 2026
ಮುಂಬರುವ ಐಪಿಎಲ್ ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಂಟಿ ಪರಿಶೀಲನೆ ನಡೆಸಲಾಯಿತು. ಇದರಲ್ಲಿ ಸಾರ್ವಜನಿಕ ಸುರಕ್ಷತೆ, ಗುಂಪು ಚಲನೆ, ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಹಾಗೂ ಸಂಚಾರ ನಿರ್ವಹಣೆಯನ್ನು ಪರಿಶೀಲಿಸಲಾಯಿತು.… pic.twitter.com/fPXa9dMKNE
2025ರ ಜೂ.4ರಂದು ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯಗಳನ್ನು ಆಯೋಜಿಸಬೇಕಿದ್ದರೆ ಹಲವು ಬದಲಾವಣೆಗಳನ್ನು ಮಾಡಲು ಸರ್ಕಾರ ನೇಮಿಸಿದ್ದ ನ್ಯಾ.ಕುನ್ಹಾ ಸಮಿತಿ ಶಿಫಾರಸು ಮಾಡಿತ್ತು. ಇದರ ಮೇಲ್ವಿಚಾರಣೆಗೆ ಸರ್ಕಾರವು ಹಲವು ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ತಜ್ಞರ ಸಮಿತಿಯನ್ನೂ ರಚಿಸಿತ್ತು.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳನ್ನು ಆಡಲಿದೆ. ಇನ್ನೆರಡು ಪಂದ್ಯಗಳನ್ನು ಛತ್ತೀಸಗಡದ ರಾಯಪುರದಲ್ಲಿ ಆಡಲಿದೆ. ಮಾ.28ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.