7 ವರ್ಷಗಳ ಬಳಿಕ ಪಾಕಿಸ್ತಾನ ದೇಶಿ ಕ್ರಿಕೆಟ್‌ಗೆ ಮರಳಲು ಸಜ್ಜಾದ ಬಾಬರ್ ಆಝಮ್!
ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಮ್ 2019ರ ಬಳಿಕ ಇದೇ ಮೊದಲ ಬಾರಿ ದೇಶಿ ರೆಡ್-ಬಾಲ್ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಕಳಪೆ ಫಾರ್ಮ್ ಎದುರಿಸುತ್ತಿರುವ ಬಾಬರ್, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿದ ಬಳಿಕ ದೇಶಿ ಕ್ರಿಕೆಟ್‌ಗೆ ಮರಳುವ ನಿರ್ಧಾರ ಕೈಗೊಂಡಿದ್ದಾರೆ.
ಪಾಕಿಸ್ತಾನದಲ್ಲಿ ದೇಶಿ ಕ್ರಿಕೆಟ್ ಆಡಲು ಸಜ್ಜಾದ ಬಾಬರ್ ಆಝಮ್. -
ಇಸ್ಲಾಮಾಬಾದ್: ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಬಾಬರ್ ಆಝಮ್ (Babar Azam) ಬರೋಬ್ಬರಿ ಏಳು ವರ್ಷಗಳ ಬಳಿಕ ದೇಶಿ ರೆಡ್-ಬಾಲ್ ಕ್ರಿಕೆಟ್‌ಗೆ ಮರಳಲು ಸಜ್ಜಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (ENG vs PAK) ಪಾಕಿಸ್ತಾನ 3-0 ಅಂತರದಲ್ಲಿ ವೈಟ್‌ವಾಶ್ ಸೋಲು ಕಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ದಿ ಡಾನ್ ವರದಿ ಮಾಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಬರ್ ಆಝಮ್ ಅವರ ಬ್ಯಾಟಿಂಗ್ ಪ್ರದರ್ಶನ ಹಲವು ವರ್ಷಗಳಿಂದ ಟೀಕೆಗೆ ಗುರಿಯಾಗಿದೆ. 2023, 2024 ಮತ್ತು 2025ರ ಕ್ಯಾಲೆಂಡರ್ ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಕ್ರಮವಾಗಿ 22, 20 ಮತ್ತು 31ರ ಸರಾಸರಿ ಹೊಂದಿದ್ದರು.
ದೀರ್ಘಕಾಲದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್ ಎದುರಿಸುತ್ತಿದ್ದರೂ, ಬಾಬರ್ 2019ರ ಬಳಿಕ ದೇಶಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ಕೊನೆಯ ಪ್ರಥಮ ದರ್ಜೆ ಪಂದ್ಯ 2019ರ ಡಿಸೆಂಬರ್ 30ರಂದು ನಡೆದಿತ್ತು. ಆಗ ಅವರು ಸೆಂಟ್ರಲ್ ಪಂಜಾಬ್ ತಂಡವನ್ನು ಮುನ್ನಡೆಸಿ, ಫೈನಲ್‌ನಲ್ಲಿ ನಾರ್ಥನ್ ತಂಡವನ್ನು ಇನಿಂಗ್ಸ್ ಮತ್ತು 16 ರನ್‌ಗಳಿಂದ ಮಣಿಸಿ ಕ್ವೈದ್-ಎ-ಆಝಂ ಟ್ರೋಫಿಯನ್ನು ಗೆದ್ದಿದ್ದರು.
Women's Asia Cup: ಭಾರತ ತಂಡದ ಕ್ರಾಂತಿ ಗೌಡ್‌ಗೆ ದಂಡ ವಿಧಿಸಿದ ಐಸಿಸಿ! ಏಕೆ ಗೊತ್ತೆ?
OGDCL ತಂಡ ಸೇರಲಿರುವ ಬಾಬರ್
ಸುಮಾರು ಏಳು ವರ್ಷಗಳ ಬಳಿಕ ಬಾಬರ್ ಆಝಮ್ ಇದೀಗ ನಡೆಯುತ್ತಿರುವ ಪ್ರೆಸಿಡೆಂಟ್ಸ್ ಟ್ರೋಫಿ ಗ್ರೇಡ್-I ಟೂರ್ನಿಯಲ್ಲಿ ಆಯಿಲ್ ಆ್ಯಂಡ್ ಗ್ಯಾಸ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್ (OGDCL) ತಂಡದ ಪರ ಆಡಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 16ರಂದು ಬ್ರಿಟನ್‌ನಿಂದ ಪಾಕಿಸ್ತಾನಕ್ಕೆ ಮರಳಿದ ಬಳಿಕ ಆಝಮ್ OGDCL ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಂಡದ ಕ್ರೀಡಾ ವಿಭಾಗದ ಮುಖ್ಯಸ್ಥೆ ಫರಾ ಬಟೂಲ್ ದಿ ಡಾನ್ಗೆ ತಿಳಿಸಿದ್ದಾರೆ.
“ಬಾಬರ್ ಆಝಮ್ ಸೆಪ್ಟೆಂಬರ್ 16ರಂದು ಬ್ರಿಟನ್‌ನಿಂದ ಪಾಕಿಸ್ತಾನಕ್ಕೆ ಮರಳಲಿದ್ದಾರೆ. ಮರುದಿನ ಅವರು OGDCL ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರ ಕಿಟ್ ಕೂಡ ಆರ್ಡರ್ ಮಾಡಲಾಗಿದೆ,” ಎಂದು ಫರಾ ತಿಳಿಸಿದ್ದಾರೆ.
ಆದರೆ, ಬಾಬರ್ ಆಝಮ್ ಅವರ ಪಂದ್ಯ ಪ್ರವೇಶ ತಕ್ಷಣವೇ ನಡೆಯುವ ಸಾಧ್ಯತೆ ಕಡಿಮೆ. OGDCL ತಂಡ ಪ್ರಸ್ತುತ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಪ್ರೆಸಿಡೆಂಟ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಟೆಲಿವಿಷನ್ (PTV) ವಿರುದ್ಧ ಆಡುತ್ತಿದೆ. ಸೆಪ್ಟೆಂಬರ್ 18ರಂದು ಪೇಶಾವರದಲ್ಲಿ ಕಿಂಗ್ಸ್‌ಮೆನ್ ಅಕಾಡೆಮಿ ವಿರುದ್ಧ OGDCL ಆಡಲಿದ್ದು, ಸೆಪ್ಟೆಂಬರ್ 24ರಿಂದ ಖಾನ್ ರಿಸರ್ಚ್ ಲ್ಯಾಬೋರೇಟರೀಸ್ (KRL) ವಿರುದ್ಧ ಕಾದಾಟ ನಡೆಸಲಿದೆ.
ENG vs PAK: ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಿಂದ ಬಾಬರ್ ಆಝಮ್ ಔಟ್!
“ಬಾಬರ್ ಪಾಕಿಸ್ತಾನಕ್ಕೆ ಮರಳಿದ ಬಳಿಕ ಎರಡನೇ ಪಂದ್ಯದಿಂದ ಆಡಬೇಕೇ ಅಥವಾ ಮೂರನೇ ಪಂದ್ಯದಿಂದ ಕಣಕ್ಕಿಳಿಯಬೇಕೇ ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ,” ಎಂದು ಫರಾ ಹೇಳಿದ್ದಾರೆ.
ಪಿಸಿಬಿ ಪ್ರಸ್ತಾಪದ ಮೇರೆಗೆ OGDCL ತಂಡದ ಪರ ಆಡಲಿರುವ ಆಝಮ್
ದಿ ಡಾನ್ ವರದಿ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬಾಬರ್ ಆಝಮ್ ಅವರನ್ನು ಅತಿಥಿ ಆಟಗಾರನಾಗಿ OGDCL ತಂಡಕ್ಕೆ ಆಡಲು ಪ್ರಸ್ತಾಪಿಸಿದೆ. ಪಾಕಿಸ್ತಾನದ ಅಂತಾರಾಷ್ಟ್ರೀಯ ಆಟಗಾರರು ದೇಶಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾಗವಹಿಸುವಂತೆ ಮಾಡುವ ಪ್ರಯತ್ನದ ಭಾಗವಾಗಿ ಪಿಸಿಬಿ ಈ ಕ್ರಮ ಕೈಗೊಂಡಿದೆ. ಪಾಕಿಸ್ತಾನದ ವೈಟ್-ಬಾಲ್ ತಂಡಗಳ ನಾಯಕರೂ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಒಡಿಐ ನಾಯಕ ಶಾಹೀನ್ ಶಾ ಆಫ್ರಿದಿ ಕೆಆರ್‌ಎಲ್ ತಂಡವನ್ನು ಪ್ರತಿನಿಧಿಸುತ್ತಿದ್ದರೆ, ಟಿ20ಐ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಕಿಂಗ್ಸ್‌ಮೆನ್ ಅಕಾಡೆಮಿ ಪರ ಕಣಕ್ಕಿಳಿಯುತ್ತಿದ್ದಾರೆ.