ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಮೂರನೇ ಅತ್ಯಂತ ವೇಗದ ಐಪಿಎಲ್‌ ಶತಕ ಸಿಡಿಸಿದ ಹೆನ್ರಿಚ್‌ ಕ್ಲಾಸೆನ್‌!

ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಹೆನ್ರಿಚ್‌ ಕ್ಲಾಸೆನ್‌ ಅವರು 37 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದಾರೆ. ಇದರೊಂದಿಗೆ ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ಶತಕವನ್ನು ಬಾರಿಸಿದ್ದಾರೆ.

ಮೂರನೇ ಅತ್ಯಂತ ವೇಗದ ಐಪಿಎಲ್‌ ಶತಕ ಸಿಡಿಸಿದ ಹೆನ್ರಿಚ್‌ ಕ್ಲಾಸೆನ್‌!

ಮೂರನೇ ಐಪಿಎಲ್‌ ವೇಗದ ಶತಕ ಸಿಡಿಸಿದ ಹೆನ್ರಿಚ್‌ ಕ್ಲಾಸೆನ್.

Profile Ramesh Kote May 26, 2025 8:07 AM

ನವದೆಹಲಿ: ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2025) ಟೂರ್ನಿಯ ಪಂದ್ಯದಲ್ಲಿ (SRH vs KKR) ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 110 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಎಸ್‌ಆರ್‌ಎಚ್‌ ತಂಡ ಹದಿನೆಂಟನೇ ಆವೃತ್ತಿಯಲ್ಲಿನ ತನ್ನ ಅಭಿಯಾನವನ್ನು ಅದ್ದೂರಿ ಗೆಲುವಿನೊಂದಿಗೆ ಅಂತ್ಯಗೊಳಿಸಿದೆ. ಇದರ ನಡುವೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌ ಹೆನ್ರಿಚ್‌ ಕ್ಲಾಸೆನ್‌ (Heinrich Klaasen) ಅವರ ಇನಿಂಗ್ಸ್‌ ಎಲ್ಲರ ಗಮನವನ್ನು ಸೆಳೆಯಿತು. ಅವರು ಕೇವಲ 37 ಎಸೆತಗಳಲ್ಲಿ ಶತಕವನ್ನು ಬಾರಿಸಿ ಎಸ್‌ಆರ್‌ಎಚ್‌ ಗೆಲುವಿಗೆ ನೆರವು ನೀಡುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ತಮ್ಮ ಸ್ಪೋಟಕ ಶತಕದ ಮೂಲಕ ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಭಾನುವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಸನ್‌ರೈಸರ್ಸ್‌ ಹೈದಾರಬಾದ್‌ ತಂಡದ ಪರ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ವಿಶೇಷವಾಗಿ ಹೆನ್ರಿಚ್‌ ಕ್ಲಾಸೆನ್‌ ಅವರು 39 ಎಸೆತಗಳಲ್ಲಿ 9 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 105 ರನ್‌ಗಳನ್ನು ಬಾರಿಸಿದರು. ಆ ಮೂಲಕ ಎಸ್‌ಆರ್‌ಎಚ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 278 ರನ್‌ಗಳನ್ನು ಕಲೆ ಹಾಕಿತ್ತು. ಅಂದ ಹಾಗೆ ಹೆನ್ರಿಚ್‌ ಕ್ಲಾಸೆನ್‌ ಐಪಿಎಲ್‌ ಇತಿಹಾಸದಲ್ಲಿ ಮೂರನೇ ಜಂಟಿ ವೇಗದ ಐಪಿಎಲ್‌ ಶತಕವನ್ನು ಬಾರಿಸಿದ್ದಾರೆ.

IPL 2025: ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿಗೆ ಜೋಶ್‌ ತುಂಬಿದ ಜೋಶ್‌ ಹ್ಯಾಜಲ್‌ವುಡ್‌

ಟ್ರಾವಿಸ್‌ ಹೆಡ್‌ ದಾಖಲೆ ಮುರಿದ ಕ್ಲಾಸೆನ್‌

37 ಎಸೆತಗಳಲ್ಲಿ ಶತಕವನ್ನು ಸಿಡಿಸುವ ಮೂಲಕ ತಮ್ಮ ಸಹ ಆಟಗಾರ ಟ್ರಾವಿಸ್‌ ಹೆಡ್‌ ಅವರ ದಾಖಲೆಯನ್ನು ಹೆನ್ರಿಚ್‌ ಕ್ಲಾಸೆನ್‌ ಮುರಿದಿದ್ದಾರೆ. ಆ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಅತ್ಯಂತ ವೇಗದ ಶತಕವನ್ನು ಬಾರಿಸಿದ್ದಾರೆ. ಇದರೊಂದಿಗೆ 2010ರಲ್ಲಿ 37 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದ ಯೂಸಫ್‌ ಪಠಾಣ್‌ ಅವರ ದಾಖಲೆಯನ್ನು ಇದೀಗ ಕ್ಲಾಸೆನ್‌ ಸರಿಗಟ್ಟಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ 30 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆಯ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ವೈಭವ್‌ ಸೂರ್ಯವಂಶಿ (34 ಎಸೆತಗಳಲ್ಲಿ) ಈ ದಾಖಲೆಯ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.



ಐಪಿಎಲ್‌ ಟೂರ್ನಿಯಲ್ಲಿನ ಅತ್ಯಂತ ವೇಗದ ಶತಕಗಳು

ಕ್ರಿಸ್‌ ಗೇಲ್‌ (ಆರ್‌ಸಿಬಿ): ಪುಣೆ ವಾರಿಯರ್ಸ್‌ ಇಂಡಿಯಾ ವಿರುದ್ಧ 2013 ರಲ್ಲಿ 30 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು.

ವೈಭವ್‌ ಸೂರ್ಯವಂಶಿ (ಆರ್‌ಆರ್‌): ಗುಜರಾತ್‌ ಟೈಟನ್ಸ್‌ ವಿರುದ್ಧ 2025ರಲ್ಲಿ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.

ಯೂಸಫ್‌ ಪಠಾಣ್‌ (ಆರ್‌ಆರ್‌): ಮುಂಬೈ ಇಂಡಿಯನ್ಸ್‌ ವಿರುದ್ಧ 2010ರಲ್ಲಿ 37 ಎಸೆತಗಳನ್ನು ಶತಕವನ್ನು ಪೂರ್ಣಗೊಳಿಸಿದ್ದರು.

ಹೆನ್ರಿಚ್‌ ಕ್ಲಾಸೆನ್‌ (ಎಸ್‌ಆರ್‌ಎಚ್‌): ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 2025ರಲ್ಲಿ 37 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದಾರೆ.

ಡೇವಿಡ್‌ ಮಿಲ್ಲರ್‌ ( ಕಿಂಗ್ಸ್‌ ಇಲೆವೆನ್‌ ಪಂಜಾಬ್‌): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 2013ರಲ್ಲಿ 38 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದಾರೆ.

SRH vs KKR: ಗೆಲುವಿನೊಂದಿಗೆ ಮುಳುಗಿದ 'ಸನ್‌ರೈಸರ್ಸ್‌' ಹೈದರಾಬಾದ್‌

ಹೆನ್ರಿಚ್‌ ಕ್ಲಾಸೆನ್‌ ಹೇಳಿದ್ದೇನು?

"ತುಂಬಾ ಸಂತೋಷವಾಯಿತು, ಇದು ನಿರಾಶೆಯ ದೀರ್ಘ ಋತುವಾಗಿತ್ತು. ಅದೃಷ್ಟವಶಾತ್, ನಾನು ಅದಕ್ಕೆ ಅಂಟಿಕೊಂಡೆ ಮತ್ತು ಅಂತಿಮವಾಗಿ ಸ್ವಲ್ಪ ಪ್ರತಿಫಲವನ್ನು ಪಡೆದುಕೊಂಡಿದ್ದೇನೆ. ಈ ಇನಿಂಗ್ಸ್‌ನಿಂದ ಹೆಮ್ಮೆಯಾಗುತ್ತಿದೆ ಹಾಗೂ ಉತ್ತಮ ಪ್ರದರ್ಶನ ನೀಡಲು ನಾವು ಅಭಿಮಾನಿಗಳಿಗೆ ಋಣಿಯಾಗಿದ್ದೇವೆ. ಇಂದು (ಭಾನುವಾರ) ರಾತ್ರಿ ಪ್ರತಿ ಚೆಂಡನ್ನು ಸಿಕ್ಸರ್‌ ಹೊಡೆಯಲು ಪ್ರಯತ್ನಿಸಲಿಲ್ಲ. ಈ ಋತುವಿನಲ್ಲಿ ನಾನು ಇದೇ ರೀತಿಯ ತಪ್ಪನ್ನು ಮಾಡಿದ್ದೇನೆ," ಎಂದು ಕ್ಲಾಸೆನ್ ತಮ್ಮ ಎರಡನೇ ಐಪಿಎಲ್ ಶತಕವನ್ನು ಬಾರಿಸಿದ ನಂತರ ಹೇಳಿದ್ದರು.

"ಸುನೀಲ್‌ ನರೇನ್‌ ವಿರುದ್ದ ಬ್ಯಾಟಿಂಗ್‌ನಲ್ಲಿ ಸುಧಾರಿಸಬೇಕಾಗಿದೆ ಏಕೆಂದರೆ ಅವರ ಲೆನ್ತ್‌ ಅನ್ನು ಮಿಸ್‌ ಮಾಡಿಕೊಂಡಿದ್ದೇನೆ. ನಾನು ಸಾಂದರ್ಭಿಕ ಆಟಗಾರ, ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಇದು ನಮ್ಮ ಪಾಲಿಗೆ ಉಪಾಯವಾಗಿತ್ತು. ಬಹುಬೇಗ ವಿಕೆಟ್‌ ಕಳೆದುಕೊಂಡರೆ ನಾವು ಇದನ್ನು ಮಾಡಬೇಕಾಗುತ್ತದೆ. ಇದು ನನಗೆ ಬ್ಯಾಟಿಂಗ್‌ ಕ್ರಮಾಂಕದ ಸಂಖ್ಯೆಯಷ್ಟೆ," ಎಂದು ಹೆನ್ರಿಚ್‌ ಕ್ಲಾಸೆನ್‌ ತಿಳಿಸಿದ್ದಾರೆ.