ಬಿಸಿಸಿಐನಲ್ಲಿ ಸಚಿನ್, ಗಂಗೂಲಿ, ದ್ರಾವಿಡ್ ಕಾರ್ಯನಿರ್ವಹಿಸಬೇಕೆಂದ ಸುನೀಲ್ ಗವಾಸ್ಕರ್!
ಭಾರತೀಯ ಮಾಜಿ ಕ್ರಿಕೆಟಿಗರ ಅನುಭವ ಮತ್ತು ಪರಿಣತಿಯನ್ನು ಬಿಸಿಸಿಐ ಬಳಸಿಕೊಳ್ಳಬೇಕು ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ಅಲ್ಲದೆ, ಕ್ರಿಕೆಟ್ ಸಲಹಾ ಸಮಿತಿಯ ಪಾತ್ರವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ. ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ಆಟಗಾರರ ಅನುಭವವನ್ನು ಬಿಸಿಸಿಐ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐಗೆ ಮಹತ್ವದ ಸಲಹೆಯನ್ನು ನೀಡಿದ ಸುನೀಲ್ ಗವಾಸ್ಕರ್. -
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಜಿ ಕ್ರಿಕೆಟಿಗರ ಅನುಭವ ಮತ್ತು ಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಬ್ಯಾಟಿಂಗ್ ದಿಗ್ಗಜ ಹಾಗೂ ಮಾಜಿ ನಾಯಕ ಸುನೀಲ್ ಗವಾಸ್ಕರ್ (Sunil Gavaskar) ಸಲಹೆ ನೀಡಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಸಲಹಾ ಸಮಿತಿಯ ಜವಾಬ್ದಾರಿಗಳನ್ನು ವಿಸ್ತರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಕ್ರಿಕೆಟ್ ಸಲಹಾ ಸಮಿತಿಯ ಕೆಲಸ ಕೇವಲ ಮುಖ್ಯ ಕೋಚ್ ಮತ್ತು ಆಯ್ಕೆಗಾರರನ್ನು ಆಯ್ಕೆ ಮಾಡುವುದಕ್ಕೆ ಸೀಮಿತವಾಗಬಾರದು. ದೇಶಿ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ಸೇರಿದಂತೆ ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನೂ ಸಮಿತಿ ನೋಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Women's Asia Cup: ಭಾರತ ತಂಡದ ಕ್ರಾಂತಿ ಗೌಡ್‌ಗೆ ದಂಡ ವಿಧಿಸಿದ ಐಸಿಸಿ! ಏಕೆ ಗೊತ್ತೆ?
“ಪ್ರಸ್ತುತ ಬಿಸಿಸಿಐನಲ್ಲಿ ಆಯ್ಕೆ ಸಮಿತಿಗಳು ಮತ್ತು ಸಿಎಸಿ ಹೊರತುಪಡಿಸಿ ಬೇರೆ ಯಾವುದೇ ಸಮಿತಿಗಳು ಇಲ್ಲ. ಬಹುಶಃ ಸಿಎಸಿಯ ವ್ಯಾಪ್ತಿಯನ್ನು ವಿಸ್ತರಿಸುವ ಸಮಯ ಬಂದಿದೆ. ಆಯ್ಕೆಗಾರರು ಮತ್ತು ಕೋಚ್ ಆಯ್ಕೆ ಮಾಡುವುದರ ಜೊತೆಗೆ ದೇಶಿ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ಮತ್ತು ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಸಮಿತಿ ಪರಿಶೀಲಿಸಬೇಕು. ಅತ್ಯಂತ ಅನುಭವ ಹೊಂದಿರುವ ಹಲವು ಮಾಜಿ ಕ್ರಿಕೆಟಿಗರಿದ್ದಾರೆ. ಅವರ ಪರಿಣತಿಯನ್ನು ಈ ಸಮಿತಿಯಲ್ಲಿ ಬಳಸಿಕೊಳ್ಳಬಹುದು,” ಎಂದು ಸುನೀಲ್ ಗವಾಸ್ಕರ್ ಮಿಡ್-ಡೇ ಪತ್ರಿಕೆಯ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಸಚಿನ್, ದ್ರಾವಿಡ್, ಗಂಗೂಲಿ ಸೇರಿದಂತೆ ದಿಗ್ಗಜರ ಹೆಸರು ಸೂಚಿಸಿದ ಗವಾಸ್ಕರ್
2022ರಲ್ಲಿ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣಾ ನಾಯಕ್ ಅವರನ್ನುಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಸ್ತುತ ಸಮಿತಿಯ ಸ್ಥಿತಿ ಸ್ಪಷ್ಟವಾಗಿಲ್ಲ. ಈ ಹಿಂದೆ ಸಿಎಸಿ ಮುಖ್ಯವಾಗಿ ಮುಖ್ಯ ಕೋಚ್ ಮತ್ತು ಆಯ್ಕೆಗಾರರ ನೇಮಕಾತಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಕ್ರಿಕೆಟ್ ಸಲಹಾ ಸಮಿತಿಯನ್ನು ದೊಡ್ಡ ಮಟ್ಟದ ಸಲಹಾ ಸಮಿತಿಯಾಗಿ ರೂಪಿಸಿದರೆ, ಹಲವು ಮಾಜಿ ಭಾರತೀಯ ತಾರೆಗಳನ್ನು ಅದರಲ್ಲಿ ಸೇರಿಸಬಹುದು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.
7 ವರ್ಷಗಳ ಬಳಿಕ ಪಾಕಿಸ್ತಾನ ದೇಶಿ ಕ್ರಿಕೆಟ್‌ಗೆ ಮರಳಲು ಸಜ್ಜಾದ ಬಾಬರ್ ಆಝಮ್!
“ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ರವಿ ಶಾಸ್ತ್ರಿ, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಅವರಂತಹ ಹೆಸರುಗಳ ಬಗ್ಗೆ ಏನು ಹೇಳುತ್ತೀರಿ? ಕೆಲವರ ಹೆಸರನ್ನು ಮಾತ್ರ ಹೇಳುತ್ತಿದ್ದೇನೆ. ಬಿಸಿಸಿಐ ಅಧ್ಯಕ್ಷರು ಮತ್ತು ಕಾರ್ಯದರ್ಶಿಯೂ ಇರಲಿದ್ದಾರೆ,” ಎಂದು ಗವಾಸ್ಕರ್ ಹೇಳಿದ್ದಾರೆ.
ಇಂತಹ ಅನುಭವಿಗಳ ಸಮಿತಿ ಭಾರತೀಯ ತಂಡದ ಮುಖ್ಯ ಕೋಚ್, ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರೆ, ಭಾರತೀಯ ಕ್ರಿಕೆಟ್‌ಗೆ ಬಹಳಷ್ಟು ಪ್ರಯೋಜನವಾಗಬಹುದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಮಹಿಳಾ ಕ್ರಿಕೆಟ್‌ಗೂ ಪ್ರತ್ಯೇಕ ಸಲಹಾ ಸಮಿತಿ
ಇದೇ ವೇಳೆ, ಮಹಿಳಾ ಕ್ರಿಕೆಟ್‌ಗೆ ಪ್ರತ್ಯೇಕ ಸಲಹಾ ಮಂಡಳಿ ರಚಿಸುವಂತೆಯೂ ಗವಾಸ್ಕರ್ ಸಲಹೆ ನೀಡಿದ್ದಾರೆ. “ಈ ಬಗ್ಗೆ ಯೋಚಿಸುವುದೇ ರೋಮಾಂಚನ ಉಂಟುಮಾಡುತ್ತದೆ. ಇದು ಎಂದಾದರೂ ನಡೆಯುತ್ತದೆಯೇ? ಅಥವಾ ಇದು ಕೇವಲ ಕನಸಾಗಿಯೇ ಉಳಿಯುತ್ತದೆಯೇ?” ಎಂದು ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.