ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KKR vs SRH: ನಿತೀಶ್‌ ರೆಡ್ಡಿ ಆಲ್‌ರೌಂಡರ್‌ ಆಟದಿಂದ ಸನ್‌ರೈಸರ್ಸ್‌ಗೆ ಮೊದಲನೇ ಜಯ!

KKR vs SRH Match Highlights: ನಿತೀಶ್‌ ಕುಮಾರ್‌ ರೆಡ್ಡಿ ಅವರ ಆಲ್‌ರೌಂಡರ್‌ ಆಟದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು 65 ರನ್‌ಗಳ ಗೆಲುವು ಸಾಧಿಸಿದೆ. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೊದಲನೇ ಗೆಲುವು ದಾಖಲಿಸಿತು.

IPL 2026: ಸನ್‌ರೈಸರ್ಸ್‌ಗೆ ಮಣಿದ ಕೋಲ್ಕತಾ ನೈಟ್‌ ರೈಡರ್ಸ್‌!

ಸನ್‌ರೈಸರ್ಸ್‌ ಹೈದರಾಬಾದ್‌ಗೆ 65 ರನ್‌ ಜಯ. -

Profile
Ramesh Kote Apr 2, 2026 11:18 PM

ಕೋಲ್ಕತಾ: ಬ್ಲೆಸಿಂಗ್‌ ಮುಜರಾಬಾನಿ ಮಾರಕ ಬೌಲಿಂಗ್‌ ಹೊರತಾಗಿಯೂ ನಿತೀಶ್‌ ಕುಮಾರ್‌ ರೆಡ್ಡಿ(Nitish Kumar Reddy) ಅವರ ಆಲ್‌ರೌಂಡರ್‌ ಆಟದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ (KKR vs SRH) ಎದುರು 65 ರನ್‌ಗಳ ಗೆಲುವು ಸಾಧಿಸಿತು. ಇದು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಇಶಾನ್‌ ಕಿಶನ್‌ ನಾಯಕತ್ವದ ಎಸ್‌ಆರ್‌ಎಚ್‌ ತಂಡಕ್ಕೆ ಮೊದಲನೇ ಜಯವಾಗಿದೆ. ಇನ್ನು ಕಠಿಣ ಹೋರಾಟ ನೀಡಿದ ಹೊರತಾಗಿಯೂ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್‌ 19ನೇ ಆವೃತ್ತಿಯಲ್ಲಿ ಸತತ ಎರಡನೇ ಸೋಲು ಒಪ್ಪಿಕೊಂಡಿದೆ.

ಗುರುವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ ನೀಡಿದ್ದ 227 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ಅಂಗ್‌ಕೃಷ್‌ ರಘುವಂಶಿ ಅವರ ಅರ್ಧಶತಕದ ಹೊರತಾಗಿಯೂ ಉನಾದ್ಕಟ್‌ ಬೌಲಿಂಗ್‌ಗೆ ನಲುಗಿ 16 ಓವರ್‌ಗಳಿಗೆ 161 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 65 ರನ್‌ಗಳಿಂದ ಸೋಲು ಅನುಭವಿಸಿತು. ಕೆಕೆಆರ್‌ ತಂಡ ಗೆಲುವಿನ ಹಾದಿಯಲ್ಲಿತ್ತು. ಆದರೆ, ಕ್ಯಾಮೆರಾನ್‌ ಗ್ರೀನ್‌ ಹಾಗೂ ಅರ್ಧಶತಕ ಗಳಿಸಿದ್ದ ಅಂಗ್‌ಕ್ರಿಷ್‌ ರಘುವಂಶಿ ಅವರ ಎರಡು ನಿರ್ಣಾಯಕ ರನ್‌ಔಟ್‌ಗಳು ಕೆಕೆಆರ್‌ಗೆ ಭಾರ ಹಿನ್ನಡೆಯನ್ನು ತಂದುಕೊಟ್ಟವು.

IPL 2026: ವರುಣ್‌ ಚಕ್ರವರ್ತಿ ಬೌಲಿಂಗ್‌ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಅಭಿಷೇಕ್‌ ನಾಯರ್‌!

ರಘುವಂಶಿಯ ಸತತ ಎರಡನೇ ಅರ್ಧಶತಕ ವ್ಯರ್ಥ

ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಅಂಗ್‌ಕ್ರಿಷ್‌, ಸನ್‌ರೈಸರ್ಸ್‌ ಎದುರು ಕೂಡ ಅದೇ ಲಯವನ್ನು ಮುಂದುವರಿಸಿದರು. ಅವರು ಆಡಿದ 29 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 52 ರನ್‌ ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿರಿಸಿದ್ದರು, ಆದರೆ ಅವರು ಅನಗತ್ಯವಾಗಿ ರನ್‌ಔಟ್‌ ಆದರು. ಇದಕ್ಕೂ ಮುನ್ನ ಆರಂಭಿಕ ಫಿನ್‌ ಆಲೆನ್‌ ಕೇವಲ 7 ಎಸೆತಗಳಲ್ಲಿ 28 ರನ್‌ ಚಚ್ಚಿ ಉತ್ತಮ ಆರಂಭ ಪಡದರೂ ಬಳಿಕ ವಿಕೆಟ್‌ ಕೈಚೆಲ್ಲಿದ್ದರು. ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್‌ 25 ಎಸೆತಗಳಲ್ಲಿ 35 ರನ್‌ ಗಳಿಸಿದರು.

ಎಸ್‌ಆರ್‌ಎಸ್‌ ಪರ ಜಯದೇವ್‌ ಉನಾದ್ಕಟ್‌ ಮೂರು ವಿಕೆಟ್‌ ಪಡೆದರೆ, ಎಹ್ಸಾನ್‌ ಮಾಲಿಂಗ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.



ಎಸ್‌ಆರ್‌ಎಚ್‌ಗೆ ಭರ್ಜರಿ ಆರಂಭ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಟ್ರಾವಿಸ್‌ ಹೆಡ್‌ ಹಾಗೂ ಅಭಿಷೇಕ್‌ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟರು. ಈ ಇಬ್ಬರೂ 5.4 ಓವರ್‌ಗಳಿಗೆ 82 ರನ್‌ಗಳ ಜೊತೆಯಾಟವನ್ನು ಆಡಿದರು. ಸ್ಪೋಟಕ ಬ್ಯಾಟ್‌ ಮಾಡಿದ ಟ್ರಾವಿಸ್‌ ಹೆಡ್‌ 21 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 46 ರನ್‌ ಸಿಡಿಸಿದರು, ಆದರೆ, ಅರ್ಧಶತಕದಂಚಿನಲ್ಲಿ ಕಾರ್ತಿಕ್‌ ತ್ಯಾಗಿಗೆ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್‌ ಕಿಶನ್‌ (14 ರನ್‌) ಅವರನ್ನು ಬ್ಲೆಸಿಂಗ್‌ ಮುಜರಾಬಾನಿ ಔಟ್‌ ಮಾಡಿದರು.



ಅರ್ಧಶತಕ ಕಳೆದುಕೊಂಡ ಅಭಿಷೇಕ್‌

ಒಂದು ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡುತ್ತಿದ್ದ ಆರಂಭಿಕ ಅಭಿಷೇಕ್‌ ಶರ್ಮಾ, ಕೇವಲ 21 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 228.57ರ ಸ್ಟ್ರೈಕ್‌ ರೇಟ್‌ನಲ್ಲಿ 48 ರನ್‌ ಗಳಿಸಿ ಅರ್ಧಶತಕದಂಚಿನಲ್ಲಿ ಬ್ಲೆಸಿಂಗ್‌ ಮುಜರಾಬಾನಿಗೆ ಔಟ್‌ ಆದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಅನಿಕೇತ್‌ ವರ್ಮಾ ಅವರನ್ನು ಅನುಕುಲ್‌ ರಾಯ್‌ ಔಟ್‌ ಮಾಡಿದರು. ಆದರೆ, ಐದನೇ ವಿಕೆಟ್‌ಗೆ ಜೊತೆಯಾಟದ ಹೆನ್ರಿಚ್‌ ಕ್ಲಾಸೆನ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ 82 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 24 ಎಸೆತಗಳಲ್ಲಿ 39 ರನ್‌ ಗಳಿಸಿದ ಬಳಿಕ ನಿತೀಶ್‌ ರೆಡ್ಡಿ ಔಟ್‌ ಮಾಡಿದರು.

IPL 2026: DC vs LSG ಪಂದ್ಯದಲ್ಲಿ ಗಂಟೆಗೆ 150 ಕಿಮಿ ವೇಗದಲ್ಲಿ ಬೌಲ್‌ ಮಾಡಿದ ಪ್ರಿನ್ಸ್‌ ಯಾದವ್‌ ಯಾರು?

ಹೆನ್ರಿಕ್‌ ಕ್ಲಾಸೆನ್‌ ಅರ್ಧಶತಕ

ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ಹೆನ್ರಿಕ್‌ ಕ್ಲಾಸೆನ್‌, 35 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 52 ರನ್‌ಗಳನ್ನು ಚಚ್ಚಿದರು. ಕೊನೆಯಲ್ಲಿ ಇವರನ್ನು ಮುಜರಾಬಾನಿ ಔಟ್‌ ಮಾಡಿದರು. ಅಂತಿಮವಾಗಿ ಎಸ್‌ಆರ್‌ಎಚ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 226 ರನ್‌ಗಳನು ಕಲೆ ಹಾಕಿತು. ಆ ಮೂಲಕ ಕೆಕೆಆರ್‌ಗೆ 227 ರನ್‌ಗಳ ಟಾರ್ಗೆಟ್‌ ನೀಡಿತು.

ಕೆಕೆಆರ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಬ್ಲೆಸಿಂಗ್‌ ಮುಜರಾಬಾನಿ ಅವರು 4 ವಿಕೆಟ್‌ ಸಾಧನೆ ಮಾಡಿದರೆ, ವೈಭವ್‌ ಅರೋರಾ ಎರಡು ವಿಕೆಟ್‌ ಪಡೆದರು.