ʻಬಿಗ್ಬ್ಯಾಷ್ ಲೀಗ್ನಲ್ಲಿ ಮೊಹಮ್ಮದ್ ರಿಝ್ವಾನ್ಗೆ ಅವಮಾನʼ: ಕಮ್ರಾನ್ ಅಕ್ಮಲ್ ಆಕ್ರೋಶ!
ಪ್ರಸ್ತುತ ನಡೆಯುತ್ತಿರುವ ಬಿಗ್ಬ್ಯಾಷ್ ಲೀಗ್ ಟೂರ್ನಿಯಲ್ಲಿ ಮೊಹಮ್ಮದ್ ರಿಝ್ವಾನ್ಗೆ ಅವಮಾನವಾಗಿದೆ ಎಂದು ಆರೋಪ ಮಾಡಿದ ಪಾಕಿಸ್ತಾನ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್, ಬಲಗೈ ಬ್ಯಾಟ್ಸ್ಮನ್ ಟಿ20 ಟೂರ್ನಿಯನ್ನು ತೊರೆದು ತವರಿಗೆ ಮರಳಬೇಕೆಂದು ಆಗ್ರಹಿಸಿದ್ದಾರೆ.
ಬಿಗ್ಬ್ಯಾಷ್ ಲೀಗ್ನಿಂದ ಮೊಹಮ್ಮದ್ ರಿಝ್ವಾನ್ ಹೊರಬರಬೇಕು. -
ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ಬ್ಯಾಷ್ (Bigbash League) ಟೂರ್ನಿಯನ್ನು ತೊರೆದು ತವರಿಗೆ ಮರಳುವಂತೆ ಮೊಹಮ್ಮದ್ ರಿಝ್ವಾನ್ಗೆ (Mohammad Rizwan) ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕಮ್ರಾಲ್ ಅಕ್ಮಲ್ (Kamran AkmaL) ಆಗ್ರಹಿಸಿದ್ದಾರೆ. ರಿಝ್ವಾನ್ ಪ್ರಸ್ತುತ ಈ ಟೂರ್ನಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಮೊಹಮ್ಮದ್ ರಿಝ್ವಾನ್ ಅವರು ಬಿಗ್ಬ್ಯಾಷ್ ಲೀಗ್ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಿಂದ 20.87ರ ಸರಾಸರಿ ಹಾಗೂ 101.82ರ ಸ್ಟ್ರೈಕ್ ರೇಟ್ನಲ್ಲಿ 167 ರನ್ಗಳನ್ನು ಕಲೆ ಹಾಕಿದ್ದರು. ಅಲ್ಲದೆ ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ 23 ಎಸೆತಗಳಲ್ಲಿ 26 ರನ್ ಗಳಿಸಿ ಆಡುತ್ತಿದ್ದ ಮೊಹಮ್ಮದ್ ರಿಝ್ವಾನ್ ಅವರನ್ನು ರಿಟೈರ್ ಔಟ್ ಆಗುವಂತೆ ಸೂಚಿಸಲಾಗಿತ್ತು. ಮೆಲ್ಬೋರ್ನ್ ರೆನೆಗೃಡ್ಸ್ ತಂಡದ ಟೀಮ್ ಮ್ಯಾನೇಜ್ಮೆಂಟ್ ಅವರನ್ನು ರಿಟೈರ್ ಔಟ್ ಆಗುವಂತೆ ಸೂಚನೆ ನೀಡಿದ ಬಳಿಕ ರಿಝ್ವಾನ್ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಕಮ್ರಾನ್ ಅಕ್ಮಲ್ ಅವರು ಇದನ್ನು ಅವಮಾನಕರ ಎಂದು ದೂರಿದ್ದಾರೆ.
ರಶೀದ್, ಅಹ್ಮದ್ಗೆ ಸಿಗದ ವೀಸಾ; ಇಂಗ್ಲೆಂಡ್ ಟಿ20 ವಿಶ್ವಕಪ್ ಸಿದ್ಧತೆ ಅಸ್ತವ್ಯಸ್ತ
2008ರ ಉದ್ಘಾಟನಾ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಮಾಜಿ ನಾಯಕ ಯೂನಿಸ್ ಖಾನ್ಗೆ ಆದ ರೀತಿ ಇದೀಗ ಬಿಗ್ಬ್ಯಾಷ್ ಲೀಗ್ ಟೂರ್ನಿಯಲ್ಲಿ ಮೊಹಮ್ಮದ್ ರಿಝ್ವಾನ್ಗೆ ಆಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಬಾಬರ್ ಆಝಮ್ ಮತ್ತು ಮೊಹಮ್ಮದ್ ರಿಝ್ವಾನ್ ತಮ್ಮ ಸ್ಟ್ರೈಕ್ ರೇಟ್ಗಳನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದರ ಕುರಿತು ನಾವು ವಿವಿಧ ಕಾರ್ಯಕ್ರಮಗಳಲ್ಲಿ ಮತ್ತು ಯೂಟ್ಯೂಬ್ನಲ್ಲಿ ದೀರ್ಘವಾಗಿ ಮಾತನಾಡಿದ್ದೇವೆ. ರಿಝ್ವಾನ್ಗೆ ಏನಾಯಿತು ಎಂಬುದು ಪ್ರಪಂಚದಾದ್ಯಂತ ಅಪಹಾಸ್ಯಕ್ಕೆ ಕಾರಣವಾಯಿತು ಮಾತ್ರವಲ್ಲದೆ ಅವಮಾನದ ಭಾವನೆಯನ್ನೂ ಸೃಷ್ಟಿಸಿದೆ. ರಿಝ್ವಾನ್ ಲೀಗ್ ತೊರೆದು ಮನೆಗೆ ಮರಳಬೇಕು ಎಂದು ಕೆಲವರು ಹೇಳುತ್ತಿದ್ದಾರೆ,"ಎಂದು ಜಿ ಟಿವಿ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.
Mohammad Rizwan became the first overseas player in the BBL to be retired out 😳pic.twitter.com/aCfES61BmW
— Cricbuzz (@cricbuzz) January 12, 2026
"ಐಪಿಎಲ್ ಟೂರ್ನಿಯ ಮೊದಲ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ನಿಮ್ಮೊಂದಿಗೆ ಆಡುವಾಗ ಯೂನಿಸ್ ಖಾನ್ ಅವರನ್ನು ಬೆಂಚ್ನಲ್ಲಿ ಇರಿಸಲಾಗಿತ್ತು. ಆಗ ಅವರು ‘ನಾನು ಪಾಕಿಸ್ತಾನದ ನಾಯಕ; ನಾನು ಬೆಂಚ್ನಲ್ಲಿ ಕುಳಿತುಕೊಳ್ಳುವುದಿಲ್ಲ. ನೀವು ನನ್ನನ್ನು ಗೌರವದಿಂದ ವಾಪಸ್ ಕಳುಹಿಸಬೇಕು,ʼ ಎಂದು ಹೇಳಿದ್ದರು. ಆಟಗಾರರು ಹಾಗೆ ತಮ್ಮ ಪರವಾಗಿ ನಿಲ್ಲುವುದನ್ನು ನಾವು ನೋಡಿದ್ದೇವೆ, "ಎಂದಯ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
ರಿಝ್ವಾನ್ ಆಧುಕಿನ ಕ್ರಿಕೆಟ್ಗೆ ಬದಲಾಗಬೇಕು
"ನಿಸ್ಸಂಶಯವಾಗಿ, ಈ ರೀತಿಯ ಘಟನೆ ನಡೆಯಬಾರದಿತ್ತು; ಅವರು ನಮ್ಮ ಆಟಗಾರ ಹಾಗೂ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಟಗಾರ. ಈ ಲೀಗ್ಗಳು ಎಷ್ಟು ವೇಗವನ್ನು ಪಡೆಯುತ್ತಿವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಂದು ದೇಶವೂ ಈಗ ಕ್ರಿಕೆಟ್ಗೆ ಆಧುನಿಕ ವಿಧಾನವನ್ನು ಅನುಸರಿಸುತ್ತಿದೆ, ಆದ್ದರಿಂದ ಆಟಗಾರರು ಅದಕ್ಕೆ ತಕ್ಕಂತೆ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವುದು ಅತ್ಯಗತ್ಯ. ರಿಝ್ವಾನ್ ತನ್ನ ಟಿ20 ವೃತ್ತಿಜೀವನದ ಆರಂಭದಿಂದಲೂ ಅದೇ ಮನಸ್ಥಿತಿಯೊಂದಿಗೆ ಆಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಆಟವನ್ನು ನಿರ್ದಿಷ್ಟ ಯುದ್ಧತಂತ್ರದ ಲೆನ್ಸ್ ಮೂಲಕ ನೋಡಲಾಗುತ್ತದೆ. ಐಎಲ್ಟಿ20 ಮತ್ತು ಐಪಿಎಲ್ನಂತಹ ಲೀಗ್ಗಳಲ್ಲಿ ಇದೇ ರೀತಿಯ ನಡೆಗಳನ್ನು ಮಾಡುವುದನ್ನು ನಾವು ನೋಡಿದ್ದೇವೆ," ಎಂದಿದ್ದಾರೆ.