ಆಫ್ಘಾನ್ ದ್ವಿತೀಯ ಪಂದ್ಯಕ್ಕೆ ರೋಹಿತ್ ಅನುಮಾನ; ಜೈಸ್ವಾಲ್‌ಗೆ ಸ್ಥಾನ?
IND vs AFG 2nd ODI: ಭಾರತ ಪರ ಪದಾರ್ಪಣ ಪಂದ್ಯವನ್ನಾಡಲು ಕಾಯುತ್ತಿರುವ ವೇಗಿ ಫ್ರಿನ್ಸ್ ಯಾದವ್ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಉಳಿದಂತೆ ಯಾವುದೇ ಬದಲಾವಣೆ ಕಷ್ಟ ಸಾಧ್ಯ
Jaiswal and Rohit Sharma -
ಲಖನೌ, ಜೂ.16: ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸುವಾಗ ಮಣಿಕಟ್ಟಿಗೆ ಗಾಯ ಮಾಡಿಕೊಂಡಿದ್ದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಬುಧವಾರ ನಡೆಯುವ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಅವರ ಬದಲು ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಡುವ ಸಾಧ್ಯತೆ ಕಂಡುಬಂದಿದೆ.
39 ವರ್ಷದ ರೋಹಿತ್ ಬ್ಯಾಟಿಂಗ್ ನಡೆಸುವಾಗ ಸ್ವಲ್ಪ ಅಸ್ವಸ್ಥತೆಯಲ್ಲಿದ್ದಂತೆ ಕಂಡುಬಂದಿದ್ದರು. ಫಿಸಿಯೋ ಕೂಡ ಮೈದಾನಕ್ಕೆ ಬಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ನೋವಿನ ಮಧ್ಯೆಯೂ ರೋಹಿತ್ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೆ ಲಕ್ನೋ ಏಕದಿನ ಪಂದ್ಯಕ್ಕೆ ಅವರ ಲಭ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಚೇತರಿಕೆಯ ನಿಟ್ಟಿನಲ್ಲಿ ತಂಡದ ಆಡಳಿತ ಮಂಡಳಿಯು ರೋಹಿತ್ ಶರ್ಮಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಿದರೆ ಆಗ ಯಶಸ್ವಿ ಜೈಸ್ವಾಲ್ ಆಡುವ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ. ಜೈಸ್ವಾಲ್ ಅವರನ್ನು ಕೊಹ್ಲಿಯ ಬದಲಿಗೆ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
ಫ್ರಿನ್ಸ್ ಯಾದವ್‌ಗೆ ಅವಕಾಶ?
ಭಾರತ ಪರ ಪದಾರ್ಪಣ ಪಂದ್ಯವನ್ನಾಡಲು ಕಾಯುತ್ತಿರುವ ವೇಗಿ ಫ್ರಿನ್ಸ್ ಯಾದವ್ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಉಳಿದಂತೆ ಯಾವುದೇ ಬದಲಾವಣೆ ಕಷ್ಟ ಸಾಧ್ಯ. ಹರ್ಷ್ ದುಬೆ ಉತ್ತಮ ಪ್ರದರ್ಶನ ತೋರಿರುವ ಕಾರಣ ಹಿರಿಯ ಸ್ಪಿನ್ನರ್ ಕುಲ್‌ದೀಪ್ ಯಾದವ್ ಇನ್ನೂ ಕಾಯಬೇಕಿದೆ.
ಲಖನೌದಲ್ಲೇ ಭಾರತಕ್ಕೆ ಸರಣಿ ಗೆಲ್ಲುವ ತವಕ; ನಾಳೆ ದ್ವಿತೀಯ ಏಕದಿನ
ಸರಣಿ ಜೀವಂತವಿರಿಸಲು ಅಫ್ಘಾನಿಸ್ತಾನ ತಂಡಕ್ಕೆ, ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡವಿದೆ. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಆರಂಭಿಕ ಆಟಗಾರ ರಹ್ಮಾನುಲ್ಲಾ ಗುರ್ಬಾಜ್ ಮೇಲೆ ತಂಡ ಭಾರೀ ನಿರೀಕ್ಷೆಯಿಟ್ಟಿದೆ. ಬೌಲಿಂಗ್‌ನಲ್ಲಿ, ರಶೀದ್ ಖಾನ್ ಮತ್ತು ಎಎಂ ಗಜನ್‌ಫರ್ ಅವರ ಉತ್ತಮ ಗುಣಮಟ್ಟದ ಸ್ಪಿನ್ ದಾಳಿಯನ್ನು ನಂಬಿಕೊಂಡಿದೆ.
2ನೇ ಪಂದ್ಯಕ್ಕೆ ಭಾರತ ಸಂಭಾವ್ಯ ಆಡುವ ಬಳಗ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ/ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿ.ಕೀ.), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಗುರ್ನೂರ್ ಬ್ರಾರ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ/ಪ್ರಿನ್ಸ್ ಯಾದವ್.
ಅಫ್ಘಾನಿಸ್ತಾನ ಸಂಭಾವ್ಯ ತಂಡ
ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಇಬ್ರಾಹಿಂ ಜದ್ರಾನ್, ಸೇದಿಕ್ ಅಟಲ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತ್ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಎಎಮ್ ಗಜನ್ಫರ್, ಜಿಯಾವುರ್ ರೆಹಮಾನ್, ಮೊಹಮ್ಮದ್ ಸಲೀಮ್.