58 ರೂಪಾಯಿ ಬದಲಿಗೆ 4,000 ಪಾವತಿ: ಒಟಿಪಿಯನ್ನೇ ಹಣವನ್ನಾಗಿ ಕಳುಹಿಸಿ ಎಡವಟ್ಟು ಮಾಡಿಕೊಂಡ ಪ್ರಯಾಣಿಕ!
Viral News: ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪು ಎಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಬಹುದು ಎಂಬುದಕ್ಕೆ ತಾಜಾ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ರಾಪಿಡೋ ರೈಡ್ ಬುಕ್ ಮಾಡಿದ್ದು 58 ರೂಪಾಯಿ ಬಾಡಿಗೆ ನೀಡುವ ಬದಲು ಆಕಸ್ಮಿಕವಾಗಿ ಬರೋಬ್ಬರಿ 4,000 ರೂಪಾಯಿ ಪಾವತಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಸದ್ಯ ಈ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇಂಟರ್ ನೆಟ್ ಚಿತ್ರ -
ಬೆಂಗಳೂರು,ಅ.13: ಇಂದಿನ ಆಧುನಿಕ ಜಗತ್ತಿನಲ್ಲಿ ಏನೇ ವಸ್ತು ಖರೀದಿಗೂ ನಾವು ಆನ್ ಲೈನ್ ಪಾವತಿಯೇ ಮಾಡುತ್ತೇವೆ. ಆದರೆ ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪು ಎಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಬಹುದು ಎಂಬುದಕ್ಕೆ ತಾಜಾ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ರಾಪಿಡೋ ರೈಡ್ ಬುಕ್ ಮಾಡಿದ್ದು 58 ರೂಪಾಯಿ ಬಾಡಿಗೆ ನೀಡುವ ಬದಲು ಆಕಸ್ಮಿಕವಾಗಿ ಬರೋಬ್ಬರಿ 4,000 ರೂಪಾಯಿ ಪಾವತಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಸದ್ಯ ಈ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.
ರಾಪಿಡೋ ಸವಾರಿಯಲ್ಲಿ ಪ್ರಯಾಣಿಕರೊಬ್ಬರು 58 ರೂಪಾಯಿ ಪಾವತಿಮಾಡುವ ಬದಲಿಗೆ ಆಕಸ್ಮಿಕವಾಗಿ ಸುಮಾರು 4,000 ಪಾವತಿ ಮಾಡಿದ್ದಾರೆ. ಆದರೆ ಚಾಲಕ ಮಾತ್ರ ತಕ್ಷಣವೇ ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದು ಪ್ರಯಾಣಿಕ ಈ ಬಗ್ಗೆ ಆನ್‌ಲೈನ್‌ನಲ್ಲಿ ಸಹಾಯ ಕೋರಿದ್ದಾರೆ.
ಪ್ರಯಾಣಿಕರೊಬ್ಬರು ಚಾಲಕನಿಗೆ ಆಕಸ್ಮಿಕವಾಗಿ ಹಣ ಪಾವತಿಸಿದ್ದು 58 ರೂಪಾಯಿ ಬದಲಿಗೆ ಸುಮಾರು 4,000 ವೆಚ್ಚವಾಗುವಂತೆ ಮಾಡಿತು. ಆದಾಗ್ಯೂ, ಹಣವನ್ನು ಮರಳಿ ಪಡೆಯುವುದು ಮತ್ತೊಂದು ಸವಾಲಾಗಿ ಪರಿಣಮಿಸಿತು. ಚಾಲಕನುಹಣವನ್ನು ಹಿಂತಿರುಗಿಸುವ ಮೊದಲು ತೆರಿಗೆಯನ್ನು ಕಡಿತಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.
ವ್ಯಕ್ತಿಯೊಬ್ಬರು ರಾಪಿಡೋ ರೈಡ್ ಮುಗಿದ ನಂತರ ಬಾಡಿಗೆ ಮೊತ್ತವನ್ನು ಯುಪಿಐ ಮೂಲಕ ಪಾವತಿಸಲು ಮುಂದಾಗಿದ್ದಾರೆ. ಆದರೆ ಗೊಂದಲದಲ್ಲಿ ಒಟಿಪಿ ಸಂಖ್ಯೆಯನ್ನೇ ಹಾಕಿ 4,000 ಮೊತ್ತವನ್ನು ಚಾಲಕನಿಗೆ ವರ್ಗಾವಣೆ ಮಾಡಿದ್ದಾರೆ. ತಕ್ಷಣ ಪ್ರಯಾಣಿಕರ ಹಣ ವಾಪಸ್ ಕೇಳಿದಾಗ, ಚಾಲಕ ಅಷ್ಟು ಹಣ ಕೊಡಲು ಒಪ್ಪಿಲ್ಲ. ಹಣವು ನಾಳೆ ನನ್ನ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ತೆರಿಗೆ ಕಡಿತಗೊಳಿಸಿ ಉಳಿದ ಹಣವನ್ನು ವಾಪಸ್ ನೀಡುತ್ತೇನೆ ಎಂದು ವಿಚಿತ್ರವಾಗಿ ಮಾತನಾಡಿದ್ದಾನೆ.
ಸಹಾಯಕ್ಕಾಗಿ ರಾಪಿಡೋದ ಗ್ರಾಹಕ ಸೇವಾ ತಂಡವನ್ನು ಸಂಪರ್ಕಿಸಿದ್ದಾಗಿಯೂ ಆ ವ್ಯಕ್ತಿ ತಿಳಿಸಿದರು. ಆದರೆ, ಅವರ ಪರಿಹಾರ ಸಿಗಲಿಲ್ಲ ಏಕೆಂದರೆ ಪಾವತಿಯು ಈಗಾಗಲೇ ಚಾಲಕನಿಗೆ ವರ್ಗಾವಣೆಯಾಗಿದೆ ಮತ್ತು ಆ ವಿಷಯವು ಇಬ್ಬರ ನಡುವಿನ ವ್ಯವಹಾರವಾಗಿದೆ ಎಂದು ಅವರಿಗೆ ತಿಳಿಸಲಾಯಿತು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯ ಸಲಹೆಗಳನ್ನು ನೀಡಿದ್ದಾರೆ.. ಬಳಕೆದಾರೊಬ್ಬರು ಇಂತಹ ಚಾಲಕರಿಗೆ ಸರಿಯಾದ ಪಾಠ ಕಲಿಸಬೇಕೆಂದು ಬರೆದರೆ ಮತ್ತೊಬ್ಬರು ಬ್ಯಾಂಕ್ ಅಥವಾ ಸೈಬರ್ ಕ್ರೈಮ್ ಮೊರೆ ಹೋಗಲು ಸಲಹೆ ನೀಡಿದ್ದಾರೆ