ರಸ್ತೆ ಮಧ್ಯೆಯೇ ಅಡುಗೆ ಮಾಡಿದ ದಂಪತಿ; ಪ್ರಶ್ನಿಸಿದ ವ್ಯಕ್ತಿಯನ್ನೇ ತರಾಟೆಗೆ ತೆಗೆದುಕೊಂಡ ಮಹಿಳೆ
Viral Video: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಮಹಿಳೆ ಮತ್ತು ಆಕೆಯ ಪತಿ ಮಾರ್ಗ ಮಧ್ಯೆಯೇ ಕಾರನ್ನು ನಿಲ್ಲಿಸಿ ರಸ್ತೆ ಮೇಲೆ ದಿನಸಿ ಸಾಮಗ್ರಿ ಎಲ್ಲ ಹರಡಿ ಅಡುಗೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಜನನಿಬಿಡ ಪ್ರದೇಶದಲ್ಲಿ ದಂಪತಿ ಯಾವುದೇ ಭಯ, ಅಂಜಿಕೆ ಇಲ್ಲದೆ ಮುಕ್ತವಾಗಿ ಅಡುಗೆ ಮಾಡುತ್ತಿದ್ದ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದೆ.
ರಸ್ತೆ ಮಧ್ಯೆಯೇ ರೊಟ್ಟಿ ಬೇಯಿಸಿದ ದಂಪತಿ -
ನವದೆಹಲಿ, ಡಿ. 13: ಟ್ರಕ್ಕಿಂಗ್ ಅಥವಾ ಇನ್ನಿತರ ದೂರದ ಪ್ರಯಾಣದ ಸಂದರ್ಭದಲ್ಲಿ ಊಟ ತಿಂಡಿಯ ಸೌಕರ್ಯ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಕೆಲವರು ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಾರೆ. ಕೆಲವರು ಹಣ್ಣು, ತಿಂಡಿ ಅಂತ ಕೊಂಡೊಯ್ದರೆ ಇನ್ನು ಕೆಲವರು ಅಡುಗೆ ಸಾಮಾಗ್ರಿಗಳನ್ನೇ ಹೊತ್ತೊಯ್ಯುತ್ತಾರೆ. ಅಡುಗೆ ಸಾಮಾಗ್ರಿ ಮತ್ತು ಪರಿಕರ ಬಳಸಿಕೊಂಡು ರಸ್ತೆ ಬದಿಯಲ್ಲಿ ಆಹಾರ ಮಾಡಿಕೊಂಡು ತಿನ್ನುವುದೂ ಇದೆ. ಇದೀಗ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ವಿಡಿಯೊ ವೈರಲ್ (Viral video) ಆಗಿದೆ. ಮಹಿಳೆ ಮತ್ತು ಆಕೆಯ ಪತಿ ಮಾರ್ಗ ಮಧ್ಯೆಯೇ ಕಾರನ್ನು ನಿಲ್ಲಿಸಿಕೊಂಡಿದ್ದು ರಸ್ತೆ ಮೇಲೆ ದಿನಸಿ ಸಾಮಗ್ರಿ ಎಲ್ಲ ಹರಡಿ ಅಡುಗೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಜನನಿಬಿಡ ಪ್ರದೇಶದಲ್ಲಿ ದಂಪತಿ ಯಾವುದೇ ಭಯ, ಅಂಜಿಕೆ ಇಲ್ಲದೆ ಮುಕ್ತವಾಗಿ ಅಡುಗೆ ಮಾಡುತ್ತಿರುವ ಈ ವಿಡಿಯೊ ದೇಶದಲ್ಲಿ ನಾಗರಿಕ ಪ್ರಜ್ಞೆ ಮತ್ತು ರಸ್ತೆ ಸುರಕ್ಷತೆಯ ಕುರಿತು ಹೊಸ ಚರ್ಚೆ ಹುಟ್ಟು ಹಾಕಿದೆ.
ವೈರಲ್ ಆದ ವಿಡಿಯೊದಲ್ಲಿ ಮಹಿಳೆಯೊಬ್ಬಳು ರಸ್ತೆ ಮಧ್ಯೆ ತರಕಾರಿಗಳನ್ನು ಹರಡಿಕೊಂಡು ರೊಟ್ಟಿ ತಟ್ಟುತ್ತಿರುವ ದೃಶ್ಯವನ್ನು ಕಾಣಬಹುದು. ಆ ಮಹಿಳೆಯು ಪೋರ್ಟಬಲ್ ಗ್ಯಾಸ್ ಸ್ಟೌ ಮೇಲೆ ರೊಟ್ಟಿ ಕಾಯಿಸಿದ್ದಾಳೆ. ಈ ದಂಪತಿ ಜತೆಗೆ ಪುಟ್ಟ ಮಗು ಕೂಡ ಇದೆ. ಇವರು ಅಡುಗೆ ಮಾಡುವ ದೃಶ್ಯವನ್ನು ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ವಿಡಿಯೊ ನೋಡಿ:
A couple cooks a full meal beside their parked car on a national highway, turning the area messy with utensils, vegetables and groceries spread across the road.
— Lakshay Mehta (@lakshaymehta08) December 10, 2025
When questioned, they reply that it’s a rest-area road and justify the cooking.
Civic sense??? pic.twitter.com/kyMR1Tafcs
ದಂಪತಿ ಅಡುಗೆ ಸೆಟಪ್ ಬಗ್ಗೆ ಆ ವ್ಯಕ್ತಿಯು ಪ್ರಶ್ನಿಸಿದ್ದಾನೆ. ಈ ರೀತಿ ಮಾರ್ಗ ಮಧ್ಯೆ ಅಡುಗೆ ಮಾಡುವುದು ಕಾನೂನು ಬದ್ಧ ನಿಯಮಗಳನ್ನು ಉಲ್ಲಂಘಿಸಿದಂತೆ. ಈ ಬಗ್ಗೆ ನಿಮಗೆ ಅರಿವಿಲ್ಲವೆ ಎಂದು ಕೇಳಿದ್ದಾನೆ. ಅದಕ್ಕೆ ಆ ದಂಪತಿ ಪ್ರತಿಕ್ರಿಯೆ ನೀಡಿ ಅದನ್ನು ತಪ್ಪಲ್ಲ ಎಂಬ ರೀತಿಯಲ್ಲಿಯೇ ಆ ವ್ಯಕ್ತಿಯ ಜತೆಗೆ ವಾದಿಸಿದ್ದನ್ನು ಕಾಣಬಹುದು.
ಪಾಕ್ ಪ್ರಧಾನಿಯನ್ನು ಕಾಯಿಸಿದ ಪುಟಿನ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೆಹಬಾಜ್ ಷರೀಫ್‌ಗೆ ಮುಖಭಂಗ
ರಸ್ತೆಯಲ್ಲಿ ಈ ತರ ಆಹಾರ ಖಾದ್ಯ ತಯಾರಿಸುವ ಹಾಗಿಲ್ಲ. ಅದು ಕಾನೂನು ಬಾಹಿರ ಎಂಬ ವಿಚಾರ ನಮಗೂ ಗೊತ್ತು. ಆದರೆ ನಾವು ಈಗ ಇರುವುದು ರೆಸ್ಟ್ ಏರಿಯಾದಲ್ಲಿ... ಇಲ್ಲಿ ವಾಹನ ಸಂಚಾರ ಅಷ್ಟಾಗಿ ಇಲ್ಲ. ಈ ರಸ್ತೆ ನಮಗೆ ವಿಶ್ರಾಂತಿ ಪಡೆಯಲು ಮತ್ತು ಆಹಾರ ತಯಾರಿಸಲೆಂದೇ ಇದೆ ಎಂದು ದೌಲತ್ತಿನಿಂದ ಹೇಳುವ ದೃಶ್ಯವನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು. ಈ ಘಟನೆ ಎಲ್ಲಿ ನಡೆದದ್ದು? ಆ ದಂಪತಿ ಯಾರು ಎಂಬ ಬಗ್ಗೆ ಮಾಹಿತಿ ಇನ್ನು ಕೂಡ ತಿಳಿದು ಬಂದಿಲ್ಲ. ದಂಪತಿಯ ಅಸಡ್ಡೆ ವರ್ತನೆ ಬಗ್ಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.
ಯಾವುದೇ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಪ್ರಯಾಣಿಕರ ವಿಶ್ರಾಂತಿಗಾಗಿ ಖಾಲಿ ಬಿಡುವುದಿಲ್ಲ. ರಸ್ತೆಯಲ್ಲಿ ಕಡಿಮೆ ವಾಹನ ಸಂಚಾರ ಇದೆ ಎಂಬ ಕಾರಣಕ್ಕೆ ಈ ರೀತಿ ಅಡುಗೆ ಮಾಡಿ ತಮ್ಮ ವೈಯಕ್ತಿಕ ಉದ್ದೇಶಕ್ಕೆ ಸಾರ್ವಜನಿಕ ರಸ್ತೆಯನ್ನು ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ ಎಂದು ಒಬ್ಬರು ತಿಳಿಸಿದ್ದಾರೆ. ದಂಪತಿ ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿರದೆ ಇರಬಹುದು. ಆದರೆ ಈ ರೀತಿ ಮಾರ್ಗ ಮಧ್ಯೆ ಅಡುಗೆ ಮಾಡುವುದರಿಂದ ಅಪಾಯ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.