ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Gururaj Arakeri Column: ಕ್ಯಾನ್ಸರ್‌ʼನಿಂದ ಸೌಂದರ್ಯದವರೆಗೆ: ಶಸ್ತ್ರಚಿಕಿತ್ಸಾ ತಜ್ಞರ ಅದ್ಭುತ ಲೋಕ

ಮೂರು ತಿಂಗಳ ನಂತರ ಒಮ್ಮೆ ಅದೇ ಶಿಕ್ಷಕರು ನನ್ನ ಚಿಕಿತ್ಸಾಲಯಕ್ಕೆ ಬಂದಾಗ ಅವರ ರೂಪವೇ ಬದಲಾಗಿತ್ತು. ಮುಖ ಊದಿಕೊಂಡಿತ್ತು, ಕೆನ್ನೆಯಲ್ಲಿ ದೊಡ್ಡ ಗಾಯ. ಕ್ಯಾನ್ಸರ್ ಎಂಬುದು ಬಾಯಿ ಯಿಂದ ಕೆನ್ನೆಯ ಚರ್ಮವನ್ನು ಭೇದಿಸಿ ಹೊರಬಂದಿತ್ತು. ಕುತ್ತಿಗೆಯಲ್ಲಿ ದೊಡ್ಡ ದೊಡ್ಡ ಗಡ್ಡೆಗಳು, ದುಗ್ಧರಸ ಗ್ರಂಥಿಗಳಿಗೂ ಕ್ಯಾನ್ಸರ್ ಹರಡಿತ್ತು.

ಕ್ಯಾನ್ಸರ್‌ʼನಿಂದ ಸೌಂದರ್ಯದವರೆಗೆ: ಶಸ್ತ್ರಚಿಕಿತ್ಸಾ ತಜ್ಞರ ಅದ್ಭುತ ಲೋಕ

-

Ashok Nayak
Ashok Nayak Feb 13, 2026 10:27 AM

ತನ್ನಿಮಿತ್ತ

ಡಾ.ಗುರುರಾಜ ಅರಕೇರಿ

(ಇಂದು ವಿಶ್ವ ಮತ್ತು ದವಡೆ ಶಸ್ತ್ರಚಿಕಿತ್ಸಾ ದಿನ)

ಕೆಲವು ತಿಂಗಳುಗಳ ಹಿಂದಿನ ಮಾತು. ಒಂದು ಮಧ್ಯಾಹ್ನ ನನ್ನ ಚಿಕಿತ್ಸಾಲಯಕ್ಕೆ ಮಧ್ಯವಯಸ್ಕ ಶಾಲಾ ಶಿಕ್ಷಕರೊಬ್ಬರು ಬಂದಿದ್ದರು. ಅವರ ಬಾಯಲ್ಲಿ ಒಂದು ರುಪಾಯಿ ಗಾತ್ರದ ಬಿಳಿ ಹುಣ್ಣು ಆಗಿತ್ತು. “ಡಾಕ್ಟ್ರೇ, ಇದು 2 ತಿಂಗಳಿಂದ ಹೀಗೇ ಇದೆ, ನೋವೇನೂ ಇಲ್ಲ, ಆದರೆ ವಾಸಿಯಾಗುತ್ತಿಲ್ಲ" ಎಂದರು. ಅವರು ಮೊದಲು ತಮ್ಮೂರಿನ ಆರೋಗ್ಯ ಕೇಂದ್ರಕ್ಕೆ ಹೋಗಿ ತೋರಿಸಿದಾಗ ಅಲ್ಲಿನ ವೈದ್ಯರು, “ಹಲ್ಲಿನ ತೊಂದರೆ ಇರಬೇಕು. ಚೂಪಾಗಿರುವ ಹಲ್ಲು ಕಚ್ಚಿ ಹುಣ್ಣಾಗಿರಬೇಕು. ಹಲ್ಲು ತೆಗೆಸಿದರೆ ಸರಿಹೋಗುತ್ತೆ" ಎಂದು ಹೇಳಿ ಕಳಿಸಿದ್ದರಂತೆ.

ಶಿಕ್ಷಕರು ಅಂತೆಯೇ ಮಾಡಿದರೂ ಹುಣ್ಣು ಮಾತ್ರ ಮಾಯವಾಗಲಿಲ್ಲ, ಬದಲಿಗೆ ಇನ್ನೂ ಸ್ವಲ್ಪ ಹೆಚ್ಚಾಯಿತು. ನಾನದನ್ನು ಎಚ್ಚರಿಕೆಯಿಂದ ಪರೀಕ್ಷಿಸಿದೆ. ಆ ಹುಣ್ಣಿನ ಅಂಚುಗಳು ಮೇಲೆದ್ದಿದ್ದವು, ನಡುಭಾಗ ಕುಳಿಯಾಗಿತ್ತು. ಮುಟ್ಟಿದರೆ ಕಲ್ಲಿನಂತೆ ಗಟ್ಟಿ. ಸುತ್ತಲಿನ ಅಂಗಾಂಶ ಬಿಳುಚಿಕೊಂಡಿತ್ತು.

ನನಗೆ ಅದು ಕ್ಯಾನ್ಸರ್‌ನ ಎಚ್ಚರಿಕೆಯ ಗಂಟೆಯಂತೆ ಕಂಡು, ತಕ್ಷಣವೇ ಬಯಾಪ್ಸಿ ಮತ್ತು ಸಿ.ಟಿ. ಸ್ಕ್ಯಾನ್ ಮಾಡಿಸುವಂತೆ ಆಗ್ರಹಿಸಿದೆ. ನನ್ನನ್ನು ಅನುಮಾನದಿಂದ ನೋಡಿದ ಶಿಕ್ಷಕರು, “ನೀವೇನು ಕ್ಯಾನ್ಸರ್ ಡಾಕ್ಟರಾ? ನೀವು ಹಲ್ಲಿನ ಡಾಕ್ಟರು ತಾನೇ?" ಎಂದಾಗ, ದಂತವೈದ್ಯದ ಜತೆಗೆ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯಲ್ಲೂ ನನಗೆ ಪರಿಣತಿ ಇರುವುದರ ಕುರಿತು ಹೇಳಿ, ಬಾಯಿಯ ಕ್ಯಾನ್ಸರ್ ನಮ್ಮ ವಿಶೇಷತೆಯ ಪ್ರಮುಖ ಭಾಗ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಆ ಶಿಕ್ಷಕರು ಅದಕ್ಕೆ ಕಿವಿಗೊಡಲಿಲ್ಲ. “ಬೇಡ ಡಾಕ್ಡರೇ, ಸುಮ್ಮನೇ ದುಡ್ಡು ಖರ್ಚು. ಒಂದಿಷ್ಟು ಗುಳಿಗೆ ಕೊಡಿ" ಎಂದು ಹೇಳಿ ಹೊರಟೇ ಬಿಟ್ಟರು!

ಇದನ್ನೂ ಓದಿ: Dr Gururaj Arakeri Column: ಬೀದಿಯಲ್ಲಿ ಹೋಗೋ ಮಾರಿಯನ್ನು ಮನೆಯೊಳಗೆ ಕರೆತರೋದ್ಯಾಕೆ..?!

ಮೂರು ತಿಂಗಳ ನಂತರ ಒಮ್ಮೆ ಅದೇ ಶಿಕ್ಷಕರು ನನ್ನ ಚಿಕಿತ್ಸಾಲಯಕ್ಕೆ ಬಂದಾಗ ಅವರ ರೂಪವೇ ಬದಲಾಗಿತ್ತು. ಮುಖ ಊದಿಕೊಂಡಿತ್ತು, ಕೆನ್ನೆಯಲ್ಲಿ ದೊಡ್ಡ ಗಾಯ. ಕ್ಯಾನ್ಸರ್ ಎಂಬುದು ಬಾಯಿ ಯಿಂದ ಕೆನ್ನೆಯ ಚರ್ಮವನ್ನು ಭೇದಿಸಿ ಹೊರಬಂದಿತ್ತು. ಕುತ್ತಿಗೆಯಲ್ಲಿ ದೊಡ್ಡ ದೊಡ್ಡ ಗಡ್ಡೆಗಳು, ದುಗ್ಧರಸ ಗ್ರಂಥಿಗಳಿಗೂ ಕ್ಯಾನ್ಸರ್ ಹರಡಿತ್ತು. ಕುತ್ತಿಗೆಯಲ್ಲಿ ರಂಧ್ರ ಬಿದ್ದು, ಬಾಯಿಂದ ಆಹಾರ ಅಲ್ಲಿಗೆ ಸೋರುತ್ತಿತ್ತು. ಪರೀಕ್ಷೆ ಮಾಡಿಸಿದಾಗ ಕ್ಯಾನ್ಸರ್ ಶ್ವಾಸಕೋಶಕ್ಕೂ ಹರಡಿ ಬಿಟ್ಟಿರು ವುದು ಗೊತ್ತಾಯಿತು. ಮುಂದಿನ ಮೂರೇ ತಿಂಗಳಲ್ಲಿ ಅವರು ಇಲ್ಲವಾದರು.

ವೈದ್ಯಕೀಯ ವಿಶೇಷತೆಗಳ ಬಗ್ಗೆ ವಿದ್ಯಾವಂತರಲ್ಲೂ ಎಷ್ಟೊಂದು ಅರಿವಿನ ಕೊರತೆಯಿದೆ ಎಂಬು ದನ್ನು ಈ ಘಟನೆ ತೋರಿಸುತ್ತದೆ. ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಾ ತಜ್ಞರನ್ನು ಇಂದಿಗೂ ಕೇವಲ ‘ಹಲ್ಲಿನ ಡಾಕ್ಟರ್’ ಎಂದು ನೋಡಲಾಗುತ್ತದೆ ಎಂಬುದು ದುರದೃಷ್ಟಕರ.

ಮುಖ ಮತ್ತು ದವಡೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಜನರು, ಈ ವಿಷಯದಲ್ಲಿ ತಜ್ಞರಲ್ಲದವರ ಬಳಿಗೆ ಹೋದರೆ ರೋಗನಿರ್ಣಯದಲ್ಲಿ ವಿಳಂಬ, ತಪ್ಪು ಚಿಕಿತ್ಸೆ, ತೊಡಕುಗಳು ಉಂಟಾಗಿ ಕೊನೆಗೆ ಜೀವಕ್ಕೇ ಸಂಚಕಾರ ತಂದುಕೊಳ್ಳಬೇಕಾಗುತ್ತದೆ. ಆದ್ದರಿಂದ, ‘ವಿಶ್ವ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಾ ದಿನ’ವಾದ ಇಂದು (ಫೆ.13) ಒಂದು ಸತ್ಯವನ್ನು ಮನಗಾಣೋಣ.

‘ಒಎಂಎಫ್ಎಸ್’ ಎಂಬುದು ಕೇವಲ ಹಲ್ಲಿನ ಚಿಕಿತ್ಸೆಯಲ್ಲ, ಇದು ಜೀವ ಉಳಿಸಬಲ್ಲ ವೈದ್ಯಕೀಯ ವಿಶೇಷತೆ. ‘ಒಎಂಎಫ್ಎಸ್’ ಎಂದತೆ ‘ಓರಲ್ ಆಂಡ್ ಮ್ಯಾಕ್ಸಿಲೋಫೇಶಿಯಲ್ ಸರ್ಜರಿ’ ಅಂದರೆ ಮುಖ ಮತ್ತು ದವಡೆಯ ಶಸ್ತ್ರಚಿಕಿತ್ಸೆ.

‘ಮ್ಯಾಕ್ಸಿಲೋಫೆಶಿಯಲ್’ ಎಂಬ ಪದದ ಅರ್ಥವೇ ಬಾಯಿಯ ಕುಹರಕ್ಕೆ ಸಂಬಂಧಿಸಿದ ಮುಖದ ಭಾಗ ಅಂತ. ಸರಳವಾಗಿ ಹೇಳುವುದಾದರೆ, ಇದು ಮುಖ ಮತ್ತು ದವಡೆಗೆ ಸಂಬಂಧಿಸಿದ ವೈದ್ಯ ಕೀಯ, ಶಸ್ತ್ರಚಿಕಿತ್ಸಾ ಹಾಗೂ ಮೂಳೆ ಚಿಕಿತ್ಸೆಯನ್ನು ಒಳಗೊಂಡ ವಿಶೇಷ ವಿಭಾಗ. ಈ ತಜ್ಞರು ಬಾಯಿಯ ಕುಹರಕ್ಕೆ ಸಂಪರ್ಕ ಹೊಂದಿರುವ ಮುಖದ ಎಲ್ಲಾ ಅಂಗಾಂಶಗಳ ಚಿಕಿತ್ಸೆಯಲ್ಲಿ ಪರಿಣತರಾಗಿರುತ್ತಾರೆ.

‘ಒಎಂಎಫ್ಎಸ್’ ತಜ್ಞರು ವಿವಿಧ ಕೌಶಲಗಳಲ್ಲಿ ತರಬೇತಿ ಪಡೆದಿರುತ್ತಾರೆ ಮತ್ತು ತಮ್ಮ ಪರಿಣತಿಗೆ ಅನುಗುಣವಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾರೆ: ಮುಖದ ಮೂಳೆ ತಜ್ಞ (ಮುಖದ ಮೂಳೆ ಮುರಿತಗಳಿಗೆ ಚಿಕಿತ್ಸೆ), ಮುಖದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕ (ಮುಖದ ಪುನರ್ನಿರ್ಮಾಣ ಮತ್ತು ಸೌಂದರ್ಯವರ್ಧನೆ), ಬಾಯಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ (ಬಾಯಿ ಮತ್ತು ಮುಖದ ಕ್ಯಾನ್ಸರ್ ಚಿಕಿತ್ಸೆ), ಮುಖದ ನರರೋಗ ತಜ್ಞ (ಮುಖದ ನರಗಳ ಸಮಸ್ಯೆಗಳಿಗೆ ಚಿಕಿತ್ಸೆ), ಮುಖದ ಸೌಂದರ್ಯ ತಜ್ಞ (ಬೋಟಾಕ್ಸ್, ಫಿಲ್ಲರ್ಸ್,ಫೇಸ್‌ಲಿಫ್ಟ್), ಕೂದಲು ಕಸಿ ತಜ್ಞ, ಮತ್ತು ಮುಖದ ಪುನರ್ನಿರ್ಮಾಣ ಸೂಕ್ಷ್ಮ ಶಸ್ತ್ರಚಿಕಿತ್ಸಕ (ದೇಹದ ಇತರ ಭಾಗಗಳಿಂದ ಅಂಗಾಂಶ ತಂದು ಮುಖದ ಪುನರ್ನಿರ್ಮಾಣ). ಹೀಗೆ, ಮುಖವೆಂಬ ಮಾನವ ದೇಹದ ಅತ್ಯಂತ ಸಂಕೀರ್ಣ ಮತ್ತು ಸೂಕ್ಷ್ಮ ಭಾಗದ ಸಮಗ್ರ ಆರೈಕೆ ಇವರ ಕೈಯಲ್ಲಿದೆ.

  1. ದಂತ ಶಸ್ತ್ರಚಿಕಿತ್ಸೆ : ಸಾಮಾನ್ಯ ಹಲ್ಲು ತೆಗೆಯುವಿಕೆಯಿಂದ ಹಿಡಿದು, ದವಡೆಯ ಮೂಳೆ‌ ಯೊಳಗೆ ಹುದುಗಿರುವ ಬುದ್ಧಿ ಹಲ್ಲುಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯವರೆಗೆ ‘ಒಎಂಎಫ್ಎಸ್’ ತಜ್ಞರು ನಿರ್ವಹಿಸುತ್ತಾರೆ. ಈ ಶಸ್ತ್ರಚಿಕಿತ್ಸೆಗಳಲ್ಲಿ ಮುಖದ ನರಗಳು, ರಕ್ತನಾಳಗಳು ಮತ್ತು ದವಡೆಯ ಮೂಳೆಗೆ ಯಾವುದೇ ಹಾನಿಯಾಗದಂತೆ ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸ ಲಾಗುತ್ತದೆ. ತೊಡಕುಗಳು ಉಂಟಾದರೂ ಅವುಗಳನ್ನು ಸಮರ್ಥವಾಗಿ ನಿಭಾ ಯಿಸುವ ಪರಿಣತಿ ಇವರಿಗಿರುತ್ತದೆ. ಮಧುಮೇಹ, ಹೃದಯ ಸಮಸ್ಯೆ, ರಕ್ತವನ್ನು ತೆಳುವಾಗಿಸುವ ಔಷಧಿ ಸೇವಿಸುತ್ತಿರು ವವರು, ಮೂತ್ರಪಿಂಡ ವೈಫಲ್ಯ ಇರುವ ರೋಗಿಗಳಿಗೂ ವಿಶೇಷ ಮುನ್ನೆಚ್ಚರಿಕೆ ಯೊಂದಿಗೆ ಸುರಕ್ಷಿತ ಚಿಕಿತ್ಸೆ ನೀಡಲಾಗುತ್ತದೆ. ಹಲ್ಲಿನ ಸೋಂಕು ಗಂಟಲಿಗೆ, ಎದೆಗೆ ಅಥವಾ ಮಿದುಳಿಗೆ ಹರಡಿ ಜೀವಕ್ಕೆ ಅಪಾಯವಾದ ಪ್ರಕರಣಗಳಲ್ಲಿ ತುರ್ತು ಶಸ್ತ್ರ ಚಿಕಿತ್ಸೆಯ ಮೂಲಕ ಜೀವ ರಕ್ಷಿಸಲಾಗುತ್ತದೆ.
  2. ದವಡೆಯ ರೋಗಶಾಸ್ತ್ರ : ದವಡೆಯ ಮೂಳೆಗಳು ವಿವಿಧ ಕಾರಣಗಳಿಂದ ಹಲವಾರು ರೋಗ ಗಳಿಗೆ ತುತ್ತಾಗಬಹುದು. ದವಡೆಯಲ್ಲಿ ‘ನೀರು ತುಂಬಿದ ಚೀಲಗಳು’ ಎಂದು ಕರೆಯಬಹುದಾದ ‘ಸಿಸ್ಟ್‌ಗಳು’ (ರ‍್ಯಾಡಿಕ್ಯಲರ್ ಸಿಸ್ಟ್, ಡೆಂಟಿಜೆರಸ್ ಸಿ, ಕೆರಟೋಸಿ) ಮತ್ತು ಗಡ್ಡೆಗಳು (ಅಮೆಲೋ ಬ್ಲಾಸ್ಟೋಮಾ, ದೈತ್ಯಕೋಶ ಗಡ್ಡೆ, ಫೈಬ್ರಸ್ ಡಿಸ್‌ಪ್ಲೇಸಿಯಾ) ಬೆಳೆಯಬಹುದು. ಜತೆಗೆ ಮೂಳೆಸೋಂಕು (ಆಸ್ಟಿಯೋಮೈಲೈಟಿಸ್) ಮತ್ತು ಔಷಧಿ-ಸಂಬಂಧಿತ ಮೂಳೆ ಕೊಳೆತದಂಥ (ಎಂಆರ್‌ಒಎನ್‌ಜೆ) ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಇವೆಲ್ಲವೂ ದವಡೆಯ ಮೂಳೆ ಯನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿವೆ.

‘ಒಎಂಎಫ್ಎಸ್’ ತಜ್ಞರು ಈ ಎಲ್ಲಾ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿಕಿತ್ಸೆ ಮಾಡುತ್ತಾರೆ. ಶಸ್ತ್ರಚಿಕಿತ್ಸೆಯ ಮೂಲಕ ರೋಗಗ್ರಸ್ತ ಭಾಗವನ್ನು ತೆಗೆದು, ಅಗತ್ಯವಿದ್ದರೆ ಮೂಳೆ ಕಸಿ ಮಾಡಿ ದವಡೆಯನ್ನು ಪುನರ್ನಿರ್ಮಿಸಲಾಗುತ್ತದೆ. ಈ ಚಿಕಿತ್ಸೆಯಲ್ಲಿ ಮೂಳೆಯ ಆರೋಗ್ಯ, ಮುಖದ ಸೌಂದರ್ಯ ಮತ್ತು ಕಾರ್ಯಕ್ಷಮತೆ ಈ ಮೂರೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ದವಡೆ ಯ ಸಮರ್ಪಕ ಕಾರ್ಯನಿರ್ವಹಣೆಯನ್ನು ಕಾಪಾಡಲಾಗುತ್ತದೆ.

  1. ಮುಖದ ಪುನರ್ನಿರ್ಮಾಣ: ಕ್ಯಾನ್ಸರ್ ಅಥವಾ ತೀವ್ರ ಗಾಯಗಳಿಂದ ದವಡೆಯ ಒಂದು ಭಾಗ ನಷ್ಟವಾದಾಗ, ದೇಹದ ಇತರ ಭಾಗಗಳಿಂದ ಮೂಳೆ ಮತ್ತು ಮಾಂಸಖಂಡವನ್ನು ತಂದು ಮುಖ ವನ್ನು ಪುನರ್ನಿರ್ಮಿಸಬಹುದು. ಇದು ಆಧುನಿಕ ಶಸ್ತ್ರಚಿಕಿತ್ಸಾ ವಿಜ್ಞಾನದ ಅದ್ಭುತ ಸಾಧನೆ ಗಳಂದು.

ಫಿಬುಲಾ ಫ್ಲಾಪ್: ಕಾಲಿನ ಫಿಬುಲಾ ಮೂಳೆಯನ್ನು ಅದರ ರಕ್ತನಾಳಗಳ ಸಮೇತ ತೆಗೆದು, ದವಡೆ ಯ ಆಕಾರಕ್ಕೆ ತಕ್ಕಂತೆ ರೂಪಿಸಿ ಜೋಡಿಸಲಾಗುತ್ತದೆ. ಈ ಹೊಸ ದವಡೆಯ ಮೇಲೆ ಇಂಪ್ಲಾಂಟ್ ಅಳವಡಿಸಿ ಹಲ್ಲುಗಳನ್ನೂ ಜೋಡಿಸಬಹುದು!

ಮುಂಗೈ ಫ್ಲಾಪ್: ಮುಂಗೈಯಿಂದ ಚರ್ಮ ಮತ್ತು ಮೃದು ಅಂಗಾಂಶವನ್ನು ತೆಗೆದು, ಬಾಯಿ ಅಥವಾ ನಾಲಿಗೆಯ ನಷ್ಟವಾದ ಭಾಗವನ್ನು ಮುಚ್ಚಲಾಗುತ್ತದೆ. ಇದರಿಂದ ರೋಗಿಯು ಮತ್ತೆ ಮಾತನಾಡಲು ಮತ್ತು ಆಹಾರ ನುಂಗಲು ಸಮರ್ಥ ರಾಗುತ್ತಾರೆ.

ಪೆಕ್ಟೋರಲಿಸ್ ಮೇಜರ್ ಫ್ಲಾಪ್: ಎದೆಯ ಮಾಂಸಖಂಡವನ್ನು ಚರ್ಮ ಮತ್ತು ರಕ್ತನಾಳಗಳ ಸಹಿತ ಮುಖಕ್ಕೆ ತಂದು, ದೊಡ್ಡ ದೋಷಗಳನ್ನು ಸರಿಪಡಿಸಲಾಗುತ್ತದೆ. ವಿಶೇಷವಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ ಇದು ಬಹಳ ಉಪಯುಕ್ತ.

ಇತರ ಫ್ಲಾಪ್‌ಗಳು: ತೊಡೆಯ ಫ್ಲಾಪ್ (ಎಎಲ್‌ಟಿ), ಬೆನ್ನಿನ ಮಾಂಸಖಂಡ ಫ್ಲಾಪ್ (ಲ್ಯಾಟಿಸಿಮಸ್ ಡಾರ್ಸಿ), ಸೊಂಟದ ಮೂಳೆ ಫ್ಲಾಪ್ (ಇಲಿಯಾಕ್ ಕ್ರೆ). ಇವುಗಳಲ್ಲಿ ಪ್ರತಿ ರೋಗಿಯ ಅಗತ್ಯಕ್ಕೆ ತಕ್ಕಂತೆ ಸೂಕ್ತ ಫ್ಲಾಪ್ ಅನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ, ನಷ್ಟವಾದ ಮುಖದ ಭಾಗವನ್ನು ಮರುಸೃಷ್ಟಿಸಿ, ರೋಗಿಗೆ ಹೊಸ ಜೀವನ ನೀಡುವುದು ‘ಒಎಂಎಫ್ಎಸ್’ ತಜ್ಞರ ವಿಶೇಷ ಸಾಮರ್ಥ್ಯ.

  1. ಇಂಪ್ಲಾಂಟ್ ಪುನರ್‌ಸ್ಥಾಪನೆ: ಕ್ಯಾನ್ಸರ್, ಗಡ್ಡೆ ಅಥವಾ ಗಾಯದಿಂದ ದವಡೆಯ ಭಾಗ ನಷ್ಟವಾದಾಗ, ಅಥವಾ ದೀರ್ಘಕಾಲ ಹಲ್ಲಿಲ್ಲದೆ ದವಡೆ ಮೂಳೆ ಕರಗಿಹೋದಾಗ, ಸಾಮಾನ್ಯ ವಿಧಾನಗಳಿಂದ ಇಂಪ್ಲಾಂಟ್ ಅಳವಡಿಸುವುದು ಕಷ್ಟ. ಆದರೆ ‘ಒಎಂಎಫ್ಎಸ್’ ತಜ್ಞರ ಬಳಿ ವಿಶೇಷ ಪರಿಹಾರಗಳಿವೆ. ಸೊಂಟ, ತಲೆಬುರುಡೆ ಅಥವಾ ಗಲ್ಲದಿಂದ ಮೂಳೆ ತೆಗೆದು ದವಡೆಗೆ ಕಸಿ ಮಾಡಿ, ನಾಲ್ಕಾರು ತಿಂಗಳ ನಂತರ ಇಂಪ್ಲಾಂಟ್ ಅಳವಡಿಸಬಹುದು. ಮೇಲಿನ ದವಡೆ ಮೂಳೆ ಸಂಪೂರ್ಣ ಕರಗಿದ್ದರೆ, ಕೆನ್ನೆ ಮೂಳೆಯಲ್ಲಿ ಉದ್ದನೆಯ ಝೈಗೋಮ್ಯಾಟಿಕ್ ಇಂಪ್ಲಾಂಟ್ ಅಳವಡಿಸಿ ಒಂದೇ ದಿನದಲ್ಲಿ ಹಲ್ಲು ಜೋಡಿಸಬಹುದು. ಫಿಬುಲಾ ಮೂಳೆಯಿಂದ ಪುನರ್ನಿರ್ಮಿಸಿದ ದವಡೆಯ ಮೇಲೂ ಇಂಪ್ಲಾಂಟ್ ಇಟ್ಟು ಹಲ್ಲು ಜೋಡಿಸಬಹುದು. ಇದರಿಂದಾಗಿ ರೋಗಿ ಮತ್ತೆ ಆಹಾರವನ್ನು ಜಗಿಯಬಹುದು, ಆತ್ಮವಿಶ್ವಾಸದಿಂದ ನಗಬಹುದು! ‌

‘ಆಲ್‌ -ಆನ್-4’ ಅಥವಾ ‘ಆಲ್-ಆನ್-6’ ತಂತ್ರದಿಂದ ಕೇವಲ ನಾಲ್ಕರಿಂದ ಆರು ಇಂಪ್ಲಾಂಟ್‌‌ ಗಳಿಂದ ಪೂರ್ಣ ದವಡೆಯ ಹಲ್ಲುಗಳನ್ನು ಒಂದೇ ದಿನದಲ್ಲಿ ಜೋಡಿಸುವುದು ಸಾಧ್ಯ!

  1. ಸೀಳು ತುಟಿ ಮತ್ತು ಅಂಗುಳ: ಕೆಲವು ಮಕ್ಕಳು ಹುಟ್ಟುವಾಗಲೇ ತುಟಿ ಅಥವಾ ಅಂಗುಳದಲ್ಲಿ ಸೀಳು ಹೊಂದಿರುತ್ತಾರೆ. ಇದು ಮಗುವಿಗೆ ಹಾಲು ಕುಡಿಯಲು, ಮಾತನಾಡಲು ತೊಂದರೆ ಉಂಟು ಮಾಡುವುದಷ್ಟೇ ಅಲ್ಲ, ಮಗು ಮತ್ತು ಪೋಷಕರಿಬ್ಬರ ಮನಸ್ಸನ್ನೂ ಘಾಸಿಗೊಳಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡರ ಮೇಲೂ ಇದರ ಪರಿಣಾಮ ತೀವ್ರವಾಗಿರುತ್ತದೆ. ಹಂತ ಹಂತವಾಗಿ ಶಸ್ತ್ರಚಿಕಿತ್ಸೆ ಮಾಡಿ, ‘ಒಎಂಎ-ಎಸ್’ ತಜ್ಞರು, ವಾಕ್ ಚಿಕಿತ್ಸಕರು ಮತ್ತು ಹಲ್ಲು ಜೋಡಣೆ ತಜ್ಞರು ಒಟ್ಟಾಗಿ ಮಗುವಿಗೆ ಸುಂದರ ನಗು ಮತ್ತು ಸ್ಪಷ್ಟ ಮಾತು ನೀಡುತ್ತಾರೆ.

ಒಂದು ರೀತಿಯಲ್ಲಿ ಹೇಳುವುದಾದರೆ, ಈ ಮಕ್ಕಳಿಗೆ ಪುನರ್ಜನ್ಮ ನೀಡುವ ಕೆಲಸವನ್ನು ‘ಒಎಂ ಎಫ್ಎಸ್’ ತಜ್ಞರು ಮಾಡುತ್ತಾರೆ. ಅನೇಕರಿಗೆ ತಿಳಿದಿಲ್ಲದ ಮುಖ್ಯ ವಿಷಯವೆಂದರೆ, ಹಲವಾರು ಸರಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ‘ಒಎಂಎಫ್ಎಸ್’ ತಜ್ಞರು ಈ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಾರೆ.

  1. ಮುಖ ಮತ್ತು ದವಡೆಯ ವಿಕೃತಿ ಸರಿಪಡಿಸುವಿಕೆ: ಜನ್ಮಜಾತ ಅಥವಾ ಬೆಳವಣಿಗೆಯ ಸಮಸ್ಯೆ ಗಳಿಂದ ಮುಖದ ರಚನೆಯಲ್ಲಿ ಅಸಮಾನತೆ ಕಾಣಿಸಿಕೊಳ್ಳಬಹುದು. ಅಂದರೆ, ಮುಖದ ಒಂದು ಬದಿ ಸಣ್ಣದಾಗಿರುವುದು, ಕೆನ್ನೆ ಮೂಳೆ ಅಥವಾ ದವಡೆಯ ಅಪೂರ್ಣ ಬೆಳವಣಿಗೆ, ತಲೆಬುರುಡೆ ಮತ್ತು ಮುಖದ ಮೂಳೆಗಳ ಅಕಾಲಿಕ ಜೋಡಣೆ ಮುಂತಾದವು. ಅದೇ ರೀತಿ, ಕೆಲವರಲ್ಲಿ ದವಡೆ ಅತಿಯಾಗಿ ಮುಂದೆ ಅಥವಾ ಹಿಂದೆ ಇರುತ್ತದೆ. ಇದರಿಂದ ಆಹಾರ ಜಗಿಯಲು ತೊಂದರೆ, ಮುಖ ದಲ್ಲಿ ಅಸಮತೋಲನ ಕಾಣಿಸುತ್ತವೆ. ‘ಒಎಂಎಫ್ಎಸ್’ ತಜ್ಞರು ಡಿಸ್ಟ್ರಾಕ್ಷನ್ ಆಸ್ಟಿಯೋಜೆನೆಸಿಸ್, ಲಿ ಫೋರ್ಟ್, ಬಿಎಸ್‌ಎಸ್‌ಒ, ಜೀನಿಯೋಪ್ಲಾಸ್ಟಿ ಮುಂತಾದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಂತ್ರಗಳ ಮೂಲಕ ಮೂಳೆಯನ್ನು ಉದ್ದಗೊಳಿಸಬಹುದು, ದವಡೆಯನ್ನು ಸರಿಯಾದ ಸ್ಥಾನಕ್ಕೆ ತರಬ‌ ಹುದು, ಮೂಳೆ ಕಸಿ ಮತ್ತು ಮೃದು ಅಂಗಾಂಶ ಪುನರ್ನಿರ್ಮಾಣ ಮಾಡಬಹುದು. ಈ ಮೂಲಕ ಮುಖದ ಸೌಂದರ್ಯ, ಸಮತೋಲನ ಮತ್ತು ಕಾರ್ಯಕ್ಷಮತೆ ಯನ್ನು ಮರುಸ್ಥಾಪಿಸಿ, ರೋಗಿಗಳಿಗೆ ಹೊಸ ಆತ್ಮವಿಶ್ವಾಸ ತುಂಬಲಾಗುತ್ತದೆ.
  2. ಮುಖದ ನರರೋಗಗಳು ಮತ್ತು ದವಡೆ ಕೀಲು ಸಮಸ್ಯೆಗಳ ಚಿಕಿತ್ಸೆ: ಮುಖದ ನರಗಳು ಸಂವೇದನೆ ಮತ್ತು ಚಲನೆಯನ್ನು ನಿಯಂತ್ರಿಸುತ್ತವೆ. ಟ್ರೈಜೆಮಿನಲ್ ನ್ಯೂರಾಲ್ಜಿಯಾದಲ್ಲಿ ಮುಖ ದಲ್ಲಿ ವಿದ್ಯುತ್ ಶಾಕ್‌ನಂಥ ತೀವ್ರನೋವು ಕಾಣಿಸುತ್ತದೆ; ಬೆಲ್ಸ್ ಪಾಲ್ಸಿಯಲ್ಲಿ ಮುಖದ ಒಂದು ಬದಿ ಚಲನೆ ಕಳೆದುಕೊಂಡು ಕಣ್ಣು ಮುಚ್ಚಲು, ನಗಲು ಕಷ್ಟವಾಗುತ್ತದೆ; ಅಪಘಾತಗಳಿಂದ ನರ ಹಾನಿ ಯಾಗಿ ಮುಖದಲ್ಲಿ ಮರಗಟ್ಟುವಿಕೆ ಉಂಟಾಗಬಹುದು.

ಅದೇ ರೀತಿ, ದವಡೆ ಕೀಲಿನ (ಟಿಎಂಜೆ) ಸಮಸ್ಯೆಗಳಿಂದ ನೋವು, ಶಬ್ದ ಮತ್ತು ಬಾಯಿ ತೆರೆಯಲು ತೊಂದರೆಯಾಗಬಹುದು. ‘ಒಎಂಎಫ್ಎಸ್’ ತಜ್ಞರು ಔಷಧಿ, ನರ ಬ್ಲಾಕ್, ಸೂಕ್ಷ್ಮ ಶಸ್ತ್ರಚಿಕಿತ್ಸೆ ಯಿಂದ ನರ ಜೋಡಣೆ ಅಥವಾ ಕಸಿ, ಆರ್ತ್ರೋಸ್ಕೋಪಿ, ಕೀಲು ಬದಲಾವಣೆ ಹೀಗೆ ವಿವಿಧ ವಿಧಾನ ಗಳ ಮೂಲಕ ಈ ಎಲ್ಲಾ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ.

  1. ಮುಖ ಸೌಂದರ್ಯ ಚಿಕಿತ್ಸೆ: ‘ಒಎಂಎಫ್ಎಸ್’ ತಜ್ಞರು ಮುಖದ ಅಂಗರಚನಾ ಶಾಸ್ತ್ರದಲ್ಲಿ ಪರಿಣತರಾಗಿರುವುದರಿಂದ,‌ ಸೌಂದರ್ಯ ಚಿಕಿತ್ಸೆಯಲ್ಲಿ ಅತ್ಯುತ್ತಮ ಫಲಿತಾಂಶ ನೀಡಬಲ್ಲರು. ಬೋಟಾಕ್ಸ್‌ನಿಂದ ಹಣೆ, ಕಣ್ಣಿನ ಸುತ್ತ, ಹುಬ್ಬಿನ ನಡುವಿನ ಸುಕ್ಕುಗಳನ್ನು ಕಡಿಮೆ ಮಾಡಬಹುದು ಮತ್ತು ಹಲ್ಲು ಕಡಿಯುವ ಅಭ್ಯಾಸ ಹಾಗೂ ದವಡೆ ಕೀಲು ನೋವಿಗೂ ಇದು ಉಪಯುಕ್ತ. ಡರ್ಮಲ್ ಫಿಲ್ಲರ್ ನಿಂದ ಕೆನ್ನೆ, ತುಟಿ, ಗಲ್ಲದ ಪರಿಮಾಣ ಹೆಚ್ಚಿಸಬಹುದು, ಮೂಗಿನ ರೂಪ ಸರಿಪಡಿಸಬಹುದು, ಮುಖದ ಆಳವಾದ ಸುಕ್ಕುಗಳನ್ನು ತುಂಬಬಹುದು. ರೈನೋಪ್ಲಾ ಸ್ಟಿಯಿಂದ ಮೂಗಿನ ಆಕಾರ, ಗಾತ್ರ, ಕೋನ ಬದಲಾಯಿಸಿ ಸೌಂದರ್ಯ ಮತ್ತು ಉಸಿರಾಟ ಎರಡನ್ನೂ ಸುಧಾರಿಸಬಹುದು.

ಫೇಸ್‌ಲಿಫ್ಟ್‌ ನಿಂದ ಮುಖ ಮತ್ತು ಕುತ್ತಿಗೆಯ ಚರ್ಮ ಬಿಗಿಗೊಳಿಸಿ ಹತ್ತರಿಂದ ಹದಿನೈದು ವರ್ಷ ಯುವಕರಾಗಿ ಕಾಣಬಹುದು. ಬ್ಲೆಫರೋಪ್ಲಾಸ್ಟಿಯಿಂದ ಕಣ್ಣಿನ ರೆಪ್ಪೆಯ ಹೆಚ್ಚುವರಿ ಚರ್ಮ ತೆಗೆದು ಕಣ್ಣುಗಳನ್ನು ಹೆಚ್ಚು ಆಕರ್ಷಕವಾಗಿಸಬಹುದು. ಕೆಮಿಕಲ್ ಪೀಲ, ಲೇಸರ್ ಚಿಕಿತ್ಸೆ, ಪಿಆರ್‌ಪಿ ಮುಂತಾದ ಚರ್ಮ ಚಿಕಿತ್ಸೆಗಳಿಂದ ಮುಖದ ಕಲೆ, ಮೊಡವೆ ಗುರುತು, ಸುಕ್ಕುಗಳನ್ನು ಕಡಿಮೆ ಮಾಡಬಹುದು.

11.ಕೂದಲು ಕಸಿ: ಅನೇಕರಿಗೆ ತಿಳಿದಿಲ್ಲದ ವಿಷಯವೆಂದರೆ, ವಿಶೇಷ ತರಬೇತಿ ಪಡೆದ ‘ಒಎಂಎಫ್ಎಸ್’ ತಜ್ಞರು ಕೂದಲು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಬಲ್ಲರು. ಎಫ್ಯುಇ (ಫಾಲಿಕ್ಯು ಲರ್ ಯೂನಿಟ್ ಎಕ್ಸ್‌ಟ್ರಾಕ್ಷನ್) ತಂತ್ರದಿಂದ‌ ತಲೆಯ ಹಿಂಭಾಗದಿಂದ ಕೂದಲು ತೆಗೆದು, ಬೊಕ್ಕತಲೆ ಪ್ರದೇಶಕ್ಕೆ ಕಸಿ ಮಾಡಲಾಗುತ್ತದೆ. ತಲೆಯ ಕೂದಲಷ್ಟೇ ಅಲ್ಲ ಹುಬ್ಬು, ಗಡ್ಡ, ಮೀಸೆಗಳ ಕಸಿ ಸಹ ಸಾಧ್ಯ. ಮುಖ ಮತ್ತು ತಲೆಯ ಅಂಗರಚನಾ ಶಾಸ್ತ್ರದಲ್ಲಿ ಆಳವಾದ ಜ್ಞಾನ ಹೊಂದಿರುವುದರಿಂದ, ‘ಒಎಂಎಫ್ಎಸ್’ ತಜ್ಞರು ಈ ಕ್ಷೇತ್ರದಲ್ಲಿ ಅತ್ಯುತ್ತಮ ಮತ್ತು‌ ನೈಸರ್ಗಿಕ ಫಲಿತಾಂಶ ನೀಡಬಲ್ಲರು.

ಒಟ್ಟಾರೆಯಾಗಿ ಹೇಳುವುದಾದರೆ, ‘ಒಎಂಎಫ್ಎಸ್’‌ ತಜ್ಞರು ಕೇವಲ ಹಲ್ಲಿನ ವೈದ್ಯರಲ್ಲ, ಅವರು ಮುಖದ ಮೂಳೆ ತಜ್ಞ, ಮುಖದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕ, ಬಾಯಿಯ ಕ್ಯಾನ್ಸರ್ ತಜ್ಞ, ಮುಖದ ನರರೋಗ ತಜ್ಞ, ಮತ್ತು ಮುಖದ ಸೌಂದರ್ಯ ತಜ್ಞರ ಪಾತ್ರವನ್ನು ನಿರ್ವಹಿಸುತ್ತಾರೆ.

ವಿಶೇಷ ತರಬೇತಿ ಪಡೆದ ‘ಒಎಂಎಫ್ಎಸ್’ ತಜ್ಞರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ವಿಶೇಷ‌ ಚಿಕಿತ್ಸೆ ಗಳನ್ನು ನೀಡುತ್ತಾರೆ. ಕೆಲವರು ಕ್ಯಾನ್ಸರ್ ಚಿಕಿತ್ಸೆಯಲ್ಲಿ, ಕೆಲವರು ಮುಖದ ಆಘಾತದಲ್ಲಿ, ಕೆಲವರು ಸೌಂದರ್ಯ ಚಿಕಿತ್ಸೆಯಲ್ಲಿ, ಇನ್ನು ಕೆಲವರು ದವಡೆ ಸರಿಪಡಿಸುವಿಕೆಯಲ್ಲಿ ಪರಿಣತಿ ಹೊಂದಿರು ತ್ತಾರೆ. ಆದ್ದರಿಂದ, ‘ಒಎಂಎಫ್ಎಸ್’ ಎಂದರೇನು ಎಂಬುದನ್ನು‌ ಅರ್ಥಮಾಡಿಕೊಳ್ಳಲು ಇದು ಸಕಾಲ. ನಿಮ್ಮ ಮನೆಯ ಹತ್ತಿರದ ಲಭ್ಯವಿರುವ ಅಮೂಲ್ಯ ಚಿಕಿತ್ಸೆಗಳನ್ನು ನೀವು ಅರಿವಿಲ್ಲದೆ ಕಳೆದುಕೊಳ್ಳುತ್ತಿರಬಹುದು!

ನೆನಪಿಡಿ. ಮುಖ ಮತ್ತು ದವಡೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ನಿಮ್ಮ ವೈದ್ಯರ ಬಳಿ ಹೋದಾಗ ‘ಒಎಂಎಫ್ಎಸ್’ ತಜ್ಞರ ಬಳಿ ಕಳುಹಿಸಲು ಕೇಳಿ. ಸರಿಯಾದ ತಜ್ಞರ ಬಳಿ ಸರಿಯಾದ‌ ಸಮಯದಲ್ಲಿ ಹೋಗುವುದು ಉತ್ತಮ ಚಿಕಿತ್ಸೆಯ ಮೊದಲ ಹೆಜ್ಜೆ. ನಿಮ್ಮ ಮುಖದ ಆರೋಗ್ಯ ನಿಮ್ಮ ಕೈಯಲ್ಲಿದೆ. ಆದ್ದರಿಂದ ಮಾಹಿತಿವಂತರಾಗಿ, ಜೀವವನ್ನು ರಕ್ಷಿಸಿಕೊಳ್ಳಿ!

(ಲೇಖಕರು ಮುಖ-ದವಡೆ ಶಸ್ತ್ರಚಿಕಿತ್ಸಾ ತಜ್ಞರು)