KIADB: ರಸ್ತೆ ಬಂದ್‌ಗೆ ಸೀಮಿತವಾದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘದ ವಿಧಾನ ಸೌಧ ಚಲೋ
ನಗರದ ಜಿಲ್ಲಾಡಳಿತ ಭವನದ ಎದುರು ಕಳೆದ 80 ದಿನಗಳಿಂದ ಜಂಗಮಕೋಟೆ ಭಾಗದಲ್ಲಿ ಕೆಐಎಡಿಬಿ ಹಮ್ಮಿಕೊಂಡಿರುವ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಏರ್ಪಡಿಸಿದ್ದ ವಿಧಾನ ಸೌಧ ಬೈಕ್ ರ‍್ಯಾಲಿಗೆ ಚಲೋಗೆ ಸಾವಿರಾರು ಮಂದಿ ರೈತರು ಆಗಮಿಸಿದ್ದರು.
ಆನಂದ್ ಗುರೂಜಿ, ಕೋಡಿಹಳ್ಳಿ, ಎನ್.ಮೂರ್ತಿ, ಸೀಕಲ್ ರಾಮಚಂದ್ರಗೌಡ ಮಾತನಾಡಿದರು -
ಚಿಕ್ಕಬಳ್ಳಾಪುರ: ಜಂಗಮಕೋಟೆ ಹೋಬಳಿ 13 ಹಳ್ಳಿಗಳ 2800 ಎಕರೆ ಭೂಪ್ರದೇಶವನ್ನು ಕೆಐಎಡಿಬಿ (KIADB) ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು ಈ ಸಂಬಂಧ ಹೊರಡಿಸಿರುವ ಅಧಿಸೂಚನೆ ವಾಪಸ್ಸು ಪಡೆಯಬೇಕು. ಫಲವತ್ತಾದ ಕೃಷಿಭೂಮಿಯನ್ನು ರೈತರಿಗೆ ಕೃಷಿ ಮಾಡಲು ಬಿಡಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ರಸ್ತೆ ಬಂದ್(Vidhana Soudha Chalo Road Bandh) ನಲ್ಲೇ ಪರ್ಯಾವಸಾನ ಗೊಂಡಿತು.
ನಗರದ ಜಿಲ್ಲಾಡಳಿತ ಭವನದ ಎದುರು ಕಳೆದ 80 ದಿನಗಳಿಂದ ಜಂಗಮಕೋಟೆ ಭಾಗದಲ್ಲಿ ಕೆಐಎಡಿಬಿ ಹಮ್ಮಿಕೊಂಡಿರುವ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಏರ್ಪಡಿಸಿದ್ದ ವಿಧಾನ ಸೌಧ ಬೈಕ್ ರ‍್ಯಾಲಿಗೆ ಚಲೋಗೆ ಸಾವಿರಾರು ಮಂದಿ ರೈತರು ಆಗಮಿಸಿದ್ದರು.
ಇದನ್ನೂ ಓದಿ: Chikkaballapur News: ಭೂಮಿ ನೀಡಲು ಸಿದ್ದವಿರುವ ರೈತರ ಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಿ ಎಂದು ಒತ್ತಾಯ
ಜಿಲ್ಲಾಡಳಿತ ಭವನದ ಎದುರು ಮಧ್ಯಾಹ್ನ 12ಕ್ಕೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekher), ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಸಮ್ಮುಖದಲ್ಲಿ ಮಹರ್ಷಿವಾಣಿ ಖ್ಯಾತಿಯ ಆನಂದ್ ಗುರೂಜಿ ಜಂಗಮಕೋಟೆ ಹೋಬಳಿ 13 ಹಳ್ಳಿಗಳ ಭೂ ಸ್ವಾಧೀನ ಚಲೋ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾಡಳಿತ ಭವನದ 500 ಮೀಟರ್ ದೂರದಲ್ಲಿ ಪೊಲೀಸರು ನಾಕಾಬಂಧಿ ಹಾಕಿ ರೈತರನ್ನು ಮುಂದೆ ಹೋಗದಂತೆ ತಡೆದರು.
ಈ ವೇಳೆ ಅಕ್ಷರಶ: ತಳ್ಳಾಟ ನೂಕಾಟ ನಡೆದು ಕೆಲ ಕಾಲ ಸಂಘರ್ಷದ ವಾತಾವರಣ ನಿರ್ಮಾಣ ವಾಗಿತ್ತು. ಇದರಿಂದ ಕೆರಳಿದ ವಿಧಾನಸೌಧ ಚಲೋ ಬೈಕ್ ರ‍್ಯಾಲಿಗೆ ಆಗಮಿಸಿದ್ದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತರು ದಿಕ್ಕಾಪಾಲಾಗಿ ಚದುರಿದರು. ನೂರಾರು ಸಂಖ್ಯೆಯ ರೈತರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.ರೈಲು ಬರುವ ಸಮಯವಾಗಿದೆ. ದಯವಿಟ್ಟು ರಸ್ತೆಗೆ ಬಂದು ಕುಳಿತುಕೊಳ್ಳಿ ಎಂದು ಸಂಘಟಕರು ಮನವಿ ಮಾಡಿದರೂ ಹಳಿಗಳ ಮೇಲೆಯೇ ಕುಳಿತಿದ್ದರು.
ಈ ಸಂದರ್ಭದಲ್ಲಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆಗೆ ಇಳಿದ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ರೈತ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಜಂಗಮಕೋಟೆ ಹೋಬಳಿಯಲ್ಲಿ 13 ಹಳ್ಳಿಗಳ 2800ಕ್ಕೂ ಮಿಕ್ಕಿದ ಭೂಮಿಯನ್ನು ಕೈಗಾರಿಕೆಗಳು ಮಾಡುವ ಉದ್ದೇಶದಿಂದ ವಶಪಡಿಸಿಕೊಳ್ಳಲು ಸರಕಾರ ಮುಂದಾಗಿದೆ. ರೈತರ ಫಲವತ್ತಾದ ಭೂಮಿಯನ್ನು ಕಸದು ಕೊಳ್ಳುತ್ತಿರುವ ಸರ್ಕಾರದ ವಿರುದ್ಧ ನಮ್ಮ ಈ ಹೋರಾಟ ವಾಗಿದೆ ಎಂದರು.
ದೇಶಕ್ಕೆ ಅನ್ನ ಕೊಡುವ ರೈತರ ಭೂಮಿಯನ್ನು ಉಳಿಸುವ ಹೋರಾಟ ಇದಾಗಿದ್ದು ನೂತನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ (Chief Minister D K Shivakumar)ಕೂಡಲೇ ಗಮನ ಹರಿಸಿ ತಕ್ಷಣ ಕೆಐಎಡಿಬಿ ಯೋಜನೆ ಯನ್ನು ಬೇರೊಂದು ಕಡೆಗೆ ವರ್ಗಾಯಿಸಿಕೊಳ್ಳಲಿ. ಫಲವತ್ತದ ಕೃಷಿ ಭೂಮಿಯನ್ನು ಕೈಬಿಡಿ. ರೈತರು ಕೃಷಿಯನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ.ಈ ಸಂಬಂಧ ಜಿಲ್ಲಾಡಳಿತ ಭವನದ ಮುಂದೆ 80 ದಿನಗಳ ಕಾಲ ಅಹೋರಾತ್ರಿ ಹೋರಾಟ ಮಾಡಿ ದ್ದೇವೆ. ಇನ್ನೂ 15 ದಿನಗಳ ಕಾಲ ಮುಂದುವರೆಸುತ್ತೇವೆ. 15 ದಿನಗಳಲ್ಲಿ ನಮ್ಮ ಬೇಡಿಕೆ ಈಡೇರ ದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ. ನಂತರ ನಡೆಯುವ ಆಗು ಹೋಗುಗಳಿಗೆ ಜಿಲ್ಲಾಡಳಿತ ಮತ್ತು ಸರಕಾರವೇ ನೇರ ಹೊಣೆಯಾಗಲಿದೆ ಎಂದರು.
*
ಆನಂದ್‌ಗುರೂಜಿ ಮಾತನಾಡಿ, ರೈತರಿಗೆ ಬೆನ್ನೆಲುಬಾಗಿ ನಿಲ್ಲುವ ಉದ್ದೇಶದಿಂದ ನಾನು ವಿಧಾನ ಸೌಧ ಚಲೋ ಬೈಕ್ ರ‍್ಯಾಲಿಗೆ ಸ್ವಯಂಪ್ರೇರಣೆಯಿಂದ ಭಾಗಿಯಾಗಿದ್ದೇನೆ. ದೇಶಕ್ಕೆ ಅನ್ನ ನೀಡುವ ರೈತರು ನಮ್ಮ ಭೂಮಿ ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ಕೈಗಾರಿಕೆ ಫಲವತ್ತಾದ ಕೃಷಿ ಭೂಮಿ ಕೊಡುವ ಮಾತೇ ಇಲ್ಲ. ಬಲವಂತದ ಭೂಸ್ವಾಧೀನ ನಿಲ್ಲಿಸಿ, ಅಧಿಸೂಚನೆ ಹಿಂಪಡೆಯಿರಿ ಎಂದು 81 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು, ಸರಕಾರ ಕೂಡಲೇ ಇತ್ತ ಗಮನ ಹರಿಸಬೇಕು. ರೈತರ ಸಂಕಷ್ಟ ನೋಡಿ ಧರ್ಮ ಜಾಗೃತಿಗೋಸ್ಕರ ಸಕಲರೂ ಕೈ ಜೋಡಿಸಬೇಕು ಎಂದರು.
*
ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿ 81 ದಿನಗಳಿಂದ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆ ಸ್ಥಾಪಿ ಸಲು ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಆಗುತ್ತಿದೆ.ಇದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘದ ಮುಖಂಡರು ಪದಾಧಿಕಾರಿಗಳು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಈ ಸಂಬಂಧ ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸರಕಾರದ ಜತೆಗೂಡಿ ಸಭೆಗಳನ್ನು ನಡೆಸಿ ಚರ್ಚೆ ಮಾಡಿದ್ದೇವೆ. ಇಷ್ಟೆಲ್ಲಾ ಆದರೂ ಕೂಡ ನಿಮ್ಮ ಅಪೇಕ್ಷೆಯಂತೆ ತಾರ್ಕಿಕ ಅಂತ್ಯ ಆಗಿಲ್ಲ. ಸರಕಾರದಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಆಕ್ರೋಶ ನಿಮ್ಮದಾಗಿದೆ.
ಈ ಸಂಬಂಧ ಆಗುತ್ತಿರುವ ಧರಣಿ ಬಗ್ಗೆ ಸರಕಾರಕ್ಕೂ ಮಾಹಿತಿಯಿದೆ. ಇಂದು ಕೂಡ ಬೈಕ್ ರ‍್ಯಾಲಿಗೆ ಬಂದಿದ್ದೀರಿ. ಇದನ್ನು ಕೂಡ ಸರಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಒಂದೆಡೆ ಅಭಿವೃದ್ದಿ ಕೈಗಾರಿಕೀಕರಣ ಅನಿವಾರ್ಯ. ಮತ್ತೊಂದೆಡೆ ರೈತರು ಕೂಡ ಬದುಕು ಕಟ್ಟಿಕೊಳ್ಳು ವುದು ಅನಿವಾರ್ಯ. ಇವೆರಡರ ನಡುವೆ ಈ ಸಮಸ್ಯೆ ಬಂದು ನಿಂತಿದೆ. ಈ ಪ್ರಕರಣ ಜಿಲ್ಲಾಡಳಿತದ ಹಂತದಲ್ಲಿ ಇಲ್ಲ. ಕೆಐಎಡಿಬಿ ಹಂತದಲ್ಲಿರುವುದರಿಂದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಅತಿ ಶೀಘ್ರವೇ ನಿಣಾಯಕ ಸಭೆ ಏರ್ಪಡಿಸಲು ರಾಜ್ಯಧ್ಯಕ್ಷರು ಕೋರಿದ್ದಾರೆ. ಈ ಸಂಬಂಧ ಇಲಾಖಾ ಹಂತದಲ್ಲಿ ಉನ್ನತ ಅಧಿಕಾರಿಗಳ ಸಭೆ ಏರ್ಪಡಿಸಲು ವ್ಯವಸ್ಥೆ ಮಾಡುತ್ತೇನೆ. ದಿನಾಂಕವನ್ನು ಶೀಘ್ರವೇ ಮುಖಂಡರಿಗೆ ತಿಳಿಸುತ್ತೇನೆ. ಸೌಹಾರ್ಧಯುತವಾಗಿ ನಿಮ್ಮ ಸಮಸ್ಯೆ ಬಗೆಹರಿಸಲು ಸಮಾಯಾವಕಾಶ ನೀಡಿ ಹೋರಾಟ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ 81 ದಿನಗಳ ಕಾಲ ಪ್ರತಿಭಟನೆ ಮಾಡುತ್ತಿದ್ದಾರೆ.ಆದರೂ ಫಲ ನೀಡದ ಪರಿಣಾಮ ವಿಧಾನ ಸೌದ ಚಲೋ ಹಮ್ಮಿಕೊಳ್ಳಲಾಗಿದೆ. ಏರ್‌ಪೋರ್ಟ್ ಸುತ್ತಮುತ್ತ ಸಾವಿರಾರು ಎಕರೆ ಕಾಂಪೌಂಡ್ ಹಾಕಿ ಇಟ್ಟುಕೊಂಡಿದ್ದಾರೆ. ಆದರೂ ಕೈಗಾರಿಕೆಗಳು ಬಂದಿಲ್ಲ ಎಂದ ಅವರು ಸರಕಾರಕ್ಕೆ ಏನಾದರೂ ರೈತಪರವಾದ ಪ್ರೀತಿ ಇದ್ದರೆ ಈ ಕೂಡಲೇ ಜಂಗಮಕೋಟೆ ಭಾಗದಲ್ಲಿ ಮಾಡಿರುವ ನೋಟಿಫಿಕೇಷನ್ ಹಿಂಪಡೆಯಿರಿ ಎಂದು ಒತ್ತಾಯಿಸಿದರು.
ರೈತರ ಪರವಾಗಿ ದಸಂಸ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಯಾವುದೇ ಕಾರಣಕ್ಕೂ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆಗೆ ವಶಪಡಿಸಿಕೊಂಡಿರುವ ಭೂಮಿಯನ್ನು ಸರಕಾರಕ್ಕೆ ಕೊಡುವ ಮಾತೇ ಇಲ್ಲ.ಜಿಲ್ಲಾಡಳಿತದ ಮೂಲಕ ಸರಕಾರ ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೂ ಯಾವುದಕ್ಕೂ ನಾವು ಎದೆಗುಂದುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಾಜಿ ಶಾಸಕ ಎಂ.ರಾಜಣ್ಣ, ದಸಂಸ ಮುಖಂಡ ಎನ್.ಮೂರ್ತಿ, ಉಲ್ಲೂರುಪೇಟೆ ನಾರಾಯಣಸ್ವಾಮಿ, ಹಿತ್ತಹಳ್ಳಿ ರಮೇಶ್, ಗೋಪಾಲ್, ಗಿರೀಶ್, ರಾಮನಾಥ್ ಸೇರಿದಂತೆ ಸಹಸ್ರಾರು ರೈತರು ಇದ್ದರು.