ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈದ್ಯರ ಎಡವಟ್ಟಿಗೆ ನರಕವಾಯ್ತು ಬಾಳು; ಹಲ್ಲು ನೋವಿನ ಚಿಕಿತ್ಸೆಗೆ ತೆರಳಿ ಕೋಮಾಕ್ಕೆ ಜಾರಿದ ಮಹಿಳೆ

Kalaburagi News: ಹಲ್ಲಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಮಹಿಳೆ ಇದೀಗ ಕೋಮಾಕ್ಕೆ ಜಾರಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೋಮಾದಲ್ಲಿರುವ ಮಹಿಳೆಯನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ನಿವಾಸಿ ನಾಜಿಯಾ ಬೇಗಂ ಎಂದು ಗುರುತಿಸಲಾಗಿದೆ.

ಹಲ್ಲು ನೋವಿನ ಚಿಕಿತ್ಸೆಗೆ ತೆರಳಿ ಕೋಮಾಕ್ಕೆ ಜಾರಿದ ಮಹಿಳೆ

ಸಾಂದರ್ಭಿಕ ಚಿತ್ರ. -

Ramesh Ballamoole
Ramesh Ballamoole Feb 19, 2026 4:53 PM

ಕಲಬುರಗಿ ಫೆ. 19: ವೈದ್ಯರ ಎಡವಟ್ಟಿನಿಂದ ಮಹಿಳೆಯೊಬ್ಬರ ಬಾಳು ನರಕವಾಗಿರುವ ಕರುಣಾಜನಕ ಕಥೆ ಇದು. ಹಲ್ಲಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಮಹಿಳೆ ಇದೀಗ ಕೋಮಾಕ್ಕೆ ಜಾರಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಜತೆಗೆ ಇದೀಗ ಆಸ್ಪತ್ರೆ ಚಿಕಿತ್ಸೆಯ ಜವಾಬ್ದಾರಿಯಿಂದ ಹಿಂದಕ್ಕೆ ಸರಿಯುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೋಮಾದಲ್ಲಿರುವ ಮಹಿಳೆಯನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ನಿವಾಸಿ ನಾಜಿಯಾ ಬೇಗಂ ಎಂದು ಗುರುತಿಸಲಾಗಿದೆ (Kalaburagi News). ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಹಲ್ಲಿನ ಚಿಕಿತ್ಸೆಗಾಗಿ ಕಳೆದ ತಿಂಗಳು ಆಗಮಿಸಿದ ಅವರು ವೈದ್ಯರ ಎಡವಟ್ಟಿನಿಂದ ಇದೀಗ ಒದ್ದಾಡುತ್ತಿದ್ದಾರೆ.

ಹಲ್ಲು ನೋವಿನ ಸಮಸ್ಯೆಯೆಂದು ಜನವರಿ 1ರಂದು ಆಸ್ಪತ್ರೆಗೆ ತೆರಳಿದ ಮಹಿಳೆ ಸುಮಾರು ಒಂದೂವರೆ ತಿಂಗಳಿನಿಂದ ಕೋಮಾದಲ್ಲಿದ್ದಾರೆ. ಅನೆಸ್ತೇಶಿಯಾ ಇಂಜೆಕ್ಷನ್ ನೀಡಿದ ಕೆಲವೇ ಸಮಯದಲ್ಲಿ ಅವರು ಕೋಮಾಕ್ಕೆ ಜಾರಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಪತಿಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದ ನಾಜಿಯಾ, ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಜನವರಿ 1ರಂದು ತೀವ್ರ ಹಲ್ಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 2ರಂದು ದವಡೆ ಹಲ್ಲು ತೆಗೆಯಲು ವೈದ್ಯರು ಸಿದ್ಧತೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆಗೂ ಮುನ್ನ ನೀಡಲಾದ ಅನಸ್ತೇಶಿಯಾ ಇಂಜೆಕ್ಷನಿಂದ ಭಾರಿ ಎಡವಟ್ಟಾಗಿದೆ. ಇಂಜೆಕ್ಷನ್ ನೀಡಿದ ಕೆಲವೇ ನಿಮಿಷಗಳಲ್ಲಿ ನಾಜಿಯಾ ಆರೋಗ್ಯದಲ್ಲಿ ಏರುಪೇರಾಗಿ ಕೋಮಾಗೆ ಜಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮದುವೆ ಬಳಿಕ ಗಂಡನೊಂದಿಗೆ ಹಳ್ಳಿಯಲ್ಲಿ ನೆಲೆಸಲು ಇಷ್ಟವಿಲ್ಲದೆ ನವವಿವಾಹಿತೆ ಆತ್ಮಹತ್ಯೆ

ವೈದ್ಯರು ನಾಜಿಯಾ ಅವರಿಗೆ ಅತಿಯಾದ ಪ್ರಮಾಣದ ಅನೆಸ್ತೇಶಿಯಾ ನೀಡಿದ್ದೇ ಈ ಸ್ಥಿತಿಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಸುಮಾರು 45 ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗ ಗುಣಮುಖವಾಗುವ ಮೊದಲೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸೂಚಿಸುತ್ತಿದ್ದಾರೆ. ಬಡ ಕುಟುಂಬದವರಾದ ನಾಜಿಯಾ ಅವರ ಮನೆಯವರು ಈಗ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ.

ಆಸ್ಪತ್ರೆಯಲ್ಲೇ ಚಿಕಿತ್ಸೆ

ನಾಜಿಯಾ ಬೇಗಂ ಆರೋಗ್ಯದಲ್ಲಿ ಏರುಪೇರಾಗಿ ಕೋಮಾಗೆ ಹೋದ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಇದುವರೆಗೆ ಅವರಿಗೆ ಚಿಕಿತ್ಸೆ ನೀಡಿದೆ. ಒಂದು ರುಪಾಯಿಯನ್ನು ಪಡೆಯದೇ ಸುಮಾರು 45 ದಿನಗಳಿಂದ 8 ಲಕ್ಷ ರುಪಾಯಿಗೂ ಅಧಿಕ ಹಣವನ್ನು ಖರ್ಚು ಮಾಡಿ ಚಿಕಿತ್ಸೆ ನೀಡಿದ್ದಾರೆ. ಆದರೆ ಈಕೆಯ ಆರೋಗ್ಯದಲ್ಲಿ ಇದುವರೆಗೆ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಹೀಗಾಗಿ ಇದೀಗ ಆಸ್ಪತ್ರೆಯ ವೈದ್ಯರು ಸಂಪೂರ್ಣ ಕೈ ಚೆಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಹೈದರಾಬಾದ್‌ನ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.

ಜತೆಗೆ ವೈದ್ಯರು “ಮಹಿಳೆ ಕೋಮಾಗೆ ಹೋಗಲು ಅನೆಸ್ತೇಶಿಯಾ ಕಾರಣವಲ್ಲ, ಇದು ಬೇರೆ ಯಾವುದೋ ವೈದ್ಯಕೀಯ ಕಾರಣದಿಂದ ಸಂಭವಿಸಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ನಾಜಿಯಾ ಅವರ ಪಾಲಕರು ಮತ್ತು ಪುಟ್ಟ ಮಕ್ಕಳು ಕಂಗಾಲಾಗಿದ್ದು, ಅವರಿಗೆ ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ.