ʻನಾನು ಪ್ರೆಗ್ನೆಂಟ್ ಅಲ್ಲ, ಎಲ್ರೂ ಯಾಕ್ಹೀಗೆ ಅಂದ್ಕೋತಿದ್ದಾರೆ?ʼ; ಗರ್ಭಿಣಿ ಗಾಸಿಪ್‌ಗೆ ಸ್ಪಷ್ಟನೆ ಕೊಟ್ಟ ನಟಿ ಸೋನಲ್ ಮೊಂಥೆರೋ!
Sonal Monteiro Pregnancy Rumours: ನಟಿ ಸೋನಲ್ ಮೊಂಥೆರೋ ಅವರು ಗರ್ಭಿಣಿ ವದಂತಿ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ವಿಶೇಷ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಹುಟ್ಟಿಕೊಂಡ ಗರ್ಭಿಣಿ ವದಂತಿಗಳನ್ನು ಅವರು ತಳ್ಳಿಹಾಕಿದ್ದು, ಅದೆಲ್ಲ ಕೇವಲ ತಪ್ಪು ಕಲ್ಪನೆ ಎಂದಿದ್ದಾರೆ.
-
ಸ್ಯಾಂಡಲ್‌ವುಡ್‌ನ ಜನಪ್ರಿಯ ತಾರಾ ದಂಪತಿ, ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ತಮ್ಮ ವೈವಾಹಿಕ ಜೀವನದ ಎರಡನೇ ವರ್ಷದ ಸಂಭ್ರಮದಲ್ಲಿದ್ದಾರೆ. ಕಳೆದ ಆಗಸ್ಟ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಯಶಸ್ವಿಯಾಗಿ 2 ವರ್ಷ ಪೂರೈಸಿರುವ ಈ ಜೋಡಿ, ಈ ವಿಶೇಷ ಕ್ಷಣವನ್ನು ವಿಯೆಟ್ನಾಂ ಪ್ರವಾಸ ಕೈಗೊಳ್ಳುವ ಮೂಲಕ ಆಚರಿಸಿಕೊಂಡಿದೆ.
ಸದ್ಯ ಸೋನಲ್ ಅವರು ಗರ್ಭಿಣಿ ಎಂಬ ವದಂತಿ ಕೇಳಿಬಂದಿದೆ. ಈಚೆಗೆ ಅವರು ಹಂಚಿಕೊಂಡ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ಅಲ್ಲಿಂದಲೇ ಈ ಗಾಸಿಪ್ ಹುಟ್ಟಿಕೊಂಡಿದ್ದು. ಅಷ್ಟಕ್ಕೂ ಆ ವಿಡಿಯೋ ಯಾವುದು? ಗರ್ಭಿಣಿ ಗಾಸಿಪ್‌ಗೆ ಸೋನಲ್ ಏನಂದ್ರು? ವಿಶ್ವವಾಣಿ ಟಿವಿಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಈ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.
ಪ್ರೆಗ್ನೆನ್ಸಿ ವದಂತಿಗೆ ನಟಿ ಸೋನಲ್ ತೆರೆ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಪ್ರೆಗ್ನೆನ್ಸಿ ಗಾಸಿಪ್‌ಗಳಿಗೆ ಸ್ಪಷ್ಟನೆ ನೀಡಿದ ಸೋನಲ್, "ನಾನು ಪ್ರೆಗ್ನೆಂಟ್ ಅಲ್ಲ. ಅದು ಕೇವಲ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಾಡಿಸಿದ ವಿಶೇಷ ಫೋಟೋಶೂಟ್ ಅಷ್ಟೇ. ಅದಕ್ಕೂ ಮೀರಿ ಬೇರೇನೂ ಇಲ್ಲ. ಆ ವಿಡಿಯೋ ಅಪ್‌ಲೋಡ್ ಮಾಡಿದ ನಂತರ ಬಂದ ಕಾಮೆಂಟ್‌ಗಳನ್ನು ನೋಡಿ ನನಗೆ ತೀವ್ರ ಆಶ್ಚರ್ಯವಾಯಿತು. 'ಅಯ್ಯೋ.. ನಾನೇನಾದರೂ ದಪ್ಪ ಕಾಣಿಸುತ್ತಿದ್ದೀನಾ? ಪ್ರೆಗ್ನೆಂಟ್ ತರಹ ಕಾಣಿಸುತ್ತಿದ್ದೀನಾ? ಜನ ಯಾಕೆ ಹೀಗೆ ಅಂದುಕೊಳ್ಳುತ್ತಿದ್ದಾರೆ?' ಎಂದು ನನಗೇ ನಗು ಬಂತು" ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
Sonal Monteiro: ʼʼನಮ್ಮ ಬಂಧ ಇನ್ನಷ್ಟು ಬಿಗಿಯಾಗಲಿʼʼ; ಭೀಮನ ಅಮಾವಾಸ್ಯೆ ಆಚರಿಸಿದ ಸೋನಾಲ್ ಮೊಂತೆರೊ ಭಾವುಕ
ವಿಯೆಟ್ನಾಂ ಸರ್ಪ್ರೈಸ್
ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಪತಿ ತರುಣ್ ಸುಧೀರ್ ನೀಡಿದ ಸರ್ಪ್ರೈಸ್ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, "ಮದುವೆಯಾಗಿ ಎರಡು ವರ್ಷಗಳು ಕಳೆದಿರುವುದು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಚಿಟಿಕೆ ಹೊಡೆಯುವುದರೊಳಗೆ ಸಮಯ ಉರುಳಿಹೋಗಿದೆ. ಮದುವೆಗೆ ಮುಂಚೆ ನಮ್ಮಿಬ್ಬರ ನಡುವೆ ಇದ್ದ ಪ್ರೀತಿ, ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣ ಮತ್ತು ಗೌರವ ಇಂದಿಗೂ ಹಾಗೆಯೇ ಮುಂದುವರಿದಿದೆ" ಎಂದು ತಿಳಿಸಿದ್ದಾರೆ.
ಮದುವೇನೆ ಆಗಬೇಡ ಅಂತಿದ್ರು ಈಗ ನಾನೇ ಹೇಳ್ತೀನಿ ದಯವಿಟ್ಟು ಬೇಗ ಮದುವೆ ಆಗಿ
"ಮದುವೆಗೆ ಮುನ್ನ ಹಲವರು 'ಮದುವೆ ಆಗಬೇಡ' ಎಂದು ಹೆದರಿಸುತ್ತಾರೆ. ಆದರೆ, ಒಳ್ಳೆಯ ಪಾರ್ಟ್ನರ್ ಸಿಕ್ಕರೆ ವೈವಾಹಿಕ ಜೀವನ ನಿಜಕ್ಕೂ ಸುಂದರವಾಗಿರುತ್ತದೆ. ನನಗೆ ಒಬ್ಬ ಅತ್ಯುತ್ತಮ ಜಂಟಲ್‌ಮನ್ (ತರುಣ್ ಸುಧೀರ್) ಪಾರ್ಟ್ನರ್ ಆಗಿ ಸಿಕ್ಕಿದ್ದಾರೆ. ಹಾಗಾಗಿ ನಾನೀಗ ನನ್ನ ಸ್ನೇಹಿತರಿಗೆ ಮದುವೆಯಾಗುವಂತೆ ಸಲಹೆ ನೀಡುತ್ತಿದ್ದೇನೆ" ಎಂದು ಸಂತಸ ಹಂಚಿಕೊಂಡಿದ್ದಾರೆ ನಟಿ ಸೋನಲ್.
‘ರೋಲೆಕ್ಸ್’ ಚಿತ್ರದಲಿ ಕೋಮಲ್‌ಗೆ ನಾಯಕಿ
ಮದುವೆಯ ನಂತರವೂ ನಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸೋನಲ್ ಮೊಂಥೆರೋ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಟ ಕೋಮಲ್ ಕುಮಾರ್ ಅವರ ಜೊತೆಗೆ ನಾಯಕಿಯಾಗಿ ನಟಿಸಿರುವ ‘ರೋಲೆಕ್ಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಶೀಘ್ರದಲ್ಲೇ ತೆರೆಕಾಣಲಿದೆ.