ಅಬ್ಬಬ್ಬಾ! ʻಜೈಲರ್ 2ʼ ಸಿನಿಮಾದಲ್ಲಿ ಐಟಂ ಸಾಂಗ್ಗೆ ಡ್ಯಾನ್ಸ್ ಮಾಡಿದ ನಟಿ ಶಮ್ನಾ ಕಾಸಿಮ್ಗೂ ಕಟೌಟ್; ಇದಪ್ಪಾ ಕ್ರೇಜ್ ಅಂದ್ರೆ!
Jailer 2 movie: ರಜನಿಕಾಂತ್ ಅವರ ʻಜೈಲರ್ 2ʼ ಸಿನಿಮಾ ಬಿಡುಗಡೆಯ ವೇಳೆ ಒಂದು ಇಂಟರೆಸ್ಟಿಂಗ್ ವಿಚಾರ ಎಲ್ಲರ ಗಮನಸೆಳೆಯುತ್ತಿದೆ. ಈ ಚಿತ್ರದಲ್ಲಿ ‘ಅಲಾ ಬೋಲೇಲೋ’ ಹಾಡಿಗೆ ಕುಣಿದ ನಟಿ ಶಮ್ನಾ ಕಾಸಿಮ್ (ಪೂರ್ಣ) ಅವರಿಗೆ ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸಿರುವುದು ಭಾರಿ ವೈರಲ್ ಆಗುತ್ತಿದೆ.
-
ʻಸೂಪರ್ ಸ್ಟಾರ್ ರಜನಿಕಾಂತ್ ನಾಯಕರಾಗಿ ನಟಿಸಿರುವ 'ಜೈಲರ್ 2' ಸಿನಿಮಾ ರಿಲೀಸ್ಗೆ ಕ್ಷಣಗಣನೆ ಆರಂಭವಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ 'ಜೈಲರ್' ಚಿತ್ರದ ಮುಂದುವರಿದ ಭಾಗವಾಗಿ ಈ ಡಾರ್ಕ್ ಕಾಮಿಡಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಸಿದ್ಧಗೊಂಡಿದೆ.
ಇದರಲ್ಲಿ ಮೋಹನ್ಲಾಲ್, ಶಿವರಾಜ್ಕುಮಾರ್, ಹೃತಿಕ್ ರೋಷನ್ ಹಾಗೂ ವಿಜಯ್ ಸೇತುಪತಿ ಅವರಂತಹ ತಾರೆಯರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ನಟಿ ಶಮ್ನಾ ಕಾಸಿಮ್ (ಪೂರ್ಣ) ಅವರೂ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ರಿಲೀಸ್ ಹೊತ್ತಿನಲ್ಲಿ, ಶಮ್ನಾ ಅವರ ಬೃಹತ್ ಕಟೌಟ್ ಅನ್ನು ಥಿಯೇಟರ್ವೊಂದರ ಮುಂದೆ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಮ್ನಾಗೂ ಕಟೌಟ್ ಹಾಕಿದ ಫ್ಯಾನ್ಸ್
'ಜೈಲರ್ 2' ಚಿತ್ರದ 'ಅಲಾ ಬೋಲೇಲೋ' ಎಂಬ ಹಾಡಿನಲ್ಲಿ ರಜನಿಕಾಂತ್ ಅವರೊಂದಿಗೆ ಪೂರ್ಣ ಡ್ಯಾನ್ಸ್ ಹೆಜ್ಜೆ ಹಾಕಿದ್ದಾರೆ. ಮಾಸ್ ಮತ್ತು ಶಾಸ್ತ್ರೀಯ ನೃತ್ಯವನ್ನು ಬೆರೆಸಿ ಅವರು ಹಾಕಿರುವ ಸ್ಟೆಪ್ಸ್ಗಳು ವೈರಲ್ ಆಗಿವೆ. ಸಿನಿಮಾದಲ್ಲಿ ಅವರು ಈ ಸ್ಪೆಷಲ್ ಸಾಂಗ್ಗೆ ಮಾತ್ರ ಸೀಮಿತವಾಗಿದ್ದಾರಾ ಅಥವಾ ಚಿತ್ರದಲ್ಲೂ ನಟಿಸಿದ್ದಾರಾ? ಗೊತ್ತಿಲ್ಲ!
ಆದರೆ ಈಗ ಕೇರಳದಲ್ಲಿ ಪೂರ್ಣ ಅವರಿಗಾಗಿ ಒಂದು ಬೃಹತ್ ಕಟೌಟ್ ತಲೆಎತ್ತಿದೆ. ತಿರುವನಂತಪುರದ ಚಿತ್ರಮಂದಿರವೊಂದರಲ್ಲಿ ಶಮ್ನಾ ಕಾಸಿಮ್ ಫ್ಯಾನ್ಸ್ ಅಂಡ್ ವೆಲ್ಫೇರ್ ಅಸೋಸಿಯೇಷನ್' ವತಿಯಿಂದ ಕಟೌಟ್ ನಿಲ್ಲಿಸಲಾಗಿದೆ. 'ಜೈಲರ್ 2' ಬಿಡುಗಡೆಯ ಸಮಯದಲ್ಲಿ ಎಲ್ಲರೂ ರಜನಿಕಾಂತ್ ಅವರ ಕಟೌಟ್ಗಳನ್ನು ನಿರೀಕ್ಷಿಸಿದರೆ, ಪೂರ್ಣ ಅವರಿಗೆ ಇಂತಹ ಎತ್ತರದ ಕಟೌಟ್ ಹಾಕಿರುವುದು ಅವರ ಕ್ರೇಜ್ ಎಂತಹದ್ದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕನ್ನಡದಲ್ಲೂ ನಟಿಸಿದ್ದ ಶಮ್ನಾ
ಪೂರ್ಣ ಅವರ ಮೂಲ ಹೆಸರು ಶಮ್ನಾ ಕಾಸಿಮ್. ಕೇರಳ ಮೂಲದ ಇವರು, 2004ರಲ್ಲಿ ‘ಮಂಜು ಪೋಲೊರು ಪೆಣ್ಕುಟ್ಟಿ’ ಎಂಬ ಮಲಯಾಳಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಮೂರು ವರ್ಷಗಳ ಕಾಲ ಮಾಲಿವುಡ್ನಲ್ಲಿ ನಟಿಸಿದ ನಂತರ, 2007ರಲ್ಲಿ ಶ್ರೀಹರಿ ನಾಯಕರಾಗಿದ್ದ ‘ಶ್ರೀ ಮಹಾಲಕ್ಷ್ಮಿ’ ಚಿತ್ರದ ಮೂಲಕ ಟಾಲಿವುಡ್ಗೆ ಕಾಲಿಟ್ಟರು. ಕನ್ನಡದ `ಜೋಶ್', ʻರಾಧನ್ ಗಂಡʼ, ʻ100ʼ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
ನಾಯಕಿಯಾಗಿ ಮಾತ್ರವಲ್ಲದೆ ಪೋಷಕ ನಟಿಯಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ‘ದೃಶ್ಯಂ 2’, ‘ಅಖಂಡ’, ‘ತೀಸ್ ಮಾರ್ ಖಾನ್’, ‘ದಸರಾ’, 'ಭೀಮಾ', 'ಅಖಂಡ 2' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 'ಶ್ರೀಮಂತುಡು' ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದ ಪೂರ್ಣ, 'ಗುಂಟೂರು ಖಾರಂ' ಚಿತ್ರದ 'ಕುರ್ಚಿ ಮಡತಪೆಟ್ಟಿ' ಹಾಡಿನಲ್ಲಿ ಮಹೇಶ್ ಬಾಬು ಅವರೊಂದಿಗೆ ಕುಣಿದಿದ್ದರು. ಈಗ 'ಜೈಲರ್ 2' ಸಿನಿಮಾದಲ್ಲಿ 'ಅಲಾ ಬೋಲೇಲೋ' ಹಾಡಿನ ಮೂಲಕ ರಂಜಿಸಲು ಸಜ್ಜಾಗಿದ್ದಾರೆ.
ನಟಿ ಪೂರ್ಣ ಕಟೌಟ್ ಇರುವ ಪೋಸ್ಟ್
పూర్ణకు నిలువెత్తు కటౌట్!!! త్రివేండ్రంలో కటౌట్ ఏర్పాటు చేసిన 'షామ్నా కాసిం' (పూర్ణ అసలు పేరు ) Fans Association #Jailer2 #RajiniKanth #shamnakasim https://t.co/bm8oUCnekz
— Tilak Chand (@TilakTalkies) October 13, 2026
ಎರಡು ಮಕ್ಕಳ ತಾಯಿ ಆಗಿರುವ ಶಮ್ನಾ
ಇನ್ನು ಪೂರ್ಣ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅಲಿ ಅವರನ್ನು ಪ್ರೀತಿಸಿ ವಿವಾಹವಾದರು. ಮದುವೆಯಾದ ಎರಡು ತಿಂಗಳಲ್ಲೇ ತಾನು ಗರ್ಭಿಣಿ ಎಂದು ಘೋಷಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಮದುವೆಯಾಗಿ ವರ್ಷ ಕಳೆಯುವುದರೊಳಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಇತ್ತೀಚೆಗಷ್ಟೇ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. ಪ್ರಸ್ತುತ ಪೂರ್ಣ ಒಂದೆಡೆ ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಲೇ, ಮತ್ತೊಂದೆಡೆ ಆಗಾಗ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.