ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಮಮಂದಿರ ದೇಣಿಗೆ ವಂಚನೆ: ಆರೋಪಿಗಳ ಬಹಿಷ್ಕಾರಕ್ಕೆ ವಕೀಲರ ನಿರ್ಧಾರ; ನೈತಿಕತೆ vs ಕಾನೂನು ಚರ್ಚೆ

ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಅಯೋಧ್ಯಾ ಬಾರ್ ಅಸೋಸಿಯೇಷನ್ ಘೋಷಿಸಿದೆ. ಈ ನಿರ್ಧಾರವು ಕಾನೂನು ನೆರವು ಪಡೆಯುವ ಆರೋಪಿಗಳ ಮೂಲಭೂತ ಹಕ್ಕು, ವಕೀಲರ ವೃತ್ತಿಪರ ಕರ್ತವ್ಯ ಹಾಗೂ ನೈತಿಕತೆ ನಡುವಿನ ಚರ್ಚೆಯನ್ನು ದೇಶಾದ್ಯಂತ ತೀವ್ರಗೊಳಿಸಿದೆ. ಹಿರಿಯ ವಕೀಲರು ಈ ಕ್ರಮವು ಸಂವಿಧಾನದ ಆಶಯ ಮತ್ತು ಬಾರ್ ಕೌನ್ಸಿಲ್ ನಿಯಮಗಳಿಗೆ ವಿರುದ್ಧವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಮಮಂದಿರ ಪ್ರಕರಣ: ಆರೋಪಿಗಳ ಪರ ವಕೀಲರಿಗೆ ಬಹಿಷ್ಕಾರ

ರಾಮ ಮಂದಿರ (ಸಂಗ್ರಹ ಚಿತ್ರ) -

Profile
Sushmitha Jain Jul 1, 2026 8:30 PM

ಲಖನೌ, ಜು. 1: ಉತ್ತರ ಪ್ರದೇಶದ ಅಯೋಧ್ಯೆ (Ayodhya) ರಾಮಮಂದಿರ (Ram Temple) ದೇಣಿಗೆ ದುರುಪಯೋಗ ಪ್ರಕರಣದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಮತ್ತು ಈ ನಿಯಮ ಮೀರಿದರೆ 5 ಲಕ್ಷ ರುಪಾಯಿ ದಂಡ ವಿಧಿಸಲಾಗುವುದು ಎಂದು ಅಯೋಧ್ಯಾ ಬಾರ್ ಅಸೋಸಿಯೇಷನ್ (Ayodhya Bar Association) ಘೋಷಿಸಿದೆ. ಈ ನಿರ್ಧಾರವು ಕಾನೂನು ವಲಯದಲ್ಲಿ "ವೈಯಕ್ತಿಕ ನೈತಿಕತೆ ಮತ್ತು ವೃತ್ತಿಪರ ಕಾನೂನು ಧರ್ಮ"ದ ನಡುವಿನ ಹಳೆಯ ಸಂಘರ್ಷವನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ. "ಹತ್ತು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು" ಎಂಬ ವಿಲಿಯಂ ಬ್ಲ್ಯಾಕ್‌ಸ್ಟೋನ್ (William Blackstone) ಅವರ ಪ್ರಸಿದ್ಧ ಸಿದ್ಧಾಂತದ ಹಿನ್ನೆಲೆಯಲ್ಲಿ, ಬಾರ್ ಅಸೋಸಿಯೇಷನ್‌ನ ಈ ಸಾಮೂಹಿಕ ಬಹಿಷ್ಕಾರದ ನಿರ್ಧಾರವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರ ಪ್ರಕಾರ, ವಕೀಲರು ಸಾರ್ವಜನಿಕ ಭಾವನೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಂವಿಧಾನದ 21ನೇ ವಿಧಿಯ ಪ್ರಕಾರ ಪ್ರತಿಯೊಬ್ಬ ಆರೋಪಿಗೂ ಕಾನೂನು ನೆರವು ಪಡೆಯುವ ಹಕ್ಕಿದೆ ಮತ್ತು ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವವರೆಗೆ ಆತನನ್ನು ನಿರಪರಾಧಿ ಎಂದೇ ಪರಿಗಣಿಸಲಾಗುತ್ತದೆ. ಅಪರಾಧ ಎಷ್ಟೇ ಘೋರವಾಗಿದ್ದರೂ ಸಾಮೂಹಿಕವಾಗಿ ಬಹಿಷ್ಕಾರ ಹಾಕುವುದು ಬಾರ್ ಕೌನ್ಸಿಲ್ ನಿಯಮಗಳಿಗೆ ವಿರುದ್ಧ. ಇಂತಹ ಸಂದರ್ಭಗಳಲ್ಲಿ ನ್ಯಾಯಸಮ್ಮತ ವಿಚಾರಣೆಗಾಗಿ ಪ್ರಕರಣವನ್ನು ಬೇರೆ ಜಿಲ್ಲೆ ಅಥವಾ ರಾಜ್ಯಕ್ಕೆ ವರ್ಗಾಯಿಸುವ ಸಾಧ್ಯತೆಯೂ ಇರುತ್ತದೆ ಎಂದಿದ್ದಾರೆ.

ಮತ್ತೊಬ್ಬ ಹಿರಿಯ ವಕೀಲ ರಾಕೇಶ್ ದ್ವಿವೇದಿ ಮಾತನಾಡಿ, ʼʼವೈಯಕ್ತಿಕವಾಗಿ ಒಬ್ಬ ವಕೀಲ ತನಗೆ ಇಷ್ಟವಿಲ್ಲದ ಅಥವಾ ನೈತಿಕವಾಗಿ ಒಪ್ಪದ ಪ್ರಕರಣವನ್ನು ನಿರಾಕರಿಸುವ ಹಕ್ಕು ಹೊಂದಿದ್ದಾನೆ. ಆದರೆ ಬಾರ್ ಅಸೋಸಿಯೇಷನ್ ಸಾಮೂಹಿಕವಾಗಿ ನಿಷೇಧ ಹೇರುವುದು ತಪ್ಪು. ಎಲ್ಲ ವಕೀಲರು ನಿರಾಕರಿಸಿದರೆ ವಿಚಾರಣೆ ನಡೆಸಲು ಸಾಧ್ಯವಾಗುವುದಿಲ್ಲ, ಆಗ ಕೋರ್ಟ್ ಆಡಳಿತವೇ ಕಾನೂನು ನೆರವು ನೀಡಬೇಕಾಗುತ್ತದೆʼʼ ಎಂದು ಹೇಳಿದ್ದಾರೆ.

ಬಗೆದಷ್ಟೂ ಹೊರ ಬರುತ್ತಿದೆ ರಾಮ ಮಂದಿರದಲ್ಲಿನ ಹಗರಣ; ಹಣಕೊಟ್ಟು ಕೆಲಸಕ್ಕೆ ಸೇರಿದ್ದ ಹಲವು ಸಿಬ್ಬಂದಿ

ಆರೋಪಿಗಳಿಗೆ ವಕೀಲರನ್ನು ನಿರಾಕರಿಸುವುದು ಮುಂದೆ ಮೇಲ್ಮನವಿ ಸಲ್ಲಿಸುವಾಗ ತಾಂತ್ರಿಕ ದೋಷಗಳ ಆಧಾರದ ಮೇಲೆ ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ದಾರಿಯಾಗಬಹುದು ಎಂದು ಸುಪ್ರೀಂ ಕೋರ್ಟ್ ವಕೀಲ ಆದಿತ್ಯ ಗಿರಿ ಎಚ್ಚರಿಸಿದ್ದಾರೆ. ಭಾರತದ ಪ್ರಸಿದ್ಧ ಕ್ರಿಮಿನಲ್ ವಕೀಲ ದಿ. ರಾಮ್ ಜೇಠ್ಮಲಾನಿ ಅವರು ಕೂಡ ಈ ಹಿಂದೆ, ಕೇವಲ ಸಾರ್ವಜನಿಕ ನಿಂದನೆಗೆ ಹೆದರಿ ವಕಾಲತ್ತು ನಿರಾಕರಿಸುವುದು ವೃತ್ತಿಪರ ದ್ರೋಹ ಎಂದು ಪ್ರತಿಪಾದಿಸಿದ್ದರು.

ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಮತ್ತು ನಿರ್ಭಯಾ ಪ್ರಕರಣದ ಆರೋಪಿಗಳಿಗೂ ದೇಶದಲ್ಲಿ ಕಾನೂನು ನೆರವು ನೀಡಲಾಗಿತ್ತು. ಸಾರ್ವಜನಿಕ ಆಕ್ರೋಶ ಮತ್ತು ಧಾರ್ಮಿಕ ಭಾವನೆಗಳು ಎಷ್ಟೇ ತೀವ್ರವಾಗಿದ್ದರೂ, ಪ್ರಜಾಪ್ರಭುತ್ವದಲ್ಲಿ ಕಾನೂನಿನ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹಿರಿಯ ವಕೀಲರು ಪ್ರತಿಪಾದಿಸಿದ್ದಾರೆ.