ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತಕ್ಕೆ ವೈಟ್‌ವಾಶ್‌ ಮುಖಭಂಗ; ಐತಿಹಾಸಿಕ ಸರಣಿ ಗೆದ್ದ ಐರ್ಲೆಂಡ್‌

ಚೇಸಿಂಗ್‌ ವೇಳೆ ಭಾರತಕ್ಕೆ ರಾಜಸ್ಥಾನದ ಆಲ್‌ರೌಂಡರ್ ಜೈ ಮೂಂದ್ರಾ ಮೊದಲ ಓವರ್‌ನಲ್ಲಿಯೇ ಅವಳಿ ಆಘಾತವಿಕ್ಕಿದು. ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್‌(0) ಮತ್ತು ಮೂರನೇ ಎಸೆತದಲ್ಲಿ ಅಭಿಷೇಕ್‌ ಶರ್ಮ(0) ಅವರನ್ನು ಶೂನ್ಯಕ್ಕೆ ಔಟ್‌ ಮಾಡುವ ಮೂಲಕ ಮೆರೆದಾಡಿದರು.

ಭಾರತಕ್ಕೆ ವೈಟ್‌ವಾಶ್‌ ಮುಖಭಂಗ; ಐತಿಹಾಸಿಕ ಸರಣಿ ಗೆದ್ದ ಐರ್ಲೆಂಡ್‌

Jai Moondra -

Abhilash BC
Abhilash BC Jun 28, 2026 10:23 PM

ಬೆಲ್‌ಫಾಸ್ಟ್‌, ಜೂ.28: ಹಾಲಿ ಟಿ20 ಚಾಂಪಿಯನ್ಸ್ ಭಾರತ ವಿರುದ್ಧ ಉತ್ಕೃಷ್ಟ ಮಟ್ಟದ ಆಟವಾಡಿದ ಐರ್ಲೆಂಡ್‌ ತಂಡ ಐತಿಹಾಸಿಕ ಸರಣಿ ಗೆದ್ದು ಬೀಗಿದೆ. 2ನೇ ಟಿ20 ಪಂದ್ಯದಲ್ಲಿ ರೋಚಕ 1 ರನ್‌ ಗೆಲುವು ಸಾಧಿಸಿ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್‌ ಮಾಡಿತು. ಶ್ರೇಯಸ್‌ ಅಯ್ಯರ್‌ ನಾಯಕನಾಗಿ ಆಡಿದ ಮೊದಲ ಸರಣಿಯಲ್ಲೇ ಹೀನಾಯ ಸೋಲು ಕಂಡರೆ, ಅತ್ತ ಲೋರ್ಕನ್ ಟಕರ್ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಸರಣಿ ಗೆದ್ದ ಸಾಧನೆ ಮಾಡಿದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ 8 ವಿಕೆಟ್‌ಗೆ 154 ರನ್‌ ಗಳಿಸಿತು. ಆರಂಭಿಕ ಆಘಾತದ ಹೊರತಾಗಿಯೂ, ಹ್ಯಾರಿ ಟೆಕ್ಟರ್ ಅವರ ಅರ್ಧಶತಕ (53 ರನ್‌, 5 ಬೌಂಡರಿ, ಒಂದು ಸಿಕ್ಸರ್‌) ಹಾಗೂ ಬೆಂಜಮಿನ್ ಕ್ಯಾಲಿಟ್ಜ್ (37) ಅವರ ಉಪಯುಕ್ತ ರನ್‌ ಕೊಡುಗೆಗಳ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಭಾರತ ಪರ ಪದಾರ್ಪಣ ಪಂದ್ಯವಾಡಿದ ಪ್ರಿನ್ಸ್‌ ಯಾದವ್‌ 3 ವಿಕೆಟ್‌ ಕಿತ್ತರು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ ನಾಟಕೀಯ ಕುಸಿತ ಕಂಡು 9 ವಿಕೆಟ್‌ಗೆ 153 ರನ್‌ ಬಾರಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

ಚೇಸಿಂಗ್‌ ವೇಳೆ ಭಾರತಕ್ಕೆ ರಾಜಸ್ಥಾನದ ಆಲ್‌ರೌಂಡರ್ ಜೈ ಮೂಂದ್ರಾ ಮೊದಲ ಓವರ್‌ನಲ್ಲಿಯೇ ಅವಳಿ ಆಘಾತವಿಕ್ಕಿದು. ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್‌(0) ಮತ್ತು ಮೂರನೇ ಎಸೆತದಲ್ಲಿ ಅಭಿಷೇಕ್‌ ಶರ್ಮ(0) ಅವರನ್ನು ಶೂನ್ಯಕ್ಕೆ ಔಟ್‌ ಮಾಡುವ ಮೂಲಕ ಮೆರೆದಾಡಿದರು. ಮುಂದಿನ ಓವರ್‌ನಲ್ಲಿ ನಾಯಕ ಶ್ರೇಯಸ್‌(10) ವಿಕೆಟ್‌ ಬೇಟೆಯಾಡಿದರು. ಇಶಾನ್‌ ಕಿಶನ್‌(12) ಸಂವಹನ ಕೊರತೆಯಿಂದ ರನೌಟ್‌ ಬಲೆಗೆ ಬಿದ್ದರು. 35 ರನ್‌ ಆಗುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡ ಭಾರತ ಭಾರೀ ಸಂಕಷ್ಟಕ್ಕೆ ಸಿಲುಕಿತು.

ಎಡಗೈ ಬ್ಯಾಟರ್‌ ತಿಲಕ್‌ ವರ್ಮಾ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿದರು. ಅಕ್ಷರ್‌ ಪಟೇಲ್‌(14), ಶಿವಂ ದುಬೆ(20) ನಿಂತು ಆಡುವಲ್ಲಿ ವಿಫಲರಾದರು. ತಿಲಕ್‌ ವರ್ಮಾ ಕ್ರೀಸ್‌ನಲ್ಲಿ ಇರುವ ತನಕ ಭಾರತಕ್ಕೆ ಗೆಲುವಿನ ಭರವಸೆಯೊಂದು ಜೀವಂತವಾಗಿತ್ತು. ಆದರೆ ಅರ್ಧಶತಕ ಪೂರ್ತಿಗೊಳಿಸಿದ ಮರು ಎಸೆತಲ್ಲಿ ಅವರ ವಿಕೆಟ್‌ ಪತನಗೊಂಡಿತು. ಇದರೊಂದಿಗೆ ಭಾರತ ಸೋಲು ಕೂಡ ಖಚಿತವಾಯಿತು. ಅವರು 55 ರನ್‌ ಗಳಿಸಿದರು. ಅವರು ಬಾರಿಸಿದ ಸಿಕ್ಸರ್‌ ಭಾರತದ ಇನಿಂಗ್ಸ್‌ನಲ್ಲಿ ದಾಖಲಾದ ಏಕೈಕ ಸಿಕ್ಸರ್‌. ಅಂತಿಮ ಹಂತದಲ್ಲಿ ಹರ್ಷಿತ್‌ ರಾಣಾ ಶಕ್ತಿ ಮೀರಿದ ಪ್ರಯತ್ನ ಮಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ ಅವರು 10 ಎಸೆತಗಳಿಂದ 21 ರನ್‌ ಬಾರಿಸಿದರು. ಜೈ ಮೂಂದ್ರಾ ಮತ್ತು ಮ್ಯಾಥ್ಯೂ ಹೊಲ್ಲಾರ್ಡ್ ತಲಾ 3 ವಿಕೆಟ್‌ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.



ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ ಬೆನ್‌ ಸ್ಟೋಕ್ಸ್‌

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಐರ್ಲೆಂಡ್‌ ಕೂಡ ಭಾರತದಂತೆ ಆರಂಭಿಕ ಆಘಾತ ಎದುರಿಸಿತ್ತು. ಇನಿಂಗ್ಸ್‌ ಆರಂಭಿಸಿದ ಟಿಮ್ ಟೆಕ್ಟರ್(5) ಮತ್ತು ರಾಸ್ ಅಡೈರ್(16) ರನ್‌ಗೆ ವಿಕೆಟ್‌ ಕಳೆದುಕೊಂಡರು. ಈ ವೇಳೆ ತಂಡಕ್ಕೆ ಆಸರೆಯಾದ ಹ್ಯಾರಿ ಟೆಕ್ಟರ್ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿದರು. ನಾಲ್ಕನೇ ವಿಕೆಟ್‌ಗೆ ಬೆಂಜಮಿನ್ ಕ್ಯಾಲಿಟ್ಜ್ ಜತೆ 65ರನ್‌ ಅತ್ಯಮೂಲ್ಯ ಜತೆಯಾಟ ನಡೆಸಿದರು. ಹ್ಯಾರಿ ಟೆಕ್ಟರ್ 47 ಎಸೆತಗಳಿಂದ 53 ರನ್‌ ಬಾರಿಸಿದರು. ಕ್ಯಾಲಿಟ್ಜ್ 37 ರನ್‌ ಕೊಡುಗೆ ನೀಡಿದರು. ಭಾರತ ಪರ ಪದಾರ್ಪಣ ಪಂದ್ಯವಾಡಿದ ಆಲ್‌ರೌಂಡರ್‌ ಸೂರ್ಯಾಂಶ್ ಶೆಡ್ಗೆ 2 ಓವರ್‌ ಬೌಲಿಂಗ್‌ ನಡೆಸಿ ದುಬಾರಿ ಎನಿಸಿದರು. ಉಳಿದಂತೆ ಅರ್ಶ್‌ದೀಪ್‌ ಸಿಂಗ್‌ ಮತ್ತು ಶಿವಂ ದುಬೆ ತಲಾ 2 ವಿಕೆಟ್‌ ಕಿತ್ತರು.

ಭಾರತೀಯ ಮೂಲದ ಮೂಂದ್ರ

ಜೈಪುರದಿಂದ 100 ಕಿಲೋಮೀಟರ್ ದೂರದಲ್ಲಿರುವ ಟೋಂಕ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಮೂಂದ್ರ, ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡು ಅಕಾಡೆಮಿಗೆ ಸೇರಿದರು. ಆರಂಭದಲ್ಲಿ ವೇಗದ ಬೌಲರ್ ಆಗಿದ್ದ ಅವರು ಆ ಬಳಿಕ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ನರ್ ಆಗಿ ರೂಪಾಂತರಗೊಂಡರು. 2021 ರಲ್ಲಿ, ಅವರು ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಐರ್ಲೆಂಡ್‌ಗೆ ತೆರಳಿದರು. ಆ ನಿರ್ಧಾರ ಅವರ ಜೀವನವನ್ನು ಬದಲಾಯಿಸಿತು. ಅದೇ ಸಮಯದಲ್ಲಿ ತಮ್ಮ ಕ್ರಿಕೆಟ್ ಮಹತ್ವಾಕಾಂಕ್ಷೆಗಳನ್ನು ಮುಂದುವರೆಸಿದರು. ಡಬ್ಲಿನ್‌ನಲ್ಲಿರುವ ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್‌ಗೆ ಸೇರಿ ಆ ಬಳಿಕ ಐರ್ಲೆಂಡ್‌ ತಂಡವನ್ನು ಸೇರಿಕೊಂಡರು. ಪಂಜಾಬ್‌ನ ಸಿಮಿ ಸಿಂಗ್ ನಂತರ ಐರ್ಲೆಂಡ್‌ ವಿರುದ್ಧ ಆಡಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.