ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vikalpa Trailer: ಸೈಕಾಲಜಿಕಲ್‌ ಥ್ರಿಲ್ಲರ್‌ ʻವಿಕಲ್ಪʼ ಟ್ರೈಲರ್‌ ಔಟ್‌; ತೆರೆಗೆ ಯಾವಾಗ?

psychological thriller : ಈಗಾಗಲೇ ತನ್ನ ಟೈಟಲ್‌ , ಟೀಸರ್‌ ಮತ್ತು ಹಾಡುಗಳ ಮೂಲಕ ಚಂದನವನದಲ್ಲಿ ಒಂದಷ್ಟು ಸಿನಿಪ್ರಿಯರ ಮನ ಮತ್ತು ಗಮನ ಎರಡನ್ನೂ ಸೆಳೆದಿರುವ 'ವಿಕಲ್ಪ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. 'ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌' (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಆಧಾರಿಸಿ ತೆರೆಗೆ ಬರುತ್ತಿರುವ ಸೈಕಾಲಜಿಕಲ್‌-ಥ್ರಿಲ್ಲರ್‌ ಕಥಾಹಂದರದ ಚಿತ್ರ ಇದಾಗಿದೆ.

ಸೈಕಾಲಜಿಕಲ್‌ ಥ್ರಿಲ್ಲರ್‌ ʻವಿಕಲ್ಪʼ ಟ್ರೈಲರ್‌ ಔಟ್‌; ತೆರೆಗೆ ಯಾವಾಗ?

ಕನ್ನಡ ಸಿನಿಮಾ -

Yashaswi Devadiga
Yashaswi Devadiga Jan 20, 2026 10:54 AM

ಈಗಾಗಲೇ ತನ್ನ ಟೈಟಲ್‌ (Title), ಟೀಸರ್‌ ಮತ್ತು ಹಾಡುಗಳ ಮೂಲಕ ಚಂದನವನದಲ್ಲಿ ಒಂದಷ್ಟು ಸಿನಿಪ್ರಿಯರ ಮನ ಮತ್ತು ಗಮನ ಎರಡನ್ನೂ ಸೆಳೆದಿರುವ 'ವಿಕಲ್ಪ' (Vikalpa Trailer) ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. 'ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌' (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಆಧಾರಿಸಿ ತೆರೆಗೆ ಬರುತ್ತಿರುವ ಸೈಕಾಲಜಿಕಲ್‌-ಥ್ರಿಲ್ಲರ್‌ (psychological thriller ) ಕಥಾಹಂದರದ ಚಿತ್ರ ಇದಾಗಿದೆ. 'ಸುರೂಸ್‌ ಟಾಕೀಸ್‌' ಸಂಸ್ಥೆಯ ಅಡಿಯಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ಮೊದಲ ಬಾರಿಗೆ 'ವಿಕಲ್ಪ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಯಾರೆಲ್ಲ ಇದ್ದಾರೆ?

ಯುವ ಪ್ರತಿಭೆ ಪೃಥ್ವಿರಾಜ್‌ ಪಾಟೀಲ್‌, 'ವಿಕಲ್ಪ' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೂ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನಾಗಶ್ರೀ ಹೆಬ್ಬಾರ್‌, ಹರಿಣಿ ಶ್ರೀಕಾಂತ್‌, ಸಂಧ್ಯಾ ವಿನಾಯಕ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಪೂಜಾ ಬಚ್ಚ್‌, ಜಯಂತ್‌ ಡೇವಿಡ್‌, ಡಾ. ಪ್ರಕೃತಿ, ಮಾಸ್ಟರ್‌ ಆಯುಷ್ ಸಂತೋಷ್‌, ಗಿರೀಶ್‌ ಹೆಗಡೆ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ ಜಯತೀರ್ಥ 'ವಿಕಲ್ಪ' ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.



ಇದನ್ನೂ ಓದಿ: Bigg Boss Kannada 12: ನಿಮ್ಮನ್ನು ಕಳಿಸಿಯೇ ನಾನು ಹೊರಕ್ಕೆ ಹೋಗೋದು! ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ರಕ್ಷಿತಾಗೆ ಗೆಲುವು

ಹೊಸ ಕಲ್ಪನೆ

ಇದೇ ವೇಳೆ ಮಾತನಾಡಿದ ನಿರ್ದೇಶಕ ಜಯತೀರ್ಥ, 'ಕನ್ನಡ ಚಿತ್ರರಂಗಕ್ಕೆ ಹೊಸಪ್ರತಿಭೆಗಳು ಬರುತ್ತಿರುವುದು ನಿಜಕ್ಕೂ ಖುಷಿಯ ವಿಷಯ. ಹೊಸಬರ ಮೂಲಕ ಹೊಸ ಹೊಸ ಕಲ್ಪನೆ, ಆಲೋಚನೆಗಳು ಸಿನಿಮಾವಾಗಿ ತೆರೆಮೇಲೆ ಅನಾವರಣವಾಗುತ್ತದೆ. ಹೊಸಬರು ಯಾವಾಗಲೂ ಚಿತ್ರರಂಗದ ಜೀವಂತಿಕೆಯನ್ನು ಹಿಡಿದಿಡುತ್ತಾರೆ.

'ವಿಕಲ್ಪ' ಚಿತ್ರದ ಕಲಾವಿದರು, ತಂತ್ರಜ್ಞರು ಯಾರೂ ನನಗೆ ಮೊದಲಿನಿಂದ ಪರಿಚಿತರಲ್ಲ. ಕೆಲ ದಿನಗಳ ಹಿಂದಷ್ಟೇ ಪೋನಿನಲ್ಲಿ ಮಾತನಾಡಿ ಪರಿಚಯವಾದವರು. ಆದರೆ, ಒಳ್ಳೆಯ ಕಂಟೆಂಟ್‌ ಆಧಾರಿತ ಸಿನಿಮಾ ಮಾಡಬೇಕೆಂಬ ಅವರ ಪ್ರಾಮಾಣಿಕ ಪ್ರಯತ್ನ ಇಷ್ಟವಾಗಿದ್ದರಿಂದ, ನಾನು 'ವಿಕಲ್ಪ' ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲು ಒಪ್ಪಿಕೊಂಡು ಬಂದಿದ್ದೇನೆ. ಸಿನಿಮಾದ ಕಥಾಹಂದರ, ಮೇಕಿಂಗ್‌, ಟೀಸರ್‌, ಹಾಡುಗಳು ಎಲ್ಲವೂ ಚಿತ್ರದ ಬಗ್ಗೆ ಒಂದಷ್ಟು ಭರವಸೆ ಮೂಡಿಸುವಂತಿದೆ. ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಲಿ' ಎಂದು ಹಾರೈಸಿದರು.

ವೈಜ್ಞಾನಿಕ ಅಂಶಗಳನ್ನು ಆಧರಿಸಿ ಸಿನಿಮಾ

'ವಿಕಲ್ಪ' ಚಿತ್ರದ ಟ್ರೇಲರ್‌ ಬಿಡುಗಡೆ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಟ ಕಂ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌, 'ಇದೊಂದು ಸೈಕಾಲಜಿಕಲ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. 'ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌' (ಪಿಟಿಎಸ್‌ಡಿ) ಎಂಬ ಮಾನಸಿಕ ರೋಗದ ಎಳೆಯನ್ನು ಆಧಾರಿಸಿ 'ವಿಕಲ್ಪ' ಸಿನಿಮಾವನ್ನು ಮಾಡಲಾಗಿದೆ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವ ಭ್ರಮೆ ಮತ್ತು ವಾಸ್ತವದ ನಡುವಿಣ ಚಿತ್ರಣ ಈ ಚಿತ್ರದಲ್ಲಿದೆ. ವೈಜ್ಞಾನಿಕ ಅಂಶಗಳನ್ನು ಆಧರಿಸಿ, ತಜ್ಞರ ಸಲಹೆಯ ಮೇರೆಗೆ ಈ ಚಿತ್ರದ ಪಾತ್ರಗಳನ್ನು ಹೆಣೆದು, ಸನ್ನಿವೇಶಗಳನ್ನು ಚಿತ್ರಿಸಿದ್ದೇವೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ' ಎಂದರು.

'ವಿಕಲ್ಪ' ಚಿತ್ರದ ನಾಯಕಿ ನಾಗಶ್ರೀ ಹೆಬ್ಬಾರ್‌ ಮಾತನಾಡಿ, 'ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನನಗೆ ಇದು ಮೊದಲ ಚಿತ್ರ. ಇದರಲ್ಲಿ ನಾನು ಸಮುದ್ಯತಾ ಎಂಬ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದೇನೆ. ಮನಸ್ಸಿನೊಳಗೆ ಸಾಕಷ್ಟು ತಲ್ಲಣಗಳನ್ನು ಹೊತ್ತುಕೊಂಡಿದ್ದರೂ, ಅದನ್ನು ಎಲ್ಲೂ ಅತಿಯಾಗಿ ತೋರಿಸಿಕೊಳ್ಳದೆ ಗಂಭೀರವಾಗಿ ಇರುವಂಥ ಪಾತ್ರ. 'ವಿಕಲ್ಪ' ಚಿತ್ರದ ಕಥೆ ಮತ್ತು ನನ್ನ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಎಲ್ಲ ಕಡೆಗಳಿಂದಲೂ 'ವಿಕಲ್ಪ'ಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯವಾಗಿರುವ ನಟಿ ಹರಿಣಿ ಶ್ರೀಕಾಂತ್‌, 'ವಿಕಲ್ಪ' ಚಿತ್ರದಲ್ಲಿ ಮನಶಾಸ್ತ್ರಜ್ಞೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಹರಿಣಿ ಶ್ರೀಕಾಂತ್‌, 'ನಟಿಯಾಗಿ ನನಗೆ ಹೊಸಥರದ ಅನುಭವ ತಂದುಕೊಟ್ಟ ಸಿನಿಮಾ 'ವಿಕಲ್ಪ'. ನಿರ್ದೇಶಕರು ಮತ್ತು ಇಡೀ ಚಿತ್ರತಂಡ ಬಹುತೇಕ ಹೊಸಬರಾದರೂ, ತುಂಬ ವೃತ್ತಿಪರವಾಗಿ 'ವಿಕಲ್ಪ' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಚಿತ್ರದ ಪ್ರತಿ ದೃಶ್ಯವನ್ನೂ ತುಂಬ ಸೂಕ್ಷ್ಮವಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಖಂಡಿತವಾಗಿಯೂ ಇಂಥ ಸಿನಿಮಾಗಳು ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇಂಥ ಹೊಸಬರ ಪ್ರಯತ್ನಗಳಿಗೆ ಎಲ್ಲರ ಬೆಂಬಲ, ಸಹಕಾರವಿರಲಿ' ಎಂದು ಕೇಳಿಕೊಂಡರು.

ಎಲ್ಲೆಲ್ಲಿ ಚಿತ್ರೀಕರಣ?

ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದರ್ಲ್ಯಾಂಡ್‌ ಸೇರಿದಂತೆ ವಿದೇಶಗಳಲ್ಲೂ 'ವಿಕಲ್ಪ'ದ ಚಿತ್ರೀಕರಣ ಮಾಡಲಾಗಿದೆ. 'ವಿಕಲ್ಪ' ಚಿತ್ರಕ್ಕೆ ಮಿಥುನ್‌ ತೀರ್ಥಹಳ್ಳಿ ಸಹ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅಭಿರಾಮ್‌ ಗೌಡ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ ಕಾರ್ಯವಿದೆ.

'ವಿಕಲ್ಪ'ದ ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್‌ ಪಾಟಿಲ್‌ ಮತ್ತು ಕೌಂಡಿನ್ಯ ಕುಡ್ಲುತೋಟ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಿದ್ದಾರ್ಥ್‌ ಬೆಳ್ಮಣ್ಣು, ಸಂವತ್ಸರ, ಶ್ರೀರಂಜಿನಿ, ಇಂಚರ ಮೊದಲಾದ ಗಾಯಕರು 'ವಿಕಲ್ಪ' ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ 'ವಿಕಲ್ಪ' ಚಿತ್ರದ ಟೀಸರ್‌ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ.

ಇದನ್ನೂ ಓದಿ: Raghu Bigg Boss Kannada: ಗಿಲ್ಲಿ ಬಗ್ಗೆ ಅಶ್ವಿನಿ ಹೇಳಿಕೆಗೆ ಬಿಗ್ ಬಾಸ್ ರಘು ಗರಂ

ಇದೀಗ 'ವಿಕಲ್ಪ' ಚಿತ್ರದ ಟ್ರೇಲರ್‌ ಕೂಡ ಬಿಡುಗಡೆಯಾಗಿದ್ದು, ಟ್ರೇಲರ್‌ಗೆ ಶೋಶಿಯಲ್‌ ಮೀಡಿಯಾಗಳಲ್ಲಿ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೇ ಜನವರಿ ತಿಂಗಳ 30ರಂದು 'ವಿಕಲ್ಪ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.