ಸತ್ಯಸಾಯಿ ಆಶ್ರಮದ ಉದ್ಯೋಗಿ ವಿದ್ಯುತ್ ಶಾಕ್‌ಗೆ ಬಲಿ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಚಿನ್ಮಯಿ
ಪತ್ನಿ ಹಾಗೂ 11 ವರ್ಷದ ಮಗಳನ್ನು ಅಗಲಿರುವ ಚಿನ್ಮಯಿ, ತಂದೆ-ತಾಯಿಗೂ ಆಸರೆಯಾಗಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಅವರ ಅಕಾಲಿಕ ನಿಧನ ಸಂಬಂಧಿಕರು ಹಾಗೂ ಪರಿಚಿತರಲ್ಲಿ ದುಃಖ ಮೂಡಿಸಿದೆ. ತಾವು ಕಾರ್ಯನಿರ್ವಹಿಸುತ್ತಿದ್ದ ಆಶ್ರಮದ ಆಸ್ಪತ್ರೆಗೇ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಚಿನ್ಮಯಿ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
-
ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಆಶ್ರಮದಲ್ಲಿ ಸಿವಿಲ್ ಎಂಜಿನಿ ಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಿನ್ಮಯಿ (33) ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ.
ಆದರೆ, ಸಾವಿನ ಬಳಿಕ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಬದುಕಿಗೆ ನೆರವಾಗುವ ಮಾನವೀಯ ಕಾರ್ಯದ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಚಿನ್ಮಯಿ ಅವರು ತಂದೆ-ತಾಯಿಯನ್ನು ನೋಡಿಕೊಂಡು ಬರಲು ತಮ್ಮ ಸ್ವಗ್ರಾಮ ಪೆರೇಸಂದ್ರಕ್ಕೆ ತೆರಳಿದ್ದರು.
ಈ ವೇಳೆ ಮನೆಯಲ್ಲಿದ್ದ ಯುಪಿಎಸ್ ದುರಸ್ತಿಗೆ ಮುಂದಾಗಿದ್ದು, ಪ್ಲಗ್ ತೆಗೆದು ಡಿಸ್ಟಿಲ್ಡ್ ವಾಟರ್ ಹಾಕುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Chikkaballapur News: ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಕಾನೂನು ಪಾಲನೆಗೆ ಅಧಿಕಾರಿಗಳಿಗೆ ತರಬೇತಿ
ಕೂಡಲೇ ಅವರನ್ನು ಪೆರೇಸಂದ್ರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಲಭ್ಯವಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ
ಪತ್ನಿ ಹಾಗೂ 11 ವರ್ಷದ ಮಗಳನ್ನು ಅಗಲಿರುವ ಚಿನ್ಮಯಿ, ತಂದೆ-ತಾಯಿಗೂ ಆಸರೆಯಾಗಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಅವರ ಅಕಾಲಿಕ ನಿಧನ ಸಂಬಂಧಿಕರು ಹಾಗೂ ಪರಿಚಿತರಲ್ಲಿ ದುಃಖ ಮೂಡಿಸಿದೆ. ತಾವು ಕಾರ್ಯನಿರ್ವಹಿಸುತ್ತಿದ್ದ ಆಶ್ರಮದ ಆಸ್ಪತ್ರೆಗೇ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಚಿನ್ಮಯಿ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಅವರ ಈ ನಿರ್ಧಾರ ಅಂಗಾಂಗ ದಾನದ ಮಹತ್ವವನ್ನು ಸಾರುವುದರ ಜತೆಗೆ, ಸಂಕಷ್ಟದ ಸಂದರ್ಭದಲ್ಲಿಯೂ ಇತರರ ಬದುಕಿಗೆ ನೆರವಾಗುವ ಸಂದೇಶವನ್ನು ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.