28,825 ರುಪಾಯಿಗೆ ತಲುಪಿದ ಕ್ವಿಂಟಾಲ್ ಕೊಬ್ಬರಿ ದರ: ಕೊಬ್ಬರಿ ಬೆಲೆ ಏರಿಕೆ, ತೆಂಗಿನಕಾಯಿ ದರ ಇಳಿಕೆ
ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗ್ರೇಡ್-1 ಕೊಬ್ಬರಿಯ ಕೊರತೆ ಇರುವುದರಿಂದ, ಲಭ್ಯವಿರುವ ಗುಣಮಟ್ಟದ ಕೊಬ್ಬರಿಗೆ ಎಣ್ಣೆ ಉತ್ಪಾದಕರು ಮತ್ತು ವರ್ತಕರು ಪೈಪೋಟಿಯ ಮೇಲೆ ಹೆಚ್ಚಿನ ದರ ನೀಡಿ ಖರೀದಿಸುತ್ತಿದ್ದಾರೆ. ತಿಪಟೂರು ಕೊಬ್ಬರಿಯು ತನ್ನ ವಿಶೇಷ ರುಚಿ, ಹೆಚ್ಚಿನ ಎಣ್ಣೆಯಾಂಶ ಹಾಗೂ ಬಾಳಿಕೆಗೆ ಹೆಸರು ವಾಸಿಯಾಗಿದೆ. ಇಲ್ಲಿನ ತೆಂಗಿನ ಎಣ್ಣೆ ಹಾಗೂ ಇತರೆ ಉಪ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಹೆಚ್ಚಿದೆ.
-
ರಂಗನಾಥ ಕೆ. ಹೊನ್ನಮರಡಿ ತುಮಕೂರು
ಕಲ್ಪತರು ನಾಡು ಎಂದೇ ಹೆಸರಾಗಿರುವ ಜಿಲ್ಲೆಯ ಪ್ರಸಿದ್ಧ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ಅಕ್ಟೋಬರ್ ತಿಂಗಳ್ಲಲ್ಲಿ ಕೊಬ್ಬರಿ ಬೆಲೆಯು ಗಣನೀಯವಾಗಿ ಏರಿಕೆಯಾಗಿದ್ದು ಮಂದಹಾಸ ಮೂಡಿಸಿದರೆ ಇದೇ ವೇಳೆ ತೆಂಗಿನಕಾಯಿ ದರದಲ್ಲಿ ಭಾರಿ ಕುಸಿತವಾಗಿದ್ದು ಆತಂಕ ಮೂಡಿಸಿದೆ. ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ ಕ್ವಿಂಟಾಲ್ ಕೊಬ್ಬರಿ ಧಾರಣೆ 27000 ಆಸುಪಾಸಿನಲ್ಲಿದ್ದದ್ದು, ಅಕ್ಟೋಬರ್ ಮಾಹೆಯಲ್ಲಿ ದಿಢೀರ್ ಏರಿಕೆಯಾಗಿ ಕ್ವಿಂಟಾಲ್ ದರ 28,825 ರು.ಗೆ ತಲುಪಿದೆ.
ಕಳೆದ ಕೆಲವು ದಿನ ಗಳಿಂದ ನಷ್ಟ ಹಾಗೂ ಮಾರುಕಟ್ಟೆಯ ಏರಿಳಿತ ಗಳನ್ನು ಎದುರಿಸಿದ್ದ ರೈತರು, ಪ್ರಸ್ತುತ ಸಿಗುತ್ತಿರುವ ಈ ದರದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಮುಂಬ ರುವ ಹಬ್ಬದ ಸೀಸನ್‌ನಲ್ಲಿ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡುಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಬೆಲೆ ಏರಿಕೆಗೆ ಪ್ರಮುಖ ಕಾರಣಗಳು: ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ (ವಿಶೇಷವಾಗಿ ಉತ್ತರ ಭಾರತದಲ್ಲಿ) ಹಬ್ಬ-ಹರಿದಿನಗಳು ಹಾಗೂ ಶುಭ ಸಮಾರಂಭಗಳು ಸಮೀಪಿಸುತ್ತಿರುವುದರಿಂದ ತಿಪಟೂರು ಉಂಡೆ ಕೊಬ್ಬರಿಗೆ ಭಾರಿ ಬೇಡಿಕೆ ಸೃಷ್ಟಿ ಯಾಗಿದೆ. ರೈತರು ಹಾಗೂ ವ್ಯಾಪಾರಸ್ಥರ ಬಳಿ ಇದ್ದ ಹಳೆಯ ಕೊಬ್ಬರಿಯ ದಾಸ್ತಾನು ಬಹುತೇಕ ಖಾಲಿಯಾಗಿದ್ದು, ಹೊಸ ಕೊಬ್ಬರಿ ಮಾರುಕಟ್ಟೆಗೆ ಬರಲು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ.
ಇದನ್ನೂ ಓದಿ: Tender Coconut Price Fall: ತೀವ್ರ ಕುಸಿತ ಕಂಡ ಎಳನೀರು ಬೆಲೆ
ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗ್ರೇಡ್-1 ಕೊಬ್ಬರಿಯ ಕೊರತೆ ಇರುವುದರಿಂದ, ಲಭ್ಯವಿರುವ ಗುಣಮಟ್ಟದ ಕೊಬ್ಬರಿಗೆ ಎಣ್ಣೆ ಉತ್ಪಾದಕರು ಮತ್ತು ವರ್ತಕರು ಪೈಪೋಟಿಯ ಮೇಲೆ ಹೆಚ್ಚಿನ ದರ ನೀಡಿ ಖರೀದಿಸುತ್ತಿದ್ದಾರೆ. ತಿಪಟೂರು ಕೊಬ್ಬರಿಯು ತನ್ನ ವಿಶೇಷ ರುಚಿ, ಹೆಚ್ಚಿನ ಎಣ್ಣೆಯಾಂಶ ಹಾಗೂ ಬಾಳಿಕೆಗೆ ಹೆಸರು ವಾಸಿಯಾಗಿದೆ. ಇಲ್ಲಿನ ತೆಂಗಿನ ಎಣ್ಣೆ ಹಾಗೂ ಇತರೆ ಉಪ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಹೆಚ್ಚಿದೆ.
ಮಧ್ಯವರ್ತಿಗಳ ಹಾವಳಿ ಇಲ್ಲದೆ, ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ಹಾಗೂ ನ್ಯಾಯಯುತ ಬೆಲೆ ಸಿಗುತ್ತಿರುವುದು ಬೆಳೆಗಾರರ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಕಂಗಾಲಾದ ತೆಂಗು ರೈತರು: ತೆಂಗಿನಕಾಯಿಯ ಬೆಲೆಯಲ್ಲಿ ಈ ಬಾರಿ ಭಾರಿ ಕುಸಿತ ಕಂಡು ಬಂದಿದ್ದು, ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ 2025ರ ಅವಧಿಯಲ್ಲಿ ಮಾರುಕಟ್ಟೆ ಯಲ್ಲಿ ಪ್ರತಿ ಕೆ.ಜಿ. ತೆಂಗಿನಕಾಯಿಗೆ 70 ರಿಂದ 80 ರುಪಾಯಿವರೆಗೆ ಬೆಲೆ ಇತ್ತು. ಆದರೆ ಈ ವರ್ಷ ಮಂಡಿಗಳಲ್ಲಿ ದರವು 46 ರಿಂದ 48 ರುಪಾಯಿಗೆ ಕುಸಿದಿದೆ. ಕಳೆದ ವರ್ಷ ಉತ್ತಮ ಬೆಲೆ ಸಿಕ್ಕಿದ್ದರಿಂದ ರೈತರು ಈ ಬಾರಿ ಹೆಚ್ಚಿನ ಇಳುವರಿ ಪಡೆದು ಮಾರುಕಟ್ಟೆಗೆ ತಂದಿದ್ದು, ಪೂರೈಕೆ ಹೆಚ್ಚಾಗಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು: ಕಳೆದ ವರ್ಷ ಮಾರುಕಟ್ಟೆಯಲ್ಲಿ ತೆಂಗಿನಕಾಯಿಗಿಂತ ಎಳ ನೀರಿಗೆ ಹೆಚ್ಚಿನ ಬೇಡಿಕೆ ಮತ್ತು ಉತ್ತಮ ಧಾರಣೆ ಸಿಕ್ಕಿತ್ತು. ಇದರಿಂದಾಗಿ ಹೆಚ್ಚಿನ ರೈತರು ಕಾಯಿ ಬರುವ ಮುನ್ನವೇ ಎಳನೀರು ಮಾರಾಟ ಮಾಡಿದ್ದರು, ಪರಿಣಾಮವಾಗಿ ತೆಂಗಿನಕಾಯಿ ಪೂರೈಕೆ ಕಡಿಮೆಯಾಗಿ ಬೆಲೆ 80 ರುಪಾಯಿವರೆಗೆ ಏರಿಕೆಯಾಗಿತ್ತು. ಆದರೆ ಈ ಬಾರಿ ತೆಂಗಿನಕಾಯಿಗೂ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಎಳನೀರು ಕೀಳದೆ, ಕಾಯಿ ಆಗುವವರೆಗೂ ಬಿಟ್ಟು ಫಸಲು ತೆಗೆದಿದ್ದಾರೆ. ಇಳುವರಿಯೂ ಹೆಚ್ಚಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಇರುವುದರಿಂದ ದರದಲ್ಲಿ ಭಾರಿ ಕುಸಿತ ವಾಗಿದೆ. ಜುಲೈನಿಂದ ನವೆಂಬರ್‌ವರೆಗೆ ತೆಂಗಿನ ಕಾಯಿ ಸೀಸನ್ ಇರುವುದರಿಂದ ಈ ಅವಧಿಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಇರುತ್ತದೆ
226 ಮಂಡಿಗಳಿಗೆ ಟನ್ʼಗಟ್ಟಲೆ ಕಾಯಿ ಪೂರೈಕೆ
ತುಮಕೂರು, ತಿಪಟೂರು, ರಾಮನಗರ, ಮಂಡ್ಯದ ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ಹಿರಿಯೂರು, ಅರಸೀಕೆರೆ, ಬೆಂಗ ಳೂರಿನ ದಾಸನಪುರ, ಯಶವಂತಪುರ, ಹಾಸನ, ಚಿತ್ರದುರ್ಗ, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದ ಕುಂದಾಪುರ, ಕುಮಟಾ, ಹೊನ್ನಾವರ ಸೇರಿದಂತೆ ರಾಜ್ಯದ 226೬ ಪ್ರಮುಖ ಎಪಿಎಂಸಿ ಮಂಡಿಗಳಿಗೆ ಅಕ್ಟೋಬರ್ ಮೊದಲ ವಾರದಲ್ಲೇ ಟನ್‌ಗಟ್ಟಲೆ ತೆಂಗಿನಕಾಯಿ ಪೂರೈಕೆಯಾಗುತ್ತಿದೆ.
ಬೆಳೆಗಾರರಿಗೆ ನಷ್ಟ
ಕಳೆದ ವರ್ಷ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಒಂದು ತೆಂಗಿನ ಕಾಯಿಯ ಬೆಲೆ 60 ರಿಂದ 70 ರುಪಾಯಿ ವರೆಗೆ ಮಾರಾಟವಾಗುತ್ತಿತ್ತು. ಪ್ರಸ್ತುತ ಬೆಲೆ ಕುಸಿತದ ಪರಿಣಾಮ ಚಿಲ್ಲರೆ ಅಂಗಡಿಗಳಲ್ಲಿ ಗುಣ ಮಟ್ಟದ ಒಂದು ತೆಂಗಿನಕಾಯಿ 20 ರಿಂದ 30 ರುಪಾಯಿಗೆ ಲಭ್ಯವಾಗುತ್ತಿದ್ದು, ಗ್ರಾಹಕರಿಗೆ ತುಸು ಹೊರೆ ಕಡಿಮೆಯಾಗಿದೆ. ಆದರೆ ಬೆಳೆಗಾರರಿಗೆ ನಷ್ಟ ಆದಂತಾಗಿದೆ. ಡಿಸೆಂಬರ್ ನಂತರ ಆವಕ ಕಡಿಮೆಯಾದರೆ ದರ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತೆಂಗಿನ ಕಾಯಿ ಮಂಡಿ ವರ್ತಕರು ತಿಳಿಸಿದ್ದಾರೆ.
![]()
ಸರಕಾರವು ತೆಂಗಿನಕಾಯಿ ಖರೀದಿಗೆ ಬೆಂಬಲ ಬೆಲೆ ಘೋಷಿಸುವ ಅಗತ್ಯವಿದೆ ಹಾಗೂ ರೈತರ ಹಿತದೃಷ್ಟಿಯಿಂದ ಸರಕಾರವೇ ತೆಂಗಿನಕಾಯಿ ನೇರ ಖರೀದಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು.
-ರಂಗಸ್ವಾಮಿ, ರೈತ