Nikhil Kumaraswamy: ಜೆಡಿಎಸ್ ಭವಿಷ್ಯ ಭದ್ರವಾಗಿದೆ, ಸುಭದ್ರವಾಗಿದೆ- ನಿಖಿಲ್ ಕುಮಾರಸ್ವಾಮಿ
Nikhil Kumaraswamy: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಬುಕ್ಕಾಪಟ್ಟಣದಲ್ಲಿ ನಡೆದ ಎರಡನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ತುಮಕೂರು: ಜೆಡಿಎಸ್ ಭವಿಷ್ಯದ ಬಗ್ಗೆ ಯಾರು ತಲೆ ಕೆಡಿಸಕೊಳ್ಳಬೇಕಾಗಿಲ್ಲ ಭದ್ರವಾಗಿದೆ ಸುಭದ್ರವಾಗಿದೆ ಅದು ಕಾರ್ಯಕರ್ತರ ಕೈಯಲ್ಲಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು. ತುಮಕೂರಿನ ಚಿಕ್ಕನಾಯಕನಹಳ್ಳಿಯ ಬುಕ್ಕಾಪಟ್ಟಣದಲ್ಲಿ ಆಯೋಜಿಸಲಾಗಿದ್ದ ಎರಡನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ನಾಯಕರನ್ನು ಬೆಳಸುವಂತಹ ಕಾರ್ಯಕರ್ತರಿದ್ದಾರೆ. ಎಷ್ಟೋ ಜನ ದೊಡ್ಡ ದೊಡ್ಡ ನಾಯಕರು ನಮ್ಮ ಪಕ್ಷದಿಂದ ಬೆಳೆದು ಬೇರೆ ಪಕ್ಷಕ್ಕೆ ಹೋಗಿರುವ ಇತಿಹಾಸ ಇದೆ. ನಾಯಕರ ಫ್ಯಾಕ್ಟರಿಯನ್ನು ಸೃಷ್ಟಿ ಮಾಡುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಸಾಲಕ್ಕೆ ಸಿಲುಕಿದೆ. ಯಾವುದಾದರೂ ಉಪಚುನಾವಣೆ ಮತ್ತು ಎಂಪಿ ಚುನಾವಣೆ ಬರಲಿ ಅಂತ ಕಾಯ್ತಿದ್ದಾರೆ. ಆಗ ಗ್ಯಾರಂಟಿ ಹಣ ಹಾಕ್ತಾರೆ. ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಹೊಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅವರ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಯನ್ನು ಪ್ರತಿ ತಿಂಗಳು ಕೊಡ್ತೀವಿ ಎಂದು ಮಾತು ಕೊಟ್ಟಿದ್ರು. ಇವತ್ತು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ರಾಜ್ಯದ ಜನತೆಗೆ ಐದು ಗ್ಯಾರಂಟಿ ಯೋಜನೆ ಹೋಗ್ತಿಲ್ಲ ಎಂದು ಅವರು ದೂರಿದರು.
ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಅಭಿವೃದ್ಧಿ ಕಾಣುತ್ತಿಲ್ಲ
ಗ್ಯಾರಂಟಿ ಯೋಜನೆ ಜನಕ್ಕೆ ತಲುಪುತ್ತಿಲ್ಲ ಇದು ರಾಜ್ಯದ ಜನರ ಅಭಿಪ್ರಾಯ. ಗ್ಯಾರಂಟಿ ಕೊಡುವುದು ತಪ್ಪು ಅಂತ ಹೇಳ್ತಿಲ್ಲ. ಗ್ಯಾರಂಟಿ ಜತೆಗೆ ಅಭಿವೃದ್ಧಿ ಮಾಡಿ. ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಅಭಿವೃದ್ಧಿ ಕಾಣುತ್ತಿಲ್ಲ. ಕಳೆದ ಎರಡು ವರ್ಷದಲ್ಲಿ ಎಷ್ಟು ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜನರೊಂದಿಗೆ ಜನತಾದಳ ಅಭಿಯಾನವನ್ನು ರಾಜ್ಯವ್ಯಾಪಿ ಎರಡನೇ ದಿನಕ್ಕೆ ಕಾಲಿಟ್ಟಿದ್ದೇವೆ. ವಿಶೇಷವಾಗಿ ಬುಕ್ಕಾಪಟ್ಟಣ ಜನತಾದಳ ಪಕ್ಷಕ್ಕೆ ಆಶೀರ್ವಾದ ಮಾಡಿದ ಕ್ಷೇತ್ರ. ಈಗಾಗಲೇ ಸದಸ್ಯತ್ವ ನೋಂದಣಿ ರಾಜ್ಯವ್ಯಾಪಿ ನಡೆಯುತ್ತಿದೆ. ಈಗಾಗಲೇ 1.50 ಲಕ್ಷ ಜನ ಪಕ್ಷದ ಸಕ್ರಿಯ ಸದಸ್ಯರಾಗಿದ್ದಾರೆ. ಇಡೀ ರಾಜ್ಯದ ಜನತೆ, ನಮ್ಮ ಪಕ್ಷದ ಕಾರ್ಯಕರ್ತರು ಉತ್ಸಾಹಕತೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Nikhil Kumaraswamy: 2028ರವರೆಗೆ ಯಾರೂ ಹಾರ-ತುರಾಯಿ ತರಬೇಡಿ; ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಮನವಿ
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಶಿರಾ ಉಗ್ರೇಶ್, ತುಮಕೂರು ಜಿಲ್ಲಾಧ್ಯಕ್ಷ ಅಂಜಿನಪ್ಪ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ರಾಮಚಂದ್ರು, ಎಸ್.ಆರ್. ಗೌಡ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.