ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜೀವಕ್ಕಿಂತ ರೀಲ್ಸ್‌ ಹೆಚ್ಚಾಯ್ತಾ? ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದವನ ಪ್ರಾಣ ಕಸಿದ ವಿಡಿಯೊ ಹುಚ್ಚು

ಹರಿದ್ವಾರದಲ್ಲಿ 40 ವರ್ಷದ ವಿಕಾಸ್ ಎಂಬ ವ್ಯಕ್ತಿ ಗಂಗಾನದಿಯಲ್ಲಿ ಸ್ನಾನ ಮಾಡುವಾಗ ಕಂಬಿಬೇಲಿಯನ್ನು ದಾಟಿ ಮುಂದೆ ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆತನ ಸ್ನೇಹಿತ ಈ ಭೀಕರ ದೃಶ್ಯವನ್ನು ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೀವ ತೆಗೆದ ರೀಲ್ಸ್‌ ಕ್ರೇಜ್‌; ವಿಡಿಯೊ ನೋಡಿ

Profile pavithra Jun 18, 2025 7:03 PM

ಡೆಹ್ರಡೂನ್: ರೀಲ್ಸ್‌ ಕ್ರೇಜ್‍ನಿಂದಾಗಿ ಇತ್ತೀಚಿನ ದಿನಗಳಲ್ಲಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ರೀಲ್ಸ್ ಮಾಡಲು ಚಲಿಸುತ್ತಿರುವ ರೈಲಿನಲ್ಲಿ ನೇತಾಡುವುದು, ಹಳೆ ಕಟ್ಟಡದಿಂದ ಜಿಗಿಯುವುದು, ಹಾವಿಗೆ ಕಿಸ್ ಕೊಡುವುದು, ಬೈಕ್‌ನಲ್ಲಿ ಸ್ಟಂಟ್ ಮಾಡುವುದು ಹೀಗೆ ಹಲವು ಅಪಾಯಕಾರಿ ಕೃತ್ಯಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇದೀಗ ಹರಿದ್ವಾರದಲ್ಲಿ ರೀಲ್ ಕ್ರೇಜ್‌ (Reel Craze)ನಿಂದಾಗಿ ವ್ಯಕ್ತಿಯೊಬ್ಬ ಗಂಗಾನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆತನ ಸ್ನೇಹಿತ ಆ ಭೀಕರ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಗೋವಿಂದಪುರಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ 40 ವರ್ಷದ ವಿಕಾಸ್ ಎಂದು ಗುರುತಿಸಲಾಗಿದ್ದು, ಅವನು ತನ್ನ ಸ್ನೇಹಿತರೊಂದಿಗೆ ಉತ್ತರಾಖಂಡಕ್ಕೆ ಬಂದಿದ್ದ. ಆ ವೇಳೆ ವಿಕಾಸ್ ಪವಿತ್ರವಾದ 'ಗಂಗಾ ಸ್ನಾನ' ಮಾಡಲು ನದಿಗೆ ಹೋದಾಗ, ಅವನು ಕಂಬಿಬೇಲಿಯನ್ನು ದಾಟಿದ್ದಾನೆ. ಇದರಿಂದ ನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿ ಮುಳುಗಿ ಸಾವನ್ನಪ್ಪಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...

ಪೊಲೀಸ್ ವರದಿ ಪ್ರಕಾರ, ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ವ್ಯಕ್ತಿಯ ಸುಳಿವು ಪತ್ತೆಯಾಗಿರಲಿಲ್ಲ. 24 ಗಂಟೆಗಳ ನಂತರ ಪೊಲೀಸರು ಪತ್ರಿ ಪವರ್ ಹೌಸ್ ಬಳಿ ಶವವನ್ನು ಹೊರತೆಗೆದಿದ್ದಾರೆ. ನಂತರ ಪೊಲೀಸರು ಕುಟುಂಬ ಸದಸ್ಯರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ವೇಳೆ ವಿಕಾಸ್ ಸ್ನಾನ ಮಾಡುತ್ತಾ ಸುರಕ್ಷತಾ ರೇಖೆಯನ್ನು ದಾಟುತ್ತಿರುವುದನ್ನು ಆತನ ಸ್ನೇಹಿತರು ನೋಡಿದ್ದಾರೆಂದು ವರದಿಯಾಗಿದೆ. ಆದರೆ ನೀರಿಗೆ ಹಾರಿ ವಿಕಾಸ್‌ನನ್ನು ರಕ್ಷಿಸುವ ಬದಲು ರೀಲ್‌ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ಘಟನೆಯ ವಿಡಿಯೊ ಸೊಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ:Viral Video: ಅಂಗಡಿಯ ನೇಮ್ ಬೋರ್ಡ್‌ನಲ್ಲಿ ಕನ್ನಡವಿಲ್ಲವೆಂದು ಕ್ಯಾತೆ ತೆಗೆದ ಹಿರಿಯ ನಾಗರಿಕ

ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ರೀಲ್ಸ್ ಮಾಡಲು ಹಾರಿದ್ದ 27 ವರ್ಷದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿದ್ದ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಮೃತಪಟ್ಟ ಯುವಕನನ್ನು ಹರಿದ್ವಾರದ ಭದ್ರಾಬಾದ್‌ನ ಗಂಧ್ಮೀರ್‌ಪುರದ ಆಶಿಶ್ ಚೌಹಾಣ್ ಎಂದು ಗುರುತಿಸಲಾಗಿತ್ತು.