ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹುಲಿಯ ಮೇವಿಗೆ ವಿಷವಿಕ್ಕಿದ್ದೇಕೆ ?: ಮಾನವನ ಕ್ರೂರತ್ವಕ್ಕೆ ಬಲಿಯಾದ ರಾಷ್ಟ್ರೀಯ ಪ್ರಾಣಿ

ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಪ್ರಕಾರ, 20ನೇ ಶತಮಾನದಲ್ಲಿ ವಿಶ್ವದಲ್ಲಿ ಸುಮಾರು 100000 ಹುಲಿಗಳು ಇದ್ದವು. ಆದರೆ, ಇಂದು ಈ ಸಂಖ್ಯೆ 5000ರಿಂದ 6000ರೊಳಗೆ ಕುಸಿದಿದೆ. ಹುಲಿಯ 9‌ ಪ್ರಭೇದಗಳಲ್ಲಿ ಈಗ ಕೇವಲ 6 ಪ್ರಭೇದದ ಹುಲಿಗಳು ಮಾತ್ರ ಉಳಿದಿವೆ.

ಹುಲಿಯ ಮೇವಿಗೆ ವಿಷವಿಕ್ಕಿದ್ದೇಕೆ ?

Profile Ashok Nayak Jun 28, 2025 12:52 PM

ಚಂದ್ರಶೇಖರ್‌ ಚೌಗಲಾ

ಹುಲಿ ಅರಣ್ಯದ ರಾಜ, ಶಕ್ತಿಯ ಸಂಕೇತ, ಧೈರ್ಯದ ಧ್ವನಿ. ಇದಕ್ಕಿಂತಲೂ ಹೆಚ್ಚಾಗಿ, ಹುಲಿ ಪ್ರಕೃತಿಯ ಸಮತೋಲನವನ್ನು ಕಾಯುವ ಒಂದು ಜೀವಂತ ತಂತ್ರಜಾಲದ ಮುಖ್ಯ ಭಾಗ. ಪ್ರಕೃತಿಯ ಆರೋಗ್ಯ, ಅರಣ್ಯಗಳ ಆಯಸ್ಸು ಮತ್ತು ನದಿಗಳ ಹರಿವು ಇವೆಲ್ಲವುಗಳಿಗೂ ಹುಲಿ ಗಳಿಗೂ ನೇರವಾದ ಸಂಬಂಧ ಹೊಂದಿದೆ. ಅಂತಹ ಪ್ರಾಮುಖ್ಯತೆ ಇರುವ ಹುಲಿ ಗಳನ್ನು ಚಾಮರಾಜನಗರ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಸಾಯಿಸಿರುವ ಘಟನೆ ಇಡೀ ನಾಡೇ ತಲೆತಗ್ಗಿಸುವಂತೆ ಮಾಡಿದೆ. ಮಲೆ ಮಹದೇಶ್ವರರ ವಾಹನವೆಂದೇ ಪೂಜಿಸುವ ಹುಲಿಯನ್ನು ಬೆಟ್ಟದ ಸನ್ನಿಧಿಯ ಹುಲಿಗಳಿಗೆ ವಿಷ ಹಾಕಿ ಸಾಯಿಸಿರುವುದು ಮನುಷ್ಯನ ಕ್ರೂರತೆಗೆ ಸಾಕ್ಷಿ. ’ಹುಲಿ ಸತ್ತರೆ ಅಡವಿ ಅಳುತ್ತದೆ, ಅಡವಿ ಅತ್ತರೆ ನಾಡೇ ಅಳುತ್ತದೆ’ ಎಂಬ ಮಾತು ಹುಲಿಯ ಅಸ್ತಿತ್ವದ ಪ್ರಾಮುಖ್ಯತೆ ತೋರುತ್ತದೆ. ಹಾಗಾದರೆ ಭಾರತದಲ್ಲಿ ಹುಲಿಗಳ ಪ್ರಾಮುಖ್ಯತೆ ಏನು? ಅವುಗಳ ಸಂಖ್ಯೆ ಎಲ್ಲೆಲ್ಲಿ? ಎಷ್ಟೆಷ್ಟಿದೆ? ಎಂಬ ಬಗ್ಗೆ ನೋಡೋಣ.

‘ಹುಲಿ’-ಶಕ್ತಿ, ಗರ್ವ ಮತ್ತು ಧೈರ್ಯದ ಪ್ರತೀಕ. ಭಾರತದ ರಾಷ್ಟ್ರಪ್ರಾಣಿ| ವಿಶ್ವ ಪರಿಸರದ ನೆಲೆಗಟ್ಟಿ ನಲ್ಲಿ ಮುಖ್ಯವಾದ ಪ್ರಾಣಿಯೂ ಹೌದು. ಆದರೆ, 19ನೇ ಶತಮಾನದಿಂದೀಚೆಗೆ ಕುಸಿಯುತ್ತಾ ಸಾಗಿದ ಹುಲಿ ಸಂತತಿ ಇತ್ತೀಚಿನ ಜಾಗತಿಕ ಸಂರಕ್ಷಣೆ ಕ್ರಮಗಳ ಬಳಿಕ ನಿಧಾನವಾಗಿ ಏರಿಕೆ ಕಾಣುತ್ತಿದೆ.

ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ( IUCN ) ಪ್ರಕಾರ, 20ನೇ ಶತಮಾನದಲ್ಲಿ ವಿಶ್ವದಲ್ಲಿ ಸುಮಾರು 100000 ಹುಲಿಗಳು ಇದ್ದವು. ಆದರೆ, ಇಂದು ಈ ಸಂಖ್ಯೆ 5000ರಿಂದ 6000ರೊಳಗೆ ಕುಸಿದಿದೆ. ಹುಲಿಯ 9‌ ಪ್ರಭೇದಗಳಲ್ಲಿ ಈಗ ಕೇವಲ 6 ಪ್ರಭೇದದ ಹುಲಿ ಗಳು ಮಾತ್ರ ಉಳಿದಿವೆ.

ಬಾಲಿ ಹುಲಿ, ಜಾವಾ ಹುಲಿ ಮತ್ತು ಕ್ಯಾಸ್ಪಿಯನ್ ಹುಲಿ ಈಗ ನಾಶವಾಗಿದೆ. ಭಾರತವು ವಿಶ್ವದ ಅತಿದೊಡ್ಡ ಹುಲಿಗಳ ಸಂಖ್ಯೆ ಹೊಂದಿರುವ ದೇಶವಾಗಿದ್ದು, 2022ರ ಹುಲಿ ಗಣತಿ ಪ್ರಕಾರ 3682 ಹುಲಿಗಳಿವೆ. ಇದು ವಿಶ್ವದ ಒಟ್ಟು ಹುಲಿಗಳ ಸಂಖ್ಯೆಯ ಶೇ.75ಕ್ಕೂ ಹೆಚ್ಚು.

ಹುಲಿಯ ಪ್ರಾಮುಖ್ಯತೆ

ಹುಲಿ ಪ್ರಕೃತಿಯ ಸಮತೋಲನ ಕಾಯುವ ಅತ್ಯಂತ ಪ್ರಮುಖ ಪ್ರಾಣಿ. ಇದು ಅರಣ್ಯದ ಶೃಂಖಲಾ ಶಿಖರ ಮೃಗವಾಗಿದ್ದು, ಆಹಾರ ಸರಪಳಿಯ ತುದಿಯಲ್ಲಿ ಇರುತ್ತದೆ. ಹುಲಿ ಇದ್ದರೆ ಅದು ಜಿಂಕೆ, ಕಾಡೆಮ್ಮೆ ಮುಂತಾದ ಹುಲ್ಲು ತಿನ್ನುವ ಪ್ರಾಣಿಗಳನ್ನು ನಿಯಂತ್ರಿಸುತ್ತದೆ. ಇವು ನಿಯಂತ್ರಣ ದಲ್ಲಿದ್ದರೆ ಮಾತ್ರ ಅರಣ್ಯದ ಹಸಿರು ಉಳಿಯುತ್ತದೆ. ಈ ಮೂಲಕ ಹುಲಿ ನೇರವಾಗಿ ಅರಣ್ಯ ಸಂರಕ್ಷಣೆಗೆ ಕಾರಣವಾಗುತ್ತದೆ. ಒಟ್ಟಾರೆ ಹುಲಿ ಅರಣ್ಯದ ಆರೋಗ್ಯವನ್ನು ಪ್ರತಿಬಿಂಬಿಸುವ ಸೂಚಕ. ಹುಲಿ ಉಳಿದರೆ ಅಡವಿಯ ಜೀವಜಾಲವೂ ಉಳಿಯುತ್ತದೆ. ಅರಣ್ಯ ಉಳಿದರೆ ನದಿಗಳು ಹರಿಯುತ್ತವೆ, ಮಳೆ ಸಮತೋಲನದಲ್ಲಿರುತ್ತದೆ, ಜೈವವೈವಿಧ್ಯತೆ ಕಾಪಾಡಲ್ಪಡುತ್ತದೆ. ಹೀಗಾಗಿ ಹುಲಿಯೆಂದರೆ ಕೇವಲ ಒಂದು ಪ್ರಾಣಿ ಅಲ್ಲ, ಅದು ಪ್ರಕೃತಿಯ ಜೀವಂತ ಸಂಕೇತ.

ಟಾಪ್ 10 ರಾಜ್ಯಗಳು

ಈ ಹಿಂದೆ ಹುಲಿ ಮತ್ತು ಆನೆಗಳ ಸಂತತಿಯಲ್ಲಿ ಕರ್ನಾಟಕವೇ ಪ್ರಥಮ ಸ್ಥಾನದಲ್ಲಿತ್ತು. ಆದರೆ ಕಳೆದ ಎರಡು ಬಾರಿಯ ಜನಗಣತಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಧ್ಯಪ್ರದೇಶ ಅಗ್ರ ಸ್ಥಾನದಲ್ಲಿದೆ. ಇಲ್ಲಿನ ವಿಸ್ತಾರವಾದ ಕಾಡುಗಳು ಹುಲಿಗಳ ವಾಸಕ್ಕೆ ಯೋಗ್ಯವಾಗಿದ್ದು, ಇಲ್ಲಿ ಒಟ್ಟು 785 ಹುಲಿಗಳಿವೆ.

ಎರಡನೇ ಸ್ಥಾನದಲ್ಲಿ ಕರ್ನಾಟಕ ಇದ್ದು, ಒಟ್ಟು 563 ಹುಲಿಗಳಿವೆ. ಇಲ್ಲಿನ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹುಲಿಗಳಿಗೆ ವಾಸಯೋಗ್ಯ ಸ್ಥಾನವಾಗಿವೆ. ಉತ್ತರಾಖಂಡ ಮೂರನೇ ಸ್ಥಾನದಲ್ಲಿದ್ದರೆ, ನಾಲ್ಕನೇ ಸ್ಥಾನದಲ್ಲಿ ಮಹಾರಾಷ್ಟ್ರ, ಐದನೇ ಸ್ಥಾನದಲ್ಲಿ ತಮಿಳು ನಾಡು, ಆರನೇ ಸ್ಥಾನದಲ್ಲಿ ಕೇರಳ, 7ನೇ ಸ್ಥಾನದಲ್ಲಿ ಅಸ್ಸಾಂ, 8ನೇ ಸ್ಥಾನದಲ್ಲಿ ರಾಜಸ್ಥಾನ, 9ನೇ ಸ್ಥಾನದಲ್ಲಿ ಒಡಿಶಾ, 10ನೇ ಸ್ಥಾನದಲ್ಲಿ ಛತ್ತೀಸಗಢ ಇದೆ.

4 ವರ್ಷಗಳಿಗೊಮ್ಮೆ ಹುಲಿ ಗಣತಿ

ಭಾರತದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸಲಾಗುತ್ತಿದೆ. ದೇಶಾದ್ಯಂತ ಈಗಾಗಲೇ ಐದು ಆವೃತ್ತಿಗಳಲ್ಲಿ ಹುಲಿ ಗಣತಿ ನಡೆದಿದೆ ನಾಲ್ಕು ವರ್ಷದ ಹಿಂದೆ ಅಂದರೆ 2022ರಲ್ಲಿ ಭಾರತಾ ದ್ಯಂತ ಹುಲಿ ಗಣತಿ ನಡೆಸಲಾಗಿತ್ತು. 2022ರ ಗಣತಿಯಲ್ಲಿ 3682 ಹುಲಿಗಳಿರುವುದು ಪತ್ತೆಯಾಗಿತ್ತು. ಆರನೇ ಆವೃತ್ತಿಯ ಹುಲಿ ಗಣತಿ ಮುಂದಿನ ವರ್ಷ ನಡೆಯಲಿದೆ, ಹುಲಿ ಗಣತಿ ನಡೆಯುವ ವರ್ಷದ ಮುನ್ನಾ ವರ್ಷ ಅರಣ್ಯ ಇಲಾಖೆ ಅಧಿಕಾರಿಗಳು. ಸಿಬ್ಬಂದಿ, ಸ್ವಯಂ ಸೇವಾ ಸಂಘಟನೆ ಪ್ರಮುಖರು, ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತದೆ. ಅದು ಸದ್ಯದ ಎಲ್ಲ ರಾಜ್ಯಗಳಲ್ಲಿ ಶುರುವಾಗಲಿದೆ.

ಹುಲಿ ಸಾವಿಗೆ ತಡೆ

2010ರಲ್ಲಿ ಜಾಗತಿಕವಾಗಿ ಹುಲಿಗಳ ಸಂಖ್ಯೆ ಸುಮಾರು 3200 ಇದ್ದದ್ದು 2024ರಲ್ಲಿ ಸುಮಾರು 5500ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ವನ್ಯಜೀವಿ ನಿಽ (ಡಬ್ಲ್ಯುಡಬ್ಲ್ಯುಎಫ್) ತಿಳಿಸಿದೆ. ಚೀನಾ, ರಷ್ಯಾ, ಭಾರತ ಮತ್ತು ನೇಪಾಳ ಮುಂತಾದ ದೇಶಗಳಲ್ಲಿ ಕೂಡ ಹುಲಿಗಳ ಸಂಖ್ಯೆ ದ್ವಿಗುಣ‌ ಗೊಂಡಿದೆ ಅದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಬಿಗಿ ಸಂರಕ್ಷಣೆ ಕ್ರಮಗಳಿಂದ ಹುಲಿಗಳ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಇದರಿಂದ ಕಳೆದ ದಶಕದಲ್ಲಿ ಹುಲಿಗಳ ಸಂಖ್ಯೆ ಏರಿಕೆ ಯಾಗಿದೆ. ಚೀನಾದಲ್ಲಿ ಕಾಡು ಹುಲಿಗಳ ಆವಾಸಸ್ಥಾನಗಳನ್ನು ಪರಿಣಾಮಕಾರಿಯಾಗಿ ಪುನಃ ಸ್ಥಾಪಿಸಲಾಗಿದೆ ಮತ್ತು ಸುಧಾರಿಸಲಾಗಿದೆ. ಇದು ಕಾಡು ಹುಲಿಗಳ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಡಬ್ಲ್ಯುಡಬ್ಲ್ಯುಎಫ್ ತಿಳಿಸಿದೆ.

ರಾಜ್ಯದಲ್ಲಿವೆ 563 ಹುಲಿಗಳು

2022ರ ಹುಲಿ ಗಣತಿ ಪ್ರಕಾರ ರಾಜ್ಯದಲ್ಲಿ 563 ಹುಲಿಗಳಿವೆ. ಈ ಪೈಕಿ 393 ಹುಲಿಗಳು ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿವೆ ಎಂದು ರಾಜ್ಯದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ (ಬಿಆರ್ ಟಿ) ಮತ್ತು ಕಾಳಿ (ದಾಂಡೇಲಿ-ಅಣಶಿ) ಅಭಯಾರಣ್ಯದಲ್ಲಿ 2023ರ ನವೆಂಬರ್ ಮತ್ತು ೨೦೨೪ರ -ಬ್ರವರಿ ಮಧ್ಯೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸ‌ ಲಾಗಿದೆ.

ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಕಡಿಮೆ

2014ರಿಂದ ಹುಲಿ ಸಮೀಕ್ಷೆ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಏರಿಕೆಯಾಗಿದೆ. 2019ರಲ್ಲಿ 290 ಇದ್ದ ಹುಲಿಗಳ ಸಂಖ್ಯೆ 2010ರಲ್ಲಿ 300, 2014ರಲ್ಲಿ 406, 2018ರಲ್ಲಿ 524 ಇದ್ದು 2022ರಲ್ಲಿ 563ಕ್ಕೆ ಏರಿಕೆ ಕಂಡು ಬಂದಿದೆ. ಆದರೆ 2018ರಿಂದ 2022ರ ನಡುವೆ ಏರಿಕೆ ಪ್ರಮಾಣ ಅತ್ಯಲ್ಪ ಎನ್ನುವುದು ಗಮನಾರ್ಹ. ಈ ಮಧ್ಯೆ ಮೂರನೇ ಸ್ಥಾನದಲ್ಲಿದ್ದ ಉತ್ತರಾಖಂಡದಂತಹ ರಾಜ್ಯವು ಕರ್ನಾಟಕದ ಸಮೀಪಕ್ಕೆ ಬಂದು ನಿಂತಿದೆ.

ಭಾರತ ಹುಲಿಗಳಿಗೆ ನೆಲೆಬೀಡು

ಭಾರತದಲ್ಲಿ ಹುಲಿ ಸಂರಕ್ಷಣಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದೆ. 2006ರಲ್ಲಿ 1410ರಷ್ಟಿದ್ದ ಹುಲಿಗಳ ಸಂಖ್ಯೆ ಈಗ 3682ಕ್ಕೆ ಹೆಚ್ಚಳವಾಗಿರುವುದು ಸಂತೋಷದ ವಿಷಯ. ದೇಶದ ಶಿವಾಲಿಕ್ ಪ್ರದೇಶದಲ್ಲಿ ವ್ಯಾಘ್ರ ಸಂತತಿಯಲ್ಲಿ ಹೆಚ್ಚಳ ವಾಗಿರುವುದು ಇದಕ್ಕೆ ಕಾರಣ. ಇಷ್ಟಾದರೂ ಕಳ್ಳಬೇಟೆ, ವನ್ಯಜೀವಿ ಸಂಘರ್ಷದ ಕಾರಣಗಳಿಂದ ಆಗಾಗ ಹುಲಿಗಳ ಸಾವಿನ ವರದಿಗಳು ಬರುತ್ತಲೇ ಇವೆ. 2022ರ ಅಖಿಲ ಭಾರತ ಹುಲಿ ಗಣತಿ ಪ್ರಕಾರ ಮಧ್ಯಪ್ರದೇಶ ರಾಜ್ಯದಲ್ಲಿ ಅತ್ಯಧಿಕ ಹುಲಿಗಳಿವೆ. ಕರ್ನಾಟಕ ಮತ್ತು ಉತ್ತರಾಖಂಡ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ದೇಶದ ಶಿವಾಲಿಕ್ ಪ್ರದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಅಂಕಿ ಅಂಶಗಳ ಪ್ರಕಾರ, 2006ರಲ್ಲಿ ದೇಶದಲ್ಲಿನ ಹುಲಿಗಳ ಸಂಖ್ಯೆ 1411 ಆಗಿತ್ತು. 2010ರ ಗಣತಿಯಲ್ಲಿ 1706 ಆಗಿದೆ. 2014ರ ದತ್ತಾಂಶಗಳ ಪ್ರಕಾರ 2226 ಆಗಿದ್ದರೆ 2018ರಲ್ಲಿ 2967ಕ್ಕೆ ಏರಿಕೆಯಾಗಿದೆ. 2022ರಲ್ಲಿ ನಡೆಸಿದ್ದ ಗಣತಿಯಲ್ಲಿ 3682 ಹುಲಿಗಳಿವೆ.

ಹುಲಿಗಳ ಸಾವಿಗೆ ಪ್ರಮುಖ ಕಾರಣಗಳು

ಅಭಿವೃದ್ಧಿ ಯೋಜನೆಗಳು, ಕೃಷಿಭೂಮಿಯ ವಿಸ್ತರಣೆ ಕಾರಣಗಳಿಂದ ಹುಲಿಗಳು ನೈಸರ್ಗಿಕ ವಾಸಸ್ಥಾನವನ್ನು ಕಳೆದುಕೊಳ್ಳುತ್ತಿದ್ದು, ಮಾನವನ ವಾಸಸ್ಥಾನದತ್ತ ನುಗ್ಗುತ್ತಿವೆ.ಹುಲಿಗಳ ಚರ್ಮ, ಎಲುಬು, ಹಲ್ಲು ಔಷಧಿಯ ಮೌಲ್ಯ ಹೊಂದಿದೆ ಎಂದು ನಂಬಲಾಗುತ್ತದೆ. ಪರಿಣಾಮವಾಗಿ ಹುಲಿಗಳ ಕಳ್ಳ ಬೇಟೆ ಜಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ.

ಮನುಷ್ಯ ಮತ್ತು ಹುಲಿಗಳ ನಡುವೆ ಭೌಗೋಳಿಕ ಅಂತರ ಕಡಿಮೆಯಾದಂತೆ ಸಂಘರ್ಷಗಳು ಹೆಚ್ಚಾಗುತ್ತಿವೆ. ಆಹಾರಕ್ಕಾಗಿ ಗ್ರಾಮಾಂತರ ಪ್ರದೇಶಕ್ಕೆ ನುಗ್ಗಿದ ಹುಲಿಗಳನ್ನು ಸ್ಥಳೀಯರು ಕೊಲ್ಲು ತ್ತಿದ್ದಾರೆ. ಹುಲಿಗಳು ಕೂಡ ವೈರಸ್‌ಗಳಿಗೆ ತುತ್ತಾಗಿ ಸಾಯುತ್ತವೆ. ಉದಾಹರಣೆಗೆ, ಕ್ಯಾನೈನ್ ಡಿಸ್ಟೆಂಪರ್ ವೈರಸ್ ( CD) ಎಂಬುದು ಅನೇಕ ಹುಲಿಗಳ ಸಾವಿಗೆ ಕಾರಣವಾಗಿದೆ.