Actor Darshan: ಇಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ
Actor Darshan: ಡಿಸೆಂಬರ್ 2024ರಲ್ಲಿ ದರ್ಶನ್‌ಗೆ ಹೈಕೋರ್ಟ್ ಶರತ್ತುಬದ್ಧ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ. ಕೊಲೆಯಲ್ಲಿ ದರ್ಶನ್ ಪಾತ್ರದ ಬಗ್ಗೆ ಕೋರ್ಟ್‌ಗೆ ಇನ್ನಷ್ಟು ಮಾಹಿತಿಯನ್ನು ವಕೀಲರ ಮೂಲಕ ಪೊಲೀಸರು ನೀಡಲಿದ್ದಾರೆ.


ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ನಟ ದರ್ಶನ್ (Actor Darshan) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಡೆಯಲಿದ್ದು, ದರ್ಶನ್ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಇತರ 7 ಆರೋಪಿಗಳಿಗೆ ನೀಡಲಾಗಿರುವ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಡಿಸೆಂಬರ್ 2024ರಲ್ಲಿ ದರ್ಶನ್‌ಗೆ ಹೈಕೋರ್ಟ್ ಶರತ್ತುಬದ್ಧ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.
ನ್ಯಾ. ಜೆ.ಬಿ ಪಾರ್ದ್ರಿವಾಲಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು ವಿಸ್ತೃತ ವಾದ ಆಲಿಸುವ ಸಾಧ್ಯತೆ ಇದೆ. ಕಳೆದ ವಿಚಾರಣೆಯಲ್ಲಿ ಪ್ರಕರಣದ ಬಗ್ಗೆ ಪ್ರಾಥಮಿಕ ವಿಚಾರಣೆಯನ್ನು ಕೋರ್ಟ್ ಆಲಿಸಿತ್ತು. ಪ್ರಕರಣದಲ್ಲಿ ದರ್ಶನ ಪಾತ್ರ ಏನು? ಪವಿತ್ರಾ ಗೌಡ ಯಾರು, ಈಕೊಲೆಗೆ ಹೇಗೆ ಸಂಬಂಧ ಹಾಗೂ ದರ್ಶನ ಅಭಿಮಾನಿಗಳು ಬೆಂಬಲಿಗರನ್ನು ಹೇಗೆ ಹತ್ಯೆ ಮಾಡಿದರು ಎಂಬುದರ ಬಗ್ಗೆ ಪೊಲೀಸರ ಪರ ವಕೀಲರಿಂದ ವಾದ ಕೇಳಿತ್ತು. ಕೊಲೆಯಲ್ಲಿ ದರ್ಶನ್ ನೇರ ಹಸ್ತಕ್ಷೇಪ ಅದಕ್ಕೆ ಪೂರಕವಾದ ಸಾಕ್ಷ್ಯಗಳ ಬಗ್ಗೆ ಮಾಹಿತಿ ಕೇಳಿತ್ತು. ಇಂದು ಈ ವಾದ ಮುಂದುವರಿಯಲಿದ್ದು ದರ್ಶನ್ ಪಾತ್ರದ ಬಗ್ಗೆ ಕೋರ್ಟ್‌ಗೆ ಇನ್ನಷ್ಟು ಮಾಹಿತಿಯನ್ನು ವಕೀಲರ ಮೂಲಕ ಪೊಲೀಸರು ನೀಡಲಿದ್ದಾರೆ.
ಜಾಮೀನಿಗೆ ವಿಧಿಸಲಾಗಿದ್ದ ಶರತ್ತುಗಳಲ್ಲಿ ರಾಜ್ಯ ಬಿಟ್ಟು ಹೋಗಬಾರದು ಎನ್ನಲಾಗಿತ್ತು. ನಂತರ ಅದಕ್ಕೆ ದರ್ಶನ್ ವಿನಾಯಿತಿ ಪಡೆದಿದ್ದಾರೆ. ಕೋರ್ಟ್‌ನಿಂದ ವಿಶೇಷ ಅನುಮತಿ ಪಡೆದು ತಮ್ಮ ಫಿಲಂ ಚಿತ್ರೀಕರಣಕ್ಕಾಗಿ ವಿದೇಶಕ್ಕೂ ಹೋಗಿದ್ದಾರೆ. 2024ರ ಜೂನ್ನಲ್ಲಿ ರೇಣುಕಾಸ್ವಾಮಿ ಶವ ಪತ್ತೆ ಆದ ನಂತರ ದರ್ಶನ್ ಹಾಗೂ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿತ್ತು. ಕಡೆಗೂ 2024ರ ಡಿಸೆಂಬರ್ನಲ್ಲಿ ದರ್ಶನ್ ಜಾಮೀನು ಪಡೆದುಕೊಂಡಿದ್ದರು.