ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nandini Milk Booth: ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲಿನ ಮಳಿಗೆ ತೆರೆಯಲು ಮಂಜೂರಾತಿ ನೀಡಿ; ಬಿಎಂಆರ್‌ಸಿಎಲ್‌ಗೆ ಡಿ.ಕೆ.ಸುರೇಶ್‌ ಮನವಿ

DK Suresh: ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ, ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲ ವಿಸ್ತರಿಸಲು ಸಹಕಾರ ನೀಡುವಂತೆ ಕೋರಿದ್ದೇನೆ ಎಂದು ಬಮುಲ್‌ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್‌ ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲಿನ ಮಳಿಗೆ ತೆರೆಯಲು ಮಂಜೂರಾತಿ ನೀಡಿ

Profile Prabhakara R Jun 27, 2025 10:03 PM

ಬೆಂಗಳೂರು: ನಗರದ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆ (Nandini Milk Booth) ಪ್ರಾರಂಭಿಸಲು ಸ್ಥಳ ಮಂಜೂರಾತಿ ನೀಡಲು ಕೋರಿ ಬಿಎಂಆರ್‌ಸಿಎಲ್‌ ಎಂಡಿ ಮಹೇಶ್ವರರಾವ್‌ ಅವರಿಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮುಲ್) ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲ ವಿಸ್ತರಿಸಲು ಸಹಕಾರ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಕೋರಿದ್ದೇನೆ ಎಂದು ತಿಳಿಸಿದ್ದಾರೆ.

ಬಮುಲ್ ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಹಾಲು ಉತ್ಪಾದಕರ ಸಂಸ್ಥೆಯಾಗಿದೆ. ಪ್ರತಿದಿನ 18 ಲಕ್ಷ ಲೀಟರ್‌ಗೂ ಅಧಿಕ ಹಾಲು ಇಲ್ಲಿ ಸಂಗ್ರಹಣೆಯಾಗುತ್ತದೆ. ನಂದಿನಿ ಬ್ರ್ಯಾಂಡ್‌ಗೆ ಉತ್ತಮ ಮಾರುಕಟ್ಟೆಗಳನ್ನು ಸೃಷ್ಟಿಸಲು ಕೊಡುಗೆಗಳನ್ನು ನೀಡುತ್ತಿದೆ. ಹೀಗಾಗಿ, ಬಮುಲ್ ಅಧ್ಯಕ್ಷನಾಗಿ ನಂದಿನಿಯ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆಯಾಗುವಂತೆ ನೋಡಿಕೊಳ್ಳುವುದು ನನ್ನ ಹೊಣೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ, ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲ ವಿಸ್ತರಿಸಲು ಸಹಕಾರ ನೀಡುವಂತೆ ಕೋರಿದ್ದೇನೆ. ನಮ್ಮ ಮೆಟ್ರೋಗೆ ಸೇರಿರುವ ಖಾಲಿ ಜಾಗಗಳಲ್ಲಿ ನಂದಿನಿ ಮಾರಾಟ ಮಳಿಗೆ ಪ್ರಾರಂಭಿಸಲು ಸ್ಥಳ ಮಂಜೂರಾತಿ ಕೋರಿ ಈ ವೇಳೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.



ಮನವಿ ಪತ್ರದಲ್ಲೇನಿದೆ?

ಬೆಂಗಳೂರು ಸಹಕಾರ ಹಾಲು ಒಕ್ಕೂಟವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಹಾಲು ಉತ್ಪಾದಕರ ಸಹಕಾರ ಸಂಸ್ಥೆಯಾಗಿದ್ದು, ಒಕ್ಕೂಟದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ 2250 ಸಹಕಾರಿ ಸಂಘಗಳಿಂದ ಪ್ರತಿದಿನ ಸುಮಾರು 18 ಲಕ್ಷ ಲೀಟರ್‌ಗೂ ಮೇಲ್ಪಟ್ಟು ಹಾಲನ್ನು ಶೇಖರಿಸಿ, ಸಂಸ್ಕರಿಸಿ, 10 ಲಕ್ಷ ಲೀಟರ್‌ನಷ್ಟು ವಿವಿಧ ಮಾದರಿಯ ಶುದ್ದ ತಾಜಾ ಹಾಲು, 2 ಲಕ್ಷ ಕೆ.ಜಿ. ಮೊಸರು, ಬೆಣ್ಣೆ, ಪನ್ನೀರ್, ಪೇಡ, ಲಸ್ಸಿ, ಮೈಸೂರು ಪಾಕ್, ತುಪ್ಪ, ತುಪ್ಪದ ಲಾಡು ಇನ್ನು ಮುಂತಾದ ನಂದಿನಿ ಉತ್ಪನ್ನಗಳನ್ನು ತಯಾರಿಸಿ, ಬೆಂಗಳೂರು ನಗರ, ಮತ್ತು ಗ್ರಾಮೀಣ ಪ್ರದೇಶದ ನಾಗರಿಕರಿಗೆ ಸರಬರಾಜು ಮಾಡುತ್ತ ಮೆಚ್ಚುಗೆಗೆ ಪಾತ್ರವಾಗಿದೆ.

ಅಲ್ಲದೆ ಪ್ರಸ್ತುತ ಕನಕಪುರ ತಾಲೂಕಿನಲ್ಲಿ ಒಕ್ಕೂಟವು ಅತ್ಯಾಧುನಿಕ ತಂತ್ರಜ್ಞಾನವುಳ್ಳ ನಂದಿನಿ ಉತ್ಪನ್ನ ಘಟಕವನ್ನು ಸ್ಥಾಪಿಸಿ UHT ಹಾಲು ಮತ್ತು ಹಾಲಿನ ಪುಡಿ ಹಾಗೂ ಚೀಸ್ ಇನ್ನು ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ʼನಂದಿನಿʼ ಬ್ರ್ಯಾಂಡ್‌ನಲ್ಲಿ ದೇಶದ ವಿವಿಧ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ. ಜತೆಗೆ ಹೊರ ದೇಶಗಳಲ್ಲಿಯೂ ಸಹ ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲವನ್ನು ವಿಸ್ತರಿಸುವ ದೃಷ್ಟಿಯಿಂದ ಮೆಟ್ರೊ ನಿಲ್ದಾಣಗಳ ಮುಂಭಾಗದಲ್ಲಿ BMRCL ಇಲಾಖೆಗೆ ಸೇರಿದ ಖಾಲಿ ತೆರೆದ ಸ್ಥಳದಲ್ಲಿ ಒಕ್ಕೂಟದ ವೆಚ್ಚದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ವಿನ್ಯಾಸದಂತೆ ನಂದಿನಿ ಪಾರ್ಲರ್ ನಿರ್ಮಿಸಿ, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ನಂದಿನಿ ಪಾರ್ಲರ್ಗಳನ್ನು ತೆರೆಯಲು ಬೆಂಗಳೂರು ಮಹಾನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 10*10 ಚದರ ಅಡಿಗಳಲ್ಲಿ ಅಥವಾ ಲಭ್ಯವಿರುವಷ್ಟು ಅಳತೆಯಲ್ಲಿ ಖಾಲಿ ಸ್ಥಳಗಳನ್ನು ಇಲಾಖೆಯ ನಿಬಂಧನೆಗೊಳ್ಳಪಟ್ಟು ಕರ್ನಾಟಕ ಹಾಲು ಮಹಾ ಮಂಡಳ/ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಹೆಸರಿಗೆ ಮಂಜೂರಾತಿ ನೀಡಬೇಕು ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮುಲ್) ಅಧ್ಯಕ್ಷರೂ ಆದ ಮಾಜಿ ಸಂಸದ ಡಿ.ಕೆ.ಸುರೇಶ್‌ ಪತ್ರದಲ್ಲಿ ಕೋರಿದ್ದಾರೆ.