Viral News: ರಜೆಯಲ್ಲಿದ್ದ ಮಹಿಳೆಗೆ ಲೈವ್ ಲೊಕೇಷನ್ ಕಳುಹಿಸೆಂದ ಬಾಸ್; ಕಿಡಿಕಾರಿದ ನೆಟ್ಟಿಗರು
ಮಹಿಳೆಯೊಬ್ಬಳು ರಜೆಯಲ್ಲಿದ್ದಾಗ ನಿಜವಾಗಿಯೂ ಆಕೆ ರಜೆಯಲ್ಲಿದ್ದಾಳೆಯೇ ಎಂದು ಪರಿಶೀಲಿಸಲು ಆಕೆಯ ಬಾಸ್, ಲೈವ್ ಲೊಕೇಷನ್ ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಈ ವಿಚಾರವನ್ನು ಆಕೆ ತನ್ನ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರು ಆಕೆಯ ಬಾಸ್ ವಿರುದ್ಧ ಕಿಡಿಕಾರಿದ್ದಾರೆ.


ಕೌಲಾಲಂಪುರ: ಕೆಲವೊಮ್ಮೆ ಉದ್ಯೋಗಿಗಳು ಕೆಲಸದ ಒತ್ತಡದಿಂದ ತಪ್ಪಿಸಿಕೊಳ್ಳಲು ಸುಳ್ಳು ನೆಪ ಹೇಳಿ ರಜೆ ಹಾಕುತ್ತಾರೆ. ಈ ಹಿಂದೆ ಉದ್ಯೋಗಿಯೊಬ್ಬ ಹೊಟ್ಟೆನೋವಿನ ನೆಪ ಹೇಳಿ ಕೆಲಸಕ್ಕೆ ರಜೆ ಹಾಕಿ ಪ್ರವಾಸಕ್ಕೆ ಹೋಗಿ ಅಲ್ಲಿ ಮ್ಯಾನೇಜರ್ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಮಲೇಷ್ಯಾದ ಮಹಿಳೆಯೊಬ್ಬಳು ರಜೆಯಲ್ಲಿದ್ದಾಗ ನಿಜವಾಗಿಯೂ ರಜೆಯಲ್ಲಿದ್ದಾಳೆಯೇ ಎಂದು ಪರಿಶೀಲಿಸಲು ಆಕೆಯ ಬಾಸ್, ಆಕೆ ಇರುವ ಲೈವ್ ಲೊಕೇಷನ್ ಕಳುಹಿಸುವಂತೆ ಒತ್ತಾಯಿಸಿದ್ದಾನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದರ ಮೂಲಕ ಬಹಿರಂಗಪಡಿಸಿದ್ದಾಳೆ. ಈ ಪೋಸ್ಟ್ ವೈರಲ್ (Viral News) ಆಗಿದ್ದು, ನೆಟ್ಟಿಗರು ಬಾಸ್ ವಿರುದ್ಧ ಕಿಡಿಕಾರಿದ್ದಾರೆ.
ಮಹಿಳೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಆಘಾತಕಾರಿ ವಿಚಾರವನ್ನು ಹಂಚಿಕೊಂಡಿದ್ದಾಳೆ. ರಜೆಯಲ್ಲಿದ್ದಾಗ ತಮ್ಮ ಲೈವ್ ಲೊಕೇಷನ್ ಕಳುಹಿಸದಿದ್ದರೆ ಗೈರುಹಾಜರಿ ಎಂದು ದಾಖಲಿಸಲಾಗುತ್ತದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆ ಮಹಿಳೆ ಮಲೇಷಿಯಾದ ದ್ವೀಪವೊಂದಕ್ಕೆ ಭೇಟಿ ನೀಡಿದ್ದಾಗ ಆಕೆಯ ಬಾಸ್ ಸಾಕಷ್ಟು ಬಾರಿ ಕರೆ ಮಾಡಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಆದರೆ ತನ್ನ ಕಂಪನಿಯ ಹೆಸರನ್ನು ಆಕೆ ಬಹಿರಂಗಪಡಿಸಲಿಲ್ಲ.
ನೆಟ್ಟಿಗರು ಆಕೆಯ ಪೋಸ್ಟ್‌ಗೆ ಕಾಮೆಂಟ್ ಮಾಡಿ, ಕಂಪನಿಯ ನಡವಳಿಕೆಯನ್ನು ಟೀಕಿಸಿದ್ದಾರೆ. "ನಿಮ್ಮ ಬಾಸ್ ಹುಚ್ಚ" ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು "ಸಿಬ್ಬಂದಿ ತಮ್ಮ ವಾರ್ಷಿಕ ರಜೆಯ ಸಮಯದಲ್ಲಿ ಏನು ಬೇಕಾದರೂ ಮಾಡಬಹುದು" ಎಂದು ಹೇಳಿದ್ದಾರೆ. "ನಾನಾಗಿದ್ದರೆ ಕೆಲಸವನ್ನು ತ್ಯಜಿಸಿ ಹೊಸ ಉದ್ಯೋಗವನ್ನು ಪಡೆಯುತ್ತಿದ್ದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಲೇಷ್ಯಾದ ಕಾರ್ಮಿಕ ಕಾನೂನಿನ ಪ್ರಕಾರ, ಕಾರ್ಮಿಕರು ಕನಿಷ್ಠ ಎಂಟು ದಿನಗಳ ವಾರ್ಷಿಕ ವೇತನ ರಜೆಗೆ ಅರ್ಹರಾಗಿರುತ್ತಾರೆ. ಒಂದು ವೇಳೆ ಕಂಪನಿಯು ಇದೇ ತಪ್ಪನ್ನು ಮತ್ತೆ ಮಾಡಿದರೆ ಮಲೇಷ್ಯಾದ ಕಾರ್ಮಿಕ ಇಲಾಖೆಗೆ ತಿಳಿಸುವುದಾಗಿಯೂ ಮಹಿಳೆ ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral Video: ವಿಮಾನ ವಿಳಂಬ; ಸಿಬ್ಬಂದಿ, ಪ್ರಯಾಣಿಕನ ಸಂಭಾಷಣೆ ಕೇಳಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಜ್ವರವೆಂದು ರಜೆ ಕೇಳಿದ್ದಕ್ಕೆ ಸೂಪರ್ ವೈಸರ್ ಮಾಡಿದ್ದೇನು?
ಈ ಹಿಂದೆ, ಚೀನಾದಲ್ಲಿ ಒಬ್ಬ ಎಚ್‍ಆರ್ ಸೂಪರ್‌ವೈಸರ್ ಜ್ವರದಿಂದ ಬಳಲುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬಳು ಕೇವಲ ಒಂದು ಗಂಟೆ ರಜೆ ಕೇಳಿದ್ದಕ್ಕೆ ಆಕೆಯ ವಿರುದ್ಧ ಹರಿಹಾಯ್ದಿದ್ದ.ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಹೆಸರು ಬಹಿರಂಗಪಡಿಸದ ಮಹಿಳೆ, ಎಚ್‍ಆರ್ ಸೂಪರ್‌ವೈಸರ್ ಸಂಭಾಷಣೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅನಾರೋಗ್ಯ ಕಾರಣಕ್ಕೆ ರಜೆ ಕೇಳಿದ್ದಕ್ಕೆ ತಾನು ಸ್ವೀಕರಿಸಿದ ಅಸಭ್ಯ ಮತ್ತು ಅವಮಾನಕರ ಪ್ರತಿಕ್ರಿಯೆಗಳನ್ನು ಬಹಿರಂಗಪಡಿಸಿದ್ದಳು.