16th Finance Commission: ಬೆಂಗಳೂರು ಅಭಿವೃದ್ಧಿಗೆ 1.15 ಲಕ್ಷ ಕೋಟಿ ಒದಗಿಸಿ; 16ನೇ ಹಣಕಾಸಿನ ಆಯೋಗಕ್ಕೆ ಸಿಎಂ ಜ್ಞಾಪನ ಪತ್ರ
CM Siddaramaiah: ನವದೆಹಲಿಯಲ್ಲಿ 16ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಮತ್ತು ಸದಸ್ಯರನ್ನು ಸಿಎಂ ಸಿದ್ದರಾಮಯ್ಯ ಅವರು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಒಕ್ಕೂಟದ ವ್ಯವಸ್ಥೆ ಬಲಪಡಿಸಿ, ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.


ನವದೆಹಲಿ, ಜೂನ್ 13: 16ನೇ ಹಣಕಾಸಿನ ಆಯೋಗಕ್ಕೆ (16th Finance Commission) ಸಿಎಂ ಸಿದ್ದರಾಮಯ್ಯ ಅವರು ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜತೆ ಜತೆಗೆ ಒಕ್ಕೂಟದ ವ್ಯವಸ್ಥೆ ಬಲಪಡಿಸಿ, ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಅಲ್ಲದೇ ರಾಜ್ಯಗಳ ಬೆಳವಣಿಗೆಗೆ ನ್ಯಾಯಯುತವಾಗಿ ತೆರಿಗೆ ಹಂಚಿಕೆಯಾಗಬೇಕು ಹಾಗೂ ಬೆಂಗಳೂರು ಅಭಿವೃದ್ಧಿಗೆ 1.15 ಲಕ್ಷ ಕೋಟಿ ಒದಗಿಸಬೇಕು ಎಂದು ಕೋರಿದ್ದಾರೆ. 16ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
16ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು.
ಯಾರಿಗೂ ಅನ್ಯಾಯವಾಗಬಾರದು
2011-2012 ರಲ್ಲಿ ಕರ್ನಾಟಕ ರಾಜ್ಯವು ಜಿಡಿಪಿಗೆ ಶೇ 7ರಷ್ಟು ಕೊಡುಗೆ ನೀಡಿದ್ದರೆ, 2024-25 ರಲ್ಲಿ ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್ಟಿ ಸಂಗ್ರಹಣೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ.5 ರಷ್ಟಿದ್ದೇವೆ. 5 ವಷರ್ಗಳಿಗೊಮ್ಮೆ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಸಂವಿಧಾನದ ಅನುಚ್ಛೇದ 180ರ ಪ್ರಕಾರ ತೆರಿಗೆ ಹಂಚಿಕೆಯಾಗಬೇಕೆಂದು ಹೇಳಲಾಗಿದ್ದು,ಯಾರಿಗೂ ಅನ್ಯಾಯವಾಗಬಾರದೆಂದು ಸ್ಪಷ್ಟಪಡಿಸಿದೆ ಎಂದರು.
5 ವರ್ಷದಲ್ಲಿ ರಾಜ್ಯದ ಪಾಲು ಒಟ್ಟು 68,275 ಕೋಟಿ ರೂ.ಗಳು ಕಡಿತ
ಕರ್ನಾಟಕ ರಾಜ್ಯ ಪ್ರತಿ ವರ್ಷ 4.5 ಲಕ್ಷ ಕೋಟಿ ತೆರಿಗೆ ನೀಡುತ್ತದೆ. ಒಂದು ರೂ. ನೀಡಿದರೆ 15 ಪೈಸೆ ನಮಗೆ ವಾಪಸ್ ಬರುತ್ತದೆ. ಈ ಅನ್ಯಾಯ 16ನೇ ಹಣಕಾಸು ಆಯೋಗದಲ್ಲಿ ಆಗಬಾರದು. 14ನೇ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು 4.713% ಕ್ಕೆ ಮತ್ತು 15ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು 3.647% ಕ್ಕೆಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲನ್ನು ಒಟ್ಟಾರೆ 23% ರಷ್ಟು ಇಳಿಕೆ ಮಾಡಲಾಗಿದೆ. 5 ವರ್ಷಗಳಲ್ಲಿ ಒಟ್ಟು 68,275 ಕೋಟಿ ರೂ. ಕಡಿಮೆಯಾಗಿದೆ ಎಂದರು.
ಸೆಸ್ ಮತ್ತು ಸರ್ಚಾರ್ಜ್ ಶೇ. 5 ಮೀರಬಾರದು
ಇದರೊಂದಿಗೆ ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಜಾರ್ಜ್ನಲ್ಲಿ ನಮಗೆ ಮಾತ್ರವಲ್ಲ ಯಾವ ರಾಜ್ಯಕ್ಕೂ ಪಾಲು ಕೊಡುವುದಿಲ್ಲ. ಕರ್ನಾಟಕದಿಂದ 2024-25ರಲ್ಲಿ ಒಟ್ಟು 5,41,709 ಕೋಟಿ ಸಂಗ್ರಹವಾಗಿದೆ. 8,084 ಕೋಟಿ ರೂ.ಗಳು ಕರ್ನಾಟಕ್ಕೆ ನಷ್ಟವಾಗಿದೆ. ಸೆಸ್ ಮತ್ತು ಸರ್ಚಾಜ್ ಶೇ 5ರಷ್ಟನ್ನು ಮೀರಬಾರದು, ಒಂದು ವೇಳೆ 5% ಮೀರಿದರೆ ರಾಜ್ಯಗಳ ತೆರಿಗೆ ಹಂಚಿಕೆಯ ಪಾಲಿನಲ್ಲಿ ಶೇ 50 ರಷ್ಟು ಹೆಚ್ಚಳ ಮಾಡಬೇಕು, ಎಂದು ಮನವಿ ಮಾಡಲಾಗಿದೆ ಎಂದರು.
ತೆರಿಗೆ ನ್ಯಾಯಯುತವಾಗಿ ಹಂಚಿಕೆಯಾಗಬೇಕು
ಕರ್ನಾಟಕ ಆರ್ಥಿಕವಾಗಿ ಬೆಳವಣಿಗೆಯಾದರೆ ಕೇಂದ್ರ ಸರ್ಕಾರದ ಬೆಳವಣಿಗೆಯೂ ಆಗುತ್ತದೆ. ಹಾಗಾಗಿ ನ್ಯಾಯಯುತವಾಗಿ ತೆರಿಗೆ ಹಂಚಿಕೆಯಾಗಬೇಕು ಎಂದು ಕೋರಲಾಗಿದೆ ಎಂದರು.
ರಾಜಸ್ವ ಕೊರತೆ ಅನುದಾನ ರಾಜ್ಯಕ್ಕಿಲ್ಲ
ರಾಜ್ಯದ ತಲಾದಾಯವು 6 ಜಿಲ್ಲೆಗಳನ್ನು ಹೊರತುಪಡೆಸಿ ಕಡಿಮೆಯಿದೆ. ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಕಡಿಮೆಯಿದ್ದು, ಇದು ರಾಜಸ್ಥಾನ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಸರಿಸಮಾನವಾಗಿದೆ. ರಾಜಸ್ವ ಕೊರತೆ ಇರುವ ರಾಜ್ಯಗಳಿಗೆ ಈ ಕೊರತೆಯನ್ನು ತುಂಬಲು ಅನುದಾನವನ್ನು ನೀಡಲಾಗುತ್ತದೆ. ಆದರೆ ತೆರಿಗೆ ಹಂಚಿಕೆಯಲ್ಲಿ ನಮ್ಮಷ್ಟೇ ನಷ್ಟವಾಗಿರುವ ಕೇರಳಕ್ಕೆ ಕಳೆದ ವರ್ಷ 38,000 ಕೋಟಿಗಳನ್ನು ರಾಜಸ್ವ ಕೊರತೆ ತುಂಬಲು ಒದಗಿಸಲಾಗಿದೆ. ಕರ್ನಾಟಕಕ್ಕೆ ಯಾವುದೇ ರಾಜಸ್ವ ಕೊರತೆ ಅನುದಾನ ಬಂದಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ವಿಶೇಷ ಅನುದಾನ ನಿರಾಕರಿಸಿತು
15ನೇ ಹಣಕಾಸಿನ ಆಯೋಗವು ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಒದಗಿಸಬೇಕೆಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಅನುದಾನವನ್ನು ಒದಗಿಸಲು ನಿರಾಕರಿಸಿತು. ಇದಲ್ಲದೇ ಪೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ 3000 ಕೋಟಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಎರಡೂ ಸೇರಿ 11,495 ಕೋಟಿ ರೂ.ಗಳನ್ನು ಒದಗಿಸಬೇಕೆಂದು 15ನೇ ಹಣಕಾಸಿನ ಆಯೋಗವು ಶಿಫಾರಸು ಮಾಡಿತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಬೆಂಗಳೂರು ಅಭಿವೃದ್ಧಿಗೆ 1.15 ಲಕ್ಷ ಕೋಟಿ ಒದಗಿಸಲು ಮನವಿ
ಬೆಂಗಳೂರು ನಗರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ನಮ್ಮ ಮನವಿಯಲ್ಲಿ ಕೋರಿರುವಂತೆ ಅನುದಾನವನ್ನು ಒದಗಿಸದೇ ಹೋದರೆ, ಬೆಂಗಳೂರು ಅಭಿವೃದ್ಧಿಗೆ 1.15 ಲಕ್ಷ ಕೋಟಿ ಒದಗಿಸಬೇಕು ಎಂದು ಕೋರಿದೆ ಎಂದರು.
ವಿಶೇಷ ಅನುದಾನ ಒದಗಿಸಿ
ಕಲ್ಯಾಣ ಕರ್ನಾಟಕದಲ್ಲಿ ಏಳು ಜಿಲ್ಲೆಗಳನ್ನು ಒಳಗೊಂಡಿದ್ದು, 5 ಜಿಲ್ಲೆಗಳ ವಾರ್ಷಿಕ ವರಮಾನವು ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಸರಿಸಮಾನವಿದೆ. ಮಲೆನಾಡು ಪ್ರದೇಶಗಳಲ್ಲಿ ನಮಗೆ ಪ್ರವಾಹ, ಭೂ ಕುಸಿತದಂತಹ ಸಮಸ್ಯೆಗಳು ತಲೆದೋರುತ್ತವೆ. ಅದ್ದರಿಂದ ವಿಶೇಷ ಅನುದಾನ ಒದಗಿಸಬೇಕು ಎಂದು ಕೋರಿದೆ.
ವಿವೇಚನಾ ಅನುದಾನವು 0.3% ಗಿಂತ ಹೆಚ್ಚಾಗಬಾರದು
ಕೇಂದ್ರ ಸರ್ಕಾರದ ವಿವೇಚನಾ ಅನುದಾನವು 0.3% ಗಿಂತ ಹೆಚ್ಚಾಗಬಾರದು ಎಂದು ಮನವಿ ಮಾಡಲಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮೂರು ಮಾನದಂಡಗಳ ಪ್ರಕಾರ ನಡೆದುಕೊಂಡಿರುವ ಕರ್ನಾಟಕ ರಾಜ್ಯ . ಹಾಗಾಗಿ ಆರ್ಥಿಕವಾಗಿ ರಾಜ್ಯ ಸದೃಢವಾಗಿದೆ ಎಂದು ಆಯೋಗದ ಗಮನಕ್ಕೆ ತರಲಾಗಿದೆ. ಹೆಚ್ಚುವರಿ ಮನವಿಯಲ್ಲಿಯೂ ಹೇಳಲಾಗಿದೆ. ಇದೊಂದು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸುವ ಕೆಲಸವಾಗಬೇಕು. ಕರ್ನಾಟಕಕ್ಕೆ ಅನ್ಯಾಯವಾಗಬಾರದು ಎಂದು ಕೋರಲಾಗಿದೆ ಎಂದರು.
ತೆರಿಗೆ ಹಂಚಿಕೆ ವೈಜ್ಞಾನಿಕವಾಗಿ ಆಗಬೇಕು
ಕೇರಳ, ತಮಿಳುನಾಡಿಗೂ ನಮ್ಮಷ್ಟೇ ನಷ್ಟವಾಗಿದ್ದರೂ, ಅವರಿಗೆ ರಾಜಸ್ವ ಕೊರತೆ ಅನುದಾನವನ್ನು ನೀಡಲಾಗಿದೆ. ನಮಗೇಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಬಾರದು ಎಂದು ನಾವು ಹೇಳುವುದಿಲ್ಲ. ಆದರೆ ತೆರಿಗೆ ಹಂಚಿಕೆ ವೈಜ್ಞಾನಿಕವಾಗಿ ಮಾಡಬೇಕು ಎಂದು ಕೋರಲಾಗಿದೆ. ಈ ಬಗ್ಗೆ ಇತರೆ ರಾಜ್ಯಗಳು ಧ್ವನಿ ಎತ್ತಿವೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದರು. ಸಭೆಯು ಒಂದೂಕಾಲು ಗಂಟೆಗಳ ಕಾಲ ಸೌಹಾರ್ದಯುತವಾಗಿ ನಡೆದಿದ್ದು, ಆಯೋಗದ ಅಧ್ಯಕ್ಷರು ನಮ್ಮ ಸಲಹೆಗಳನ್ನು ಸ್ವೀಕರಿಸಿದ್ದಾರೆ ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: 16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಭಾಗಿ; ರಾಜ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಲು ಪ್ರಸ್ತಾವನೆ
ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ತಿಳಿಸಿದರು.