ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಶುಭಮನ್ ಗಿಲ್!
Shubman Gill Scored Hundred: ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಅದ್ಭುತ ಇನಿಂಗ್ಸ್ ಆಡಿದರು. ಅವರು ತಮ್ಮ ಚೊಚ್ಚಲ ಟೆಸ್ಟ್ ನಾಯಕತ್ವದ ಪಂದ್ಯದಲ್ಲೇ ಶತಕವನ್ನು ಬಾರಿಸಿದ್ದಾರೆ. ಇದು ಗಿಲ್ ಪಾಲಿಗೆ ಆರನೇ ಟೆಸ್ಟ್ ಶತಕವಾಗಿದೆ. ಅವರು ತಮ್ಮ 34ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಶುಭಮನ್ ಗಿಲ್.

ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ (IND vs ENG) ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸುವ ಮೂಲಕ ಗಿಲ್ ಸಂಚಲನ ಸೃಷ್ಟಿಸಿದ್ದಾರೆ. ಇದು ಟೆಸ್ಟ್ ಸ್ವರೂಪದಲ್ಲಿ ಶುಭಮನ್ ಗಿಲ್ ಅವರ ಆರನೇ ಶತಕವಾಗಿದೆ. ಶುಭಮನ್ ತಮ್ಮ ವೃತ್ತಿಜೀವನದ 34 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ, ಅವರು ಟೆಸ್ಟ್ ಕ್ರಿಕೆಟ್ನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಭಾರತ ತಂಡದ ಪರ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ಸಾಧನೆಗೆ ಶುಭಮನ್ ಗಿಲ್ ಭಾಜನರಾಗಿದ್ದಾರೆ. ಅಷ್ಟೇ ಅಲ್ಲ, ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ ನಾಲ್ಕನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಹೆಸರೂ ಇದೆ.
ಇದಕ್ಕೂ ಮುನ್ನ ಶುಭಮನ್ ಗಿಲ್ ತಮ್ಮ ಇನಿಂಗ್ಸ್ನಲ್ಲಿ 56 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ್ದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಅವರ ವೇಗದ ಅರ್ಧಶತಕವಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲನೇ ದಿನ ಆರಂಭಿಕ ಅವಧಿಯಲ್ಲಿ ಭಾರತ ತಂಡ 92 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ವೇಳೆ ಕ್ರೀಸ್ಗೆ ಬಂದಿದ್ದ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ (101 ರನ್) ಅವರ ಜೊತೆ 129 ರನ್ಗಳ ಜೊತೆಯಾಟವನ್ನು ಆಡಿದ್ದರು. ಈ ವೇಳೆ ಕಂಡೀಷನ್ಸ್ಗೆ ತಕ್ಕಂತೆ ಬ್ಯಾಟ್ ಮಾಡಿದ ಗಿಲ್, ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಆ ಮೂಲಕ ತಂಡದ ಮೊತ್ತವನ್ನು ಈ ಜೋಡಿ 220ರ ಗಡಿ ದಾಟಿಸಿದ್ದರು.
IND vs ENG: ಮೊದಲನೇ ಟೆಸ್ಟ್ನಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಯಶಸ್ವಿ ಜೈಸ್ವಾಲ್!
ವಿರಾಟ್ಕೊಹ್ಲಿಯ ದಾಖಲೆ ಮುರಿದ ಗಿಲ್
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಶುಭಮನ್ ಗಿಲ್, 82 ಓವರ್ಗಳ ಹೊತ್ತಿಗೆ 163 ಎಸೆತಗಳಲ್ಲಿ ಅಜೇಯ 126 ರನ್ಗಳನ್ನು ಗಳಿಸಿದ್ದರು. ಇದರಲ್ಲಿ ಅವರು ಒಂದು ಸಿಕ್ಸರ್ ಹಾಗೂ 16 ಬೌಂಡರಿಗಳನ್ನು ಬಾರಿಸಿದ್ದರು. ಅಂದ ಹಾಗೆ ಈ ಶತಕದ ಮೂಲಕ ಶುಭಮನ್ ಗಿಲ್, ಆಧುನಿಕ ದಿಗ್ಗಜ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿದಿದ್ದಾರೆ. ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿಯೇ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಅವರು ಈ ದಾಖಲೆಯನ್ನು 25 ವರ್ಷ, 284 ದಿನಗಳ ವಯಸ್ಸಿನಲ್ಲಿ ಬರೆದಿದ್ದಾರೆ. ಇನ್ನು ವಿರಾಟ್ ಕೊಹ್ಲಿ 26 ವರ್ಷ, 34 ದಿನಗಳ ವಯಸ್ಸಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ನಾಯಕತ್ವದಲ್ಲಿ ಶತಕವನ್ನು ಸಿಡಿಸಿದ್ದರು.
Leading from the front 💯📸
— BCCI (@BCCI) June 20, 2025
Updates ▶️ https://t.co/CuzAEnBkyu#TeamIndia | #ENGvIND | @ShubmanGill pic.twitter.com/lwQQivYOzO
ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಆಟಗಾರರು
ವಿಜಯ್ ಹಜಾರೆ vs ಇಂಗ್ಲೆಂಡ್ , 1951
ಸುನೀಲ್ ಗವಾಸ್ಕರ್ vs ನ್ಯೂಜಿಲೆಂಡ್, 1976
ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ, 2014
ಶುಭಮನ್ ಗಿಲ್ vs ಇಂಗ್ಲೆಂಡ್ , 2025
ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟದ ಜೈಸ್ವಾಲ್-ರಾಹುಲ್
ಭಾರತ ವಿರುದ್ಧದ ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲ್ ಮಾಡಲು ನಿರ್ಧರಿಸಿದ್ದರು. ಮೊದಲು ಬ್ಯಾಟ್ ಮಾಡಲು ಬಂದ ಟೀಮ್ ಇಂಡಿಯಾಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದ್ದರು. ಯಶಸ್ವಿ ಮತ್ತು ರಾಹುಲ್ ಮೊದಲ ವಿಕೆಟ್ಗೆ 91 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಕೆಎಲ್ ರಾಹುಲ್ 42 ರನ್ಗಳ ಕೊಡುಗೆ ನೀಡಿದರು. ಅದೇ ಸಮಯದಲ್ಲಿ, ಟೆಸ್ಟ್ಗೆ ಪದಾರ್ಪಣೆ ಮಾಡಿದ ಸಾಯಿ ಸುದರ್ಶನ್ ಕೇವಲ 4 ಎಸೆತಗಳನ್ನು ಆಡಿದ ನಂತರ ಖಾತೆ ತೆರೆಯದೆಯೇ ಔಟಾದರು.