ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಹೋರಾಡುವ ವೀರರು, ಕದಿಯುವ ಚೋರರು!

ಒಮ್ಮೆ ಇಂಧನ ತುಂಬಿಸಿಕೊಂಡರೆ ನಲುವತ್ತು ಗಂಟೆಗಳ ಕಾಲ ಹಾರಬಲ್ಲ, ಇಡೀ ಭೂಮಂಡಲ ದಲ್ಲಿ ಎಲ್ಲಿ ಬೇಕಿದ್ದರೂ ಸದ್ದೇ ಇಲ್ಲದೆ ಹಾರಾಡಿ ನ್ಯೂಕ್ಲಿಯರ್‌ ಬಾಂಬ್‌ ಹಾಕಿ ಬರಬಲ್ಲ ಈ ವಿಮಾನದ ಶಕ್ತಿ ಭಯಾನಕ. ಸ್ಟೆಲ್ತ್‌ ಎಂಬುದು ಶತ್ರುಗಳ ರೇಡಾರ್‌ಗೆ ಸಿಗದಂತೆ ನುಣುಚಿಕೊಳ್ಳುವ ಒಂದು ತಂತ್ರಜ್ಞಾನ. ಈ ತಂತ್ರಜ್ಞಾನ ಬೇರೆ ಯಾವ ದೇಶದ ಬಳಿಯೂ ಇರಲಿಲ್ಲ. ಆದರೆ ಇಂಥ ದೊಂದು ಬಾಂಬರ್‌ ವಿಮಾನ ವನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ ಎಂಬುದು ಸದ್ಯ ಯುಎಸ್‌ಗೆ ಆತಂಕದ ವಿಷಯ.

ಹೋರಾಡುವ ವೀರರು, ಕದಿಯುವ ಚೋರರು!

ಹರೀಶ್‌ ಕೇರ ಹರೀಶ್‌ ಕೇರ Jun 26, 2025 6:00 AM

ಕಾಡುದಾರಿ

ಇರಾನ್‌ ಮೇಲಿನ ಇಸ್ರೇಲ್‌ ದಾಳಿಯ ಹಿಂದೆ ಮೊಸಾದ್‌ನ ಗೂಢಚರರು ಇದ್ದರು ಎಂಬುದು ನಿಮಗೆ ಗೊತ್ತಾಗಿದೆ. ಮೊಸಾದ್‌ ಏಜೆಂಟರೇನೋ ಇದನ್ನು ದೇಶಪ್ರೇಮಕ್ಕಾಗಿ ಮಾಡಿರಬಹುದು. ಆದರೆ ಅವರಿಗೂ ಮಾಹಿತಿ ಒದಗಿಸಿದ ಇರಾನ್‌ ಒಳಗಿನವರು ವೈಯಕ್ತಿಕ ಲಾಭಕ್ಕಾಗಿಯೇ ತಮ್ಮ ಪ್ರಾಣ ವನ್ನು ರಿಸ್ಕಿಗೆ ಒಡ್ಡಿ ರಹಸ್ಯ ಮಾಹಿತಿಗಳನ್ನು ಬಿಟ್ಟುಕೊಟ್ಟಿರುತ್ತಾರೆ. ಅಂಥ ಡಬಲ್‌ ಕ್ರಾಸರ್‌ಗಳೇ ಕೆಲವೊಮ್ಮೆ ಯುದ್ಧದ ಜಯಾಪಜಯಗಳನ್ನು ನಿರ್ಣಯಿಸಿ ಬಿಡುತ್ತಾರೆ. ಅಂಥ ಕೆಲವರ ಕತೆ ಬಹಳ ಕುತೂಹಲಕರ.

ಮೊನ್ನೆ ಇರಾನ್‌ನ ಮೂರು ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ಬಿ-12 ಸ್ಟೆಲ್ತ್‌ ಬಾಂಬರ್‌ ವಿಮಾನಗಳು ಬಾಂಬ್‌ಗಳ ಮಳೆ ಸುರಿಸಿ ಮರಳಿದವು. ಅಣುಸ್ಥಾವರಗಳು ಉಡೀಸ್‌ ಆಗಿವೆ ಎಂದು ಅಮೆರಿಕ ಹೇಳಿಕೊಂಡಿತು. ಆದರೆ ಬಾಂಬ್‌ ತಯಾರಿಸಬಲ್ಲಂಥ ಯುರೇನಿಯಂ ಅನ್ನು ಇರಾನ್‌ ಬೇರೆಲ್ಲೋ ಭದ್ರವಾಗಿ ಬಚ್ಚಿಟ್ಟುಕೊಂಡು ಒಳಗೊಳಗೇ ನಗುತ್ತಿದೆ, ಅದು ಬೇರೆ ಮಾತು. ಇದರ ನಡುವೆ ಅಮೆರಿಕದ ಮಾರಕಾಯುಧವಾಗಿ ಹೊರಹೊಮ್ಮಿರುವ ಬಿ-12 ಸ್ಟೆಲ್ತ್‌ ಬಾಂಬರ್‌ಗಳು ಸ್ಪಾಟ್‌ಲೈಟ್‌ಗೆ ಬಂದವು.

ಒಮ್ಮೆ ಇಂಧನ ತುಂಬಿಸಿಕೊಂಡರೆ ನಲುವತ್ತು ಗಂಟೆಗಳ ಕಾಲ ಹಾರಬಲ್ಲ, ಇಡೀ ಭೂಮಂಡಲ ದಲ್ಲಿ ಎಲ್ಲಿ ಬೇಕಿದ್ದರೂ ಸದ್ದೇ ಇಲ್ಲದೆ ಹಾರಾಡಿ ನ್ಯೂಕ್ಲಿಯರ್‌ ಬಾಂಬ್‌ ಹಾಕಿ ಬರಬಲ್ಲ ಈ ವಿಮಾನದ ಶಕ್ತಿ ಭಯಾನಕ. ಸ್ಟೆಲ್ತ್‌ ಎಂಬುದು ಶತ್ರುಗಳ ರೇಡಾರ್‌ಗೆ ಸಿಗದಂತೆ ನುಣುಚಿಕೊಳ್ಳುವ ಒಂದು ತಂತ್ರಜ್ಞಾನ. ಈ ತಂತ್ರಜ್ಞಾನ ಬೇರೆ ಯಾವ ದೇಶದ ಬಳಿಯೂ ಇರಲಿಲ್ಲ. ಆದರೆ ಇಂಥ ದೊಂದು ಬಾಂಬರ್‌ ವಿಮಾನವನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ ಎಂಬುದು ಸದ್ಯ ಯುಎಸ್‌ಗೆ ಆತಂಕದ ವಿಷಯ.

ಇದನ್ನೂ ಓದಿ: Harish Kera Column: ಕಾಂತಾರದ ನಡುವೆ ಏಕಾಂತದ ಸಮಯ

ಚೀನಾಗೆ ಈ ವಿಮಾನದ ಟೆಕ್ನಾಲಜಿಯನ್ನು ಅಮೆರಿಕದಿಂದ ಕದ್ದೊಯ್ದು ಒದಗಿಸಿಕೊಟ್ಟವನು ಒಬ್ಬ ಅಮೆರಿಕದ ಇಂಜಿನಿಯರ್‌! ಸದ್ಯ ದೇಶದ್ರೋಹದ ಈ ಕೆಲಸಕ್ಕಾಗಿ ಇವನು 30 ವರ್ಷದ ಜೈಲುಶಿಕ್ಷೆಗೆ ಒಳಗಾಗಿದ್ದಾನೆ. ಮತ್ತು ಇವನು ಭಾರತ ಮೂಲ ದವನು ಎಂಬುದು ನಿಮಗೆ ಗೊತ್ತಿರಲಿ.

ಇವನ ಹೆಸರು ನೊಶೀರ್‌ ಶೇರಿಯಾರ್ಜಿ ಗೊವಾಡಿಯಾ (Noshir Sheriarji Gowadia). ಮುಂಬಯಿ ಯಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿ ಕಲಿತು ಅಮೆರಿಕಕ್ಕೆ ತೆರಳಿ ಅಲ್ಲಿ ಏರೋಸ್ಪೇಸ್‌ ಇಂಜಿನಿ ಯರ್‌ ಆದ. ಆಗ ಅಮೆರಿಕ ವಿಯೆಟ್ನಾಂ ಮೊದಲಾದ ಕಡೆ ತನ್ನ ಹಲವು ಯುದ್ಧ ವಿಮಾನಗಳನ್ನು ಕಳೆದುಕೊಂಡು ಒತ್ತಡದಲ್ಲಿತ್ತು. ಶತ್ರುಗಳ ರೇಡಾರ್‌ಗಳಿಗೆ ಸಿಗದ ಜೆಟ್‌ ನಿರ್ಮಿಸಲು ಬಯಸಿತ್ತು. ಆಗ ಶುರುವಾದದ್ದು ಬಿ-12 ಸ್ಪಿರಿಟ್‌ ಬಾಂಬರ್‌ ವಿಮಾನ ನಿರ್ಮಾಣ. ನಾರ್ತ್‌ರಾಪ್‌ ಎಂಬ ಸಂಸ್ಥೆ ಇದನ್ನು ನಿರ್ಮಿಸುತಿತ್ತು. ಅದರ ವಿನ್ಯಾಸದ ತಂಡದಲ್ಲಿ ನೊಶೀರ್‌ ಬಹು ಮಹತ್ವದ ಜಾಗದಲ್ಲಿ ಸೇರಿಕೊಂಡ. ಅವನಿಗೆ ಅದರ ಇಡೀ ವಿನ್ಯಾಸ ಗೊತ್ತಿತ್ತು. ಮಧ್ಯೆ ಅವನನ್ನು ರಕ್ತದ ಕಾಯಿಲೆ ಯೊಂದು ಬಾಧಿಸಿತು.

ನಾರ್ತ್‌ರಾಪ್‌ನಲ್ಲಿ ಕೆಲಸ ಕಳೆದುಕೊಂಡ. ನ್ಯೂಮೆಕ್ಸಿಕೋದಲ್ಲಿ ತನ್ನದೇ ರಕ್ಷಣಾ ಸಲಹಾ ಸಂಸ್ಥೆ ಆರಂಭಿಸಿದ. ಇದೇ ಸಂದರ್ಭದಲ್ಲಿಯೇ ಚೀನಾದ ಏಜೆಂಟ್‌ಗಳು ಇವನ ಸಂಪರ್ಕಕ್ಕೆ ಬಂದರು. ದೊಡ್ಡ ಮೊತ್ತದ ಸಾಲ ಪಡೆದು ವಿಲಾಸಿ ವಿಲ್ಲಾ ಕಟ್ಟಿಸುತ್ತಿದ್ದ ಇವನಿಗೆ ಹಣ ಬೇಕಾಗಿತ್ತು. ತನ್ನಲ್ಲಿದ್ದ ಬಿ-12 ರಹಸ್ಯಗಳನ್ನು ಮಾರಿಕೊಂಡ. ಚೀನಾಕ್ಕೂ ಹಲವಾರು ಸಲ ಹೋಗಿ ಬಂದು ಅವರ ವಿಮಾನದ ಪ್ರಮುಖ ಭಾಗಗಳನ್ನು ಕಟ್ಟುವುದಕ್ಕೆ ನೆರವಾದ.

ಇವನಲ್ಲಿ ಶೇಖರವಾಗುತ್ತಿದ್ದ ಹಣ ಅಮೆರಿಕದ ಎಫ್‌ಬಿಐ ಏಜೆಂಟರ ಗಮನ ಸೆಳೆಯಿತು. ಸದ್ದಿಲ್ಲದೇ ಇವನ ಮಾಹಿತಿ ಕಲೆಹಾಕಲಾಯಿತು. ಎಲ್ಲ ದಾಖಲೆಗಳೊಂದಿಗೆ ಸಿಕ್ಕಿಬಿದ್ದ. ವಿಚಾರಣೆಯೂ ಆಗಿ, ತನ್ನ ದೇಶದ್ರೋಹವನ್ನು ಒಪ್ಪಿಕೊಂಡ. 30 ವರ್ಷಗಳ ಶಿಕ್ಷೆಯಾಯಿತು. ಆದರೆ ಆಗಬಾರದ ಹಾನಿ ಆಗಿಹೋಗಿತ್ತು. ಇತ್ತೀಚೆಗೆ ಬಿ-12 ವಿನ್ಯಾಸವನ್ನೇ ಹೋಲುವ ಚೀನಾದ ಒಂದು ಡ್ರೋನ್‌ ಅಮೆರಿಕದ ಸ್ಯಾಟ್‌ಲೈಟ್‌ಗಳಿಗೆ ಕಂಡುಬಂದಿದೆ. ಇದು ಆಕಸ್ಮಿಕ ಆಗಿರಲಿಕ್ಕಿಲ್ಲ. ಅಮೆರಿಕದ ರಹಸ್ಯವನ್ನೂ ಕದ್ದು ಚೀನಾ ಇನ್ನೂ ಮುಂದೆ ಹೋಗಿದೆ.

ತನ್ನ ಗುಪ್ತಚರ ಏಜೆಂಟ್‌ಗಳೇ ತನಗೇ ಮಣ್ಣು ಮುಕ್ಕಿಸಿದ ಅನುಭವ ಆಗುತ್ತಿರುವುದು ಅಮೆರಿಕಕ್ಕೆ ಇದೇ ಮೊದಲಲ್ಲ. ಅಮೆರಿಕದ ಇತಿಹಾಸದಲ್ಲಿಯೇ ಅತಿ ಬರ್ಬರವಾದ ಡಬಲ್‌ ಕ್ರಾಸ್‌ ಮಾಡಿದ ಇನ್ನೊಬ್ಬ ಏಜೆಂಟ್‌ ಇದ್ದಾನೆ. ಅವನ ಹೆಸರು ಆಲ್ಡ್ರಿಚ್‌ ಅಮಿಸ್.‌ ಅದು ತೊಂಬತ್ತರ ದಶಕ, ಅಮೆರಿಕ- ಸೋವಿಯತ್‌ ಒಕ್ಕೂಟದ ನಡುವಿನ ಶೀತಲ ಸಮರದ ಕಾಲ. ಜಗತ್ತಿನ ಮೇಲೆ ಒಡೆತನ ಸ್ಥಾಪಿಸಲು ಹೆಣಗುತ್ತಿದ್ದ ಎರಡೂ ಬೃಹತ್‌ ದೇಶಗಳ ನಡುವೆ ಮಿಲಿಟರಿ ರಹಸ್ಯಗಳನ್ನು ಅತ್ತಿಂದಿತ್ತ ಸಾಗಿಸುವ ಸ್ಪೈಗಳ ದೊಡ್ಡ ಪಡೆಗಳೇ ಕಾರ್ಯನಿರತವಾಗಿದ್ದವು. ಯಾರು ಸಾಚಾ, ಯಾರು ಗೂಢಚರ ಎಂದು ಹೇಳಲೇ ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು.

ಅಂಥ ಹೊತ್ತಿನಲ್ಲಿ, ಇದ್ದಕ್ಕಿದ್ದಂತೆ, ರಷ್ಯಾದಲ್ಲಿ ಗುಟ್ಟಾಗಿ ಕೆಲಸ ಮಾಡುತ್ತಿದ್ದ ಅಮೆರಿಕದ ಏಜೆಂಟ ರುಗಳು ಒಬ್ಬೊಬ್ಬರಾಗಿ ರಷ್ಯಾದ ಪೊಲೀಸರ ಕೈಗೆ ಸಿಕ್ಕಿಯೋ ಬೇರೆ ರೀತಿಯಲ್ಲಿಯೋ ಸಾಯತೊಡಗಿ ದರು. ಬೆಲೆಬಾಳುವ ಹತ್ತಾರು ಏಜೆಂಟರು ಹೀಗೆ ಸತ್ತುಹೋದರು. ಸಿಐಎ, ಎಫ್‌ಬಿಐಗಳಿಗೆ ತಲೆಬಿಸಿ ಯಾಯಿತು. ಯಾರೋ ಒಳಗಿನಿಂದಲೇ ಈ ಬೇಹುಗಾರರ ಮಾಹಿತಿಯನ್ನು ವೈರಿಗೆ ಕೊಡದಿದ್ದರೆ ಹೀಗಾಗಲು ಸಾಧ್ಯವಿಲ್ಲ. ಎಷ್ಟೇ ನಿಗಾ ಇಟ್ಟರೂ ಇದರ ಕಾರಣ ಯಾರು ಅಂತ ಗೊತ್ತಾಗಲಿಲ್ಲ.

ಅಮಿಸ್‌ ಕಡೆಗೂ ಸಿಕ್ಕಿಬಿದ್ದದ್ದು ಅವನ ವಿಲಾಸಿ ಜೀವನಶೈಲಿಯಿಂದ. ವೈಭವೋಪೇತ ಮನೆ ಕಟ್ಟಿಸಿದ, ದುಬಾರಿ ಕಾರು ಖರೀದಿಸಿದ. ಅವನ ಸಂಬಳದಲ್ಲಂತೂ ಅದು ಸಾಧ್ಯವಿರಲಿಲ್ಲ. ಸಹಜ ವಾಗಿಯೇ ಎಫ್‌ಬಿಐ ಇವನನ್ನು ತಡವಿಕೊಂಡು ವಿಚಾರಿಸಿದಾಗ ಬಾಯಿಬಿಟ್ಟ. ಹತ್ತು ವರ್ಷಗಳ ಕಾಲ ಇವನು ದೇಶದ ಬೆನ್ನಿಗೆ ಚೂರಿ ಹಾಕಿದ್ದ. ಆ ಕಾಲದಲ್ಲಿ ಅವನು ಸಿಐಎ (ಸೆಂಟ್ರಲ್‌ ಇಂಟಲಿ ಜೆನ್ಸ್‌ ಏಜೆನ್ಸಿ- ಅಮೆರಿಕದ ಬೇಹು ಸಂಸ್ಥೆ) ಪ್ರಮುಖ ಹುದ್ದೆ- ರಷ್ಯಾದ ಬೇಹುಗಾರಿಕೆ ವಿಭಾಗದ ಹೆಡ್‌ ಆಗಿದ್ದ. ಎಲ್ಲ ಏಜೆಂಟರ ವಿವರವೂ ಇವನ ಮೂಲಕವೇ ಸಾಗಬೇಕಿತ್ತು.

ಅದನ್ನಾತ ರಷ್ಯಾದ ಸ್ಪೈ ಏಜೆನ್ಸಿ ಕೆಜಿಬಿಗೆ ಮಾರಿಕೊಂಡಿದ್ದ. ಅವನ ದೇಶದ್ರೋಹಕ್ಕೆ ಕಾರಣ ಸರಳವಿತ್ತು- ಅವನ ಕುಡಿತ ಹಾಗೂ ಅವನ ರಸಿಕ ಜೀವನಶೈಲಿಗೆ ಸಂಬಳ ಸಾಲುತ್ತಿರಲಿಲ್ಲ. ಇವನ ಆಲ್ಕೋಹಾಲ್‌ ವ್ಯಸನ, ಹೊರ ಚಟಗಳು, ಮೊದಲ ಪತ್ನಿಯ ವಿಚ್ಛೇದನ, ಎರಡನೇ ಪತ್ನಿಯ ವಿಲಾಸಿ ಶಾಪಿಂಗ್ ಶೈಲಿಗಳೆಲ್ಲ ಅವನನ್ನು ಡಬಲ್‌ ಕ್ರಾಸರ್‌ ಆಗಿಸಿದ್ದವು. ಇಂದಿಗೂ ಜೈಲಿನಲ್ಲಿರುವ ಆಮಿಸ್‌ ಅಮೆರಿಕಕ್ಕೆ ಅತ್ಯಂತ ಹಾನಿಯೆಸಗಿದ ಡಬಲ್‌ ಏಜೆಂಟ್‌ ಅನಿಸಿದ್ದಾನೆ.

ಹಾಗೆ ನೋಡಿದರೆ ಇರಾನ್‌ನ ಪರಮಾಣು ಬಾಂಬ್‌ ತಯಾರಿ ವ್ಯವಸ್ಥೆಯೇ ಕಳವು ಮಾಲು. ಇದಕ್ಕೆ ನೆರವಾದವನು ಪಾಕಿಸ್ತಾನ ಮೂಲದ ವಿಜ್ಞಾನಿ ಅಬ್ದುಲ್‌ ಖಾದಿರ್‌ ಖಾನ್.‌ ಇವನು ಮೂಲತಃ ಮೆಟಲರ್ಜಿಸ್ಟ್ ಆದರೂ ಹಲವು ದೇಶಗಳಿಗೆ ಅಣುಬಾಂಬ್‌ ತಯಾರಿಸಬಲ್ಲ ತಂತ್ರಜ್ಞಾನವನ್ನು ಗುಪ್ತವಾಗಿ ಒದಗಿಸಿಕೊಟ್ಟ ಖದೀಮ. 1970ರ ದಶಕದಲ್ಲಿ ಇವನು ಯುರೋಪಿನ ಯುರೆಂಕೋ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ. 1975ರಲ್ಲಿ ಪಾಕಿಸ್ತಾನಕ್ಕೆ ವಾಪಸಾಗುವಾಗ ಅಲ್ಲಿಂದ ಯುರೇನಿಯಂ ಸಶಕ್ತೀಕರಣ ಪ್ರಕ್ರಿಯೆ, ಸೆಂಟ್ರಿಫ್ಯೂಜ್‌ ವ್ಯವಸ್ಥೆಯ ಬ್ಲೂಪ್ರಿಂಟ್‌ಗಳನ್ನೆಲ್ಲ ಕದ್ದು ತಂದ.

ಪಾಕಿಸ್ತಾನ ಇವನನ್ನು ತನ್ನ ನ್ಯೂಕ್ಲಿಯರ್‌ ಕಾರ್ಯಕ್ರಮದ ಪಿತಾಮಹ ಎಂದು ಕರೆಯಲು ಕಾರಣ ಅವನು ಇದೆಲ್ಲದರ ಮೂಲಕ ಆ ದೇಶದಲ್ಲಿ ಸೃಷ್ಟಿಸಿದ ಪರಮಾಣು ಬಾಂಬ್ ತಯಾರಿ ವ್ಯವಸ್ಥೆ. ಇವನು ಎಂಥ ಪಾಖಡಾ ಎಂದರೆ ಅರಬ್‌ ದೇಶಗಳು- ಯುರೋಪ್‌ ಮೊದಲಾದ ಕಡೆ ಹರಡಿದ ಒಂದು ಬೃಹತ್‌ ಭೂಗತ ಜಾಲವನ್ನೇ ಸೃಷ್ಟಿಸಿದ. ಇದರಲ್ಲಿ ತಂತ್ರಜ್ಞರು, ಬೇಹುಗಾರರು, ಏಜೆಂಟರು, ಮಾರಾಟಗಾರರು ಎಲ್ಲರೂ ಇದ್ದರು. ಹೀಗೆ ಈ ಜಾಲದ ಮೂಲಕ ಯುರೇನಿಯಂ ಸಂವರ್ಧನೆಯ ವ್ಯವಸ್ಥೆಯನ್ನು ಇರಾನ್‌ ಪಡೆಯಿತು. ಪೌರ ಬಳಕೆಯ ಯುರೇನಿಯಂ ಅನ್ನು ಅಮೆರಿಕದಿಂದ ಮೊದಲೇ ಪಡೆಯುತ್ತಿದ್ದ ಇರಾನ್‌, ಖಾನ್‌ನಿಂದ ಅಣುಬಾಂಬ್‌ ತಯಾರಿಯ ಭೂಗತ ವ್ಯವಸ್ಥೆ ಯನ್ನೂ ಪಡೆದುಕೊಂಡು ಕೊಬ್ಬಿತು. ಇದೆಲ್ಲ ಅಮೆರಿಕದ ಅರಿವಿಗೆ ಬರಲಿಲ್ಲ ಎಂದಲ್ಲ. ಕುರಿ ಕೊಬ್ಬಲಿ ಎಂಬುದು ಅದರ ನೀತಿ. ‌

ಬೇಹುಗಾರಿಕೆಯ ಬಗ್ಗೆ ಮಾತನಾಡುತ್ತ ಇಸ್ರೇಲ್‌ ಅನ್ನು ಮರೆತರೆ ಆದೀತೆ? ಇಸ್ರೇಲ್‌ನ ಮೊಸಾದ್‌ ಅತ್ಯಂತ ಪ್ರತಿಷ್ಠಿತ, ಪಳಗಿದ ಗೂಢಚರ ಜಾಲ ಎಂದು ಲೆಕ್ಕ. ಆ ಸಂಸ್ಥೆಯ ಏಜೆಂಟರು ಬಹುಶಃ ಎಲ್ಲ ದೇಶಗಳಲ್ಲೂ ಹರಡಿಹೋಗಿರಬಹುದು. ವಾಸ್ತವವಾಗಿ, ಒಂದು ದೇಶ ಬಲಿಷ್ಠ ಎನಿಸಬೇಕಿದ್ದರೆ ಮಿಲಿಟರಿಯಷ್ಟೇ ಬಲವಾದ ಬೇಹುಗಾರಿಕೆ ಜಾಲವೂ ಬೇಕು. ಇಂಥ ಇಸ್ರೇಲನ್ನೂ ಚೀನಾ ವಂಚಿಸಿದೆ.

ಪ್ಯಾಲೆಸ್ತೀನ್‌ ಕಡೆಯಿಂದ ಹಾರಿಬರುವ ರಾಕೆಟ್‌ಗಳನ್ನು ತಡೆಯಲೆಂದು ಇಸ್ರೇಲ್‌ ನಿರ್ಮಿಸಿಕೊಂಡ ಉಕ್ಕಿನ ಪಂಜರಗಳಾದ ಐರನ್‌ ಡೋಮ್‌ ನಿರ್ಮಾಣದ ಕುರಿತ ರಹಸ್ಯ ಮಾಹಿತಿಯನ್ನು ಚೀನಾ ಇತ್ತೀಚೆಗೆ ಕದಿಯಿತು. ಆದರೆ ಈ ಕಳವು ನಡೆದದ್ದು ಸೈಬರ್‌ ಅಟ್ಯಾಕ್‌ ಮೂಲಕ. ಐರನ್‌ ಡೋಮ್‌ ತಯಾರಿಸುವ ಇಸ್ರೇಲ್‌ ಸಂಸ್ಥೆಯ ಪ್ರಕಾರ ಚೀನಾದ ಹ್ಯಾಕರ್‌ಗಳು ಪ್ರಮುಖ ಮಾಹಿತಿಗಳನ್ನು ಕದ್ದಿದ್ದಾರೆ. ಅದನ್ನು ಅವರು ಎಲ್ಲಿ ಬಳಸುತ್ತಾರೋ ಗೊತ್ತಿಲ್ಲ. ಆಧುನಿಕ ಬೇಹುಗಾರಿಕೆ ಕೂಡ ನೇರ ಸಂಪರ್ಕಕ್ಕಿಂತಲೂ ಹೆಚ್ಚಾಗಿ ಆನ್‌ಲೈನ್‌ನಲ್ಲಿ ವ್ಯಾಪಿಸಿದೆ.

ಭಾರತದ ಮಿಲಿಟರಿ ಪ್ರಾಜೆಕ್ಟುಗಳೂ ವೈರಿಗಳ ಬೇಹುಗಾರಿಕೆಗೆ ತುತ್ತಾಗದೇ ಉಳಿದಿಲ್ಲ. ನಮ್ಮ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ ವ್ಯವಸ್ಥೆಯನ್ನೇ ತೆಗೆದುಕೊಳ್ಳಬಹುದು. ಭಾರತದ ಡಿಆರ್‌ಡಿಒ ಹಾಗೂ ರಷ್ಯಾಗಳು ಸೇರಿಕೊಂಡು ಅಭಿವೃದ್ಧಿಪಡಿಸಿದ ಬ್ರಹ್ಮೋಸ್‌ನ ಮಾಹಿತಿಗಳನ್ನು ಡಿಆರ್‌ಡಿಒ ದ ಉದ್ಯೋಗಿಯೇ ಆಗಿದ್ದ ನಿಶಾಂತ್‌ ಅಗರ್‌ವಾಲ್‌ ಎಂಬ ಪಾಕಿಸ್ತಾನದ ಐಎಸ್‌ಐಗೆ ಮಾರಿ ಕೊಂಡಿದ್ದ. ಇವನನ್ನು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಸಲಾಗಿತ್ತು.

ಇದೀಗ ವಿಚಾರಣೆ ನಡೆದು ಇವನಿಗೆ 14 ವರ್ಷ ಜೈಲುಶಿಕ್ಷೆಯಾಗಿದೆ. ಇನ್ನು ನಮ್ಮ ಮೂರು ಸಬ್‌ ಮರೀನ್‌ಗಳು, ಯುದ್ಧವಿಮಾನ ವಾಹಕ ನೌಕೆಗಳನ್ನು ನಿಯಂತ್ರಿಸುವ ನೌಕಾಪಡೆ ಬೇಸ್‌ ಇರುವ ವಿಶಾಖಪಟ್ಟಣದಲ್ಲಿ ಸಬ್‌ಮರೀನ್‌ಗಳ ಮಾಹಿತಿ ಕದ್ದು ಐಎಸ್‌ಐಗೆ ನೀಡಲು ಮುಂದಾ ಗಿದ್ದ ಆರೋಪದಲ್ಲಿ ಕೆಲವರನ್ನು ಸೆರೆಹಿಡಿಯಲಾಗಿದೆ. ಇವರೂ ಈ ರಕ್ಷಣಾ ಸಾಮಗ್ರಿಗಳ ವಹಿವಾಟಿ ನಲ್ಲಿ ಒಂದಲ್ಲ ಒಂದು ಉನ್ನತ ಸ್ಥಾನದಲ್ಲಿರುವವರೇ. ಒಳ್ಳೆಯ ಉದ್ಯೋಗದಲ್ಲಿರುವವರು, ಮಿಲಿಟರಿಯ ರಹಸ್ಯಗಳನ್ನು ಒಡಲಿನಲ್ಲಿ ಇಟ್ಟುಕೊಂಡವರು ಅದನ್ನು ಇನ್ನೊಂದು ದೇಶಕ್ಕೆ ಮಾರಲು ಯಾಕೆ ಹೊರಡುತ್ತಾರೆ, ಇವರನ್ನು ಹೇಗೆ ಮರಳು ಮಾಡಲಾಗುತ್ತದೆ ಎಂಬುದು ಇನ್ನೊಂದೇ ಕುತೂಹಲಕರ ಸಂಗತಿ.