ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ತೀರ್ಥಸ್ನಾನ, ಕ್ಷೇತ್ರಯಾತ್ರೆ ಮತ್ತು ಅಲೌಕಿಕತೆ...

ಭಾರತೀಯ ಸನಾತನ ಪರಂಪರೆಯಲ್ಲಿ, ಆಧ್ಯಾತ್ಮಿಕ ಉನ್ನತಿಯನ್ನು ತಲುಪಲು ಮತ್ತು ಮೋಕ್ಷವನ್ನು ಸಾಧಿಸಲು ತ್ರಿಕರಣಗಳ ಶುದ್ಧತೆಯ ಅಗತ್ಯವನ್ನು ಒತ್ತಿಹೇಳಲಾಗಿದೆ. ತ್ರಿಕರಣವೆಂದರೆ ಶರೀರ, ಮಾತು ಮತ್ತು ಮನಸ್ಸು . ಹಾಗೆ, ತ್ರಿಕರಣಗಳ ಶುದ್ಧತೆಯೇ ಪ್ರಮುಖ ಉದ್ದೇಶವಾಗಿ ತೀರ್ಥಯಾತ್ರೆಗಳನ್ನು ಮತ್ತು ಮಹಾನದಿಗಳಲ್ಲಿನ ಪುಣ್ಯಸ್ನಾನವನ್ನು ‘ನೇಮ’ವಾಗಿ ವಿಧಿಸಲಾಗಿದೆ.

ತೀರ್ಥಸ್ನಾನ, ಕ್ಷೇತ್ರಯಾತ್ರೆ ಮತ್ತು ಅಲೌಕಿಕತೆ...

ವಿದ್ಯಮಾನ

ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

ಭಾರತೀಯ ಸನಾತನ ಪರಂಪರೆಯಲ್ಲಿ, ಆಧ್ಯಾತ್ಮಿಕ ಉನ್ನತಿಯನ್ನು ತಲುಪಲು ಮತ್ತು ಮೋಕ್ಷವನ್ನು ಸಾಧಿಸಲು ತ್ರಿಕರಣಗಳ ಶುದ್ಧತೆಯ ಅಗತ್ಯವನ್ನು ಒತ್ತಿಹೇಳಲಾಗಿದೆ. ತ್ರಿಕರಣವೆಂದರೆ ಶರೀರ, ಮಾತು ಮತ್ತು ಮನಸ್ಸು . ಹಾಗೆ, ತ್ರಿಕರಣಗಳ ಶುದ್ಧತೆಯೇ ಪ್ರಮುಖ ಉದ್ದೇಶವಾಗಿ ತೀರ್ಥಯಾತ್ರೆಗಳನ್ನು ಮತ್ತು ಮಹಾನದಿಗಳಲ್ಲಿನ ಪುಣ್ಯಸ್ನಾನವನ್ನು ‘ನೇಮ’ವಾಗಿ ವಿಧಿಸಲಾಗಿದೆ.

ಬರೋಬ್ಬರಿ 12 ವರ್ಷಗಳ ದೀರ್ಘಾವಧಿಯ ನಂತರ, ನಾಳೆಯಿಂದ (ಜ.13) ಮಹಾ ಕುಂಭಮೇಳವು ಆರಂಭ ವಾಗಲಿದ್ದು, ಇದು ಫೆಬ್ರವರಿ ೨೬ರ ಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ. ಉತ್ತರಪ್ರದೇಶ ಸರಕಾರದ ಪ್ರಯತ್ನದ ಫಲವಾಗಿ ಪ್ರಯಾಗ್ ರಾಜ್‌ನಲ್ಲಿ ಈ ಮಹಾ ಕುಂಭಮೇಳವು ವ್ಯವಸ್ಥಿತವಾಗಿ ಮತ್ತು ಅದ್ದೂರಿಯಾಗಿ ನಡೆಯಲಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಆಚರಣೆ ಮತ್ತು ಆಧ್ಯಾತ್ಮಿಕ ಮೇಳ ಎಂದು ಪರಿಗಣಿಸಲ್ಪಟ್ಟಿರುವ ಈ ಮಹಾ ಕುಂಭಮೇಳದ ಸಂದರ್ಭದಲ್ಲಿ ದೇಶ-ವಿದೇಶಗಳ ಕೋಟ್ಯಂತರ ಜನರು, ‘ತೀರ್ಥರಾಜ’ ಎಂದೇ ಕರೆಯಲ್ಪಡುವ ಪ್ರಯಾಗ್‌ರಾಜ್‌ಗೆ ಬಂದು ಪವಿತ್ರಸ್ನಾನವನ್ನು ಮಾಡುತ್ತಾರೆ.

image-3652bcc4-00e3-4195-9dad-86f68630cccb.jpg

ಮಹಾ ಕುಂಭಮೇಳವು ಜಗತ್ತಿನ ಅತ್ಯಂತ ಹಳೆಯ ಧಾರ್ಮಿಕ ಆಚರಣೆ ಎಂದೂ ಹೇಳಲಾಗುತ್ತದೆ. ಎಷ್ಟು ಹಳೆಯ ದೆಂದರೆ, ಪುರಾಣಗಳಲ್ಲಿ ಹೇಳಿರುವ ಸಮುದ್ರಮಥನ ಕಾಲದಷ್ಟು ಹಿಂದಕ್ಕೆ ಇದು ನಮ್ಮನ್ನು ಕರೆದೊ ಯ್ಯುತ್ತದೆ. ಇದಕ್ಕಿಂತ ಪ್ರಾಚೀನವಾದ ಮತ್ತಾವುದೇ ಧಾರ್ಮಿಕ ಆಚರಣೆಯು ಇನ್ನೂ ಎಲ್ಲಿಯೂ ಲಿಖಿತ ರೂಪದಲ್ಲಿ ಕಂಡುಬಂದಿಲ್ಲವಂತೆ.

ಮಹಾ ಕುಂಭಮೇಳದಲ್ಲಿನ ‘ಸ್ನಾನ-ಧ್ಯಾನ’ಕ್ಕೆ ಅವುಗಳದೇ ಆದ ಮಹತ್ವವಿದೆ. ಪ್ರತಿ 12 ವರ್ಷಗಳಿಗೊಮ್ಮೆ, ದೇಶದ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯನಿ ಮತ್ತು ನಾಸಿಕ್‌ನಲ್ಲಿ ಮಾತ್ರವೇ ನಡೆಸಲ್ಪಡುವ ಮಹಾ ಕುಂಭಮೇಳವು ಕೋಟ್ಯಂತರ ಜನರ ಶ್ರದ್ಧಾ-ಭಕ್ತಿ, ಭಾವಪರವಶತೆಗಳ ಅಭಿವ್ಯಕ್ತಿಗೊಂದು ಪರ್ವಕಾಲ. ಈ ಪೈಕಿ ಹರಿದ್ವಾರ, ಉಜ್ಜಯನಿ ಮತ್ತು ನಾಸಿಕ್ ಗಳಲ್ಲಿ ತಲಾ ಒಂದು ನದಿ ಮಾತ್ರ ಇದ್ದರೆ, ಪ್ರಯಾಗ್‌ರಾಜ್‌ನಲ್ಲಿ ಮೂರು ನದಿಗಳಸಂಗಮವಿದೆ. ಅಂದರೆ, ಹರಿದ್ವಾರದಲ್ಲಿ ಗಂಗಾ, ಉಜ್ಜಯನಿಯಲ್ಲಿ ಕ್ಷಿಪ್ರಾ ಮತ್ತು ನಾಸಿಕ್‌ನಲ್ಲಿ ಗೋದಾವರಿ ನದಿ ಇದ್ದರೆ, ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ನೆಲೆ ಪ್ರಯಾಗ್ ರಾಜ್. ಆದ್ದರಿಂದ, ಪ್ರಯಾಗ್‌ ರಾಜ್‌ಗೆ ಯಾತ್ರಾಸ್ಥಳಗಳ ಪೈಕಿ ಉನ್ನತ ಸ್ಥಾನವನ್ನು ನೀಡಲಾಗಿದೆ ಹಾಗೂ ಇಲ್ಲಿನ ಮಹಾ ಕುಂಭಮೇಳದಲ್ಲಿ ಮಾಡುವ ಪುಣ್ಯಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ.

ಭಾರತೀಯ ಸನಾತನ ಪರಂಪರೆಯಲ್ಲಿ, ಆಧ್ಯಾತ್ಮಿಕ ಉನ್ನತಿಯನ್ನು ತಲುಪಲು ಮತ್ತು ಮೋಕ್ಷವನ್ನು ಸಾಽಸಲುತ್ರಿಕರಣಗಳ ಶುದ್ಧತೆಯ ಅಗತ್ಯವನ್ನು ಒತ್ತಿಹೇಳಲಾಗಿದೆ. ತ್ರಿಕರಣವೆಂದರೆ ಶರೀರ, ಮಾತು ಮತ್ತು ಮನಸ್ಸು (ಕಾಯಾ, ವಾಚಾ, ಮನಸಾ). ಹಾಗೆ, ತ್ರಿಕರಣಗಳ ಶುದ್ಧತೆಯೇ ಪ್ರಮುಖ ಉದ್ದೇಶವಾಗಿ ತೀರ್ಥಯಾತ್ರೆಗಳನ್ನು ಮತ್ತುಮಹಾನದಿಗಳಲ್ಲಿನ ಪುಣ್ಯಸ್ನಾನವನ್ನು ‘ನೇಮ’ವಾಗಿ ವಿಧಿಸಲಾಗಿದೆ. ಹಾಗೆ ದೂರದೂರಿಗೆ ಯಾತ್ರೆಗೆ ತೆರಳಲಾಗ ದವರು ಮನೆಯಲ್ಲೇ ಸ್ನಾನ ಮಾಡುವಾಗ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂಮತ್ತು ಕಾವೇರಿ ಎಂಬ 7 ನದಿಗಳನ್ನು ಸ್ಮರಣೆ ಮಾಡುವುದೂ ರೂಢಿಯಲ್ಲಿದೆ.

ಕಾಶೀಯಾತ್ರೆಯನ್ನು ಕಾರಣಾಂತರ ಗಳಿಂದ ಕೈಗೊಳ್ಳಲಾಗದವರು ‘ನಾನು ಕಾಶಿಗೆ ಹೋಗುತ್ತೇನೆ ಮತ್ತು ಕೆಲಕಾಲ ಅಲ್ಲಿ ವಾಸವಿರುತ್ತೇನೆ’ (ಅಹಂ ಕಾಶೀಂ ಗಮಿಷ್ಯಾಮಿ ತತ್ರೈವ ನಿವಸಾಮ್ಯಹಂ’ ಎಂದು ತಮ್ಮಷ್ಟಕ್ಕೆ ತಾವು ಹೇಳಿ ಕೊಂಡರೂ ಸಾಕು, ಅವರಿಗೆ ಯಾತ್ರೆಯ ಫಲ ದೊರಕುವುದು ಎಂದು ನಂಬಲಾಗಿದೆ. ಸ್ಕಂದ ಪುರಾಣದ ಕಾಶೀ ಖಂಡದಲ್ಲಿ, ‘ಮರಣಂ ಮಂಗಲಂ ಯತ್ರ, ವಿಭೂತಿಶ್ಚ ವಿಭೂಷಣಂ. ಕೌಪೀನಂ ಯತ್ರ ಕೌಶೇಯಂ, ಸಾ ಕಾಶೀ ಕೇನಮೀಯತೇ?’ ಎನ್ನುವ ಕಾಶೀಕ್ಷೇತ್ರ ವರ್ಣನೆಯ ಮಾತಿದೆ. ಯಾವ ಊರಿನಲ್ಲಿ ಮರಣವನ್ನೂ ಮಂಗಲವೆಂದು ಆಚರಿಸುತ್ತಾರೋ, ಭಸ್ಮವನ್ನೇ ಅಲಂಕಾರವೆಂದು ಭಾವಿಸುತ್ತಾರೋ ಮತ್ತು ಲಂಗೋಟಿಯನ್ನು ಪೀತಾಂಬರದಷ್ಟೇ ಗೌರವಿಸುತ್ತಾರೋ ಅಂಥಾ ಕಾಶೀಕ್ಷೇತ್ರ ಯಾರಿಗೆ ತಾನೇ ಬೇಡ? ಎನ್ನುವುದು ಈ ಶ್ಲೋಕದ ಅರ್ಥ.

ಹಿಂದೂ ಧರ್ಮದಲ್ಲಿ, ಒಂದು ಪವಿತ್ರನದಿ ಅಥವಾ ನದಿಗಳ ಸಂಗಮಸ್ಥಾನ, ಪರ್ವತ ಅಥವಾ ಇತರ ಸ್ಥಳವನ್ನುದೇವತೆಗಳು ಅಥವಾ ಸಾಧು-ಸಂತರ ಜತೆಗಿನ ಬೆಸುಗೆಯ ಆಧಾರದಲ್ಲಿ ‘ಪವಿತ್ರ ಸ್ಥಳ’ ಎಂದು ಗುರುತಿಸುತ್ತಾರೆ. ಏಳುಪವಿತ್ರ ಹಿಂದೂ ನಗರಗಳು, ಪೌರಾಣಿಕ ಗ್ರಂಥದಲ್ಲಿ ವಿವರಿಸಲಾದ ಘಟನೆಗಳ ಮೂಲತಾಣಗಳಾಗಿವೆ ಎನ್ನಲಾಗು ತ್ತದೆ (ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ, ಪುರಿ ದ್ವಾರಾವತೀ ಚೈವ ಸಪ್ತೈತೇ ಮೋಕ್ಷ ದಾಯಿನಃ). ಕಾಶಿ (ಶಿವನ ಅವಿಮುಕ್ತ ಕ್ಷೇತ್ರ), ಔಧ್ ಅಥವಾ ಅಯೋಧ್ಯೆ (ಶ್ರೀರಾಮನ ಜನ್ಮಸ್ಥಳ), ಮಥುರಾ(ಶ್ರೀಕೃಷ್ಣನ ಜನ್ಮಸ್ಥಾನ), ದ್ವಾರಕಾ (ಅಲ್ಲಿ ವಯಸ್ಕ ಕೃಷ್ಣನು ರಾಜನಾಗಿ ಆಳಿದನು), ಕಾಂಚೀಪುರಂ, ಮಾಯಾ (ಆಂದರೆ ಹರಿದ್ವಾರ) ಮತ್ತು ಆವಂತಿಕಾ (ಅಂದರೆ ಉಜ್ಜಯಿನಿ) ಇವುಗಳನ್ನು ‘ಮೋಕ್ಷಪ್ರದ ಕ್ಷೇತ್ರಗಳು’ ಎಂದುಗುರುತಿಸಲಾಗಿದೆ. ಹಾಗಾಗಿ, ಈ ಏಳೂ ಕ್ಷೇತ್ರಗಳ ಪ್ರವಾಸವನ್ನು ‘ತೀರ್ಥಯಾತ್ರೆ’ ಎನ್ನುವುದು ವಾಡಿಕೆ.

ಅಷ್ಟೇ ಅಲ್ಲದೆ, ಮೇಲೆ ಉಲ್ಲೇಖಿಸಲಾಗಿರುವ ಏಳು ಪವಿತ್ರ ನದಿಗಳಲ್ಲಿನ ಅಥವಾ ನದಿಗಳ ಸಂಗಮದಲ್ಲಿನ ಸ್ನಾನವನ್ನು ವಿಶೇಷವಾಗಿ ಪಾಪದ ಶುದ್ಧೀಕರಣಕ್ಕಾಗಿ ಮತ್ತು ಮೋಕ್ಷಾರ್ಥವಾಗಿ ಆಚರಿಸುವುದೂ ಇದೆ.ಹಿಂದೂಗಳು ಭಕ್ತಿಯ ಕ್ರಿಯೆಯಾಗಿ, ಸಂಕಲ್ಪವನ್ನು ಕೈಗೊಳ್ಳಲು, ದೇವತೆಗಳನ್ನು ಪ್ರಸನ್ನಗೊಳಿಸಲು ಅಥವಾಧರ್ಮಾರ್ಥಗಳ ಸಮೃದ್ಧಿಯನ್ನು ಬಯಸಿ ತೀರ್ಥಯಾತ್ರೆಯನ್ನು ನಡೆಸುತ್ತಾರೆ. ತೀರ್ಥವನ್ನು ತಲುಪಿದನಂತರ ಯಾತ್ರಿಕರು ಸಾಮಾನ್ಯವಾಗಿ ಸ್ನಾನ, ಅರ್ಘ್ಯಪ್ರದಾನ, ಅಲ್ಲಿನ ದೇವಾಲಯ ಅಥವಾ ಪವಿತ್ರಸ್ಥಳದಪ್ರದಕ್ಷಿಣೆ, ನೈವೇದ್ಯ ಸಮರ್ಪಣೆ ಮತ್ತು ಸತ್ತ ಪೂರ್ವಜರ ಗೌರವಾರ್ಥವಾಗಿ ಶ್ರಾದ್ಧಾದಿ ಕರ್ಮಗಳಂಥ ವಿಧಿಗಳನ್ನುಕೈಗೊಳ್ಳುತ್ತಾರೆ. ‘ಬ್ರಹ್ಮಚರ್ಯ-ಗೃಹಸ್ಥ-ವಾನಪ್ರಸ್ಥ-ಸನ್ಯಾ ಸ’ ಹೀಗೆ ಎಲ್ಲಾ ಆಶ್ರಮದವರೂ ತೀರ್ಥಯಾತ್ರೆ ಮಾಡುವ ಸಂಪ್ರದಾಯವು ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡುಬಂದಿದೆ.

ಪ್ರಾಯಶಃ ಇನ್ನಾವ ದೇಶದ ಸಂಸ್ಕೃತಿಯಲ್ಲೂ ಅಥವಾ ಧರ್ಮದಲ್ಲೂ ತೀರ್ಥಯಾತ್ರೆಯ ನೇಮವನ್ನು ವಿಧಿಸಿಲ್ಲ ವೇನೋ! ಇರಲಿ, ‘ತೀರ್ಥ’ ಎಂದರೇನು ಎಂಬುದನ್ನು ಈಗ ನೋಡೋಣ. ಎಷ್ಟೋ ಮಹಾತ್ಮರ ಹೆಸರುಗಳಲ್ಲೂ ‘ತೀರ್ಥ’ ಎಂಬ ಶಬ್ದವಿರುವುದನ್ನು ಕಾಣುತ್ತೇವೆ. ಉದಾಹರಣೆಗೆ, ವಿದ್ಯಾತೀರ್ಥರು, ಭಾರತೀ ತೀರ್ಥರು, ಆನಂದ ತೀರ್ಥರು ಇತ್ಯಾದಿ. ‘ತೀರ್ಥರೂಪರಾದ ತಂದೆಯವರು’ ಎಂದೆಲ್ಲಾ ಕರೆಯುವುದು ನಮಗೆ ತಿಳಿದೇ ಇದೆ.

ಶ್ರೀ ವಿಷ್ಣು ಸಹಸ್ರನಾಮದಲ್ಲಿ ಭಗವಂತನನ್ನು ‘ಮನೋಜವಃ ತೀರ್ಥಕರಃ’ ಎಂದೇ ಕರೆಯಲಾಗಿದೆ. ಇನ್ನು ಪ್ರಯಾಗಕ್ಕೆ ‘ತೀರ್ಥರಾಜ’ ಎಂಬ ಹೆಸರಿದೆ. ಸಾಲು ಸಾಲು ತೀರ್ಥಗಳು ಇರುವುದರಿಂದ ಕಾಶ ಕ್ಷೇತ್ರವನ್ನು ‘ತೀರ್ಥ ರಾಜಿ’ ಎಂದೇ ಕರೆಯಲಾಗಿದೆ (‘ರಾಜಿ’ ಎಂದರೆ ‘ಸಾಲು’ ಎಂದರ್ಥ). ಹಾಗಾದರೆ, ‘ತೀರ್ಥ’ವೆಂಬ ಸಂಸ್ಕೃತಪದವು ಹೇಗೆ ಬಂದಿತೆಂದು ನೋಡೋಣ. ಇದು ಬಂದಿರುವುದು ‘ತೄ’ ಪ್ಲವನ-ತರಣಯೋಃ’ ಎಂಬ ಧಾತುವಿನಿಂದ. ತರಣವೆಂದರೆ ದಾಟುವುದು. ‘ಸಂಸಾರಸಾಗರಂ ಘೋರಂ’ ಎನ್ನುತ್ತಾರಲ್ಲವೇ? ಆ ಘೋರವಾದ ಸಾಗರವನ್ನೂ ಸುಲಭವಾಗಿ ತರಣ ಮಾಡಿಸಬಲ್ಲದ್ದು ಅಥವಾ ದಾಟಿಸಬಹುದಾದದ್ದು ಎಂದರ್ಥ.

“ಕಾಶಿಕ್ಷೇತ್ರಂ ಶರೀರಂ ತ್ರಿಭುವನ-ಜನನೀ ವ್ಯಾಪಿನೀ ಜ್ಞಾನಗಂಗಾ, ಭಕ್ತಿಃ ಶ್ರದ್ಧಾಗಯೇಯಂ ನಿಜಗುರು-ಚರಣಾ ಧ್ಯಾನಯೋಗಾಃ ಪ್ರಯಾಗಾಃ | ವಿಶ್ವೇಶೋಯಂ ತುರೀಯಃ ಸಕಲಜನ ಮನಃಸಾಕ್ಷಿಭೂತೋಂತರಾತ್ಮಾ, ದೇಹೇ ಸರ್ವಂ ಮದಿಯೇ ಯದಿ ವಸತಿ ಪುನಸ್ತೀರ್ಥಮನ್ಯಃ ಕಿಮಸ್ತಿ?"- ಶ್ರೀ ಶಂಕರ ಭಗವತ್ಪಾದಾಚಾರ್ಯರ ‘ಕಾಶೀ ಪಂಚಕ’ದ ಈ ಶ್ಲೋಕವು, ಸಂಪೂರ್ಣ ಕಾಶೀಕ್ಷೇತ್ರವನ್ನು ವರ್ಣಿಸುವುದರ ಪರಾಕಾಷ್ಠೆಯಾಗಿದೆ.

ಇದು, ‘ಸ್ವಯಂ-ಸಾಕ್ಷಾತ್ಕಾರವಾದ ವ್ಯಕ್ತಿಯ ದೇಹವು ಸ್ವತಃ ಕಾಶಿಯೇ ಆಗಿರುತ್ತದೆ ಮತ್ತು ಅವನು ಬೇರಾವುದೇ ದೇವಾಲಯ ಅಥವಾ ತೀರ್ಥಕ್ಷೇತ್ರಕ್ಕೆ ಹೋಗುವ ಅಗತ್ಯವಿರುವುದಿಲ್ಲ’ ಎಂದು ಘೋಷಿಸುತ್ತದೆ. ಬ್ರಹ್ಮಾನಂದದ ಅಮೃತವನ್ನು ಕುಡಿಯುವುದರಿಂದ ಜೀವನ್ಮುಕ್ತರುಗಳ ಉಪಸ್ಥಿತಿಯು ಪುಣ್ಯಕ್ಷೇತ್ರದಂತಿದೆ ಮತ್ತು ಸಾಕ್ಷಾತ್ಕಾರ ಗೊಂಡ ಆತ್ಮಗಳ ಸಹವಾಸಕ್ಕಿಂತ ಬೇರಾವುದೇ ದೇವಾಲಯವು ಉತ್ತಮವಾಗಿರುವುದಿಲ್ಲ ಎಂಬ ಸಂದೇಶವನ್ನು ಆಚಾರ್ಯರು ಈ ಸ್ತೋತ್ರದಲ್ಲಿ ಸಾರುತ್ತಾರೆ.

ಕಾಶಿ ವಿಶ್ವನಾಥನ ದೇವಾಲಯವು ದೇಹವೇ ಆಗಿದೆ ಮತ್ತು ಮೂರು ಲೋಕಗಳ ತಾಯಿಯಾದ ಗಂಗೆಯು, ಮೂರುಲೋಕಗಳಲ್ಲಿ ಸಂಚರಿಸುವ ಬುದ್ಧಿ, ಭಕ್ತಿ ಮತ್ತು ಶ್ರದ್ಧೆಗಳು ಗಯಾ ಕ್ಷೇತ್ರ ಮತ್ತು ಒಬ್ಬರ (ನಿಜ) ಧ್ಯಾನಸ್ಥಾನ, ಗುರುವಿನ ಪಾದವೇ ಪುಣ್ಯ ಪ್ರಯಾಗ ಎನ್ನುತ್ತಾ ಆಚಾರ್ಯರು ಮೂರು ಪುಣ್ಯನದಿಗಳ ಸಂಗಮವಾದ ಪ್ರಯಾಗ ವನ್ನು ಗುರುವಿನ ಪಾದಗಳೊಂದಿಗೆ ಸಮೀಕರಿಸುತ್ತಾರೆ.

ಪುಷ್ಕರ-ನೈಮಿಷಾರಣ್ಯ-ಪ್ರಯಾಗ ಮೊದಲಾದವುಗಳನ್ನು ‘ಸ್ಥಾವರತೀರ್ಥ’ಗಳೆಂದು ಕರೆಯಲಾಗಿದೆ. ಅಂದರೆ, ಸ್ಥಿರವಾಗಿ ನಿಂತಿರುವಂಥವು ಎಂದರ್ಥ. ಸತ್ಯ-ಕ್ಷಮೆ-ಇಂದ್ರಿಯನಿಗ್ರಹಗಳನ್ನು ‘ಅಂತಃಸ್ತೀರ್ಥ’ವೆಂದು ಕರೆಯ ಲಾಗಿದೆ. ಶರೀರವೇ ಕಾಶಿ, ಜ್ಞಾನವೇ ಗಂಗೆ, ಭಕ್ತಿ-ಶ್ರದ್ಧೆಗಳೇ ಗಯೆ ಹಾಗೂ ಗುರುಚರಣ ಧ್ಯಾನವೇ ಪ್ರಯಾಗ! ಈ ರೀತಿಯಲ್ಲಿ ವಿಚಾರ ಮಾಡಿದರೆ ಪಾಪಾತ್ಮರೂ ತೀರ್ಥಕ್ಷೇತ್ರ ಪ್ರವಾಸ ಮಾಡಬೇಕಾಗಿ ಬರುವುದಿಲ್ಲ ಎಂದಂತಾ ಯಿತು. ಅದರಲ್ಲೂ, ಪಾಪದ ಲವಲೇಶವೂ ಇಲ್ಲದ ಅವಧೂತರು, ಪರಮಹಂಸರು ಮತ್ತು ಭಗವಂತನ ನಿತ್ಯ ಸೂರಿಗಳು ಏಕೆ ತೀರ್ಥಯಾತ್ರೆ ಮಾಡಬೇಕು? ಕಾಶೀ-ಗಂಗೆಗಳು, ಗಯಾ-ಪ್ರಯಾಗಗಳು ನಮ್ಮ ಶರೀರದಲ್ಲಿಯೇ ಇವೆಯೆಂದು ಶಂಕರ ಭಗವತ್ಪಾದರ ಕಾಶೀಪಂಚಕವು ಹೇಳಿದ ಮೇಲೆ, ತೀರ್ಥಪರ್ಯಟನೆಯ ಅಗತ್ಯವೆಂತು? ಅದರಲ್ಲೂ, ಸ್ವಯಂ ಮಹಾತ್ಮರಾದವರಿಗೆ, ನಿತ್ಯಮುಕ್ತರಾದವರಿಗೆ ಹಾಗೂ ಸಿದ್ಧರಾದವರಿಗೆ ತೀರ್ಥಯಾತ್ರೆಯಿಂದ ಆಗುವುದೇನು? ಎನ್ನುವ ಪ್ರಶ್ನೆ ಏಳುವುದು ಸ್ವಾಭಾವಿಕವೇ. ಸ್ಥಾವರತೀರ್ಥಗಳಿಗೆ ಅಥವಾ ಸದಾ ಚಲನಶೀಲವಾದ ನದಿಗಳಿಗೆ ‘ತೀರ್ಥತ್ವ’ವು ಎಲ್ಲಿಂದ ಬಂತು ಎನ್ನುವುದನ್ನು ತಿಳಿದರೆ ನಮ್ಮ ಸಂಶಯಕ್ಕೆ ಪರಿಹಾರ ಸಿಗುತ್ತದೆ.

‘ತೀರ್ಥೀಕುರ್ವಂತಿ ತೀರ್ಥಾನಿ, ತೀರ್ಥಭೂತಾ ಹಿ ಸಾಧವಃ’- ಅಂದರೆ ಸಾಧುಗಳೇ ತೀರ್ಥಭೂತರಾದವರು.ಆ ಜಂಗಮತೀರ್ಥರು ಹಾಗೂ ತೀರ್ಥಪಾದರುಗಳು ಈ ಸ್ಥಾವರತೀರ್ಥಗಳ ಬಳಿ ಸಾಗಿ ನದಿಗಳಲ್ಲಿ ಪಾದಸ್ಪರ್ಶಮಾಡಿದಾಗ, ಅವರ ಈ ಪಾದಸ್ಪರ್ಶದಿಂದಲೇ ಅವಕ್ಕೆ ತೀರ್ಥತ್ವ ಉಂಟಾಗುತ್ತದೆ ಎಂದಿದ್ದಾರೆ ನಮ್ಮ ಪ್ರಾಚೀನರು.

ಅಲ್ಲದೇ, ಗಂಗಾವತರಣದ ಕಾಲದಲ್ಲಿ ಗಂಗಾಮಾತೆಯು ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ- “ಜಗದ ಕೊಳೆಯನ್ನೆಲ್ಲಾಕಳೆಯುವ ಕರ್ತವ್ಯವನ್ನು ನನಗೆ ಕೊಟ್ಟೆ! ಆದರೆ ಜಗದ ಜನರ ಪಾಪರಾಶಿಗಳಿಂದಲೇ ತುಂಬಿಕೊಂಡ ನನ್ನ ಉದ್ಧಾರವೆಂತು?’. ಅದಕ್ಕೆ ಭಗವಂತ, “ನೀನು ಉಗಮಿಸಿ ಸಂಚರಿಸುವ ಭೂಭಾಗಗಳಲ್ಲಿ, ನನ್ನ ಹೃದಯಸ್ಥಾನ ದಲ್ಲಿರುವ ಅಥವಾ ನನ್ನದೇ ವಿಭೂತಿಗಳಿಂದ ತುಂಬಿರುವ ಭಾಗವತ ಜನರು ಅವತರಿಸಿರುತ್ತಾರೆ. ಅವರು ಜಗತ್ತಿನ ಕಲ್ಯಾಣದ ಕಾರ್ಯತತ್ಪರತೆಯಿಂದ ಸಂಚರಿಸುತ್ತಿರುವಾಗ ನಿನ್ನಲ್ಲೂ ಬರುತ್ತಾರೆ. ಅವರ ಪಾದಸ್ಪರ್ಶದಿಂದಲೇ ನಿಮ್ಮ ಪಾಪರಾಶಿಗಳು ಕರಗುವುದಷ್ಟೇ ಅಲ್ಲದೇ, ನಿನಗೆ ತೀರ್ಥತ್ವ ಪ್ರಾಪ್ತಿಯಾಗುತ್ತದೆ" ಎಂದನಂತೆ. ಸನ್ಯಾಸಿಗಳು, ತಪಸ್ವಿಗಳು, ಅವಧೂತರುಗಳು, ಪರಮಹಂಸರುಗಳು ಸ್ವತಃ ತೀರ್ಥಪಾದರುಗಳೇ ಆಗಿದ್ದರೂ ತೀರ್ಥಯಾತ್ರೆಯನ್ನು ಕೈಗೊಳ್ಳುವ ಉದ್ದೇಶ ಇದುವೇ ಆಗಿದೆ!

ಈ ಎಲ್ಲ ಕಾರಣಗಳಿಗಾಗಿ, ಇಂದಿನ ಆಧುನಿಕ ಯುಗದಲ್ಲೂ ಭಾರತೀಯರು ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವು ದನ್ನು, ಪುಣ್ಯನದಿಗಳಲ್ಲಿ ಸ್ನಾನ ಮಾಡುವುದನ್ನು ಜೀವನದ ಗುರಿ ಮತ್ತು ಮಹತ್ವಾಕಾಂಕ್ಷೆ ಎಂದೇ ಪರಿಗಣಿಸುತ್ತಾರೆ ಮತ್ತು ಹಾಗೆ ಯಾತ್ರೆಯನ್ನು ಕೈಗೊಂಡಾಗ ಮಾನಸಿಕವಾಗಿ ಒಂದು ತರಹದ ದಿವ್ಯಭಾವವನ್ನು ಹೊಂದುತ್ತಾರೆ. ಅಂಥ ಅಲೌಕಿಕ ಅನುಭೂತಿಯ ಖಾತ್ರಿಯಿಲ್ಲದೇ ಕೋಟ್ಯಂತರ ಭಾರತೀಯರು ಸುಮ್ಮನೇ ಪ್ರಯಾಗ್‌ರಾಜ್‌ನತ್ತ ಹರಿದುಬರಲು ಸಾಧ್ಯವೇ?

ಇದನ್ನೂ ಓದಿ: Vinayaka Mathapathy Column: ಬೆಳಗಾವಿ ಆಟ: ರವಿಯ ಮೇಲಾಟ