Insufficient Sleep: ಎಚ್ಚರ! 3 ದಿನಗಳ ಕಡಿಮೆ ನಿದ್ರೆ ಬದುಕನ್ನೇ ಕಸಿಯಬಹುದು
Health Tips: ಪ್ರತಿ ದಿನ ಹಾಸಿಗೆಯಲ್ಲಿ ಮಲಗಿ ಮೊಬೈಲ್ ಸ್ಕ್ರಾಲ್ ಮಾಡುತ್ತಾ, ರೀಲ್ಸ್ ನೋಡುತ್ತಾ ಕಡಿಮೆ ನಿದ್ದೆ ಮಾಡುವವರು ನೀವಾಗಿದ್ದರೆ ಇಲ್ಲಿದೆ ಎಚ್ಚರಿಕೆಯ ಕರೆಗಂಟೆ. ಹೊಸ ಸಂಶೋಧನೆಯೊಂದು ಕಡಿಮೆ ನಿದ್ದೆ ಮಾಡುವವರಲ್ಲಿ ಹೃದಯದ ಕಾಯಿಲೆ ಕಾಣಿಸಿಕೊಳದಳಬಹುದು ಎಂದು ತಿಳಿಸಿದೆ. ಈ ಕುರಿತಾದ ವಿವ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಆರೋಗ್ಯವಂತ ಮನುಷ್ಯನಿಗೆ ನೀರು, ಆಹಾರದ ಜತೆಗೆ ನಿದ್ದೆಯೂ ಬಹು ಮುಖ್ಯ. ವಯಸ್ಕರಿಗೆ ಕನಿಷ್ಠ 7 ಗಂಟೆಗಳ ನಿದ್ದೆ ಅಗತ್ಯ ಎನ್ನುತ್ತಾರೆ ವೈದ್ಯರು. ಆದರೆ ಆಧುನಿಕ ಜೀವನ ಶೈಲಿ, ಧಾವಂತದ ಬದುಕು, ಮಿತಿ ಮೀರಿದ ಕೆಲಸದ ಒತ್ತಡ ಹಲವರ ನಿದ್ದೆಯ ಅವಧಿ ಕಸಿಯುತ್ತಿದೆ. ಯುವ ಜನತೆಯಂತೂ ಮೊಬೈಲ್, ಲ್ಯಾಪ್ಟಾಪ್ ನೋಡುತ್ತ ನಿದ್ರಿಸುವುದನ್ನೇ ಮರೆತು ಬಿಟ್ಟಿದೆ. ಅಂತಹವರನ್ನು ಎಚ್ಚರಿಸುವ, ಬೆಚ್ಚಿ ಬೀಳಿಸುವ ಸಂಗತಿಯೊಂದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ (Health Tips). ಸರಿಯಾಗಿ ನಿದ್ರಿಸದಿದ್ದರೆ ಅದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ (Insufficient Sleep). ಆ ಮೂಲಕ ನಿದ್ದೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಅನೇಕರು ಆಹಾರ ಮತ್ತು ವ್ಯಾಯಾಮದತ್ತ ನೀಡುವ ಗಮನವನ್ನು ನಿದ್ದೆಯತ್ತ ಹರಿಸುವುದೇ ಇಲ್ಲ. ಆರೋಗ್ಯಕ್ಕೆ ಬಹುಮುಖ್ಯ ಎನಿಸಿಕೊಂಡಿರುವ ನಿದ್ರೆಯ ಕಡೆಗಣಿಸಿ ಬಿಡುತ್ತಾರೆ. ಆದಾಗ್ಯೂ ಹೊಸ ಸಂಶೋಧನೆಯು ಅಲ್ಪಾವಧಿಯ ನಿದ್ರೆಯು ದೈಹಿಕ ಬದಲಾವಣೆಯ ಜತೆಗೆ ಹೃದಯ ಕಾಯಿಲೆಗೆ ಕಾರಣವಾಗಬಹುದು ಎಂದು ಹೇಳಿದೆ. ಸತತ 3 ದಿನಗಳ ಕಾಲ ಕಡಿಮೆ ನಿದ್ದೆ ಮಾಡಿದರೆ ಅದು ಹೃದಯದ ಆರೋಗ್ಯದ ಅಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Jaggery Water: ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರು ಸೇವಿಸುವುದರಿಂದ ಈ ಆರೋಗ್ಯ ಲಾಭ ಇದೆ

ಕಡಿಮೆ ನಿದ್ದೆ ಮಾಡಿದರೆ ಏನಾಗುತ್ತದೆ?
ಇತ್ತೀಚೆಗೆ ಸ್ವೀಡನ್ನ ಉಪ್ಸಲಾ ವಿಶ್ವವಿದ್ಯಾಲಯದ ಸಂಶೋಧಕರು ಹೃದಯ ರಕ್ತನಾಳದ ಆರೋಗ್ಯದ ಮೇಲೆ ಅಲ್ಪಾವಧಿಯ ನಿದ್ರೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿಸುವ ಪ್ರಬಂಧವನ್ನು ಪ್ರಕಟಿಸಿದ್ದಾರೆ. 16 ಆರೋಗ್ಯವಂತ ಯುವಕರ ಮೇಲೆ ನಡೆಸಿದ ಪ್ರಯೋಗದ ಆಧಾರದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ. 16 ಆರೋಗ್ಯವಂತ ಯುವಕರನ್ನು 3 ದಿನಗಳ ಕಾಲ 2 ವಿಭಿನ್ನ ಅವಧಿಯಲ್ಲಿ ಮಲಗಿಸಲಾಯಿತು. ಮೊದಲ ಗುಂಪಿನ ಯುವಕರು ಸಾಮಾನ್ಯ ಅವಧಿಯ ನಿದ್ದೆ (ಸುಮಾರು 8.5 ಗಂಟೆಗಳು) ಮಾಡಿದರೆ ಮತ್ತೊಂದು ಗುಂಪಿನವರು ಕಡಿಮೆ ಅವಧಿಗಳ ಕಾಲ (ಸುಮಾರು 4.25 ಗಂಟೆಗಳು) ನಿದ್ರಿಸಿದರು. ಎರಡೂ ಗುಂಪುಗಳ ಯುವಕರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು. ಅದರ ಪ್ರಕಾರ ಕಡಿಮೆ ನಿದ್ರಿಸಿದವರು ಹೃದಯ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ ಎನ್ನುವ ಅಂಶ ಬಯಲಾಗಿದೆ. ಇವರ ರಕ್ತದಲ್ಲಿ ಹೃದ್ರೋಗಕ್ಕೆ ಕಾರಣವಾಗುವ ಪ್ರೋಟೀನ್ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹೀಗಾಗಿ ಪ್ರತಿದಿನ ಕನಿಷ್ಠ 8 ಗಂಟೆಗಳ ನಿದ್ರೆ ಮಾಡುವಂತೆ ಸಲಹೆ ನೀಡಿದ್ದಾರೆ.
3 ರಾತ್ರಿ ಕಡಿಮೆ ಅವಧಿಗಳ ಕಾಲ ನಿದ್ರಿಸಿದ ಯುವಕರಲ್ಲಿ ಹೃದಯ ರಕ್ತನಾಳದ ಕಾಯಿಲೆಗೆ ಸಂಬಂಧಿಸಿದ 16 ಪ್ರೋಟೀನ್ಗಳಲ್ಲಿ ಗಮನಾರ್ಹ ಹೆಚ್ಚಳವಾಗಿರುವುದು ಕಂಡುಬಂದಿದೆ. ಈ ಪ್ರೋಟೀನ್ಗಳು ಇಂಟರ್ಲ್ಯೂಕಿನ್ಗಳು ಮತ್ತು ಕೀಮೋಕಿನ್ಗಳನ್ನು ಒಳಗೊಂಡಿವೆ. ವ್ಯಾಯಾಮದ ಮೂಲಕ ಐಎಲ್-6 (ಇಂಟರ್ಲ್ಯೂಕಿನ್-6) ಮತ್ತು ಬಿಡಿಎನ್ಎಫ್ (Brain-Derived Neurotrophic Factor)ನಂತಹ ಪ್ರಯೋಜನಕಾರಿ ಪ್ರೋಟೀನ್ಗಳನ್ನು ಹೆಚ್ಚಿಸಿದರೂ, ಅವಕ್ಕೆ ನಿದ್ರಾಹೀನತೆಯ ಪ್ರತಿಕೂಲ ಪರಿಣಾಮಗಳನ್ನು ಸಂಪೂರ್ಣವಾಗಿ ಎದುರಿಸಲು ಸಾಧ್ಯವಾಗಲಿಲ್ಲ ಎನ್ನುವ ಕಳವಳಕಾರಿ ಅಂಶವೂ ಬಯಲಾಗಿದೆ.
ಮೆದುಳಿಗೂ ಅಪಾಯಕಾರಿ
ನಿದ್ರಾಹೀನತೆ ಹೃದಯ ಮಾತ್ರವಲ್ಲ ಮೆದುಳನ ಆರೋಗ್ಯಕ್ಕೂ ಅಪಾಯಕಾರಿ. ಕೆಲವೊಂದು ಅಧ್ಯಯನಗಳಲ್ಲಿ 1 ರಾತ್ರಿಯ ಕಳಪೆ ನಿದ್ರೆ ಕೂಡ ರಕ್ತದಲ್ಲಿನ ಅಪಾಯಕಾರಿ ಪ್ರೋಟೀನ್ಗಳ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕಂಡು ಬಂದಿದೆ. ಇದು ಆಲ್ಝೈಮರ್ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸಂಶೋಧಕರುಎಚ್ಚರಿಸಿದ್ದಾರೆ.

ನಿದ್ರಾ ಹೀನತೆ ತಡೆಯಲು ಹೀಗೆ ಮಾಡಿ
- ನಿದ್ರೆಯ ವೇಳಾಪಟ್ಟಿಯನ್ನು ಸಿದ್ಧಪಡಿಸಿ: ಪ್ರತಿದಿನ ಒಂದೇ ಸಮಯದಲ್ಲಿ ಮಲಗಿ ಎದ್ದೇಳಿ.
- ನಿಮ್ಮ ಮಲಗುವ ಕೋಣೆಯನ್ನು ಕತ್ತಲೆಯಾಗಿ, ಶಾಂತವಾಗಿ ಮತ್ತು ತಂಪಾಗಿಡಿ.
- ಮಲಗುವ ಸಮಯಕ್ಕೆ ಕನಿಷ್ಠ 1 ಗಂಟೆ ಮೊದಲು ಮೊಬೈಲ್, ಲ್ಯಾಪ್ಟಾಪ್ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ.
- ಸಂಜೆ ಕೆಫೀನ್ ಅಥವಾ ಆಲ್ಕೋಹಾಲ್ನಂತಹ ಯಾವುದೇ ಪಾನೀಯಗಳನ್ನು ಸೇವಿಸದಿರಲು ಪ್ರಯತ್ನಿಸಿ.
- ಮಲಗುವ ಮುನ್ನ ಧ್ಯಾನ, ಯೋಗ ಅಥವಾ ಸರಳ ಸ್ಟ್ರೆಚಿಂಗ್ನಂತಹ ವ್ಯಾಯಾಮಗಳ ಅಭ್ಯಾಸ ಮಾಡಿ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದಲ್ಲದೆ, ಎದ್ದಾಗ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.