ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌M J Akbar Column: ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಅತಿದೊಡ್ಡ ಗಿಫ್ಟ್‌ ಇದು !

‘ಮೈಕ್ರೋ ಯುನಿಟ್ಸ್ ಡೆವಲಪ್‌ಮೆಂಟ್ ಆಂಡ್ ರೀ-ನಾನ್ಸ್ ಏಜೆನ್ಸಿ’ ಎಂದು ಹೇಳಿದರೆ ಎಲ್ಲರಿಗೂ ಅರ್ಥ ವಾಗಲಿಕ್ಕಿಲ್ಲ. ‘ಮುದ್ರಾ’ ಅಂದರೆ ಎಲ್ಲರಿಗೂ ತಿಳಿಯುತ್ತದೆ. ದಶಕದ ಹಿಂದೆ ಜಾರಿಗೆ ಬಂದ ‘ಮುದ್ರಾ’ ಯೋಜನೆ ಇಂದು ಸಾಕಷ್ಟು ಬಡವರಿಗೆ ಸಬಲೀಕರಣದ ಅಸವಾಗಿದೆ. ಅನೇಕರ ಹಸಿವನ್ನು ಇದು ನಿವಾರಿಸಿದೆ. ಬಹುಶಃ ಇದು ಸದ್ದಿಲ್ಲದೆ ಈ ದೇಶದಲ್ಲಿ ಉಂಟಾದ ಬಹುದೊಡ್ಡ ಆರ್ಥಿಕ ಕ್ರಾಂತಿ.

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಅತಿದೊಡ್ಡ ಗಿಫ್ಟ್‌ ಇದು !

Profile Ashok Nayak Apr 21, 2025 8:32 AM

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಮಾಧ್ಯಮಗಳು ಇಂದು ಮಿಡ್ಲ್ ಕ್ಲಾಸ್ ಆಗಿವೆ. ಅವು ಎಲ್ಲಿ ಆತ್ಮಾಭಿಮಾನವನ್ನು ಬಡಿದೆಬ್ಬಿಸುವ ಕೆಲಸ ಮಾಡಿರಲಿಲ್ಲವೋ ಅಲ್ಲಿ ಈ ಮಾತು ಸ್ವಲ್ಪ ತಮಾಷೆಯಾಗಿ ಕಾಣಬಹುದು. ಮುದ್ರಣ ಮಾಧ್ಯಮ ಇಂದಿಗೂ ತನ್ನ ಮೇಲ್ಮಧ್ಯಮ ವರ್ಗದ ಪ್ರಜ್ಞೆಯನ್ನು ಹಾಗೇ ಉಳಿಸಿಕೊಂಡಿದೆ. ಆದರೂ ‘ಖಾದಿ-ರಾಷ್ಟ್ರೀಯವಾದ’ ಒಂದು ಸಮಯದಲ್ಲಿ ಅತ್ಯುನ್ನತ ರಾಷ್ಟ್ರೀಯವಾದ ಎಂಬ ಮಟ್ಟವನ್ನು ತಲುಪಿತ್ತಲ್ಲವೇ, ಆ ಮಟ್ಟಕ್ಕಿಂತ ಮುದ್ರಣ ಮಾಧ್ಯಮ ಒಂದೆರಡು ಏಣಿ ಮೆಟ್ಟಿಲಿನಷ್ಟು ಕೆಳಗೇ ಇದೆ.

ಎಲ್ಲಾ ವಾದಕ್ಕೂ ಅಪಸ್ವರಗಳು ಇದ್ದೇ ಇರುತ್ತವೆ ಬಿಡಿ. ನನ್ನ ವಾದವನ್ನೂ ಕೆಲವರು ಒಪ್ಪದೆ ಇರಬಹುದು. ಆದರೆ, ಮಾಧ್ಯಮದ ಆತ್ಮಸಾಕ್ಷಿಯಲ್ಲಿ ಈ ವ್ಯವಸ್ಥೆ ಹದವಾಗಿ ಮಿಳಿತಗೊಳ್ಳಲು ಯಾವಾಗ ಆರಂಭವಾಯಿತೋ ಆ ಕ್ಷಣವನ್ನು ನಾವು ಗಮನಿಸಬೇಕು. ಮದನ ಮೋಹನ ಮಾಳವೀಯ ಅವರು ಪತ್ರಿಕೆಯನ್ನು ಖರೀದಿಸಿದ ಸಮಯದಿಂದ ಇದು ಆರಂಭವಾಗುತ್ತದೆ. ಬಳಿಕ ಜಿ.ಡಿ.ಬಿರ್ಲಾ ಅವರು ಆ ಪತ್ರಿಕೆಗೆ ಆರ್ಥಿಕ ಶಕ್ತಿ ನೀಡಬೇಕಾಯಿತು.

ಪತ್ರಿಕೆಯ ರಾಷ್ಟ್ರೀಯವಾದಿ ಪ್ರಜ್ಞೆಯ ಜತೆಗೆ ಯಾವುದೇ ರಾಜಿ ಮಾಡಿಕೊಳ್ಳದೆ ಅವರು ಪ್ರಸರಣ ಮತ್ತು ಆರ್ಥಿಕ ಆರೋಗ್ಯವನ್ನು ಹೆಚ್ಚಿಸಲು ನೆರವಾದರು. ಐತಿಹಾಸಿಕ ಅಕಾಲಿ ಚಳವಳಿ ಆಗಷ್ಟೇ ಹುಟ್ಟಿದ್ದ ಕಾಲವದು. ಪತ್ರಿಕೆಯ ಸಂಪಾದಕ ಕೆ.ಎಂ.ಪಣಿಕ್ಕರ್ ಆಗ ನಿರ್ವಹಿಸಿದ ಅದ್ಭುತವಾದ ಪಾತ್ರವನ್ನು ಯಾರಾದರೂ ಮರೆಯಲು ಸಾಧ್ಯವೇ? ಮರುಹುಟ್ಟು ಪಡೆದ ಪತ್ರಿಕೆಯನ್ನು 1924ರ ಸೆಪ್ಟೆಂಬರ್ 26ರಂದು ಮಹಾತ್ಮ ಗಾಂಧೀಜಿ ಉದ್ಘಾಟಿಸಿದ್ದರು. ಪಣಿಕ್ಕರ್ ಮತ್ತು ದೇವದಾಸ ಗಾಂಧಿಯವರು ಪತ್ರಿಕೆಯ ಮೂಲಕ ಕೇವಲ ಬ್ರಿಟಿಷರಿಗೆ ಮಾತ್ರ ಸವಾಲೆಸೆಯಲಿಲ್ಲ, ಜತೆಗೆ ಕಲ್ಕತ್ತಾ ದಲ್ಲಿ ಬ್ರಿಟಿಷ್ ಮೂಲದ ಸ್ಟೇಟ್ಸ್‌ಮನ್ ಪತ್ರಿಕೆ ಹಾಗೂ ಮುಂಬೈನಲ್ಲಿನ ‘ಬೆನೆಟ್ ಆಂಡ್ ಕೋಲ್ಮನ್’ ಸಂಸ್ಥೆಯ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಳ ವಸಾಹತುಶಾಹಿ ಮೆರೆದಾಟಕ್ಕೂ ಸವಾಲೆಸೆ ದಿದ್ದರು.‌

ಶ್ರೀಮಂತಿಕೆಯ ಕಲ್ಪನೆ ಯಾವುದೇ ವಿಷಯ ಅಥವಾ ಕ್ಷೇತ್ರದಲ್ಲಾದರೂ ಇರಲಿ, ಅದಕ್ಕೊಂದು ವಿಶಿಷ್ಟ ಶಕ್ತಿಯಿರುತ್ತದೆ. ಅದು ತನ್ನ ಶ್ರೇಷ್ಠತೆಯನ್ನೂ ಮತ್ತು ಹಣದ ಮೂಲಕ ಗಳಿಸಿರುವ ಆತ್ಮವಿಶ್ವಾಸವನ್ನೂ ಸಣ್ಣದೊಂದು ಅಹಂಕಾರದ ಸ್ಪರ್ಶದ ಜತೆಗೇ ನೋಡುತ್ತದೆಯೇ ಹೊರತು ತಿರಸ್ಕಾರದಿಂದ ನೋಡುವುದಿಲ್ಲ.

ತಿರಸ್ಕಾರವೆಂಬುದು ಒರಟು ನಡತೆ, ಅದು ಶ್ರೇಷ್ಠ ಗುಣವಲ್ಲ. ಮಾಧ್ಯಮಗಳಿಗಿರುವ ಈ ಶ್ರೇಷ್ಠತೆಯ ಅಹಂಕಾರದ ಬಗ್ಗೆ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯ ಬಂದ ನಂತರ ಹಲವು ದಶಕಗಳವರೆಗೆ ಮಾಧ್ಯಮಗಳು ಸಾರ್ವಜನಿಕ ನೀತಿ ನಿರೂಪಣೆಯ ಪ್ರಮುಖ ಅಂಗಗಳಲ್ಲಿ ತಾವೂ ಒಂದು ಎಂದು ಸರಿಯಾಗಿಯೇ ಬಿಂಬಿಸಿಕೊಂಡಿದ್ದವು. ಟೈಮ್ಸ್ ಆಫ್ ಇಂಡಿಯಾದ ಶಾಮ್ ಲಾಲ್ ಅಥವಾ ಗಿರಿ ಲಾಲ್ ಜೈನ್ ಅಥವಾ ದಿಲೀಪ್ ಪಡಗಾಂವ್ಕರ್ ಅವರನ್ನೇ ನೋಡಿ. ಅಥವಾ ಇಂಡಿಯನ್ ಎಕ್ಸ್‌ಪ್ರೆಸ್ ನ ಅದ್ಭುತ ಸಂಪಾದಕ ಫ್ರಾಂಕ್ ಮೊರೇಸ್‌ರನ್ನು ನೋಡಿ. ಅದೂ ಬೇಡ ಅಂದರೆ ಸರ್ದಾರ್ ಖುಷ್ವಂತ್ ಸಿಂಗ್‌ರ ಹಲವು ಮಿದುಳುಗಳ ಒಂದು ಭಾಗವನ್ನು ನೋಡಿ! ‌

ಇವರಿಗೆ ಸರಿಸಮವಾಗಿ ಕಲ್ಕತ್ತಾದಲ್ಲಿ ಇವಾನ್ ಶಾರ್ಲ್ಟನ್, ಪ್ರಾಣ್ ಚೋಪ್ರಾ, ಸುರೇಂದ್ರ ನಿಹಾಲ್ ಸಿಂಗ್ ಇದ್ದರು. ಇವರ ಸಂಬಳ ಮೇಲ್ಮಧ್ಯಮ ವರ್ಗದ್ದಾಗಿದ್ದಿರಬಹುದು. ಆದರೆ ಚಿಂತನೆ ಅತ್ಯುನ್ನತ ಮಟ್ಟದ್ದಾಗಿತ್ತು.

ಶಾಮ್ ಲಾಲ್ ತಮ್ಮ ಬೌದ್ಧಿಕ ಅಡಗುದಾಣದಿಂದ ಹೊರಗೆ ಬಂದು ಏನನ್ನಾದರೂ ಹೇಳುವುದು ತೀರಾ ಸಣ್ಣತನವಾಗುತ್ತದೆ ಎಂದು ಭಾವಿಸಿದ್ದರೋ ಏನೋ. ಆದರೆ ಅವರ ಉತ್ತರಾಧಿಕಾರಿ ಫ್ರಾಂಕ್ ಮೊರೇಸ್‌ರಂಥ ಸಂಪಾದಕರು ತಳಮಟ್ಟದ ವಾಸ್ತವಗಳನ್ನು ಸ್ವತಃ ಗಮನಿಸಿ, ಅದನ್ನು ಸೂಕ್ಷ್ಮವಾದ ಭಾಷೆಯಲ್ಲಿ ಸರಕಾರದ ಗಮನಕ್ಕೆ ತರುವುದು ಮಾಧ್ಯಮಗಳ ಕರ್ತವ್ಯವೆಂದೇ ನಂಬಿದ್ದರು. ಉದಾಹರಣೆಗೆ, ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಥವಾ ಟ್ರಾಫಿಕ್ ಲೈಟ್‌ಗಳು ಕೆಟ್ಟು ಹೋಗಿವೆ ಎಂಬಂಥ ನಾಗರಿಕ ದೂರುಗಳನ್ನು ಪತ್ರಿಕೆಗಳು ಸರಕಾರಕ್ಕೆ ತಲುಪಿಸಬೇಕು ಎಂಬುದು ಅವರ ನಿಲುವಾಗಿತ್ತು.

ಹೀಗಾಗಿ ಅವರು ತಮ್ಮ ಮುಖ್ಯ ವರದಿಗಾರರನ್ನು ಟೈಪ್‌ ರೈಟರ್ ಕಮಾಂಡೋಗಳ ಜತೆಗೆ ಗ್ರಾಮೀಣ ಪ್ರದೇಶಗಳಿಗೆ ಕಳುಹಿಸುತ್ತಿದ್ದರು. ದಿನಪತ್ರಿಕೆಗೆ ವರದಿ ಮಾಡುವುದು ಅಂದರೆ ಅದನ್ನು ಓದುವ ನಗರ ಪ್ರದೇಶದ ಇಂಗ್ಲಿಷ್ ಜನರ ಬದುಕು-ಬವಣೆಯನ್ನು ಮಾತ್ರ ವರದಿ ಮಾಡುವುದಲ್ಲ, ಭಾರತ ಎಂಬ ಜಗತ್ತನ್ನು ಹಳ್ಳಿಗಳಿಗೆ ಹೋಗಿ ಶೋಧಿಸಿ ಎಲ್ಲರೆದುರು ತೆರೆದಿಡಬೇಕು ಎಂದು ಅವರು ಭಾವಿಸಿದ್ದರು.

ಅವರೆಲ್ಲರೂ ಬಹಳ ಆತ್ಮವಿಶ್ವಾಸ ಹೊಂದಿದ್ದ ಬುದ್ಧಿಜೀವಿಗಳಾಗಿದ್ದರು. ಟೈಮ್ಸ್ ಆಫ್ ಇಂಡಿಯಾ ಕಚೇರಿಯಲ್ಲಿ ನೀಡಿದ್ದ ಸಣ್ಣದೊಂದು ಕ್ಯೂಬಿಕಲ್‌ಗೆ ಅವರು ತೃಪ್ತರಾಗಿದ್ದರು. ಅದೊಂಥರಾ ಜೈಲು ಕೋಣೆಯಂತಿತ್ತು. ಯಾವುದೇ ರೀತಿಯಲ್ಲೂ ಕಚೇರಿಯ ಥರ ಕಾಣಿಸುತ್ತಿರಲಿಲ್ಲ. ಆದರೆ ಅಲ್ಲಿ ಕೆಲಸ ಮಾಡುವವರು ಮಾಧ್ಯಮ ಸನ್ಯಾಸಿಗಳಾದ್ದರಿಂದ ಅವರು ಅದಕ್ಕೆ ತಲೆಕೆಡಿಸಿ‌ ಕೊಳ್ಳುತ್ತಿರಲಿಲ್ಲ. ಅವರು ತಮ್ಮ ಪ್ರತಿಷ್ಠೆಯನ್ನು ಇನ್ನೂ ದೊಡ್ಡ ಕಾರಣಗಳಿಗೆ ಮೀಸಲಾಗಿಟ್ಟು ಕೊಂಡಿದ್ದರು.

ಆದರೆ ಸ್ಟೇಟ್ಸ್‌ಮನ್ ಕಚೇರಿ ಸ್ವಲ್ಪ ದೊಡ್ಡದಾಗಿತ್ತು. ನೋಡುವುದಕ್ಕೆ ಅದ್ಧೂರಿಯಾಗೂ ಇತ್ತು. ಅಲ್ಲಿದ್ದವರ ಆತ್ಮವಿಶ್ವಾಸ ಕೂಡ ಟೈಮ್ಸ್ ಆಫ್ ಇಂಡಿಯಾದವರಿಗೆ ಸಮನಾಗಿತ್ತು. ಈ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಂಪಾದಕೀಯಗಳು ಬೆಂಕಿ ಉಗುಳುತ್ತಿದ್ದವು. ಏಕೆಂದರೆ ಜನರು ಅವುಗಳನ್ನು ಓದುತ್ತಿದ್ದರು. ಜಾಹೀರಾತಿಗೆ ಯಾವಾಗಲೂ ಅದರದೇ ಆದ ಜಾಗವಿತ್ತು. ‌

ಪತ್ರಿಕೆಗೆ ಅವು ಅನಿವಾರ್ಯ. ಆದರೆ, ಜಾಹೀರಾತನ್ನು ಯಾವತ್ತೂ ಸುದ್ದಿಯಂತೆ ಬಿಂಬಿಸುತ್ತಿರಲಿಲ್ಲ. ಇವತ್ತಿನ ಮಿಡ್ಲ್-ಕ್ಲಾಸ್ ಮನಸ್ಥಿತಿಯ ಸಮಸ್ಯೆ ಏನೆಂದರೆ, ಈ ವ್ಯವಸ್ಥೆ ಯಾವಾಗಲೂ ಮೇಲೇ ನೋಡುತ್ತಿರುತ್ತದೆ. ಕೆಳಗೆ ನೋಡಬೇಕು ಅಂದಾಗ ಪೂರ್ವಗ್ರಹಪೀಡಿತವಾಗಿ ನೋಡುತ್ತದೆ. ಮೇಲೆ ನೋಡುವಾಗ ನಿರಾಸಕ್ತಿ. ಕೆಳಗೆ ನೋಡುವಾಗ ತಿರಸ್ಕಾರ. ಮಾಧ್ಯಮಗಳಲ್ಲಿ ಇಂದು ಎಲ್ಲದಕ್ಕೂ ತಮ್ಮದೇ ಆದ ತೀರ್ಪು ನೀಡುವ ಚಟ ಯಾವ ಮಟ್ಟಿಗೆ ಹಾಸುಹೊಕ್ಕಾಗಿದೆ ಅಂದರೆ, ಅದನ್ನು ನೋಡಿ ಸುಪ್ರೀಂಕೋರ್ಟ್ ಕೂಡ ನಾಚಬೇಕು. ಈ ಮೀಡಿಯಾ ನ್ಯಾಯಾಧೀಶರು ತಮ್ಮ ಘೋಷಿತ ಓದುಗರ ಸಂಖ್ಯೆಯಲ್ಲೇ ಎಷ್ಟು ವ್ಯಸ್ತರಾಗಿದ್ದಾರೆ ಅಂದರೆ, ಬಡವರ ಬಡತನವನ್ನು ಪರೋಕ್ಷವಾಗಿ ಖಂಡಿಸುವುದಕ್ಕೂ ಮುನ್ನ ಒಂದಷ್ಟು ಸಾಕ್ಷ್ಯ ಹುಡುಕುವುದಕ್ಕೆ ಸಮಯ ಖರ್ಚುಮಾಡಲು ಇವರು ತಯಾರಿಲ್ಲ.

ಬಡವರು ಪತ್ರಿಕೆಗಳನ್ನು ಓದುವ ವರ್ಗ ಅಲ್ಲದ ಕಾರಣ ಆ ವರ್ಗದಿಂದ ಜಾಹೀರಾತು ಕೂಡ ಹುಟ್ಟುವುದಿಲ್ಲ ಮತ್ತು ಜಾಹೀರಾತು ನೀಡುವವರಿಗೆ ಬಡವರು ದೊಡ್ಡ ಗ್ರಾಹಕರೂ ಅಲ್ಲ. ಹೀಗಾಗಿ ಬಡವರು ಸುದ್ದಿಯಾಗುವುದಕ್ಕೆ ಅರ್ಹರಲ್ಲ. ಅವರು ಸುದ್ದಿಯಾಗಬೇಕು ಅಂದರೆ ಅವರಲ್ಲೇ ನಾದರೂ ರೋಚಕತೆ ಇರಬೇಕು. ಬಡವರು ಭೂಕಂಪದಲ್ಲಿ ಸತ್ತರೆ ಆಗ ಟಿವಿ ನ್ಯೂಸ್ ಚಾನಲ್ಲುಗಳು ಕ್ಯಾಮೆರಾ ಹಿಡಿದು ಓಡುತ್ತವೆ.

ಕೊಲೆಯಾದರೆ ಒಳ್ಳೆಯದು. ಸಾಮೂಹಿಕ ಕೊಲೆಯಾದರೆ ಇನ್ನೂ ಒಳ್ಳೆಯದು. ಇದರಲ್ಲಿ ವರದಿ ಗಾರಿಕೆ ಎಂಬುದಿಲ್ಲ. ಇಲ್ಲಿರುವುದು ಬೇಟೆ. ಹಸಿವು ಯಾವತ್ತೂ ಸುದ್ದಿಯಲ್ಲ. ಏಕೆಂದರೆ ಅದರ ಚಿತ್ರಣವು ಹಣ ಗಳಿಸುವುದಕ್ಕೆ ಪೂರಕವಾದ ಪರಿಸರವನ್ನು ಕೆಡಿಸುತ್ತದೆ. ಇಷ್ಟೆಲ್ಲ ಯಾಕೆ ಹೇಳ ಬೇಕಾಯಿತು ಅಂದರೆ, 21ನೇ ಶತಮಾನದ ಅದ್ಭುತ ಯೋಜನೆಗಳಲ್ಲಿ ಒಂದಾದ ‘ಮುದ್ರಾ’ ಯೋಜನೆಯ 10ನೇ ವರ್ಷಾಚರಣೆಗೆ ಮಾಧ್ಯಮಗಳು ತೋರಿಸಿದ ಅಸೀಮ ಅನಾದರವನ್ನು ನೋಡಿ ಬೇಸರವಾಯಿತು.

ರೋಚಕತೆ ಇಲ್ಲದಿದ್ದರೆ ಮಾಧ್ಯಮಗಳಿಗೆ ಅದು ಸುದ್ದಿಯೇ ಅಲ್ಲ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕೆ? ‘ಮೈಕ್ರೋ ಯುನಿಟ್ಸ್ ಡೆವಲಪ್‌ಮೆಂಟ್ ಆಂಡ್ ರೀಫೈನಾನ್ಸ್ ಏಜೆನ್ಸಿ’ ಎಂದು ಹೇಳಿದರೆ ಎಲ್ಲರಿಗೂ ಅರ್ಥವಾಗಲಿಕ್ಕಿಲ್ಲ. ‘ಮುದ್ರಾ’ ಅಂದರೆ ಎಲ್ಲರಿಗೂ ತಿಳಿಯುತ್ತದೆ. ಆಧುನಿಕ ಭಾರತದ ಅತಿದೊಡ್ಡ ಸಾಧನೆಗಳಲ್ಲಿ ಇದೂ ಒಂದು. ಹಸಿವು ಮತ್ತು ಬಡತನವೆಂಬ ಶಾಪಗಳನ್ನು ನಿವಾರಿಸಲು ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ಯ ರೀತಿಯಲ್ಲೇ ಈ ಬೃಹತ್ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.

ದೇಶದ ಇತಿಹಾಸದಲ್ಲಿ ದಾಖಲಾಗುವಂಥ ಕಾರ್ಯಕ್ರಮವಿದು. ನರೇಂದ್ರ ಮೋದಿ ಪ್ರಧಾನಿಯಾಗಿ ಅಽಕಾರ ನಡೆಸಿದ ಅವಧಿಯ ಬಗ್ಗೆ ಇತಿಹಾಸವನ್ನು ಬರೆದರೆ (ಮೋದಿಯವರ ಜೀವನಚರಿತ್ರೆ ಅಲ್ಲ) ಈ ದೇಶಕ್ಕೆ ಅವರು ನೀಡಿದ ಬಹುದೊಡ್ಡ ಕೊಡುಗೆ ಮುದ್ರಾ ಯೋಜನೆ ಎಂದು ಬರೆಯ ಬೇಕಾಗುತ್ತದೆ.

1947ರ ಬಳಿಕ ಏಳು ದಶಕಗಳ ಕಾಲ ನಾವು ಬಡತನವನ್ನು ಕೇವಲ ಅಂಕಿ-ಅಂಶಗಳಲ್ಲೇ ಅಳೆಯು ತ್ತಿದ್ದೆವು. ಅರ್ಥಶಾಸ್ತ್ರಜ್ಞರಿಗೆ ನೀತಿ ರಚನೆಯಲ್ಲಿ ಮತ್ತು ಬಡವರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸುವ ಯೋಜನೆಗಳನ್ನು ರೂಪಿಸುವಲ್ಲಿ ಈ ಅಂಕಿ-ಅಂಶಗಳು ನೆರವಿಗೆ ಬರುತ್ತಿದ್ದವು. ಅರ್ಥಶಾಸ್ತ್ರಜ್ಞರೆಂದು ಹೇಳಿಕೊಳ್ಳುವ ಅಧಿಕಾರಿಗಳು ತಮ್ಮ ನಿರ್ಧಾರಗಳನ್ನು ರಾಜಕೀಯ ಅನಕ್ಷರಸ್ಥರಂತೆ ಕೇವಲ ನಂಬರ್‌ಗಳಲ್ಲಿ ಕೈಗೊಳ್ಳುತ್ತಿದ್ದರು.

ದೇಶದಲ್ಲಿ ಬಡತನದ ಪ್ರಮಾಣ ಶೇ.35ರಿಂದ ಶೇ.30ಕ್ಕೆ ಇಳಿದಿದೆ ಎಂದು ಯಾವುದಾದರೂ ವರದಿಯೊಂದು ಪ್ರತ್ಯಕ್ಷವಾದರೆ ಅದಕ್ಕೆ ತಮ್ಮನ್ನು ತಾವೇ ಹೊಗಳಿಕೊಳ್ಳುವುದೇನು.. ಪದ್ಮಶ್ರೀ ಪ್ರಶಸ್ತಿ ಕೊಟ್ಟುಕೊಂಡು ಸ್ವತಃ ಅಭಿನಂದಿಸಿಕೊಳ್ಳುವುದೇನು..! ಸರಕಾರಿ ‘ಭವನ’ಗಳೆಂಬ ಸುರಕ್ಷಿತ ಪ್ರದೇಶಗಳಲ್ಲಿ ಯಾರೂ ಮನುಷ್ಯನ ಮುಖವನ್ನು ದಿಟ್ಟಿಸಿ ನೋಡುತ್ತಲೇ ಇರಲಿಲ್ಲ. ಶತಕೋಟಿ ಭಾರತೀಯರಲ್ಲಿ ಶೇ.30 ಅಂದರೆ 30 ಕೋಟಿ ಮನುಷ್ಯರು ಎಂದು ಯಾರೂ ಯೋಚಿಸುತ್ತಿರಲಿಲ್ಲ. ಈ 30 ಕೋಟಿ ಮನುಷ್ಯರು ಪ್ರತಿದಿನ ಎರಡನೇ ಊಟ ಯಾವಾಗ ಎಂದು ಕಾಯುತ್ತಾ, ಜೀವ ಹಿಡಿದುಕೊಂಡು ಬದುಕುವುದು ಹೇಗೆಂದು ಚಿಂತಿಸುತ್ತಾ, ರೋಗರುಜಿನಗಳಿಂದ ಬೇಗ ಸಾಯುತ್ತಾ, ಅಪೌಷ್ಟಿಕತೆಯಿಂದ ಬಳಲುತ್ತಾ ಬದುಕುವ ನತದೃಷ್ಟರಾಗಿದ್ದರು. ಈ ಕ್ರೌರ್ಯವನ್ನು ಪರಿಣಾಮ ಕಾರಿಯಾಗಿ ಹೇಳುವ ಪ್ರತ್ಯೇಕ ಪದಗಳು ಇರಬೇಕು ಎಂದೂ ಇವರ ರಾಜಕೀಯ ನಾಯಕರಿಗೆ ಅನ್ನಿಸಲಿಲ್ಲ.

ಅಸಾಧ್ಯ ಹಸಿವಿನಿಂದ ಮಕ್ಕಳು ಬಳಲಿ ಬಳಲಿ ಸಾಯುವುದಕ್ಕೆ ಕೇವಲ ಸಾವು ಎಂದು ಕರೆದರೆ ಅದೆಂಥಾ ಅಸೂಕ್ಷ್ಮ ಪದವಾಗುತ್ತದೆಯಲ್ಲವೆ? ಹಸಿವಿನ ನಿಜವಾದ ಅರ್ಥವನ್ನು ಅರಿತುಕೊಳ್ಳಲು ಸ್ವತಃ ಹಸಿವಿನಿಂದ ಬಳಲಿ ಬೆಳೆದ ಪ್ರಧಾನಿಯೇ ಬರಬೇಕಾಯಿತು. 2015ರ ಏಪ್ರಿಲ್ 8ರಂದು ಜಾರಿಗೆ ಬಂದ ಮುದ್ರಾ ಯೋಜನೆ ಯಾವುದೇ ರೀತಿಯಲ್ಲೂ ಅವಸರದ ಯೋಜನೆ ಆಗಿರಲಿಲ್ಲ.

ಅದು ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿ ವಿನ್ಯಾಸಗೊಂಡ ಸಬಲೀಕರಣದ ಯೋಜನೆಯಾಗಿತ್ತು. ಇದರ ವಿಶೇಷವೆಂದರೆ, ಯೋಜನೆಯ ಫಲಾನುಭವಿಯ ಮೇಲೇ ಯಶಸ್ಸಿನ ಜವಾಬ್ದಾರಿಯೂ ಇರುತ್ತಿತ್ತು. ಹಣ ಕೊಟ್ಟು, ಗೆಲ್ಲಿಸಿಯೂ ಕೊಡುವ ಜವಾಬ್ದಾರಿ ಯಾವುದೇ ಸರಕಾರಿ ಏಜೆನ್ಸಿಯ ಮೇಲೆ ಇರುತ್ತಿರಲಿಲ್ಲ. ಸರಕಾರಕ್ಕೆ ಇದರಿಂದ ಆರ್ಥಿಕ ಹೊರೆಯೂ ಇರಲಿಲ್ಲ. ಏಕೆಂದರೆ ಸಾಲ ತೆಗೆದುಕೊಂಡವರು ಅದನ್ನು ಅನಿವಾರ್ಯವಾಗಿ ಮರುಪಾವತಿ ಮಾಡಲೇಬೇಕಿತ್ತು. ಬಡವರಿಗೆ ಆದ ದೊಡ್ಡ ಅನುಕೂಲ ಏನೆಂದರೆ, ಬ್ಯಾಂಕಿಗೆ ಯಾವುದೇ ರೀತಿಯ ಖಾತ್ರಿ ನೀಡುವ ತಲೆನೋವು ಇಲ್ಲದೆಯೇ ಅವರಿಗೆ ಸುಲಭವಾಗಿ ಸಾಲ ಸಿಗುತ್ತಿತ್ತು.

ಈ ಯೋಜನೆಯಡಿ ಆರ್ಥಿಕ ಅನುಕೂಲ ಬಡವರಿಗಾಯಿತೇ ಹೊರತು ದಪ್ಪ ಹೊಟ್ಟೆಯ ಶ್ರೀಮಂತರಿಗಾಗಲೀ ಅಥವಾ ಮಧ್ಯಮ ವರ್ಗದವರಿಗಾಗಲೀ ಅಲ್ಲ. ಮುದ್ರಾ ಯೋಜನೆಯಡಿ ಸಾಲವು ತರಕಾರಿ ಮಾರುವ ಹೆಂಗಸರಿಗೆ ಸಿಕ್ಕಿತು. ತಳ್ಳುವ ಗಾಡಿಯಲ್ಲಿ ಹಣ್ಣು ಮಾರುವ ಬಡವನಿಗೆ ಸಾಲ ಸಿಕ್ಕಿತು. ಈ ಯೋಜನೆಯ ಶೇ.68ರಷ್ಟು ಫಲಾನುಭವಿಗಳು ಮಹಿಳೆಯರು. ಬೇರೆಲ್ಲಕ್ಕಿಂತ ಇದೊಂದು ಸಂಗತಿಯೇ ಸಾಕು ಈ ಯೋಜನೆ ಅದ್ಭುತ ಯಶಸ್ಸು ಕಂಡಿದೆ ಎಂದು ಹೇಳುವುದಕ್ಕೆ.

ಏಕೆಂದರೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಉದ್ಯಮಶೀಲರು, ಹೆಚ್ಚು ಪ್ರಾಮಾಣಿಕರು ಮತ್ತು ಹೆಚ್ಚು ಜವಾಬ್ದಾರಿವಂತರು. ಆರ್ಥಿಕ ಸಬಲೀಕರಣದ ಜತೆಗೇ ಇದು ಮಹಿಳೆಯರಿಗೆ ಗೌರವವನ್ನೂ, ಆತ್ಮಾಭಿಮಾನವನ್ನೂ ತಂದುಕೊಟ್ಟಿತು. ಕಳೆದ 10 ವರ್ಷಗಳಲ್ಲಿ ಮುದ್ರಾ ಯೋಜನೆಯಡಿ 52 ಕೋಟಿ ಮಂದಿಗೆ ಸಾಲ ನೀಡಲಾಗಿದೆ.

ಅಂದರೆ, ಅಂದಾಜು 30 ಕೋಟಿ ಮಹಿಳೆಯರು ಈ ಯೋಜನೆಯಿಂದಾಗಿ ಆರ್ಥಿಕ ಸ್ವಾತಂತ್ರ್ಯ ಪಡೆದಿದ್ದಾರೆ. ಅರ್ಧಕ್ಕರ್ಧ ಮುದ್ರಾ ಸಾಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ವಿತರಣೆಯಾಗಿದೆ. ಶೇ.11ರಷ್ಟು ಫಲಾನುಭವಿಗಳು ಅಲ್ಪಸಂಖ್ಯಾ ತರಾಗಿ ದ್ದಾರೆ. ಇದು ಆರ್ಥಿಕ ಒಳಗೊಳ್ಳುವಿಕೆ ಅಲ್ಲ ಅಂತಾದರೆ ಇನ್ನು ಯಾವುದು ಎಂದು ನಾನು ಕೇಳಬೇಕಾಗುತ್ತದೆ. ಮುದ್ರಾ ಯೋಜನೆಯ ಲಾಭವನ್ನು ಅದ್ಭುತವಾಗಿ ಪಡೆದುಕೊಂಡ ಒಂದು ರಾಜ್ಯವೆಂದರೆ ಜಮ್ಮು ಮತ್ತು ಕಾಶ್ಮೀರ. ಕಳೆದ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾದ ದೊಡ್ಡ ಪ್ರಮಾಣದ ಆರ್ಥಿಕ ಬದಲಾವಣೆಯ ಹಿಂದೆ ಮುದ್ರಾ ಯೋಜನೆಯ ಪಾತ್ರ ಗಣನೀಯ ವಾಗಿದೆ.

ಒಟ್ಟಾರೆ ದೇಶದಲ್ಲಿ 33 ಲಕ್ಷ ಕೋಟಿ ರೂ. ಮುದ್ರಾ ಸಾಲ ವಿತರಣೆ ಮಾಡಲಾಗಿದೆ. ಅದಕ್ಕೆ ಯಾರಿಂದಲೂ ನಿರ್ವಹಣಾ ಶುಲ್ಕ ಪಡೆದಿಲ್ಲ. ಯಾರೂ ಈ ಸಾಲಕ್ಕೆ ಖಾತ್ರಿ ನೀಡಿಲ್ಲ. ಆದರೆ ಎಲ್ಲರೂ ಮರುಪಾವತಿಯ ಮಾತನ್ನು ಉಳಿಸಿಕೊಂಡಿದ್ದಾರೆ.

ಹಾಗಿದ್ದರೆ, ಬಡವರಿಗೆ ಅನಿವಾರ್ಯವಾಗಿ ಸಾಲ ನೀಡಬೇಕಾಗಿ ಬಂದ ಕಾರಣ ಬ್ಯಾಂಕುಗಳೆಲ್ಲ ನಷ್ಟ ಅನುಭವಿಸಿರಬೇಕಲ್ಲ? ಖಂಡಿತ ಇಲ್ಲ. ಅಂಕಿ-ಅಂಶಗಳಲ್ಲೇ ಹೊರಳಾಡಿ ಸಾಯುವ ಕೆಲ ಸೋಕಾಲ್ಡ್ ಅರ್ಥಶಾಸ್ತ್ರಜ್ಞರಿಗೆ ಇದೇ ದೊಡ್ಡ ಶಾಕ್. ಸಾಮಾನ್ಯವಾಗಿ ಬ್ಯಾಂಕುಗಳು ದೊಡ್ಡ ಹೊಟ್ಟೆಯವರಿಗೇ ಸಾಲ ಕೊಟ್ಟು ಆ ಹೊಟ್ಟೆಯನ್ನು ಇನ್ನಷ್ಟು ದಪ್ಪ ಮಾಡುತ್ತವೆ. ಆದರೆ ಮುದ್ರಾ ಯೋಜನೆಯಡಿ ಬೇರೆ ವಿಧಿಯಿಲ್ಲದೆ ಬ್ಯಾಂಕುಗಳು ಬಡವರಿಗೆ ಸಾಲ ನೀಡಿವೆ. ಅದರಿಂದ ದೇಶದ ಆರ್ಥಿಕತೆಯೂ ಕುಸಿದಿಲ್ಲ, ಬ್ಯಾಂಕುಗಳಿಗೂ ನಷ್ಟವಾಗಿಲ್ಲ.

2015ರಲ್ಲಿ ಬಡವರಿಗಾಗಿ ಈ ಯೋಜನೆ ಜಾರಿಗೆ ತಂದಾಗ ಕಾಂಗ್ರೆಸ್ಸಿಗರು ಮಾಧ್ಯಮಗಳ ಮುಂದೆ ಬಂದು ಆಘಾತದಿಂದ ಕಿರುಚಿಕೊಂಡಿದ್ದು ನನಗಿನ್ನೂ ನೆನಪಿದೆ. ಭಾರತದ ಆರ್ಥಿಕತೆಗೆ ಮುದ್ರಾ ಯೋಜನೆ ಮರಣಶಾಸನ ಇದ್ದಂತೆ ಎಂದು ಅವರು ಚೀರಾಡಿದ್ದರು. ಈಗ ಹತ್ತು ವರ್ಷಗಳ ಬಳಿಕ ಅವರ ದಿವ್ಯಮೌನವನ್ನೂ ನಾನು ನೋಡುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಇರುವ ಅನೇಕ ಸೌಕರ್ಯಗಳಲ್ಲಿ ಪ್ರಧಾನಿಯನ್ನು ಮೆಚ್ಚದೆ ಇರುವ ಮೂಲಭೂತ ಹಕ್ಕು ಕೂಡ ಒಂದು. ನಿಮಗೆ ಅದೇ ಇಷ್ಟವಾದರೆ ಅದನ್ನೇ ಮಾಡಿ.

ಮೋದಿಯನ್ನು ನೀವು ಇಷ್ಟಪಡಲೇಬೇಕು ಎಂದು ಹೇಳಿದವರು ಯಾರು? ಆದರೆ, ದೇಶಕ್ಕಂಟಿದ ಐತಿಹಾಸಿಕ ಶಾಪವಾದ ಬಡತನವನ್ನು ನಿರ್ಮೂಲನೆ ಮಾಡಲು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇಷ್ಟೊಂದು ಚಾಣಾಕ್ಷತೆಯಿಂದ ಬಳಸಿಕೊಂಡ ಸರಕಾರದ ನೀತಿಯನ್ನು ಹೀಗಳೆಯಲು ನಿಮಗೆ ಯಾವ ಹಕ್ಕೂ ಇಲ್ಲ. ಬಡತನ ನಿರ್ಮೂಲನೆಯ ಉದ್ದೇಶವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊ ಯ್ಯಲು ‘ಪಿಎಂ ಗರೀಬ್ ಕಲ್ಯಾಣ ಅನ್ನಯೋಜನೆ’ಯಿದೆ. 2022-23ರ ಬಜೆಟ್‌ನಲ್ಲಿ ದೇಶದ ಪ್ರತಿಯೊಬ್ಬರಿಗೂ ಐದು ಕೆ.ಜಿ. ಅಕ್ಕಿ ಮತ್ತು ಬೇಳೆ ನೀಡಲು 2 ಲಕ್ಷ ಕೋಟಿ ರೂ. ತೆಗೆದಿರಿಸಿದಾಗ ಎಲ್ಲಾ ಕೂಗುಮಾರಿಗಳ ಬಾಯಿಯೂ ಶಾಶ್ವತವಾಗಿ ಬಂದ್ ಆಯಿತು.

ಹಸಿವು ನೀಗಿಸುವ ಈ ಯೋಜನೆಯೀಗ 80 ಕೋಟಿ ಭಾರತೀಯರನ್ನು ತಲುಪುತ್ತಿದೆ. ಇದು ಬಡವರನ್ನು ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಪಾರು ಮಾಡಿದೆ. ಭಾರತಕ್ಕಂಟಿದ ಹಸಿವಿನ ಶಾಪವನ್ನೂ ಇದು ವಿಮೋಚನೆಗೊಳಿಸಿದೆ. ಬಹುಶಃ ಈ ಯೋಜನೆಯನ್ನು ಜಾರಿಗೊಳಿಸುವುದಕ್ಕೂ ಮುನ್ನ ಮೋದಿಯವರು ಯಾವುದೇ ಆರ್ಥಿಕ ತಜ್ಞನನ್ನಾಗಲೀ ಅಥವಾ ಸಂಖ್ಯಾಶಾಸ್ತ್ರಜ್ಞ ನನ್ನಾಗಲೀ ಕೇಳಿಲ್ಲ. ಕೇಳಿದ್ದರೆ ಇದು ಜಾರಿಗೇ ಬರುತ್ತಿರಲಿಲ್ಲ. ಹಿಂದಿನ ಸರಕಾರಕ್ಕೆ ಅರ್ಥಶಾಸ್ತ್ರ ಜ್ಞರು ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಅಂದರೆ ಪ್ರತಿಯೊಬ್ಬರೂ ದಿನಕ್ಕೆ 32 ರುಪಾಯಿ ದುಡಿಯುವಂತೆ ಮಾಡಬೇಕು ಎಂದು ಹೇಳಿದ್ದರು.

ಇಂಥ ತಲೆಬುಡವಿಲ್ಲದ ಅಂಕಿ-ಅಂಶಗಳನ್ನು ನಂಬಿದ್ದರಿಂದಲೇ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಂಡಿರದ ಹೀನಾಯ ಸೋಲು ಕಂಡಿತು. ಆ ಸೋಲಿನಿಂದ ಇನ್ನೂ ಚೇತರಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ನಾವು ತಮಿಳುನಾಡಿನ ಇತಿಹಾಸವನ್ನು ಕೃತಜ್ಞತೆಯಿಂದ ನೆನೆಯಬೇಕು. ಮಕ್ಕಳಲ್ಲಿರುವ ಅಪೌಷ್ಟಿಕತೆಯನ್ನು ದೂರ ಮಾಡಲು 1925ರಲ್ಲೇ ಅಲ್ಲಿ ಸೀಮಿತ ಪ್ರಮಾಣದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಲಾಗಿತ್ತು.

1962ರಲ್ಲಿ ಅದನ್ನು ಕಾಮರಾಜ್ ಇನ್ನಷ್ಟು ವಿಸ್ತರಿಸಿ, ಕೊನೆಗೆ 1982ರಲ್ಲಿ ಎಂ.ಜಿ.ರಾಮಚಂದ್ರನ್ ಸಾರ್ವತ್ರಿಕಗೊಳಿಸಿದ್ದರು. ಅವರಿಗೆ ಹಸಿವಿನ ನಿಜವಾದ ಅರ್ಥ ಗೊತ್ತಿತ್ತು. ಹೀಗೆ ದೇಶದ ಒಂದು ಭಾಗದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಿ, ಹಸಿವನ್ನು ನೀಗಿಸಿದ ಯೋಜನೆಯನ್ನು ದೇಶಾ ದ್ಯಂತ ಇನ್ನೊಂದು ರೀತಿಯಲ್ಲಿ ಸಾರ್ವತ್ರಿಕವಾಗಿ ಜಾರಿಗೊಳಿಸಲು ಸಾಧ್ಯವಿದೆ ಎಂಬುದೇ 2022-23ರ ನರೇಂದ್ರ ಮೋದಿ ಬಜೆಟ್‌ವರೆಗೆ ಯಾರಿಗೂ ಗೊತ್ತಿರಲಿಲ್ಲ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಏಕೆ ನಿಜಕ್ಕೂ ಬಹುದೊಡ್ಡ ಯಶಸ್ವಿ ಯೋಜನೆ ಗೊತ್ತಾ? ಯಾರನ್ನು ಒಳಗೊಳ್ಳಲು ಸಾಧ್ಯವೇ ಇಲ್ಲ ಎಂದು ಬ್ಯಾಂಕಿಂಗ್ ವ್ಯವಸ್ಥೆಯು ದೂರವಿರಿಸಿತ್ತೋ ಆ ವರ್ಗದವರಿಗೆ ಮುದ್ರಾ ಯೋಜನೆ ಕರೆದು ಕರೆದು ಸಾಲ ನೀಡಿತು. ಯೋಜನೆಯನ್ನು ಘೋಷಿಸಿದಾಗ ಮಾಧ್ಯಮಗಳು ಕೂಡ ಹುಚ್ಚೆದ್ದು ಕಿರುಚಾಡಿದ್ದವು. ಬೇಕಿದ್ದರೆ ಆಡಿಯೋ, ವಿಡಿಯೋ ದಾಖಲೆಗಳು ಸಿಗುತ್ತವೆ, ತೆಗೆದು ನೋಡಿ.

ಎಲ್ಲವೂ ಇತಿಹಾಸದಲ್ಲಿ ದಾಖಲಾಗಿವೆ. ಅನುಕೂಲಕ್ಕೆ ತಕ್ಕಂತೆ ಸುಳ್ಳು ಹೇಳಿಕೊಂಡು ಪಾರಾಗುವ ಅವಕಾಶ ಈಗ ಯಾರಿಗೂ ಇಲ್ಲ. ಅದೇ ರೀತಿ, ಗರೀಬ್ ಕಲ್ಯಾಣ ಅನ್ನ ಯೋಜನೆಯು ಮೋದಿ ಯವರನ್ನು ಇತಿಹಾಸದ ಸುವರ್ಣ ಮೈಲುಗಲ್ಲಿನ ಮುಂದೆ ತಂದು ನಿಲ್ಲಿಸಲಿದೆ. ಪ್ರಧಾನ ಮಂತ್ರಿ ಯನ್ನು ಅಡಿಯಿಂದ ಮುಡಿಯವರೆಗೆ ವಿರೋಧಿಸುವ ಯಾವುದೇ ಒಬ್ಬ ಮುಖ್ಯಮಂತ್ರಿ ತನ್ನ ರಾಜ್ಯದಲ್ಲಿ ಬಡವರಿಗೆ ಆಹಾರ ಧಾನ್ಯ ವಿತರಿಸುವುದಿಲ್ಲ ಎಂದು ಹೇಳಲಿ ನೋಡೋಣ! ಕೆಲವರು ಕೇಂದ್ರದಿಂದ ಆಹಾರ ಧಾನ್ಯ ಪಡೆದು, ಚೀಲಕ್ಕೆ ತಮ್ಮ ಹೆಸರು ಹಾಕಿಕೊಂಡು ಮೈಲೇಜ್ ಪಡೆ ಯಲು ಯತ್ನಿಸಿದರು. ಹೋಗಲಿ ಬಿಡಿ. ಮುದ್ರಾ ಯೋಜನೆ ಅತ್ಯಂತ ಕಳಪೆ ಸಾಧನೆ ಮಾಡಿರುವುದು ಯಾವ ರಾಜ್ಯಗಳಲ್ಲಿ ಗೊತ್ತಿದೆಯೇ? ಬಿಹಾರ ಮತ್ತು ಬಂಗಾಳ. ಅದರ ಬಗ್ಗೆ ಹೇಳುವುದು ಸಾಕಷ್ಟಿದೆ.

(ಲೇಖಕರು ಹಿರಿಯ ಪತ್ರಕರ್ತರು)