ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಇನ್ನು ರಾಜ್ಯ ಪೊಲೀಸರಿಗೆ ಟೋಪಿ ಬದಲು ಪಿ-ಕ್ಯಾಪ್‌, ಆರೋಗ್ಯ ತಪಾಸಣೆ ವೆಚ್ಚ ಹೆಚ್ಚಳ

2023ಕ್ಕೆ ಹೋಲಿಸಿದರೆ ಸೈಬರ್ ಅಪರಾಧಗಳು 2024ರಲ್ಲಿ ಹೆಚ್ಚಾಗಿವೆ. ಕೊಲೆ, ದರೋಡೆ, ಸರಗಳ್ಳತನ ಮುಂತಾದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಮಾದಕ ವಸ್ತುಗಳಿಂದ ನಮ್ಮ ಯುವ ಪೀಳಿಗೆ ಹಾಳಾದರೆ ಭವಿಷ್ಯ ಹಾಳಾಗುತ್ತದೆ. ಪೊಲೀಸರನ್ನು ಕಂಡರೆ ನಾಗರಿಕರಿಗೆ ಭಯ ಹಾಗೂ ಸ್ನೇಹ ಎರಡೂ ಇರಬೇಕು ಎಂದು ಸಿಎಂ (CM Siddaramaiah) ಹೇಳಿದ್ದಾರೆ.

ಪೊಲೀಸರಿಗೆ ಟೋಪಿ ಬದಲು ಪಿ-ಕ್ಯಾಪ್‌, ಆರೋಗ್ಯ ತಪಾಸಣೆ ವೆಚ್ಚ  ಹೆಚ್ಚಳ

ಸಿಎಂ ಸಿದ್ದರಾಮಯ್ಯ

ಹರೀಶ್‌ ಕೇರ ಹರೀಶ್‌ ಕೇರ Jul 17, 2025 8:47 AM

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ (karnataka police) ವೈದ್ಯಕೀಯ ತಪಾಸಣಾ ವೆಚ್ಚವನ್ನು ಒಂದೂವರೆ ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು, ಅದನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯ ಬಿದ್ದರೆ ಹೆಚ್ಚಿಸಲಾಗುವುದು. ಪೊಲೀಸ್ ಪೇದೆಗಳು ಅಪರಾಧಗಳನ್ನು ಕಡಿಮೆ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಪೇದೆಗಳು ಹಾಕುವ ಟೋಪಿಗಳ ಬದಲಿಗೆ ಪಿ ಕ್ಯಾಪ್ (P Cap) ಒದಗಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ತಿಳಿಸಿದ್ದಾರೆ.

ಅವರು ಬೆಂಗಳೂರಿನ ಕೋರಮಂಗಲದ ಸಿಲ್ಕ್ ಬೋರ್ಡ್ ಜಂಕ್ಷನ್ ಹತ್ತಿರ ನಿರ್ಮಿಸಿರುವ ಕೆಎಸ್‌ಆರ್‌ಪಿ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಹಿಂಸೆ ಹಾಗೂ ಪ್ರಚೋದನೆಗಳನ್ನು ತಡೆದರೆ ಸಮಾಜದ ಒಳಿತು ಸಾಧ್ಯ. ಸಮಾಜದ ಶಾಂತಿ ಸುವ್ಯವಸ್ಥೆ, ಜನರ ಆಸ್ತಿ, ಮಾನ, ಪ್ರಾಣಗಳನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಪ್ರದೇಶ ಸುರಕ್ಷಿತವಾಗಿದ್ದಲ್ಲಿ, ಅಲ್ಲಿನ ಪೊಲೀಸರ ಶ್ರಮವಿರುತ್ತದೆ. ರಾಜ್ಯದಲ್ಲಿ ಏಳು ಕೋಟಿ ಜನರ ರಕ್ಷಣೆಗೆ ಪೊಲೀಸರು ಬದ್ಧತೆ ತೋರುತ್ತಾರೆ. ರಾಜ್ಯದಲ್ಲಿ 2023ಕ್ಕೆ ಹೋಲಿಸಿದರೆ 2024 ರಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಿಎಂ ಹೇಳಿದರು.

ರಾಜ್ಯದ ಅಭಿವೃದ್ಧಿಯು, ಪೊಲೀಸರ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಅಭಿವೃದ್ಧಿಗೆ ನೇರ ಸಂಬಂಧವಿದೆ. ಈ ದಿಸೆಯಲ್ಲಿ ಪೊಲೀಸರು ಶ್ರಮಿಸುತ್ತಿರುವುದು ಅಭಿನಂದನೀಯ. ರಾಜ್ಯದಲ್ಲಿ ಅಪರಾಧಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆಗೊಳಿಸುವತ್ತ ಪೊಲೀಸರು ಹೆಚ್ಚಿನ ಗಮನ ನೀಡಬೇಕು. ಸಮಾಜದಲ್ಲಿ ಅಶಾಂತಿ, ಹಿಂಸೆ, ಕ್ರೌರ್ಯ, ದ್ವೇಷಪೂರಿತ ಭಾಷಣದಿಂದ ಪ್ರಚೋದನೆಗಳು ಹೆಚ್ಚುತ್ತಿರುವುದನ್ನು ಕಾಣಲಾಗುತ್ತಿದೆ. ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಹಿಂಸೆ, ದ್ವೇಷವನ್ನು ಪ್ರಚೋದಿಸುವುದನ್ನು ತಡೆದಾಗ ಮಾತ್ರ ಸಮಾಜದ ಒಳಿತು ಸಾಧ್ಯವಾಗುತ್ತದೆ ಎಂದರು.

ಉತ್ತಮ ಅಧಿಕಾರಿಗಳಿದ್ದಲ್ಲಿ ಅಂತಹ ಕಡೆ ಅಪರಾಧಗಳು ಕಡಿಮೆಯಿರುವುದು ಗಮನಾರ್ಹ. ನಿಷ್ಠಾವಂತ ಅಧಿಕಾರಿಗಳಿಗೆ ಅಪರಾಧ ತಡೆಗಟ್ಟುವುದು ಕಷ್ಟದ ಕೆಲಸವಲ್ಲ. ಹಿರಿಯ ಅಧಿಕಾರಿಗಳು ಕೆಳ ಮಟ್ಟದ ಪೊಲೀಸ್ ಅಧಿಕಾರಿಗಳ ಜೊತೆಗೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡು ಕೆಲಸ ಮಾಡುವುದು ಒಳ್ಳೆಯದು. ಹಿರಿಯ ಅಧಿಕಾರಿಗಳು ಆಗಾಗ್ಗೆ ಪೋಲೀಸ್ ಠಾಣೆಗೆ ಭೇಟಿ ನೀಡಬೇಕು. ಇತರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆಯಲ್ಲಿ ಶ್ರೇಣಿ ವ್ಯವಸ್ಥೆ ಹೆಚ್ಚಿದೆ. ಶಿಸ್ತು ಕೂಡ ಹೆಚ್ಚಿದೆ. ನೀವು ಮನಸ್ಸು ಮಾಡಿದರೆ ಅಪರಾಧಗಳು ತಾನಾಗಿಯೇ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಕೋಮುಗಲಭೆಗಳು ಆಗಾಗ್ಗೆ ನಡೆಯುತ್ತಲೇ ಇರುವುದರಿಂದ ಕರಾವಳಿಯಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಕೋಮುಗಲಭೆಗಳನ್ನು ಹತ್ತಿಕ್ಕುವುದು ಅಗತ್ಯವಾಗಿ ಆಗಬೇಕಿದೆ. ಕೋಮುಗಲಭೆಗಳು ನಡೆಯಬಾರದು. ಅದು ಪ್ರಾರಂಭವಾದರೆ ನಿರಂತರವಾಗಿ ನಡೆಯುತ್ತವೆ. ಅದಕ್ಕಾಗಿ ಪ್ರಾರಂಭದಲ್ಲಿಯೇ ಕೋಮುಗಲಭೆಗಳನ್ನು ತಡೆಯಬೇಕಾದ್ದು ಅಗತ್ಯ ಮತ್ತು ಅನಿವಾರ್ಯ.

ಇತ್ತೀಚೆಗೆ ನಡೆದ ಪೊಲೀಸ್ ಸಮ್ಮೇಳನದಲ್ಲಿಯೂ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. 2023 ಕ್ಕೆ ಹೋಲಿಸಿದರೆ ಸೈಬರ್ ಅಪರಾಧಗಳು 2024 ರಲ್ಲಿ ಹೆಚ್ಚಾಗಿವೆ. ಕೊಲೆ, ದರೋಡೆ, ಸರಗಳ್ಳತನ ಮುಂತಾದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಮಾದಕ ವಸ್ತುಗಳಿಂದ ನಮ್ಮ ಯುವ ಪೀಳಿಗೆ ಹಾಳಾದರೆ ಭವಿಷ್ಯ ಹಾಳಾಗುತ್ತದೆ. ಪೊಲೀಸರನ್ನು ಕಂಡರೆ ನಾಗರಿಕರಿಗೆ ಭಯ ಹಾಗೂ ಸ್ನೇಹ ಎರಡೂ ಇರಬೇಕು. ಪೋಲಿಸ್ ಠಾಣೆಗಳು ಜನಸ್ನೇಹಿಯಾಗಿರಬೇಕು. ನಾಗರಿಕರೊಂದಿಗೆ ಒಡನಾಟವಿಟ್ಟುಕೊಂಡು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಆಗ ಪರಿಹಾರಗಳು ಹೊಳೆಯುತ್ತವೆ. ಮಾದಕ ವಸ್ತುಗಳನ್ನು ಸಂಪೂರ್ಣ ನಿರ್ನಾಮ ಮಾಡಬೇಕು. ಸೈಬರ್ ಅಪರಾಧಗಳನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬೇಕು.

ಪೊಲೀಸ್ ಸಮುದಾಯ ಭವನ ಸುಸಜ್ಜಿತವಾಗಿದ್ದು ನಿರ್ವಹಣೆಗೆ ಅಗತ್ಯವಿರುವಷ್ಟು ಆದಾಯ ಬರುವಂತೆ ಮಾಡಿಕೊಳ್ಳಬೇಕು. ಖಾಸಗಿಯವರಿಗೆ ಸ್ವಲ್ಪ ಹೆಚ್ಚಿನ ದರದಲ್ಲಿಯೇ ನೀಡಿದರೂ ಪೊಲೀಸ್ ಪೇದೆಗಳು ಹಾಗೂ ಸಹಾಯಕ ಪೊಲೀಸ್ ನಿರೀಕ್ಷಕರಿಗೆ ಕಡಿಮೆ ದರದಲ್ಲಿ ಅಥವಾ ನಿರ್ವಹಣಾ ವೆಚ್ಚ ಪಡೆದು ಸಮುದಾಯ ಭವನವನ್ನು ಒದಗಿಸುವಂತೆ ಸಲಹೆ ನೀಡುತ್ತಿದ್ದೇನೆ. ಪೊಲೀಸ್ ಪೇದೆಗಳು ಅಪರಾಧಗಳನ್ನು ಕಡಿಮೆ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಪೇದೆಗಳು ಹಾಕುವ ಟೋಪಿಗಳ ಬದಲಿಗೆ ಪಿ ಕ್ಯಾಪ್ ಒದಗಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ.

ಪೊಲೀಸ್ ವೈದ್ಯಕೀಯ ತಪಾಸಣಾ ವೆಚ್ಚವನ್ನು ಒಂದೂವರೆ ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು, ಅದನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯ ಬಿದ್ದರೆ ಹೆಚ್ಚಿಸಲಾಗುವುದು. ಬೆಂಗಳೂರು ದೊಡ್ಡದಾಗಿ ಬೆಳೆಯುತ್ತಿರುವ ನಗರ. ಎಂಟು ಪೊಲೀಸ್ ವಿಭಾಗಗಳನ್ನು 11 ವಿಭಾಗಗಳಿಗೆ ಹೆಚ್ಚಿಸಿದ್ದು, ಡಿಸಿಪಿಗಳನ್ನು ಕೂಡ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದು ಅಗತ್ಯ. ಕಾರಣ ಯಾರೇ ತಪ್ಪು ಮಾಡಿದರೂ ಸರ್ಕಾರವನ್ನೇ ದೂಷಿಸಲಾಗುತ್ತದೆ. ಅಹಿತಕರ ಘಟನೆಗಳು ನಡೆದರೆ ಸರ್ಕಾರ ಜವಾಬ್ದಾರಿ. ಅಂಥ ಪರಿಸ್ಥಿತಿಗಳು ಬರದೇ ಹೋಗಲಿ ಎಂದು ಆಶಿಸುತ್ತೇನೆ. ಪೊಲೀಸರು ತಮ್ಮ ಕೆಲಸವನ್ನು ಸಮಾಜ ಮತ್ತು ರಾಜ್ಯದ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಇದನ್ನೂ ಓದಿ: Mangaluru News: ಪತ್ನಿ ಮೇಲೆಯೇ ಅತ್ಯಾಚಾರ ಎಸಗಲು ಪೊಲೀಸ್‌ ಪೇದೆಗೆ ಸಹಕರಿಸಿದ ಪತಿ; ಇಬ್ಬರು ಅರೆಸ್ಟ್‌