ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಮನಮೋಹನ - ಮೌನದ ಕುರಿತು ನಾಲ್ಕು ಮಾತುಗಳು

‘ಮೌನ’ ಎನ್ನುವುದು ಕೇವಲ ‘ಮಾತನಾಡದೇ ಇರುವ’ ಸ್ಥಿತಿಯಲ್ಲ ಎಂಬುದು ಮೊದಲಿಗೆ ಎಲ್ಲರಿಗೂ ಮನವರಿಕೆಯಾಗಬೇಕಾದ ವಿಷಯ. ಮೌನಕ್ಕೆ ಅತ್ಯಂತ ವಿಶಾಲಾರ್ಥವಿದೆ. ಮೌನ ಎಂಬುದು ಗುಣವೂ ಹೌದು, ದೋಷವೂ ಹೌದು. ಯಾವ್ಯಾವ ಸಂದರ್ಭಗಳಲ್ಲಿ ಸುಮ್ಮನಿರುವುದರಿಂದ ಸಂಘರ್ಷಗಳು ತಪ್ಪುತ್ತವೆಯೋ ಅಥವಾ ಸಂಬಂಧಗಳು ಉಳಿದುಕೊಳ್ಳುತ್ತವೆಯೋ, ಅಲ್ಲಿ ಅದು ‘ಗುಣ’ವಾಗಿ ಗಣಿಸ ಲ್ಪಡುತ್ತದೆ. ಆದರೆ, ಎಲ್ಲಿ ಮಾತು ಅತ್ಯವಶ್ಯವೋ ಅಲ್ಲಿ ಸುಮ್ಮನಿದ್ದರೆ, ಅದು ದೋಷವಾಗಿ ಪರಿಗಣಿತ ವಾಗುತ್ತದೆ.

ಮನಮೋಹನ - ಮೌನದ ಕುರಿತು ನಾಲ್ಕು ಮಾತುಗಳು

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

‘ಮೌನ’ ಎನ್ನುವುದು ಕೇವಲ ‘ಮಾತನಾಡದೇ ಇರುವ’ ಸ್ಥಿತಿಯಲ್ಲ ಎಂಬುದು ಮೊದಲಿಗೆ ಎಲ್ಲರಿಗೂ ಮನವರಿಕೆಯಾಗಬೇಕಾದ ವಿಷಯ. ಮೌನಕ್ಕೆ ಅತ್ಯಂತ ವಿಶಾಲಾರ್ಥವಿದೆ. ಮೌನ ಎಂಬುದು ಗುಣವೂ ಹೌದು, ದೋಷವೂ ಹೌದು. ಯಾವ್ಯಾವ ಸಂದರ್ಭಗಳಲ್ಲಿ ಸುಮ್ಮನಿರುವು ದರಿಂದ ಸಂಘರ್ಷಗಳು ತಪ್ಪುತ್ತವೆಯೋ ಅಥವಾ ಸಂಬಂಧಗಳು ಉಳಿದುಕೊಳ್ಳುತ್ತವೆಯೋ, ಅಲ್ಲಿ ಅದು ‘ಗುಣ’ವಾಗಿ ಗಣಿಸಲ್ಪಡುತ್ತದೆ. ಆದರೆ, ಎಲ್ಲಿ ಮಾತು ಅತ್ಯವಶ್ಯವೋ ಅಲ್ಲಿ ಸುಮ್ಮನಿದ್ದರೆ, ಅದು ದೋಷವಾಗಿ ಪರಿಗಣಿತವಾಗುತ್ತದೆ.

ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊನ್ನೆ ನಿಧನರಾದ ಮೇಲೆ, ಅವರ ಮೌನದ ಕುರಿತಾದ ಚರ್ಚೆಗಳು ಇದ್ದಕ್ಕಿದ್ದ ಹಾಗೆ ಶುರುವಾದವು. “ಈಗಿರುವ ವಾಚಾಳಿ ಪ್ರಧಾನಿಯ ಮುಂದೆ ‘ಮೌನಿ’ ಸಿಂಗ್ ಅವರೇ ಲೇಸು" ಎಂದೆಲ್ಲಾ ವಿಶ್ಲೇಷಿಸಲು ಕೆಲವರು ಶುರುವಿಟ್ಟುಕೊಂಡರು. ಸಿಂಗ್ ಅವರ ಕಾಲದಲ್ಲಿ ವಿಪಕ್ಷಗಳು ಅವರನ್ನು ‘ಮೌನ’ಮೋಹನ್ ಸಿಂಗ್ ಅಂತಲೂ,ಮನ‘ಮೌನ’ ಸಿಂಗ್ ಅಂತಲೂ ಕರೆಯುತ್ತಿದ್ದುದನ್ನು ನಾವು ನೆನಪಿಸಿಕೊಳ್ಳಬಹುದು. “ಸಿಂಗ್ ಅವರ ನಿಧನವಾರ್ತೆಪ್ರಕಟಿಸು ವಾಗ ಕನ್ನಡದ 3 ಜನಪ್ರಿಯ ದಿನಪತ್ರಿಕೆಗಳು ‘ಚಿರಮೌನ’ ಎಂಬ ಪದ ಬಳಸಿ ಅವರಿಗೆ ಒಂದು ರೀತಿಯಲ್ಲಿಅಗೌರವ ತೋರಿವೆ. ಮೌನ ಎನ್ನುವ ನರೇಟಿವ್‌ನಿಂದ ಪ್ರೇರಿತವಾದ ಈ ಶೀರ್ಷಿಕೆಗಳ ಹಿಂದಿನ ಕ್ರೌರ್ಯ ನಮ್ಮ ಇಂದಿನಸಾಮಾಜಿಕ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ" ಎಂದೆಲ್ಲಾ ಈಗ ನೆಟ್ಟಿಗರು ಹೇಳಿಕೊಳ್ಳುತ್ತಿದ್ದಾರೆ.

“ಮಾತಾಡಲೇ ಬೇಕಾದಲ್ಲಿ ಸಿಂಗ್ ಯಾವತ್ತೂ ಮೌನವಾಗಿರಲಿಲ್ಲ; ಅವರು ಮಾಡಿದ ಕೆಲಸಗಳೇ ಮಾತನಾಡುತ್ತಿದ್ದುದರಿಂದ ಅವರುಮಾತನಾಡುವ ಅಗತ್ಯ ಬರಲಿಲ್ಲ" ಎಂದೆಲ್ಲಾ ಮಾತನಾಡಿಕೊಳ್ಳುವವರಿದ್ದಾರೆ. ಆದರೆ, ಸಿಂಗ್ ಅವರ ಮರಣವಾರ್ತೆಯನ್ನು ಪ್ರಕಟಿಸುವಾಗ ಯಾವ ಪತ್ರಿಕೆಯವರಿಗೂ ಅವರನ್ನು ಅಗೌರವಿಸುವ ಉದ್ದೇಶವಿತ್ತು ಎಂದು ನನಗಂತೂ ಅನಿಸುವುದಿಲ್ಲ. ಹಿಂದೆಅನೇಕ ನಾಯಕರ ಮರಣವಾರ್ತೆ ಪ್ರಕಟವಾದ ಸಂದರ್ಭದಲ್ಲೂ ‘ಚಿರಮೌನ’ ಎಂಬ ಪದವನ್ನು ಪತ್ರಿಕೆಗಳು ಬಳಸಿರುವುದನ್ನು ನೋಡಿದ್ದೇವೆ. ಆದರೆ ಈಗೇಕೋ ಕೆಲವರಿಗೆ ಅದು ನೋವುಂಟುಮಾಡಿರುವಂತೆ ತೋರುತ್ತಿದೆ. ಸಿಂಗ್‌ರ ಅಧಿಕಾರಾವಧಿಯಲ್ಲಿ ಅವರನ್ನು ಜರಿದವರೂ, ಇಂದು ಅವರ ಮೌನದ ಪರವಾಗಿ ಮಾತನಾಡುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ.

ಇರಲಿ, ‘ಮೌನ’ ಎನ್ನುವುದು ಕೇವಲ ‘ಮಾತನಾಡದೇ ಇರುವ’ ಸ್ಥಿತಿಯಲ್ಲ ಎಂಬುದು ಮೊದಲಿಗೆ ಎಲ್ಲರಿಗೂ ಮನವರಿಕೆಯಾಗಬೇಕಾದ ವಿಷಯ. ಮೌನಕ್ಕೆ ಅತ್ಯಂತ ವಿಶಾಲಾರ್ಥವಿದೆ. ಮನುಷ್ಯನಿಗೆ ಮಾತನಾಡದೇ ಇರಲು ಅವನ ಒಂದು ನಿರ್ಧಾರ ಸಾಕು; ಆದರೆ ಮೌನವಾಗಿರಲು ನಿರ್ಧಾರವೊಂದೇ ಸಾಲದು, ಸಾಧನೆಯೂ ಬೇಕಾಗುತ್ತದೆ. ‘ಮೌನ’ ಎನ್ನುವುದು ಮುನಿಯ ಭಾವ. ಅದು ನಾಲಿಗೆಯನ್ನು (ವಾಕ್) ದಾಟಿ, ಮನಸ್ಸನ್ನೂ ಮೀರಿರುವ, ಮನಸ್ಸೇ ಮೌನವಾದ ಒಂದು ಪ್ರಶಾಂತ ಸ್ಥಿತಿ. ತನ್ನ ಮನಸ್ಸು ಲಯವಾದ ಅಥವಾ ಕಳೆದುಹೋದ ಸ್ಥಿತಿಯನ್ನು ಯಾರಾದರೂ ಅನುಭವಿಸುತ್ತಿದ್ದರೆ, ಅವರನ್ನು ಮೌನಿಗಳು ಎನ್ನಬಹುದು (ಯನ್ಮನೋ ವಿಲಯಂ ಯಾಂತಿ..). ಹಾಗಾಗಿ, ಮನಮೋಹನರು ಹೆಚ್ಚು ಮಾತನಾಡುತ್ತಿರಲಿಲ್ಲ ಎನ್ನಬಹುದೇ ವಿನಾ, ಅವರನ್ನು ಮೌನಿಗಳು ಎಂದರೆ ತಪ್ಪಾಗಿ ಅರ್ಥೈಸಿ ದಂತಾಗುತ್ತದೆ. ಏನೋ ಪ್ರಾಸವನ್ನು ಹೊಂದಿಸಿ ಹೇಳಲು ಅನುಕೂಲ್ಯವಿರುವುದರಿಂದ ‘ಮೌನ ಮೋಹನ’ ಎಂದುಜನ ಕರೆಯುತ್ತಿದ್ದರೇನೋ, ಅಷ್ಟೇ. ಮೌನ ಎನ್ನುವುದು ಬೇರೆ, ಮಾತನಾಡದಿರುವ ಸ್ಥಿತಿ ಬೇರೆ ಎಂದು ತಿಳಿಸಲು ಇಷ್ಟೆಲ್ಲಾ ಹೇಳಬೇಕಾಯಿತು.

ಇನ್ನು, ನಾವು ಸಾಮಾನ್ಯವಾಗಿ ಅರ್ಥೈಸುವ ‘ಮಾತನಾಡ ದಿರುವ ಮೌನ’ಕ್ಕೆ ಅನೇಕ ಮಜಲುಗಳಿವೆ. ಉದಾಹರಣೆಗೆ, ಒಂದು ವಿಷಯದ ಕುರಿತು ನಾಲ್ಕೈದು ಜನ ಕುಳಿತು ನಿರ್ಧರಿಸಬೇಕಾದಾಗ, ಒಬ್ಬ ಮಾತನಾಡದೇ ಸುಮ್ಮನಿದ್ದಾನೆ ಎಂದರೆ ಅವನ ಮೌನವನ್ನು ‘ಸ್ವೀಕೃತಿ’ ಅಥವಾ ‘ಸಮ್ಮತಿ’ ಯೆಂತಲೂ ಪರಿಗಣಿಸುವ ಸಾಧ್ಯತೆಯಿದೆ (ಮೌನಂ ಸಮ್ಮತಿ ಲಕ್ಷಣಂ). ಇನ್ನು, ಕೆಲ ಸಂದರ್ಭದಲ್ಲಿ ಮಾತನಾಡದಿರುವುದರ ಮರ್ಮ- ‘ವೃಥಾ ಸಂಘರ್ಷ ಬೇಡ’ ಎನ್ನುವುದೂ ಆಗಿರುತ್ತದೆ. ‘ಸುಮ್ಮನಿರುವವರಿಗೆ ಜಗಳದ ಗೋಜಿಲ್ಲ’ ಎನ್ನುತ್ತಾರಲ್ಲಾ, ಹಾಗೆ (ಮೌನೇನ ಕಲಹಂ ನಾಸ್ತಿ). ಇಂಥ ಸಂದರ್ಭಗಳಲ್ಲಿ ಬಹಳ ಜನ ಮಾತನಾಡದೇ ಸುಮ್ಮನಿರಲುಆಯ್ಕೆಮಾಡುವುದನ್ನು ನಿತ್ಯಜೀವನದಲ್ಲಿ ನೋಡುತ್ತೇವೆ.

ಇನ್ನು, ‘ನಾನು ಮಾತನಾಡಿದರೆ ಕೆಟ್ಟವನಾಗಿಬಿಡುತ್ತೇನೆ’ ಎಂಬ ಭಯವೂ ಮನುಷ್ಯರನ್ನು ಸುಮ್ಮನಿರಿಸಲು ಕಾರಣ ವಾಗುತ್ತದೆ. ‘ನಚ ಕಶ್ಚಿತ್ ಶ್ರುಣೋತಿ ಮಾಮ್’- ನನ್ನ ಮಾತನ್ನು ಯಾರೂ ಕೇಳುವುದಿಲ್ಲವಾದ್ದರಿಂದ, ನಾನು ಸುಮ್ಮನಿರುವುದೇ ಲೇಸು ಎಂಬುದು ಮತ್ತೊಂದು ಆಯಾಮ. ಈ ಕೊನೆಯ ಆಯಾಮ ಡಾ.ಮನಮೋಹನ್ ಸಿಂಗ್‌ರ ಮೌನಕ್ಕೆ ಕಾರಣವಾಗಿತ್ತೋ ಏನೋ! ಸರಿಯಾಗಿ ಅವಲೋಕಿಸಿದರೆ, ಮೌನ ಎನ್ನುವುದು ಗುಣವೂ ಹೌದು, ದೋಷವೂ ಹೌದು. ಯಾವ್ಯಾವ ಸಂದರ್ಭಗಳಲ್ಲಿ ಸುಮ್ಮನಿರುವುದರಿಂದ ಸಂಘರ್ಷಗಳು ತಪ್ಪುತ್ತವೆಯೋ ಅಥವಾ ಸಂಬಂಧಗಳು ಉಳಿದುಕೊಳ್ಳುತ್ತ ವೆಯೋ, ಅಲ್ಲಿ ಅದು ‘ಗುಣ’ವಾಗಿ ಗಣಿಸಲ್ಪಡುತ್ತದೆ. ಆದರೆ, ಎಲ್ಲಿ ಮಾತು ಅತ್ಯವಶ್ಯವೋ ಅಲ್ಲಿ ಸುಮ್ಮನಿದ್ದರೆ, ಅದು ದೋಷವಾಗಿ ಪರಿಗಣಿತವಾಗುತ್ತದೆ. ‘ಮಾತು ಬೆಳ್ಳಿ, ಮೌನ ಬಂಗಾರ’ ಎನ್ನುವ ನಾಣ್ಣುಡಿ ಎಲ್ಲರಿಗೂ ಎಲ್ಲ ಕಾಲಕ್ಕೂ ಸಲ್ಲುವ ಮಾತಲ್ಲ; ಮಾತೂ ಬಂಗಾರವಾಗುವ ಸನ್ನಿವೇಶಗಳುಂಟು. ಸಾಮಾನ್ಯವಾಗಿ ಮೌನದ ವಿಷಯದಲ್ಲಿ ಇನ್ನೊಂದು ತಪ್ಪುನಂಬಿಕೆಯಿದೆ, ಅದೆಂದರೆ- ‘ಮೌನ (ಸುಮ್ಮನಿರುವುದು) ಶಾಂತಿಕಾರಕ’ ಎಂಬುದು. ಅದು ಸುಳ್ಳು ಎನ್ನುವುದನ್ನು ಮಹಾಭಾರತ ಸಾಬೀತುಪಡಿಸಿದೆ.

ಪಾಂಚಾಲಿಯ ವಸಾಪಹರಣದ ವೇಳೆ, ಭೀಷ್ಮ, ದ್ರೋಣ, ಧೃತರಾಷ್ಟ್ರ ಮುಂತಾದ ದೊಡ್ಡವರ ಮೌನವೇ ಕುರುಕ್ಷೇತ್ರ ಯುದ್ಧಕ್ಕೆ ನಾಂದಿಹಾಡಿತು ಎಂದು ಅರ್ಥೈಸುವವರಿದ್ದಾರೆ. ಅಂದು, ಮಾತನಾಡುವ ಜಾಗದಲ್ಲಿದ್ದ ಅವರುಗಳು ಎದ್ದುನಿಂತು ಖಂಡನೆಯ ಮಾತುಗಳನ್ನಾಡಿದ್ದರೆ, ಮುಂದೆ ನಡೆದ ಐತಿಹಾಸಿಕ ಮಹಾಸಂಘರ್ಷವನ್ನು, ಅದರಿಂದಾದ ಅಪಾರ ಸಾವು-ನೋವುಗಳನ್ನು ಮತ್ತು ಕುರುಕುಲ ಕ್ಷಯವನ್ನು ತಡೆಯಬಹುದಿತ್ತೇನೋ ಎನಿಸಿದರೆ ತಪ್ಪಲ್ಲ. ಹಾಗೆ, 10 ವರ್ಷದ ತಮ್ಮ ‘ಪ್ರಧಾನಿಗಿರಿ’ಯಲ್ಲಿ ಮನಮೋಹನ್‌ರು ಮಾತನಾಡಬೇಕಾದಾಗ ಮಾತನಾಡಿದ್ದರೆ, ಕಾಂಗ್ರೆಸ್ ಈಗಿನ ಹೀನಾಯ ಸ್ಥಿತಿಯನ್ನು ತಲುಪುತ್ತಿರಲಿಲ್ಲವೇನೋ ಎಂದುವಿಶ್ಲೇಷಿಸುವವರಿದ್ದಾರೆ. ಗುಲಾಮ್ ನಬಿ ಆಜಾದ್‌ರಂಥ ಕೆಲವು ಹಿರಿಯ ಕಾಂಗ್ರೆಸ್ಸಿಗರು ಹೀಗೆ ಅಭಿಪ್ರಾಯಪಟ್ಟಿದ್ದಿದೆ.

2013ರಲ್ಲಿ ಮನಮೋಹನ್‌ರ ಸರಕಾರ ಬೆಂಬಲಿಸಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ಸಾರ್ವಜನಿಕವಾಗಿ ಹರಿದು ಹಾಕುವ ಮೂಲಕ ರಾಹುಲ್ ಗಾಂಧಿಯವರು ಮರ್ಯಾದೆಯ ಸೀಮೆ ಮೀರಿ ಕೆಟ್ಟ ಪರಿಪಾಠವೊಂದಕ್ಕೆ ಕಾರಣರಾಗಿದ್ದರು. ಈ ಸುಗ್ರೀವಾಜ್ಞೆಗೆ ಕಾಂಗ್ರೆಸ್‌ನ ಕೋರ್ ಕಮಿಟಿಯಲ್ಲಿ ಒಪ್ಪಿಗೆ ಪಡೆಯಲಾಗಿತ್ತು ಮತ್ತು ಪ್ರಧಾನ ಮಂತ್ರಿಗಳ ಕೇಂದ್ರ ಸಚಿವ ಸಂಪುಟವು ತರುವಾಯದಲ್ಲಿ ಇದನ್ನು ಸರ್ವಾನುಮತದಿಂದ ಅನುಮೋದಿಸಿತ್ತು. ಭಾರತದ ರಾಷ್ಟ್ರಪತಿಗಳ ಅಂಗೀಕಾರದ ಮುದ್ರೆಯೂ ಅದಕ್ಕೆ ಬಿದ್ದಿತ್ತು. ಆದರೆ ರಾಹುಲರ ಈ ಬಾಲಿಶ ವರ್ತನೆಯು ಪ್ರಧಾನ ಮಂತ್ರಿಗಳ ಸ್ಥಾನ ಮತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆಯನ್ನು ಪ್ರಶ್ನಿಸುವಂತಿತ್ತು. ಆಗ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ್ದವರು ಮಾತನಾಡಲೇಬೇಕಾಗಿತ್ತು ಎಂಬುದು ಎಲ್ಲರೂ ಒಪ್ಪಬೇಕಾದ ಸಂಗತಿ.

ಇನ್ನು, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫರು ಭಾರತದ ಪ್ರಧಾನಿ ಮನಮೋಹನ್ ಸಿಂಗ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣ ನಿಮಗೆ ನೆನಪಿರಬಹುದು. ಸಿಂಗ್‌ರನ್ನು ‘ದೆಹಾತಿ ಔರತ್’ ಎಂದು ಕರೆದಿದ್ದ ಷರೀಫ್, “ಪಾಕಿಸ್ತಾನದ ಸರಕಾರದ ಧೋರಣೆಗಳ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರಿಗೆ, ಹಳ್ಳಿಯ‌ ಅಶಿಕ್ಷಿತ ಹೆಂಗಸಿನಂತೆ ಪದೇಪದೆ ದೂರು ನೀಡುತ್ತಲೇ ಇದ್ದಾರೆ" ಎಂದು ಆರೋಪಿಸಿದ್ದರು.

ಡಾ.ಸಿಂಗ್ ವಿರುದ್ಧದ ಇಂಥ ಅವಹೇಳನಕಾರಿ ಹೇಳಿಕೆಗಾಗಿ ಆಗ ಷರೀಫರನ್ನು ತರಾಟೆಗೆ ತೆಗೆದುಕೊಂಡವರಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಪ್ರಮುಖರು. “ನಾವು ನಮ್ಮ ಪ್ರಧಾನಿಯೊಂದಿಗೆ, ಅವರ ನೀತಿಗಳ ಬಗ್ಗೆ ದೇಶದೊಳಗೆ ಹೋರಾಡುತ್ತೇವೆ. ಆದರೆ, ಅವರು 125 ಕೋಟಿ ನಾಗರಿಕರಿರುವ ದೇಶದ ಪ್ರಧಾನಿಯಾಗಿದ್ದಾರೆ. ಅಂಥವರನ್ನು ‘ದೆಹಾತಿ ಔರತ್’ ಎನ್ನಲು ನಿಮಗೇನು ನೈತಿಕತೆಯಿದೆ?" ಎಂದು ಮೋದಿ ಗುಡುಗಿದ್ದರು. ಇಷ್ಟೆಲ್ಲಾ ಆದರೂ, ಅಂದು ಸರಕರದ ಸೂತ್ರಧಾರರಾಗಿದ್ದ ಮನಮೋಹನ್‌ರುಚಕಾರವೆತ್ತಿರಲಿಲ್ಲ ಎಂಬುದು ವಾಸ್ತವ.

ಹಾಗಂತ, ಮನಮೋಹನರ ‘ಮಹಾಮೌನ’ಕ್ಕೆ ಕಾರಣವೂ ತಿಳಿಯದ್ದಲ್ಲ. ‘ನಾನು ಕೌರವನ ಉಪ್ಪು ತಿಂದಿದ್ದೇನೆ, ಅವನ ಋಣ ನನ್ನ ಮೇಲಿರುವ ಕಾರಣ ಅವನ ಅನ್ಯಾಯಗಳನ್ನೆಲ್ಲಾ ಸಹಿಸಿಕೊಂಡು ಸುಮ್ಮನಿದ್ದೇನೆ’ ಎನ್ನುವ ಭೀಷ್ಮಾಚಾರ್ಯರ ಧೋರಣೆಯಂತೆ, ‘ಗಾಂಽ ಕುಟುಂಬದ ದಯೆಯಿಂದ ನನಗೆ ಪ್ರಧಾನಮಂತ್ರಿಯ ಸ್ಥಾನ ದೊರೆತುದರಿಂದ, ನಾನು ಅವರಿಗೆ ಋಣಿಯಾಗಿರಬೇಕು’ಎಂದು ಸಿಂಗ್ ಭಾವಿಸಿದ್ದರೋ ಏನೋ! ಅದು ತಿಳಿಯದು. ಸಿಂಗ್ ಪ್ರಧಾನ ಮಂತ್ರಿಯ ಸ್ಥಾನಕ್ಕಾಗಿ ಹಪಹಪಿಸಿ ಅದನ್ನುಪಡೆದವರಾಗಿರಲಿಲ್ಲ, ಅದು ಅವರಿಗೆ ಆಕಸ್ಮಿಕವಾಗಿ ಒಲಿದು ಬಂದ ಹುದ್ದೆಯಾಗಿತ್ತು.

ಹಾಗಾಗಿ, ಅದು ಹೋದರೂ ಅವರಿಗೆ ಚಿಂತೆ ಇರಬೇಕಾಗಿರಲಿಲ್ಲ. ಆಗೆಲ್ಲಾ ಅವರು ಮೌನ ಮುರಿದು ಸಾತ್ವಿಕ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಿದ್ದರೆ ಒಳ್ಳೆಯದಿತ್ತೇನೋ ಎನ್ನುವುದು ಸಹಜ ನಿರೀಕ್ಷೆ. ಆ ಅವಧಿಯಲ್ಲಿ ಸೋನಿಯಾ ಗಾಂಧಿಯವರು ಅಧಿಕಾರದ ನಿಜವಾದ ಕೇಂದ್ರವಾಗಿದ್ದರು, ಎಲ್ಲ ವಿಷಯಗಳಲ್ಲೂ ಅವರ ಮಾತೇ ಅಂತಿಮವಾಗಿತ್ತು. ಆ ನಿಟ್ಟಿನಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್‌ರನ್ನು ಬಳಸಿಕೊಳ್ಳಲಾಯಿತು, ಅಷ್ಟೇ. ಸಿಂಗ್‌ರ ಮೃದುತ್ವವೇ ಅವರನ್ನು ಪ್ರಧಾನಮಂತ್ರಿಯನ್ನಾಗಿಸಲು ಕಾರಣವಾಗಿತ್ತು.

ಅದಿಲ್ಲದಿದ್ದರೆ, ಅನುಭವಿಯೂ ಹಿರಿಯರೂ ಆಗಿದ್ದ ಪ್ರಣಬ್ ಮುಖರ್ಜಿಯವರು ಪ್ರಧಾನಿಯಾಗಬೇಕಿತ್ತು. ಆದರೆ ಪ್ರಣಬ್‌ರನ್ನು ಪ್ರಧಾನಿಯಾಗಿಸಿದರೆ, ಪಕ್ಷ ಹಾಗೂ ಸರಕಾರದ ಮೇಲೆ ಗಾಂಧಿ ಕುಟುಂಬದ ಹಿಡಿತ ತಪ್ಪುತ್ತದೆ ಎನ್ನುವ ಸ್ಪಷ್ಟ ಅರಿವು ಸೋನಿಯಾರಿಗೆ ಇತ್ತು. ನರಸಿಂಹ ರಾಯರಿಗೆ ಅಽಕಾರ ಕೊಟ್ಟು ಗಾಂಧಿ ಕುಟುಂಬವು ಒಮ್ಮೆ ಕೈಸುಟ್ಟುಕೊಂಡಿತ್ತು. ಈ ಕಾರಣಕ್ಕೇ ಪ್ರಧಾನಮಂತ್ರಿ ಸ್ಥಾನ ತಮಗೆ ಒಲಿದುಬಂದಿದೆ ಎನ್ನುವುದು ಸಿಂಗ್ ಅವರಿಗೂ ತಿಳಿದಿತ್ತು. ತಮ್ಮ ರಾಜಕೀಯ ಗುರುವಾಗಿದ್ದ ನರಸಿಂಹರಾಯರಂತೆ, ಗಾಂಧಿ ಕುಟುಂಬವನ್ನು ಎಲ್ಲಿಡಬೇಕೋ ಅಲ್ಲಿಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾಗಲಿಲ್ಲ ಎನ್ನುವುದನ್ನು ಬಿಟ್ಟರೆ, ಸಿಂಗ್ ಅವರು ತಮ್ಮ ೧೦ ವರ್ಷದ ಅಧಿಕಾರಾವಧಿಯಲ್ಲಿ ಕೈಕೊಳಕು ಮಾಡಿಕೊಳ್ಳದೇ ಹೊರಬಂದಿರುವುದು ಶ್ಲಾಘನೀಯವೇ.

ಅಲ್ಲದೆ, ಹಿಂದೆ ಅವರು ಹಣಕಾಸು ಮಂತ್ರಿಯಾಗಿ ಕೈಗೊಂಡ ಅಭೂತಪೂರ್ವ ಕಾರ್ಯಗಳಿಂದಾಗಿ, ಅವರ ವೈಯಕ್ತಿಕ ವರ್ಚಸ್ಸು-ಗೌರವಗಳು ಕೊನೆಯವರೆಗೂ ಕುಂದಲಿಲ್ಲ ಎನ್ನುವುದು ಬೇರೆ ಮಾತು. 1991ರಲ್ಲಿ ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ಹದಿನೈದೇ ದಿನಗಳಲ್ಲಿ ದಿವಾಳಿಯಾಗುವಂಥ ಸ್ಥಿತಿಯನ್ನು ದೇಶ ತಲುಪಿತ್ತು. ಇಂಥ ಹೊತ್ತಿನಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಿಂಗ್, 1994-95ರ ಬಜೆಟ್‌ನಲ್ಲಿ ಭಾರಿ ಬದಲಾವಣೆಗೆ ಕೈಹಾಕಿದರು. ಎಲ್ಲವೂ ಅವರು ಅಂದುಕೊಂಡಂತೆಯೇ ಆಗಿದ್ದು, ಭಾರತವು ಈಗ ಆರ್ಥಿಕವಾಗಿ ಸುರಕ್ಷಿತವಾಗಿದೆ.

ದೇಶವು ಇಂದು ವಿಶ್ವದ 5ನೇ ದೊಡ್ಡ ಆರ್ಥಿಕತೆ ಆಗಿದೆ ಎನ್ನುವುದಾದರೆ, ಅದಕ್ಕೆ ಕಾರಣ ಡಾ.ಮನಮೋಹನ್ ಸಿಂಗ್‌ರು ಹಾಕಿದ ದೂರದರ್ಶಿತ್ವದ ಅಡಿಪಾಯ. ಇದನ್ನು ಯಾರೂ ಮರೆಯುವಂತಿಲ್ಲ. ಹಾಗಾಗಿ, ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ವನ್ನು ನೀಡಬೇಕು ಎನ್ನುವವರಲ್ಲಿ ನಾನೂ ಒಬ್ಬ. ಹಾಗೆ ಅವರಿಗೆ ‘ಭಾರತ ರತ್ನ’ ದಕ್ಕಿದರೆ, ಅದು ಅವರು ಹಣಕಾಸು ಮಂತ್ರಿಯಾಗಿ ಮಾಡಿದ ಸಾಧನೆಗಳಿಗೆ ಅಥವಾ ಭಾರತದ ಅರ್ಥವ್ಯವಸ್ಥೆಯ ಶಾಶ್ವತ ಪುನರುತ್ಥಾನದ ನಿಟ್ಟಿನಲ್ಲಿ ಅವರು ಮಾಡಿದ ಉಪಕಾರಕ್ಕಾಗಿಯೇ ವಿನಾ, ಪ್ರಧಾನಮಂತ್ರಿ ಆಗಿದ್ದಾಗಿನ ಅವರ ಮೌನಕ್ಕಲ್ಲ.

ಕಾರಣಗಳು ಏನೂ ಇರಬಹುದು, ಆದರೆ ಮನಮೋಹನ್ ಸಿಂಗ್‌ರಿಗೆ ‘ಮೌನ’ ಎನ್ನುವುದು- ಭೀಷ್ಮ ಮತ್ತು ದ್ರೋಣರಿಗೆ ಹೇಗೋ ಹಾಗೆ- ಕೊನೆಯವರೆಗೂ ಕಳಂಕವಾಗಿಯೇ ಅಂಟಿಕೊಂಡಿತ್ತು ಎನ್ನುವುದನ್ನು ಒಪ್ಪಿಕೊಳ್ಳದೇ ಅನ್ಯ ಉಪಾಯವಿಲ್ಲ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: vinayaka Bhatta, Amblihonda okj